ಅಥವಾ
(4) (5) (0) (0) (1) (0) (0) (0) (1) (0) (0) (0) (0) (0) ಅಂ (0) ಅಃ (0) (5) (0) (5) (0) (0) (1) (0) (0) (0) (0) (0) (0) (0) (0) (0) (1) (0) (0) (0) (2) (0) (0) (4) (4) (0) (0) (0) (0) (0) (2) (1) (0) (2) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು. ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು. ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು. ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ ನಿಂದು ಸೋಂಕುವ ದುರ್ಗುಣ ಉಭಯ ಸೋಂಕುವುದಕ್ಕೆ ಮುನ್ನವೆ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು. ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ ರಾಗವಿರಾಗವೆಂಬುದಕ್ಕೆ ಮನವಿಕ್ಕದೆ ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ ಮದಗಜದಂತೆ ಇದಿರನರಿಯದಿಪ್ಪುದು. ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ ಬಿಂಬದೊಳಗಣ ತರಂಗದ ವಿಸ್ತರದಂಗದಂತೆ ಇಂತೀ ಷಟ್‍ಸ್ಥಲಕ್ಕೆ ನಿರ್ವಾಹಕವಾಗಿ ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ.
--------------
ಬಾಹೂರ ಬೊಮ್ಮಣ್ಣ
ಭಕ್ತಸ್ಥಲ ಗುರುರೂಪು, ಮಾಹೇಶ್ವರಸ್ಥಲ ಲಿಂಗರೂಪು, ಪ್ರಸಾದಿಸ್ಥಲ ಜಂಗಮರೂಪು, ಪ್ರಾಣಲಿಂಗಿಸ್ಥಲ ಆತ್ಮರೂಪು, ಶರಣಸ್ಥಲ ಅರಿವುರೂಪು, ಐಕ್ಯಸ್ಥಲ ಶಬ್ದಮುಗ್ಧ ನಿರ್ನಾಮಭಾವ. ಇಂತೀ ಷಡುಸ್ಥಲಭಕ್ತಿಯ ನೆಮ್ಮಿ, ವಿಶ್ವಾಸವ ಕಂಡು, ಸತ್ಯದಲ್ಲಿಯೆ ನಿಂದು ಬುದ್ಧಿಕೇವಲ, ವಿದ್ಯೆಕೇವಲ ಅವಿದ್ಯೆಕೇವಲ. ಇಂತೀ ತ್ರಿವಿಧ ಕೇವಲಜ್ಞಾನದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳ ಸ್ಥಿರೀಕರಿಸಿ ಸುಚಿತ್ತದಲ್ಲಿ ದಿವ್ಯತೇಜಪ್ರಕಾಶ ಕೇವಲವಪ್ಪ ಪರಂಜ್ಯೋತಿಯಲ್ಲಿ ವಿಶ್ವಾಸದಿಂದ ಪರವಶನಾಗಬೇಕು. ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು.
--------------
ಬಾಹೂರ ಬೊಮ್ಮಣ್ಣ
ಭಕ್ತಂಗೆ ವಂದಿಸಿ ನಿಂದಿಸಿದಲ್ಲಿಯೆ ವಿಶ್ವಾಸ ಜಾರಿತ್ತು. ವಿರಕ್ತಂಗೆ ಸುಗುಣ ದುರ್ಗುಣವ ಸಂಪಾದಿಸಿದಲ್ಲಿಯೆ ವಿವೇಕ ಹೋಯಿತ್ತಯ್ಯಾ. ಕಣ್ಣಿನಲ್ಲಿ ಮುಳ್ಳುಮುರಿದಂತೆ ಚುಚ್ಚಿ ತೆಗೆಯಬಾರದು, ವೇದನೆ ಬಿಡದು. ವರ್ತನೆಗೆ ಭಂಗ, ಸತ್ಯಕ್ಕೆ ದೂರ, ಈ ಸಮಯದ ಸಂಗ. ಎನ್ನ ಗುಣದ ಕಷ್ಟವನಳಿವುದಕ್ಕೆ ಸಂಗನಬಸವಣ್ಣನಿಂದ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದಾಗದು.
--------------
ಬಾಹೂರ ಬೊಮ್ಮಣ್ಣ
ಭಕ್ತಂಗೆ ಮಾಹೇಶ್ವರಸ್ಥಲ, ಪ್ರಸಾದಿಗೆ ಭಕ್ತಸ್ಥಲ. ಮಾಹೇಶ್ವರಂಗೆ ಪ್ರಾಣಲಿಂಗಿಸ್ಥಲ, ಶರಣಂಗೆ ಪ್ರಸಾದಿಸ್ಥಲ. ಪ್ರಾಣಲಿಂಗಿಗೆ ಐಕ್ಯಸ್ಥಲ, ಐಕ್ಯಂಗೆ ಭಕ್ತನ ವಿಶ್ವಾಸವನರಿತು ಮಾಹೇಶ್ವರನ ಪ್ರಸನ್ನತೆಯ ಕಂಡು ಪ್ರಸಾದಿಯ ಪರಿಪೂರ್ಣತ್ವವನರಿದು ಪ್ರಾಣಲಿಂಗಿಯ ಉಭಯವ ತಿಳಿದು ನಿಂದುದ ಕಂಡು, ಇಂತೀ ಚತುಷ್ಟಯ ಭಾವ ಏಕವಾಗಿ ಶರಣನ ಸನ್ಮತದಲ್ಲಿ ಅಡಗಿ, ಒಡಗೂಡಿದಲ್ಲಿ ಐಕ್ಯಂಗೆ ಬೀಜನಾಮ ನಿರ್ಲೇಪ, ಇಂತೀ ಸ್ಥಲಭಾವ. ಪಶುವಿನ ಪಿಸಿತದ ಕ್ಷೀರವ, ಶಿಶುವಿನ ಒಲವರದಿಂದ ತೆಗೆವಂತೆ ಆ ಕ್ಷೀರದ ಘೃತವ, ನಾನಾ ಭೇದಂಗಳಿಂದ ವಿಭೇದಿಸಿ ಕಾಬಂತೆ ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ಫಲ, ಪ್ರಸಾದಿಗೆ ನಿಷೆ*, ಪ್ರಾಣಲಿಂಗಿಗೆ ಮೂರ್ತಿಧ್ಯಾನ, ಶರಣಂಗೆ ನಿಬ್ಬೆರಗು, ಐಕ್ಯಂಗೆ ಈ ಐದು ಲೇಪವಾದ ನಿರ್ನಾಮ. ಇಂತೀ ಷಟ್‍ಸ್ಥಲವ ನೆಮ್ಮಿ ಕಾಬುದು ಒಂದೆ ವಿಶ್ವಾಸ. ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು ಅರಿದವನಿಗಲ್ಲದೆ ಸಾಧ್ಯವಲ್ಲ ನೋಡಾ.
--------------
ಬಾಹೂರ ಬೊಮ್ಮಣ್ಣ