ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ, ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ, ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿಲಿಂಗೈಕ್ಯವು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು. ಅದು ಕಾರಣ, ಅರಿದರಿದು ಆಚರಿಸಬೇಕು. ಆಚಾರವಿಚಾರ ಉಭಯದ ವಿಚಾರವ ನೋಡದೆ, ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ : ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ. ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ. ಸುಳ್ಳಾಡದಿರವುದೆ ಮೂರನೆಯ ಆಚಾರ. ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ. ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ. ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ. ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ. ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ. ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ. ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ. ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ. ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ. ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ. ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ. ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ ಹದಿನೆಂಟನೆಯ ಆಚಾರ. ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ. ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ, ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ. ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ. ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ. ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ. ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ. ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ. ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ ಇಪ್ಪತ್ತೇಳನೆಯ ಆಚಾರ. ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ. ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ. ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ. ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ. ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ ಮೂವತ್ತೆರಡನೆಯ ಆಚಾರ. ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ ಮೂವತ್ತುಮೂರನೆಯ ಆಚಾರ. ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ. ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ. ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ. ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ ಮೂವತ್ತೇಳನೆಯ ಆಚಾರ. ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ. ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ. ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ. ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ. ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ ನಾಲ್ವತ್ತೆರಡನೆಯ ಆಚಾರ. ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ ನಾಲ್ವತ್ತುಮೂರನೆಯ ಆಚಾರ. ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ ನಾಲ್ವತ್ತುನಾಲ್ಕನೆಯ ಆಚಾರ. ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ ನಾಲ್ವತ್ತೈದನೆಯ ಆಚಾರ. ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ ನಾಲ್ವತ್ತಾರನೆಯ ಆಚಾರ. ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ. ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ. ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ. ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
--------------
ಚನ್ನಬಸವಣ್ಣ
ಆರಂಬವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ ಆ ಆರಂಬವೆ ಕೇಡು. ವ್ಯವಹಾರವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ ಆ ವ್ಯವಹಾರವೆ ಕೇಡು. ಓಲಗವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ ಆ ಓಲಗವೆ ಕೇಡು. ಭಕ್ತಿಯ ಮಾಡಿ ಜನನ ಮರಣ ವಿರಹಿತನಾಗದಿದ್ದರೆ ಆ ಭಕ್ತಿಯೆ ಕೇಡು. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಆದಿಯಲೊಬ್ಬ ಮೂರ್ತಿಯಾದ, ಆ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ, ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೆಯೂ ಇಚ್ಛಾಶಕ್ತಿಯಿಬ್ಬರಿಗೆಯೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ. ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು. ಆ ವಿಷ್ಣವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯಾದಳು. ಆ ಬ್ರಹ್ಮಂಗೆಯೂ ಸರಸ್ವತಿಯರಿಬ್ಬರಿಗೆಯೂ ನರರು ಸುರರು ದೇವಕಳು ಹೆಣ್ಣು ಗಂಡು ಸಚರಾಚರಂಗ?ು ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು, ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಆವಾವ ಪರಿಯಲ್ಲಿ ಆವಾವ ಭಾವದಲ್ಲಿ ಗುರುಲಿಂಗಜಂಗಮಕ್ಕೆ ದಾಸೋಹವ ಮಾಡಿಹೆನೆಂಬ, ಕೂಡಿಹೆನೆಂಬ ಸದ್ಭಕ್ತರ ಬಾಗಿಲ ತೋರಿ ಬದುಕಿಸಯ್ಯಾ. ಎಲ್ಲವನೊಪ್ಪಿ `ಲಿಂಗಜಂಗಮವೆನ್ನ ಪ್ರಾಣೇಶ್ವರ' ಎಂಬ ಮಹಾಪುರಾತನರ ಪಾದರಕ್ಷೆಯ ಹೊತ್ತಿರಿಸೆನ್ನನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆದಿಯಲ್ಲಿ ವೇದ್ಯ ಶಿವಸಂಪತ್ತಿನ ಮಹಾಘನ, ಲಿಂಗಪ್ರಾಣ ಸಹಜದಲ್ಲಿ ಉದಯವಾದ ಸಂಗನಬಸವ ನಮೋ ಸಂಗನಬಸವ ನಮೋ ! ಚೆನ್ನಸಂಗನ ಬಸವಿದೇವಂಗೆ ಅಪ್ರತಿಮಂಗೆ ಪ್ರತಿಯಿಲ್ಲ. ಆ ಧರ್ಮವೆ ಧರ್ಮ. ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು ಉಪಮಾತೀತನಯ್ಯಾ.
--------------
ಚನ್ನಬಸವಣ್ಣ
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ ಪಿಂಡದಲ್ಲಿ ಲಿಂಗಸಾಹಿತ್ಯ ಪ್ರಾಣದಲ್ಲಿ ಜಂಗಮಸಾಹಿತ್ಯ ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ ಪ್ರಸಾದಸಾಹಿತ್ಯ ಪ್ರಾಣಲಿಂಗಪ್ರಸಾದವಿರಹಿತನಾಗಿ ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ.
--------------
ಚನ್ನಬಸವಣ್ಣ
ಆನು, ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ, ಅತತ್ವ ತತ್ವವಿವೇಕಭ್ರಮೆ, ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ, ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ ಆದಿಯಾದ ಸಪ್ತಕರ್ಮ ಬಂಧಭ್ರಮೆ, ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ, ಯೋಗದಾಸೆ ಸಿಲುಕುಭ್ರಮೆ, ಅಂತರ್ಮುಖಭ್ರಮೆ ಬಹಿರ್ಮುಖಭ್ರಮೆ, ಅನೃತಭ್ರಮೆ ಸತ್ಯಭ್ರಮೆ ನಿತ್ಯಭ್ರಮೆ, ವಾಗದ್ವೈತಭ್ರಮೆ, ಅದ್ವೈತಭ್ರಮೆ, ಮಂತ್ರಭ್ರಮೆ ತಂತ್ರಭ್ರಮೆ, ನಾಹಂ ಭ್ರಮೆ, ಕೋಹಂ ಭ್ರಮೆ, ಸೋಹಂ ಭ್ರಮೆ. ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ. ಕೂಡಲಚೆನ್ನಸಂಗಾ ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.
--------------
ಚನ್ನಬಸವಣ್ಣ
ಆಧಾರಾದಿ ಷಡುಚಕ್ರಂಗಳು ಇವಕ್ಕೆ ವಿವರ: ಆಧಾರಸ್ಥಾನದಲ್ಲಿ ಚತುರ್ದಳ ಪದ್ಮವಿಹುದು ಅದು ಸುವರ್ಣವರ್ಣ ಅದಕ್ಕೆ ಅಕ್ಷರ ವಶಷಸ ಎಂಬ ನಾಲ್ಕಕ್ಷರ, ಅಧಿದೈವ ಬ್ರಹ್ಮನು. ಸ್ವಾಧಿಷ್ಠಾನ ಸ್ಥಾನದಲ್ಲಿ ಷಡ್ದಳ ಪದ್ಮವಿಹುದು, ಅದು ಕಪ್ಪುವರ್ಣ ಅದಕ್ಕೆ ಅಕ್ಷರ ಬಭಮಯರಲ ಎಂಬ ಷಡಕ್ಷರ, ವಿಷ್ಣು ಅಧಿದೈವ. ಮಣಿಪೂರದ ಸ್ಥಾನದಲ್ಲಿ ದಶದಳ ಪದ್ಮವಿಹುದು, ಅದು ಕೆಂಪುವರ್ಣ ಅದಕ್ಕೆ ಅಕ್ಷರ ಡಢಣ ತಥದಧನ ಪಫ ಎಂಬ ದಶ ಅಕ್ಷರ, ರುದ್ರನಧಿದೈವ. ಅನಾಹತಸ್ಥಾನದಲ್ಲಿ ದ್ವಾದಶದಳದ ಪದ್ಮವಿಹುದು, ಅದು ನೀಲವರ್ಣ, ಅದಕ್ಕೆ ಅಕ್ಷರ ಕಖಗಘಙ ಚ ಛ ಜಝಞ ಠ ಎಂಬ ದ್ವಾದಶ ಅಕ್ಷರ ಅದಕ್ಕೆ ಮಹೇಶ್ವರ ಅಧಿದೈವ. ವಿಶುದ್ಧಿಸ್ಥಾನದಲ್ಲಿ ಷೋಡಶದಳ ಪದ್ಮವಿಹುದು, ಅದು ಸ್ಪಟಿಕವರ್ಣ ಅದಕ್ಕೆ ಅಕ್ಷರ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಷೋಡಶಾಕ್ಷರ, ಅದಕ್ಕೆ ಸದಾಶಿವ ಅಧಿದೈವ. ಆಜ್ಞಾಸ್ಥಾನದಲ್ಲಿ ದ್ವಿದಳದ ಪದ್ಮವಿಹುದು. ಅದು ಮಾಣಿಕ್ಯವರ್ಣ, ಅದಕ್ಕೆ ಅಕ್ಷರ `ಹಕ್ಷ ಎಂಬ ದ್ವಯಾಕ್ಷರ. ಅದಕ್ಕೆ ಮಹಾಶ್ರೀಗುರು ಅಧಿದೈವ. ಅಲ್ಲಿಂದ ಮೇಲೆ ಬ್ರಹ್ಮರಂಧ್ರಸ್ಥಾನದಲ್ಲಿ ಸಹಸ್ರದಳ ಪದ್ಮವಿಹುದು. ಅದು ಹೇಮವರ್ಣ ಅಲ್ಲಿಗೆ ಓಂಕಾರವೆಂಬ ಅಕ್ಷರ ಪರಂಜ್ಯೋತಿ ಪರಬ್ರಹ್ಮ ಅದು ಅನಂತಕೋಟಿ ಸೂರ್ಯಪ್ರಕಾಶವಾಗಿ ಬೆಳಗುತ್ತಿಹುದು. ಅಲ್ಲಿಗೆ ಅಧಿದೈವ ಶ್ರೀಗುರು ಮೂರ್ತಿಯೇ ಕರ್ತನು. ಇಂತೀ ಷಟ್ ಚಕ್ರಂಗಳಂ ತಿಳಿದು ಪರತತ್ವದಲ್ಲಿ ಇರಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.
