ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ, ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು, ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ. ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ, ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ, ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ ಅಂತರಂಗದ ಪೂಜೆಯ ಮಾಡುವುದು. ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ ಅಂತರಂಗದ ವಸ್ತುಗಳೆಲ್ಲವನ್ನು ತಂದು, ಬಹಿರಂಗದ ವಸ್ತುವಿನಲ್ಲಿ ಕೂಡಿ, ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು, ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲೋಕಹಿತಾರ್ಥವಾಗಿ, ಪ್ರಾಣಿಗಳೆಲ್ಲ ಕೆಟ್ಟಹರೆಂದು ಶರಣ ಲಿಂಗವಾಗಿ, ಲಿಂಗಭರಿತ ಶರಣನಾಗಿ ಬದುಕಿಸಿದನು ಕೇಳಿರಣ್ಣಾ. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ಶರಣರೂಪಾಗಿ ಬಂದು ಶ್ರೀಮೂರ್ತಿಯ ತೋರಿ ಪಾಪವ ಕಳೆದನು. ಉಪಪಾತಕಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹಂತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್ ಭಕ್ತಜನಂಗಳ ಕೂಡೆ ಸಂಭಾಷಣೆಯ ಮಾಡಿ ಮಹಾಪಾತಕಂಗಳ ಕಳೆದನು. ಮಹಾಪಾತಕಕೋಟಿಘ್ನಃ ಶ್ವಪಚೋ[s]ಪಿ ಲಿಂಗಪೂಜಕಃ ತತ್ಸಂಭಾಷಣಾನ್ಮುಕ್ತಿರ್ಗಣಮುಖ್ಯಗಣೇಶ್ವರಃ ಶ್ರೀಗುರುಮೂರ್ತಿಯ ತೋರಿ ಸಂಭಾಷಣೆಯಂ ಮಾಡಿ ಪಾದೋದಕ ಪ್ರಸಾದವನಿತ್ತು ಸಲಹಿ ರಕ್ಷಿಸಲು ಬಂದನು ಕಾಣಿರಣ್ಣಾ. ಇದನರಿಯದೆ, ಶರಣರು ದ್ರವ್ಯಾರ್ಥಿಗಳಾಗಿ ಬಂದರೆಂಬಿರಿ, ನಾನು ಮಾಡಿದೆನು ಶರಣರು ಮಾಡಿಸಿಕೊಂಡಹರೆಂದೆಂಬಿರಿ, ಉಂಟೆಂದಿರಿ, ಇಲ್ಲೆಂದಿರಿ, ಈ ಪರಿ ಅಜ್ಞಾನದಲ್ಲಿ ಕಂಡು, ನುಡಿದು, ದೋಷಿಗಳಹಿರಿ. ಶರಣರ ಶಿವನೆಂದು ನಂಬಿಮಾಡಲು ಸಿರಿಯಾಳನು ಮಗನ ಕೊಟ್ಟಡೆ ಕೈಲಾಸವ ಕೊಟ್ಟನು. ದಾಸ ವಸ್ತ್ರನಿತ್ತಡೆ ಮಹಾವಸ್ತು ತವನಿದ್ಥಿಯ ಕೊಟ್ಟನು. ಬಲ್ಲಾಳ ವಧುವನಿತ್ತಡೆ, ತನ್ನನೇ ಕೊಟ್ಟನು. ಈ ಪರಿ ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತವನೆ ಕೊಟ್ಟನು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವಸಂಪೂಜ್ಯಮಾನೇಷು ಗಣಮುಖ್ಯೋ ಗಣೇಶ್ವರಃ ಭಕ್ತಿಯಿಂ ನಂಬಿ ಮಾಡಿರೆ, ದುಭಾರ್ವಿಸಿ ಕೆಡಬೇಡ. ಶರಣರೇ ಶಿವನೆಂದು ನಂಬಿ ಮಾಡಿರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಕೂಡುವುದಯ್ಯಾ.