--------------
ಚನ್ನಬಸವಣ್ಣ
ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು; ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು. ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ ? ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು. ಒಬ್ಬರಲ್ಲಿ ಒಂದು ಭಾವವುಂಟೆ ? ಎನ್ನೊಳಗೆ ಬೆಳಗುವ ಜ್ಞಾನ, ನಿನ್ನ ಹೃದಯಕಮಲದೊ?ಗಣ ಆವ್ಯಕ್ತಲಿಂಗ. ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ ಎನ್ನಂತರಂಗದ ಸುಜ್ಞಾನಲಿಂಗ. ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ, ಪ್ರಾಣಲಿಂಗ ಒಂದೆ, ಉಪದೇಶ ಒಂದೆ, ಕ್ರಿಯಾಕರ್ಮ ಒಂದೆ. ನೀವಿನ್ನಾವುದ ಬೇರೆಮಾಡಿ ನುಡಿವಿರಯ್ಯಾ ? ಕಾರ್ಯದಲ್ಲಿ ಗುರುವಾಗಿ, ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ ? ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಎನಗೆ ನೀವು ಉಪದೇಶವ ಮಾಡಿದಡೆ ಮರ್ತಲೋಕದ ಮಹಾಗಣಂಗ? ಕೈಯಲ್ಲಿ ಅಹುದಹುದೆನಿಸುವೆ ಕಾಣಾ ಸಂಗನಬಸವಣ
--------------
ಚನ್ನಬಸವಣ್ಣ
ಆದಿ ಅನಾದಿ ಇಲ್ಲದಂದು, ಸ್ಥಿತಿಗತಿ ಉತ್ಪನ್ನವಾಗದಂದು ಭಕ್ತಿಯನುಭಾವಿಯ ಬಸುರೊಳಗೆ ಸತ್ಯಜ್ಞಾನವೆಂಬ ಶಾಸ್ತ್ರಂಗಳು ಹುಟ್ಟಿದವು. ಆ ಶಾಸ್ತ್ರದೊಳಡಗಿದವು ವೇದಪುರಾಣಾಗಮಂಗಳು. ಆ ಆಗಮಂಗಳೊಳಡಗಿದವು ಐವತ್ತೆರಡಕ್ಷರಂಗಳು ಆ ಅಕ್ಷರಂಗಳೊಳಡಗಿದವು ಇಪ್ಪತ್ತೇಳು ನಕ್ಷತ್ರಂಗಳು. ಆ ಇಪ್ಪತ್ತೇಳು ನಕ್ಷತ್ರಂಗಳೊಳಡಗಿದವು ಈರೇಳು ಲೋಕದ ಗಳಿಗೆ ಜಾವ ದಿನ ಮಾಸ ಸಂವತ್ಸರಂಗಳು. ಇಂತಿವೆಲ್ಲವನು ಒಳಗಿಟ್ಟುಕೊಂಡಿಹಾತ `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಹೊರಗಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಉಳಿದಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಮತ್ತಿದ್ದ ಯೋನಿಜರೆಲ್ಲರೂ ಶಾಪಹತರಾಗಿ ಹೋದರು. ಇದು ಕಾರಣ- `ಓಂ ನಮಃ ಶಿವಾಯ ಎಂಬಾತನೆ ಲಿಂಗವು ಪಂಚಾಕ್ಷರಿಯೆ ಪರಮೇಶ್ವರನು, ಪಂಚಾಕ್ಷರಿಯೆ ಪರಮತತ್ವ, ಪಂಚಾಕ್ಷರಿಯೆ ಪರಮಯೋಗ, ಪಂಚಾಕ್ಷರಿಯೆ ಪರಂಜ್ಯೋತಿ, ಪಂಚಾಕ್ಷರಿಯೆ ಪಾಪಾಂತಕ. `ನ ಎಂಬಕ್ಷರವೆ ದೇವರ ಚರಣ, `ಮ ಎಂಬಕ್ಷರವೆ ದೇವರ ಒಡಲು, `ಶಿ ಎಂಬಕ್ಷರವೆ ದೇವರ ಹಸ್ತ, `ವಾ ಎಂಬಕ್ಷರವೆ ದೇವರ ನಾಸಿಕ, `ಯ ಎಂಬಕ್ಷರವೆ ದೇವರ ನೇತ್ರ. ಮತ್ತೆ ; `ನ ಎಂಬಕ್ಷರವೆ ದೇವರ ದಯೆ, `ಮ ಎಂಬಕ್ಷರವೆ ದೇವರ ಶಾಂತಿ, `ಶಿ ಎಂಬಕ್ಷರವೆ ದೇವರ ಕ್ರೋಧ, `ವಾ ಎಂಬಕ್ಷರವೆ ದೇವರ ದಮನ, `ಯ ಎಂಬ ಅಕ್ಷರವೆ ದೇವರ ಶಬ್ದ, ಮತ್ತೆ ; `ನ ಎಂಬಕ್ಷರವೆ ಪೃಥ್ವಿ, `ಮ ಎಂಬಕ್ಷರವೆ ಅಪ್ಪು, `ಶಿ` ಎಂಬಕ್ಷರವೆ ಅಗ್ನಿ, `ವಾ ಎಂಬಕ್ಷರವೆ ವಾಯು, `ಯ ಎಂಬಕ್ಷರವೆ ಆಕಾಶ. ಮತ್ತೆ; `ನ ಎಂಬಕ್ಷರವೆ ಬ್ರಹ್ಮ, `ಮ ಎಂಬಕ್ಷರವೆ ವಿಷ್ಣು, `ಶಿ ಎಂಬಕ್ಷರವೆ ರುದ್ರ, `ವಾ ಎಂಬಕ್ಷರವೆ ಶಕ್ತಿ, `ಯ ಎಂಬಕ್ಷರವೆ ಲಿಂಗ, ಇಂತು ಪಂಚಾಕ್ಷರದೊಳಗಳಿವಕ್ಷರ ನಾಲ್ಕು, ಉಳಿವಕ್ಷರ ಒಂದು. ಈ ಪಂಚಾಕ್ಷರವನೇಕಾಕ್ಷರವ ಮಾಡಿದ ಬಳಿಕ ದೇವನೊಬ್ಬನೆ ಎಂದರಿದು, ಬ್ರಹ್ಮ ದೈವವೆಂಬ ಬ್ರಹ್ಮೇತಿಕಾರರನೇನೆಂಬೆನಯ್ಯ ! ವಿಷ್ಣು ದೈವವೆಂಬ ವಿಚಾರಹೀನರನೇನೆಂಬೆನಯ್ಯ ! ಅಶ್ವಿನಿ ಭರಣಿ ಕೃತ್ತಿಕೆ ಮೊದಲಾದ ಇಪ್ಪತ್ತೇಳು ನಕ್ಷತ್ರಂಗಳೊಳಗೆ, ಮೂಲಾನಕ್ಷತ್ರದಲ್ಲಿ (ವಿಷ್ಣು) ಹುಟ್ಟಿದನಾಗಿ ಮೂಲನೆಂಬ ಹೆಸರಾಯಿತ್ತು. ದೇವರ ಸೇವ್ಯಕಾರ್ಯಕ್ಕೆ ಪ್ರಾಪ್ತನೆಂದು ವೇದಂಗಳು ಬಿನ್ನೈಸಲು, ಜ್ಯೋತಿಷ್ಯಜ್ಞಾನ ಶಾಸ್ತ್ರಂಗಳು ಹುಸಿಯಾದೆವೆಂದು ನಿಮ್ಮ ಹರಿಯ ಅಡವಿಯಲ್ಲಿ ಬೀಸಾಡಲು, ಅಲ್ಲಿ ಆಳುತ್ತಿದ್ದ ಮಗನ ಭೂದೇವತೆ ಸಲಹಿ, ಭೂಕಾಂತನೆಂಬ ಹೆಸರುಕೊಟ್ಟು, ಭೂಚಕ್ರಿ ತನ್ನ ಪ್ರತಿರೂಪ ತೋಳಲ್ಲಿ ಸೂಡಿಸಿ ಶಿವಧರ್ಮಾಗಮ ಪೂಜೆ ಭಕ್ತಿಯಲ್ಲಿ ಯುಕ್ತನ ಮಾಡಿದ ಬಳಿಕ, ಮತ್ತೆ ನಮ್ಮ ದೇವರ ಶ್ರೀಚರಣದಲ್ಲಿರ್ದು ಒಳಗೆ ತೋರಲು ದೇವರು ಪುರಾಣಂಗ? ಕರೆದು ವಿಷ್ಣುವಿನ ಪಾಪಕ್ಷಯವ ನೋಡಿ ಎಂದರೆ ಆ ಪುರಾಣಂಗಳಿಂತೆಂದವು; ``ಪಾಪಂತು ಮೂಲನಕ್ಷತ್ರಂ ಜನನೀವರಣಂ ಪುನಃ ಪಾಪಂ ತು ಪರ್ವತಸ್ಥೂಲಂ ಶಿವೇ ವೈರಮತಃ ಪರಂ ಶಿವದಾಸೋಹಭಾವೇನ ಪಾಪಕ್ಷಯಮವಾಪ್ನುಯಾತ್ ಎಂದು ಪುರಾಣಂಗಳು ಹೇಳಲಾಗಿ; ವಿಷ್ಣು ಕೇಳಿ, ಪುರಾಣದ ಕೈಯಲು ದೀಕ್ಷಿತನಾಗೆ, ಪುರಾಣ ಪುರುಷೋತ್ತಮನೆಂಬ ಹೆಸರು ಬಳಿಕಾಯಿತ್ತು. ಮತ್ತೆ ನಮ್ಮ ದೇವರ ಪಾದರಕ್ಷೆಯ ತಲೆಯಲ್ಲಿ ಹೊತ್ತುಕೊಂಡು ಭೂತಂಗಳಿಗಂಜಿ ಶಂಖಮಂ ಪಿಡಿದುಕೊಂಡು, ದುರಿತಂಗಳಿಗಂಜಿ ನಾಮವನಿಟ್ಟು, ಪ್ರಳಯಂಗಳಿಗಂಜಿ ವೇಷವ ತೊಟ್ಟು. ರಾಕ್ಷಸರಿಗಂಜಿ ಚಕ್ರಮಂ ಪಿಡಿದು, ಶಿವನ ದಾಸೋಹದ ದಾಸಿಯೆಂದು ಕಸಕಿಲಂ ಪಿಡಿದು ಬಯಲನುಡುಗಿ, ಹೊತ್ತ ನೀರಲ್ಲಿ ಪುತ್ಥಳಿಯ ¸õ್ಞಖ್ಯಮಂ ಮಾಡಿ ಇಪ್ಪತ್ತೇಳು ಲಕ್ಷವರುಷ ಶಿವನ ಸೇವೆಯಂ ಮಾಡಿ ಮತ್ತೆ ಗರುಡವಾಹನ ಸತಿಲಕ್ಷ್ಮಿ ವಾರ್ಧಿಜಯಮಂ ಪಡೆದು ದೇವರ ಎಡದ ಗದ್ದುಗೆಯನೋಲೈಸಿಪ್ಪವನ ದೇವರೆಂದರೆ ನೀವೆಂದಂತೆ ಎಂಬರೆ ? ಕೇಳಿರಣ್ಣಾ ! ವಚನಶುದ್ಧ ಭಾವದಲ್ಲಿ ಭಕ್ತಿಯುಳ್ಳವರು ನೀವು ಹೊತ್ತಿದ್ದ ವೇಷದಲ್ಲಿ ತಿಳಿದು ನೋಡಿ. ತಂದೆತಾಯಿ ಇಂದ್ರಿಯದಲ್ಲಿ ಬಂದವರು ದೇವರೆ ? ಸಂದೇಹ ಭ್ರಮೆಯೊಳಗೆ ಸಿಕ್ಕಿದವರು ದೇವರೆ ? ಶುಕ್ಲ ಶೋಣಿತದೊಳಗೆ ಬೆಳೆದವರು ದೇವರೆ ? ಆ ತಂದೆ ತಾಯ ಹುಟ್ಟಿಸಿದರಾರೆಂದು ಕೇಳಿರೆ; ಹಿಂದೆ ಸಂದ ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ ಏಳುನೂರೆಪ್ಪತ್ತುಸಾವಿರ ಯುಗಂಗಳು, ಇದಕ್ಕೆ ನವಕೋಟಿ ನಾರಾಯಣರಳಿದರು, ಶತಕೋಟಿ ಸಂಖ್ಯೆ ಬ್ರಹ್ಮರಳಿದರು ಉಳಿದವರ ಪ್ರಳಯವ ಹೊಗಳಲಿನ್ನಾರ ವಶ ? ಇಂತಿವೆಲ್ಲವನು ಬಿಟ್ಟು ಉಳಿದಿಪ್ಪಾತನೊಬ್ಬನೆ, ಆತಂಗೆ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆದಿಯಾಧಾರ (ಆದಿಯನಾದಿ?) ಆತ್ಮ ವಿವೇಕ ಅನುಭಾವ ಸಂಬಂಧವೆಂತೆಂದಡೆ; ಆದಿಯೆ ದೇಹ, ಅನಾದಿಯೆ ಆತ್ಮ. ಇಂತೀ ಆದಿಯಾಧಾರದ (ಇಂತೀ ಆದಿಯನಾದಿಯ ?) ಮೇಲಿಪ್ಪುದೆ ಪರಮಪ್ರಣವ. ಆ ಪರಮಪ್ರಣವದ ಸುವರ್ಣದ ಪ್ರಭೆಯ ಮೇಗಳ ಸೂಕ್ಷ್ಮಲಿಂಗವೆ ನಾದ ಬಿಂದು ಕಳಾತೀತವಾದ ಜೋತಿರ್ಮಯಲಿಂಗ, ದೇಹ ಮನ ಪ್ರಾಣ ಇಂದ್ರಿಯಂಗಳೆಲ್ಲವು ಆ ಲಿಂಗಕ್ಕೆ ಭಿನ್ನವೆಂಬ ಅಜ್ಞಾನಿಗಳ ಮೆಚ್ಚನು ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಆದಿ ಲಿಂಗಂ ಭೋ, ಅನಾದಿ ಶರಣಂ ಭೋ! ಪೂರ್ವ ಲಿಂಗಂ ಭೋ, ಅಪೂರ್ವ ಶರಣಂ ಭೋ! ಕೂಡಲಚೆನ್ನಸಂಗನಲ್ಲಿ ಸಾಧ್ಯ ಲಿಂಗಂ ಭೋ, ಅಸಾಧ್ಯ ಶರಣಂ ಭೋ!
--------------
ಚನ್ನಬಸವಣ್ಣ
ಆತ್ಮನಲ್ಲಿ ಪ್ರಣವಪಂಚಾಕ್ಷರಿಯ ನಿರವಿಸಿ, ಸದ್ಗುರುವೆ ಎನ್ನ ಶಿವಾತ್ಮನ ಮಾಡಿದಿರಾಗಿ, ಆತ್ಮಶುದ್ಧಿಯಾಯಿತ್ತೆನಗೆ. ಪಂಚಭೂತಂಗಳಲಿ ಪಂಚಬ್ರಹ್ಮನನಿರಿಸಿದಿರಾಗಿ, ಭೂತಶುದ್ಧಿಯಾಯಿತ್ತೆನಗೆ. ಅಂಡಜ ಜರಾಯುಜಾದಿ ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ಬಹ ಜೀವನ ಅಯೋನಿಜನ ಮಾಡಿದಿರಾಗಿ ಜೀವಶುದ್ಧಿಯಾಯಿತ್ತೆನಗೆ. ಅಂಗಾಶ್ರಯವ ಕಳೆದು ಲಿಂಗಾಶ್ರಯವ ಮಾಡಿದಿರಾಗಿ ಮನಶ್ಶುದ್ಧಿಯಾಯಿತ್ತೆನಗೆ. ಪಶುವೆಂಬ ಅಜ್ಞಾನದ್ರವ್ಯವ ಕಳೆದು ಪರಮಸುಜ್ಞಾನದ್ರವ್ಯವ ಮಾಡಿದಿರಾಗಿ ದ್ರವ್ಯಶುದ್ಧಿಯಾಯಿತ್ತೆನಗೆ. ಇಂತು ಸರ್ವಶುದ್ಧನಂ ಮಾಡಿ ಪೂರ್ವಾಶ್ರಯವ ಕಳೆದಿರಾಗಿ ಕೂಡಲಚೆನ್ನಸಂಗಾ, ನಿಮ್ಮುವ `ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ : ಎನುತಿರ್ದೆನು.
--------------
ಚನ್ನಬಸವಣ್ಣ
ಆಮಿಷ ತಾಮಸವೆಂಬ ಸಂದೇಹ ನಿಂದಿತ್ತು; ಪುಣ್ಯ ಪಾಪವೆಂಬ ಉಭಯವಳಿಯಿತ್ತು; ಇಷ್ಟ ಪ್ರಾಣವೆಂಬ ಉಭಯದ ಬೆಳಗು ಒಡಗೂಡಿತ್ತು. ಪ್ರಭುದೇವರ ಸುಳುಹು ಕಾಣಲಾಗಿ ಕೂಡಲಚೆನ್ನಸಂಗಮದೇವರ ಕಾಣಬಂದಿತ್ತು.