--------------
ಉರಿಲಿಂಗಪೆದ್ದಿ
ಲಿಂಗವಂತನು ಲಿಂಗವಿಲ್ಲದರ ಬಯಸಿದಡೆ ಆತಂಗೆ ಲಿಂಗವಿಲ್ಲ, ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ. ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು. ಇದು ಕಾರಣ, ದುರಾಶೆಯಂ ಬಿಟ್ಟು ನಿರಾಶೆಯಾಗಿ ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು ಪ್ರಸಾದದಿಂದಿಹಪರ ಸಿದ್ಧಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವಂತರ ಲಿಂಗವೆಂಬುದೇ ಶೀಲ, ಲಿಂಗವಂತರ ರಾಣಿವಾಸವ ಲಿಂಗದ ರಾಣಿವಾಸವೆಂಬುದೇ ಶೀಲ, ಲಿಂಗವಂತರ ಅರ್ಥ ಪ್ರಾಣ ಅಬ್ಥಿಮಾನಕ್ಕೆ ತಪ್ಪದಿಪ್ಪುದೇ ಶೀಲ, ಲಿಂಗವಂತರ ಪಾದೋದಕ ಪ್ರಸಾದ ಸೇವನೆಯ ಮಾಡುವುದೇ ಮಹಾಶೀಲವಯ್ಯಾ, ಇಂತಪ್ಪ ಶೀಲ ಸುಶೀಲದೊಳಗಾದ ಶೀಲವೇ ಶೀಲ. ಈ ಕ್ರೀಯನರಿದು ನಂಬಿ ಭಯಭಕ್ತಿಯಿಂ ತನು ಮನ ಧನದಲ್ಲಿ ದುರ್ಭಾವ ಹುಟ್ಟದೆ ಸ್ವಭಾವ ಸದ್ಭಾವದಿಂ ಏಕಭಾವವಾದಡೆ, ಆತನೇ ಸದ್ಭಕ್ತನು. ಅಂತಹ ಸದ್ಭಕ್ತದೇಹಿಕದೇವನಾಗಿಪ್ಪನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ? ಅಶನವ ಬಿಟ್ಟಡೇನು, ಪರಾಕಿಯಂತೆ ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ? ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ? ಏನ ಮಾಡಿದಡೇನು ? ಏನ ಕೇಳಿದಡೇನು ? ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವನರಿಯರು ಲಿಂಗದ ಮುಖವನರಿಯರು. ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು. ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು. ಶಿವಾಚಾರಪರಾಙ್ಮುಖರು ನೋಡಾ. ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ. ಅದನೆಂತೂ ಅರಿಯರು. ಗುರು ಲಿಂಗ ಜಂಗಮ ಒಂದೆಂಬುದನೂ ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು ಕ್ರೀಯನರಿದು ಕಾಲವನರಿದು ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ. `ನ ಗುರೋರಧಿಕಂ ನ ಗುರೋರಧಿಕಂ ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು `ಏಕ ಮೂರ್ತಿಸ್ತ್ರಧಾ ಭೇದಾಃ ಎಂಬುದನರಿದು ಕ್ರಿಯೆಯಲ್ಲಿ ಕ್ರಿಯೆಯನರಿದು ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ. ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ ಏಕೀಭವಿಸಿ ನಡೆವುದು. ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ. ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರೇ ಬಲ್ಲರು, ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].
--------------
ಉರಿಲಿಂಗಪೆದ್ದಿ
ಲಿಂಗಪ್ರಸಾದವಂ ಚೆಲ್ಲಿ, ಜಂಗಮಪ್ರಸಾದದ ಸುಯಿಧಾನಿಯೆಂಬ ಅಂಗಹೀನ ಮೂಕೊರೆಯ ಹೊಲೆಯನ ಮುಖವ ನೋಡಲಾಗದು ! ಅದೇನು ಕಾರಣವೆಂದಡೆ : ಗುರುವಾವುದು ? ಲಿಂಗವಾವುದು ? ಜಂಗಮವಾವುದು ? ಇಂತೀ ತ್ರಿವಿಧವು ಒಂದಾದ ಕಾರಣ ಏಕಮೂರ್ತಿಸ್ತ್ರಯೋ ಭಾಗಃ ಗುರುಲಿಂಗಂತು ಜಂಗಮಃ ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ಎಂದುದಾಗಿ, ಒಂದಬಿಟ್ಟೊಂದ ಹಿಡಿದ ಸಂದೇಹಿ ಹೊಲೆಯನ ಕಂಡರೆ ಹಂದಿ ನಾಯ ಬಸುರಲ್ಲಿ ಹಾಕದೆ ಬಿಡುವನೇ ? ನಮ್ಮ [ಉರಿಲಿಂಗಪೆದ್ದಿಪ್ರಿ]ಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗದೇವನ ನಂಬಿದವಂಗೆ ಜ್ಞಾನವಿದೆ, ಅಷ್ಟಮಹದೈಶ್ವರ್ಯ ಲಿಂಗಭೋಗ ಆವುದೂ ಕೊರತೆ ಇಲ್ಲ. ಸುಖಪರಿಣಾಮಿ, ಆ ಮಹಿಮಂಗೆ ಮಾನವರಾರೂ ಪಡಿಯಲ್ಲ. ಲಿಂಗದೇವನ ನಂಬದವಂಗೆ ಜ್ಞಾನವಿಲ್ಲ, ಐಶ್ವರ್ಯ ಭೋಗ ಆವುದೂ ಇಲ್ಲ, ಇಹಪರವಿಲ್ಲ. ಇದನರಿದು ತನ್ನ ತಾನು ವಿಚಾರಿಸಿಕೊಂಬುದಯ್ಯಾ. ಲಿಂಗವ ನಂಬಿದಡೆ ಸರ್ವಸಿದ್ಧಿ, ಲಿಂಗವ ನಂಬದಿರ್ದಡೆ ನಾಯಕನರಕ. ಇನ್ನಾದಡೂ ನಂಬಿ ಬದುಕಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗಪ್ರಸಾದದಲ್ಲಿ ಸುಯಿಧಾನಿಯಾಗದವರಲ್ಲಿ ಜಂಗಮವೆಂದು ಪ್ರಸಾದವ ಕೊಳ್ಳಲಾಗದು. ಅದೇನು ಕಾರಣವೆಂದಡೆ: ತಾನುಂಬುವುದು ಎಂಜಲು, ಪರರಿಗಿಕ್ಕುವುದು ಪ್ರಸಾದವೆ ? ಬಿಡು ಬಿಡು, ಸುಡು ಸುಡು, ಈ ಕಷ್ಟದ ನುಡಿಯ ಕೇಳಲಾಗದು. ಪರುಷ ನಿರ್ಮಲವಾದಲ್ಲದೆ, ಅದು ಲೋಹದ ದುರ್ಗುಣವ ಕೆಡಿಸಲರಿಯದು. ಜಂಗಮನಾಗಿಯಲ್ಲದೆ ತಾ ಭಕ್ತನಾಗಲರಿಯ. ಮಡಿಯರ್ಧ, ಮೈಲಿಗೆಯರ್ಧವಾದಡೆ ಕೆಡಹಿ ನಾಯಕ ನರಕದಲ್ಲಿಕ್ಕುದೆ ಬಿಡುವನೆ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು. ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ, ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ, ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ, ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ, ಇಂತೀ ಚತುರ್ವಿಧ ಪದವಾಯಿತ್ತು. `ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ' ಎಂಬುದಾಗಿ ಸರ್ವಭೋಗಂಗಳನೂ ಸಹವಾಗಿ ಭೋಗಿಸಿ ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು. ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ ? ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವನರಿದ ಲಿಂಗವಂತನು ಸರ್ವಾಂಗಲಿಂಗಮೂರ್ತಿ. ಆತನ ನುಡಿಯೆ ವೇದ, ಆತನ ನಡೆಯೆ ಶಾಸ್ತ್ರ ಪುರಾಣ ಆಗಮ ಚರಿತ್ರವು. ಆ ಮಹಾಮಹಿಮನ ನುಡಿಯಲ್ಲಿ ತರ್ಕವ ಮಾಡಲಾಗದು. ನಡೆಯಲ್ಲಿ ನಾಸ್ತಿಕವ ಮಾಡಿದಡೆ ನರಕ ತಪ್ಪದಯ್ಯಾ. ಲಿಂಗವನರಿದ ಮಹಾಮಹಿಮಂಗೆ ನಮೋ ನಮೋ ಎಂಬೆನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವಂತ ಲಿಂಗವಂತ ಎಂಬಿರಿ, ಎಂತು ಲಿಂಗವಂತರಾದಿರೋ, ಅನ್ಯದೈವದ ಭಜನೆ ಮಾಣದನ್ನಕ್ಕ ? ಭವಿಗಳ ಸಂಗವ ಮಾಣದನ್ನಕ್ಕ, ಎಂತು ಲಿಂಗವಂತರಾದಿರೋ ನೀವು ? ಅದೆಂತೆಂದಡೆ, ಶಿವಾಚಾರಸಮಾಯುಕ್ತಃ ಅನ್ಯದೈವಸ್ಯ ಪೂಜನಾತ್ ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್ ಅಶನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ ಇಂತೆಂದುದಾಗಿ, ಅನ್ಯದೈವ ಭವಿವುಳ್ಳನಕ, ನೀವು ಲಿಂಗವಂತರೆಂದಿರೋ, ಮರುಳುಗಳಿರಾ ? ಇದನರಿತು ಭಕ್ತಿಪಥವ ಸೇರದಿರ್ದಡೆ, ನೀವೆಂದೆಂದಿಗೂ ಭವಭವದ ಲೆಂಕರು. ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗ ಮುನ್ನವೇ ದೂರವಯ್ಯ.
--------------
ಉರಿಲಿಂಗಪೆದ್ದಿ
ಲಿಂಗ ಪ್ರಾಣ, ಪ್ರಾಣ ಲಿಂಗ, ಆ ಮಹಾಲಿಂಗಕ್ಕೆ ಕಾಯವೆ ಭಕ್ತನು, `ಭಕ್ತಕಾಯ ಮಮಕಾಯ' ಎಂದುದಾಗಿ ಆ ಪ್ರಾಣ ಲಿಂಗವು, ಕಾಯ ಭಕ್ತನು ಆ ಲಿಂಗಕ್ಕೆ ಆ ಭಕ್ತನು ದಾಸೋಹವ ಮಾಡಿದಡೆ ಭಿನ್ನ ಭೇದವೆ ? ಅಲ್ಲ, ಸ್ವಭಾವ ನೈಜ. ಅಂಗಕ್ರೀಯೆಲ್ಲ ಲಿಂಗಕ್ರೀ, ಲಿಂಗಕ್ರೀಯೆಲ್ಲ ಅಂಗಕ್ರೀ. ಕೈಕಲಸಿದಡೆ ಬಾಯಿಗೆ, ಹಾಂಗೆ ಸರ್ವಾಂಗ ಲಿಂಗಕ್ಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವು ಸರ್ವಾಂಗದಲ್ಲಿ ಭರಿತವಾಗಿರಲು ಮನ ಅರಿಯದು, ತನು ಸೋಂಕದು, ಜ್ಞಾನ ಕಾಣಿಸದು, ಭಾವ ಮುಟ್ಟದು. ಶಿವಶಿವಾ ವಿಶ್ವಾಸದಿಂ ಗ್ರಹಿಸಿ ಹಿಡಿಯದೆ ಕೆಟ್ಟೆ. ಅಂತರಂಗ ಬಹಿರಂಗ ಭರಿತವಾಗಿ ಲಿಂಗವಿದಾನೆ ಇದಾನೆ. ಮನವೇ, ನಿಮಿಷದಲಿ ವಿಶ್ವಾಸದಿಂ ಗ್ರಹಿಸಿದಡೆ ಸತ್ಯನಪ್ಪೆ ನಿತ್ಯನಪ್ಪೆ ಮುಕ್ತನಪ್ಪೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲೋಕದ ಜಡಜೀವಿಗಳಿಗೆ ಚಿದ್ವಿಭೂತಿರುದ್ರಾಕ್ಷಿಮಂತ್ರವ ಹೇಳುವನೊಬ್ಬ ಗಣದ್ರೋಹಿ ನೋಡ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವಂತನು ಕೇವಲ ಲಿಂಗಮೂರ್ತಿ. ಲಿಂಗಾರ್ಚನೆಯಂ ಮಾಡಿ, ಲಿಂಗಪ್ರಸಾದವ ಧರಿಸಿ, ಲಿಂಗವಂತರಲ್ಲಿ ವರ್ತಿಸಿ, ಸರ್ವವೂ ಲಿಂಗಕ್ರೀಯಾಗಿದ್ದು ಲಿಂಗವಿಲ್ಲದವರಲ್ಲಿ ಧನದ ಕೊಳುಕೊಡೆ ಮನದ ಕೊಳುಕೊಡೆ ತನುವಿನ ಕೊಳುಕೊಡೆಯನೂ ಮಾಡಿದಡೆ ನಾಚದೆ ಶಿವಾಚಾರ? ನಾಚದೇ ಪ್ರಸಾದ? ನಾಚರೆ ಲಿಂಗವಂತರು. ಸುಡು, ಸುಡು, ಕಡು ಕಷ್ಟ, ಅವರನು ಬಿಡು ಬಿಡು. ಆ ತನುವನು ಲಿಂಗವಂತರಲ್ಲಿಯೇ ಸರ್ವಕ್ರೀಯ ಅರ್ತಿಸುವುದು. ತನಗೆ ಇಚ್ಛೈಸಿತ್ತ ಕೊಂಡು ಕೊಂಬುದು, ಅವರು ಇಚ್ಛೈಸಿತ್ತ ಕೊಡುವುದು, ಅವರಲ್ಲಿಯೆ ಅನುಭವವನಾಸೆಗೈವುದು. ಅ[ನ್ಯ]ರ ವಿಚಾರದಲ್ಲಿ ನಡೆದು ನರಕಕ್ಕಿಳಿಯಲಾಗದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವಿದ್ದುದೇ ಕೈಲಾಸ, ಲಿಂಗವಿದ್ದುದೇ ಕಾಶೀಕ್ಷೇತ್ರ ಲಿಂಗವಿದ್ದುದೇ ಅಷಾ*ಷಷ್ಟಿಮುಕ್ತಿಕ್ಷೇತ್ರ ಕಾಣಿರಣ್ಣಾ. ಇದು ಕಾರಣ, ಲಿಂಗವಿದ್ದ ಠಾವ ಕೇಳಿರೆ: ಲಿಂಗವಿದ್ದ ಠಾವು, ಭಕ್ತಕಾಯ ಮಮಕಾಯವೆಂದುದಾಗಿ ಭಕ್ತನ ಕಾಯ ಲಿಂಗಕಾಯ, `ಲಿಂಗಾಲಿಂಗೀ ಮಹಜ್ಜೀವಿ' ಎಂದುದಾಗಿ ಲಿಂಗವಂತನೇ ಲಿಂಗಪ್ರಾಣಿ ಕಾಣಿರಣ್ಣಾ. ಇಂತೆಂದುದಾಗಿ, ಶಿವಭಕ್ತನ ಸಂಗ ಲಿಂಗಸಂಗ, ಶಿವಭಕ್ತನ ಪಾದವೇ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗಾರ್ಚನೆಯ ಮಾಡಿ ಪ್ರಸಾದವ ಪಡೆದು, ಪ್ರಸಾದವ ಭೋಗಿಸುವುದು. ಅಲ್ಲಲ್ಲಿಗೆ ಹೋಗಿ ತೋಳಲಿ, ಬಳಲಿ, ಕಲ್ಲು ತಾಗಿದ ಮಿಟ್ಟೆಯ[ವೊ]ಲಾಗದೆ ಎಲೆ ಎಲೆ ಜಡಜೀವನೆ ಮತ್ತೆಲ್ಲಿಯೂ ಅರಸ[ದಿರು]. ದೇವರೆಂಬ ಬಲ್ಲಹನ ಬಿಟ್ಟು ಕಟಕವಿಹುದೆ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಶ್ರಿಪಾದದಲ್ಲರಸಿಕೊ ದೇವರೆಂಬವರನು.