--------------
ಚನ್ನಬಸವಣ್ಣ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದಿಂತು ಲಿಂಗಸ್ಥಲವಾರಕ್ಕಂ ವಿವರ: ಆಚಾರಲಿಂಗಸ್ಥಲ ತ್ರಿವಿಧ:ಸದಾಚಾರ, ನಿಯತಾಚಾರ, ಗಣಾಚಾರ ಇದಕ್ಕೆ ವಿವರ: ಎಲ್ಲ ಜನವಹುದೆಂಬುದೆ ಸದಾಚಾರ. ಹಿಡಿದ ವ್ರತನಿಯಮವ ಬಿಡದಿಹುದೆ ನಿಯತಾಚಾರ. ಶಿವನಿಂದೆಯ ಕೇಳದಿಹುದೆ ಗಣಾಚಾರ. ಗುರುಲಿಂಗಸ್ಥಲ ತ್ರಿವಿಧ:ದೀಕ್ಷೆ, ಶಿಕ್ಷೆ, ಸ್ವಾನುಭಾವ. ಇದಕ್ಕೆ ವಿವರ : ದೀಕ್ಷೆಯೆಂದಡೆ ಗುರು, ಶಿಕ್ಷೆಯೆಂದಡೆ ಜಂಗಮ, ಸ್ವಾನುಭಾವವೆಂದಡೆ ತನ್ನಿಂದ ತಾನರಿವುದು. ಶಿವಲಿಂಗಸ್ಥಲ ತ್ರಿವಿಧ:ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ ಇದಕ್ಕೆ ವಿವರ : ಶ್ರೀಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ, ತನುಗುಣ ನಾಸ್ತಿಯಾದುದೇ ಪ್ರಾಣಲಿಂಗ, ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗವಲ್ಲದೆ ಪೆರತೊಂದನರಿಯದಿಪ್ಪುದೆ ತೃಪ್ತಿಲಿಂಗ. ಜಂಗಮಲಿಂಗಸ್ಥಲ ತ್ರಿವಿಧ :ಸ್ವಯ, ಚರ, ಪರ, ಇದಕ್ಕೆ ವಿವರ : ಸ್ವಯವೆಂದಡೆ ತಾನು. ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು. ಪರವೆಂದಡೆ ಅರಿವು ಮುಂತಾಗಿ ಚರಿಸುವುದು. ಪ್ರಸಾದಲಿಂಗಸ್ಥಲ ತ್ರಿವಿಧ :ಶುದ್ಧ, ಸಿದ್ಧ, ಪ್ರಸಿದ್ಧ ಇದಕ್ಕೆ ವಿವರ : ಶುದ್ಧವೆಂದಡೆ ಗುರುಮುಖದಿಂದ ಮಲತ್ರಯವ ಕಳೆದುಳಿದ ಶೇಷ, ಸಿದ್ಧವೆಂದಡೆ ಲಿಂಗಮುಖದಿಂದ ಕರಣಮಥನಂಗಳ ಕಳೆದುಳಿದ ಶೇಷ. ಪ್ರಸಿದ್ಧವೆಂದಡೆ ಜಂಗಮಮುಖದಿಂದ ಸರ್ವಚೈತನ್ಯಾತ್ಮಕ ತಾನೆಯಾಗಿ ಖಂಡಿತವಳಿದುಳಿದ ಶೇಷ. ಮಹಾಲಿಂಗಸ್ಥಲ ತ್ರಿವಿಧ:ಪಿಂಡಜ, ಅಂಡಜ, ಬಿಂದುಜ. ಇದಕ್ಕೆ ವಿವರ : ಪಿಂಡಜವೆಂದಡೆ ಘಟಾಕಾಶ. ಅಂಡಜವೆಂದಡೆ ಬ್ರಹ್ಮಾಂಡ. ಬಿಂದುಜವೆಂದಡೆ ಮಹಾಕಾಶ. ಇಂತು ಲಿಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಇನ್ನು ಅಂಗಸ್ಥಲವಾವುವೆಂದಡೆ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಇನ್ನು ಅಂಗಸ್ಥಲವಾರಕ್ಕೆ ವಿವರ : ಭಕ್ತಸ್ಥಲ ತ್ರಿವಿಧ :ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತ. ತನುಕ್ರೀಯಿಂದ ತನುಮನಧನವನರ್ಪಿಸುವನಾಗಿ ಗುರುಭಕ್ತ. ಮನಕ್ರೀಯಿಂದ ಮನತನುಧನವನರ್ಪಿಸುವನಾಗಿ ಲಿಂಗಭಕ್ತ. ಧನಕ್ರೀಯಿಂದ ಧನಮನತನುವನರ್ಪಿಸುವನಾಗಿ ಜಂಗಮಭಕ್ತ. ಮಾಹೇಶ್ವರಸ್ಥಲ ತ್ರಿವಿಧ:ಇಹಲೋಕವೀರ, ಪರಲೋಕವೀರ, ಲಿಂಗವೀರ. ಅದಕ್ಕೆ ವಿವರ : ಮತ್ರ್ಯಲೋಕದ ಮಹಾಗಣಂಗಳು ಮೆಚ್ಚುವಂತೆ, ಷಡ್ದರ್ಶನಂಗಳ ನಿರಸನವ ಮಾಡಿ, ತನ್ನ ಸಮಯಕ್ಕೆ ಪ್ರಾಣವ ವೆಚ್ಚಿಸುವನಾಗಿ ಇಹಲೋಕವೀರ. ದೇವಲೋಕದ ದೇವಗಣಂಗಳು ಮೆಚ್ಚುವಂತೆ, ಸರ್ವಸಂಗಪರಿತ್ಯಾಗವ ಮಾಡಿ ಚತುರ್ವಿಧಪದಂಗಳ ಧರ್ಮಾರ್ಥಕಾಮಮೋಕ್ಷಂಗಳ ಬಿಟ್ಟಿಹನಾಗಿ ಪರಲೋಕವೀರ. ಅಂಗಲಿಂಗಸಂಗದಿಂದ ಸರ್ವಕರಣಂಗಳು ಸನ್ನಹಿತವಾಗಿಪ್ಪನಾಗಿ ಲಿಂಗವೀರ. ಪ್ರಸಾದಿಸ್ಥಲ ತ್ರಿವಿಧ :ಅರ್ಪಿತಪ್ರಸಾದಿ, ಅವಧಾನಪ್ರಸಾದಿ, ಪರಿಣಾಮಪ್ರಸಾದಿ ಅದಕ್ಕೆ ವಿವರ : ಕಾಯದ ಕೈಯಲ್ಲಿ ಸಕಲಪದಾರ್ಥಂಗಳು ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷೆ*ಯ ಮಾಡಿ, ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ. ಅಂಗಾಶ್ರಯವಳಿದು ಲಿಂಗಾಶ್ರಯವುಳಿದು, ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ. ಪ್ರಾಣಲಿಂಗಿಸ್ಥಲ ತ್ರಿವಿಧ :ಆಚಾರಪ್ರಾಣಿ, ಲಿಂಗಪ್ರಾಣ, ಜಂಗಮಪ್ರಾಣಿ. ಅದಕ್ಕೆ ವಿವರ : ಮನೋವಾಕ್ಕಾಯದಲ್ಲಿ ಆಚಾರವ ಅವಗ್ರಹಿಸಿಹನಾಗಿ ಆಚಾರಪ್ರಾಣಿ. ಬಾಹ್ಯೋಪಚಾರಂಗಳ ಮರೆದು ಲಿಂಗಕ್ಕೆ ತನ್ನ ಪ್ರಾಣವನೆ ಪೂಜೆಯ ಮಾಡುವನಾಗಿ ಲಿಂಗಪ್ರಾಣಿ. ಬಾಹ್ಯಭಕ್ತಿಯ ಮರೆದು ಜಂಗಮಕ್ಕೆ ತನ್ನ ತನುಮನಪ್ರಾಣಂಗಳ ನಿವೇದಿಸುವನಾಗಿ ಜಂಗಮಪ್ರಾಣಿ ಶರಣಸ್ಥಲ ತ್ರಿವಿಧ:ಇಷ್ಟಲಿಂಗಾರ್ಚಕ, ಪ್ರಾಣಲಿಂಗಾರ್ಚಕ, ತೃಪ್ತಿಲಿಂಗಾರ್ಚಕ ಅದಕ್ಕೆ ವಿವರ : ಅನಿಷ್ಟ ನಷ್ಟವಾಯಿತ್ತಾಗಿ ಇಷ್ಟಲಿಂಗಾರ್ಚಕ. ಸ್ವಯಪರವನರಿಯನಾಗಿ ಪ್ರಾಣಲಿಂಗಾರ್ಚಕ. ಇಹಪರವನರಿಯನಾಗಿ ತೃಪ್ತಿಲಿಂಗಾರ್ಚಕ. ಐಕ್ಯಸ್ಥಲ ತ್ರಿವಿಧ :ಕಾಯಲಿಂಗೈಕ್ಯ, ಜೀವಲಿಂಗೈಕ್ಯ, ಭಾವಲಿಂಗೈಕ್ಯ. ಅದಕ್ಕೆ ವಿವರ : ಕ್ರಿಯೆಯರತುದೆ ಕಾಯಲಿಂಗೈಕ್ಯ. ಅನುಭಾವವರತುದೆ ಜೀವಲಿಂಗೈಕ್ಯ. ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ. ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಆಕಳ ಹೊಟ್ಟೆಯಲ್ಲಿ ಹೋರಿ ಹುಟ್ಟಿದಡೇನು ? ಲಿಂಗಮುದ್ರೆಯನೊತ್ತುವನ್ನಕ್ಕ ಬಸವನಲ್ಲ. ಜಂಗಮದ ಆತ್ಮದಲ್ಲಿ ಪಿಂಡ ಉತ್ಪತ್ತಿಯಾದಡೇನು ? ದೀಕ್ಷಿತನಾಗದನ್ನಕ್ಕ ಜಂಗಮದೇವನಲ್ಲ. ದೀಕ್ಷೆಯಿಲ್ಲದೆ ಹೋಗಿ ಭಕ್ತರಲ್ಲಿ ಅಗ್ಗಣಿಯ ಮುಕ್ಕುಳಿಸಿದಡೆ ಹಾದಿಗೊಂಡು ಹೋಗುವ ನಾಯಿ ಗಿಡದ ಮೇಲೆ ಉಚ್ಚೆಯ ಹೊಯ್ದಂತಾಯಿತ್ತು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಆನು ನೀನೆಂಬ ಮೋಹವೆಲ್ಲಿಯದು, ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ! ಮನಲೀಯ ಮನಲೀಯ ಉಭಯಭಾವರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಆಲಂಬಿತವೆನ್ನದೆ, ಆಲಂಬದೊಳಡಗದೆ, ಆಲಂಬವ ಬಯಸದೆ, ಸೂಕ್ಷ್ಮ ಶಿವಪಥ ಏಕೈಕ ಪ್ರಸಾದಿ. ಸೂಕ್ಷ್ಮವೆನ್ನದೆ, ಸೂಕ್ಷ್ಮವ ಬಯಸದೆ, ಸೂಕ್ಷ್ಮ ನಿರಾಕರಣೆ ಪರಿಕರಣೆಯೆನ್ನದೆ, ನಿತ್ಯ ನಿಜವಾದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಸಯದಾನಕ್ಕೆಡೆಗುಡದ ಪ್ರಸಾದಿ.
--------------
ಚನ್ನಬಸವಣ್ಣ
ಆಚಾರಲಿಂಗಮೋಹಿತನಾದಡೆ ಸಖೀಸಹೋದರಮೋಹವ ಮರೆಯಬೇಕು. ಆಚಾರಲಿಂಗಭಕ್ತನಾದಡೆ, ಪೂರ್ವಾಚಾರವ ನಡೆಯಲಾಗದು. ಆಚಾರಲಿಂಗಪೂಜಕನಾದಡೆ, ಅನ್ಯಪೂಜೆಯ ಮಾಡಲಾಗದು. ಆಚಾರಲಿಂಗವೀರನಾದಡೆ, ಹಿಡಿದ ವ್ರತನೇಮವ ಬಿಡಲಾಗದು. ಆಚಾರಲಿಂಗಪ್ರಸಾದಿಯಾದಡೆ, ಅಶುಚಿಯಾಗಿರಲಾಗದು. ಆಚಾರಲಿಂಗಪ್ರಾಣಿಯಾದಡೆ, ಭಕ್ತನಿಂದೆಯ ಕೇಳಲಾಗದು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಈ ಆರುಸಹಿತ ಆಚಾರಲಿಂಗ ಭಕ್ತಿ.
--------------
ಚನ್ನಬಸವಣ್ಣ
ಆಧಾರಾಧೇಯ ಸೊಮ್ಮು ಸಂಬಂಧವಿಲ್ಲದ ಪ್ರಸಾದಿ, ಭೋಗ ಅಭೋಗಂಗಳ ಸಾರಾಯವಿಲ್ಲದ ಪ್ರಸಾದಿ, ಕ್ರಿಯಾಮೋಹಿತದ, ನಿಃಕ್ರಿಯಾನಿರ್ಮೋಹಿತದ, ಎರಡರ ಭೇದವನು ಶರೀರಾರ್ಥಕ್ಕೆ ಹೊದ್ದಲೀಯದೆ ಜಂಗಮದಲ್ಲಿ ನಿವೇದಿಸಿ ಲಿಂಗಲೀಯವಾದ ಪ್ರಸಾದಿ, ಚತುಷ್ಟಯಂಗಳ ಜಿಹ್ವಕ್ಕೆ ತಲೆದೋರದ ಪ್ರಸಾದಿ. ಇದು ಕಾರಣ_ಕೂಡಲಚೆನ್ನಸಂಗಯ್ಯಾ, ಸರ್ವಾಂಗಲೀಯವಾದ ಪ್ರಸಾದಿ.
--------------
ಚನ್ನಬಸವಣ್ಣ
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಭಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ- ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ. ಅಂದು ನಿಮ್ಮ ನಾಭಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು. ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು. ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು. ಇಪ್ಪತ್ತನೆಯ ಯುಗದಲ್ಲಿ ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು. ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣ. ಹತ್ತೊಂಬತ್ತನೆಯ ಯುಗದಲ್ಲಿ ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿನೆಂಟನೆಯ ಯುಗದಲ್ಲಿ ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನೇಳನೆಯ ಯುಗದಲ್ಲಿ ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನಾರನೆಯ ಯುಗದಲ್ಲಿ....... ಹದಿನೈದನೆಯ ಯುಗದಲ್ಲಿ ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ. ಹದಿನಾಲ್ಕನೆಯ ಯುಗದಲ್ಲಿ ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿಮೂರನೆಯ ಯುಗದಲ್ಲಿ ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೆರಡನೆಯ ಯುಗದಲ್ಲಿ ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೊಂದನೆಯ ಯುಗದಲ್ಲಿ ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹತ್ತನೆಯ ಯುಗದಲ್ಲಿ ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂಬತ್ತನೆಯ ಯುಗದಲ್ಲಿ ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ. ಎಂಟನೆಯ ಯುಗದಲ್ಲಿ ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ. ಏಳನೆಯ ಯುಗದಲ್ಲಿ ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಆರನೆಯ ಯುಗದಲ್ಲಿ ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ. ಐದನೆಯ ಯುಗದಲ್ಲಿ ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ನಾಲ್ಕನೆಯ ಯುಗದಲ್ಲಿ ಚತುರ್ಮುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ. ಮೂರನೆಯ ಯುಗದಲ್ಲಿ ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಎರಡನೆಯ ಯುಗದಲ್ಲಿ ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂದನೆಯ ಯುಗದಲ್ಲಿ ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ. ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು. ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆವಲ್ಲಿ ಸರ್ವಪ್ರಪಂಚು ನಿವೃತ್ತಿಯಾಗಿಹುದು, ಅದೀಗ ಬ್ರಹ್ಮಜ್ಞಾನ. ಆವಲ್ಲಿ ಕೇವಲ ನಿಶ್ಚಿಂತವಾಗಿಹುದು, ಅದೀಗ ಬ್ರಹ್ಮಜ್ಞಾನ. ಆವಲ್ಲಿ ತಾನೆಂಬ ತೋರಿಕೆ ಹುಟ್ಟದಿಹುದು, ಅದೀಗ ಬ್ರಹ್ಮಜ್ಞಾನ. ಆವಲ್ಲಿ ಕೂಡಲಚೆನ್ನಸಂಗಯ್ಯನಲ್ಲದೆ ಪೆರತೊಂದನರಿಯದಿಹುದು ಅದೀಗ ಬ್ರಹ್ಮಜ್ಞಾನವಯ್ಯಾ
--------------
ಚನ್ನಬಸವಣ್ಣ
ಆದಿಯಲ್ಲಿ ಬಂದುದಲ್ಲ, ನಾದಬಿಂದುವಿನಲ್ಲಿ ಆದುದಲ್ಲ. ನಾದವನು ಕಳೆ ನುಂಗಿ, ಕಳೆಯ ನಾದವ ನುಂಗಿ, ಹೊಳೆವ ಲಿಂಗ ನಿನಗೆಂತು ಸಾಧ್ಯವಾಯಿತ್ತು ಹೇಳಾ ? ಅಪ್ಪಣೆಯಿಲ್ಲದ ಅಪ್ಪಣೆ ಸಲುವುದೆ ಜಂಗಮದೊಳಗೆ ? ಇದು ಕಾರಣ- ಕೂಡಲಚೆನ್ನಸಂಗಮದೇವರಲ್ಲಿ ಆದಿಸೋಂಕು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ !
--------------
ಚನ್ನಬಸವಣ್ಣ

ಇನ್ನಷ್ಟು ...