--------------
ಉರಿಲಿಂಗಪೆದ್ದಿ
ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ, ಲಿಂಗವೆಂಬುದು ಪರಶಿವನ ಘನತೇಜ, ಲಿಂಗವೆಂಬುದು ಪರಶಿವನ ನಿರತಿಶಯಾನಂದಸುಖವು, ಲಿಂಗವೆಂಬುದು ಪರಶಿವನ ಪರಮಜ್ಞಾನ, ಲಿಂಗವೆಂಬುದು ಷಡಧ್ವಮಯ ಜಗಜ್ಜನ್ಮಭೂಮಿ, ಲಿಂಗವೆಂಬುದು ಅಖಂಡಿತವೇದ ಪಂಚಸಂಜ್ಞೆ, ಲಿಂಗವೆಂಬುದು ತಾ ಹರಿಬ್ರಹ್ಮರ ನಡುಮನೆಗಳ ಜ್ಯೋತಿರ್ಲಿಂಗ, ಅಖಿಲಾರ್ಣವಾ ಲಯಾನಾಂ ಲಿಂಗಂ ಮುಖ್ಯಂ ಪರಂ ತಥಾ ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ ಎಂದಿದು ಲಿಂಗದ ಮರ್ಮ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ಲಿಂಗದೊಳಿದ ತಿಳಿಯಬಲ್ಲವನೇ ಬಲ್ಲವನು.
--------------
ಉರಿಲಿಂಗಪೆದ್ದಿ
ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು, ಲಿಂಗಬಾಹ್ಯರ ಸಂಗವ ಮಾಡಲಾಗದು. ಸ್ತ್ರೀ ಪುತ್ರರು ಮೊದಲಾದವರ ಕೂಡ ಲಿಂಗವಿಲ್ಲದವರೊಡನೆ ಸಂಗವ ಮಾಡಲಾಗದು. ಅದೆಂತೆಂದೆಡೆ : ಶಿವಲಿಂಗಾಂಗಸಂಪನ್ನೋ ಲಿಂಗಬಾಹ್ಯಸತೀಸುತಾನ್ ಆಲಿಂಗ್ಯ ಚುಂಬನಂ ಕೃತ್ವಾ ರೌರವಂ ನರಕಂ ವ್ರಜೇತ್ ಎಂದುದಾಗಿ ಮತ್ತೆಯೂ_ ಲಿಂಗೀ ಲಿಂಗಿ ಸಹಾವಾಸೀ ಲಿಂಗಿನಾ ಸಹ ವರ್ತಯೇತ್ ಲಿಂಗಿನಾ ಸಹ ಭುಂಜಿತ ಲಿಂಗಯೋಗೋ ನ ಸಂಶಯಃ ಎಂದುದಾಗಿ ಲಿಂಗವಂತನು ಲಿಂಗವಂತರಲ್ಲಿಯೇ ಸಂಗವ ಮಾಡುವುದು ಶಿವಪಥವಯ್ಯಾ. ಲಿಂಗವಿಲ್ಲದವರೊಡನೆ ಸಂಗವ ಮಾಡುವುದು ಮಹಾಪಾತಕವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗವು ಕೊಟ್ಟ ಆಯುಷ್ಯದಲ್ಲಿ ನಿಮಿಷಾರ್ಧ ನಿಮಿಷಾರ್ಧ ಹೆಚ್ಚಿಸಬಾರದು, ನಿಮಿಷಾರ್ಧ ಕುಂದಿಸಬಾರದು. ಶಿವಲಿಂಗವು ಕೊಟ್ಟ ಭಾಷೆಯಲ್ಲಿ ಕಾಣಿಯ ಕುಂದಿಸಬಾರದು, ಕಾಣಿಯ ಹೆಚ್ಚಿಸಬಾರದು. ಹರಿಬ್ರಹ್ಮಾದಿಗಳಿಗೂ ತೃಣದಂತಪ್ಪ ಕಾರ್ಯವ ಮಾಡಬಾರದು. ಉತ್ಪತ್ತಿ ಸ್ಥಿತಿ ಲಯಕ್ಕೆ ಶಿವನೆ ಕರ್ತನು, ಮತ್ತಾರೂ ಇಲ್ಲ. ಇದನರಿದು ಇನ್ನೇಕನ್ಯರಾಸೆ ಮಾಡದಿರು. ಅನ್ಯರು ಆಯುಷ್ಯ [ಭವಿಷ್ಯ] ಭೋಗಾದಿಭೋಗಂಗಳ ಕೊಟ್ಟರೆಂಬ ಸಂತೋಷ ಬೇಡ, ಕೊಡರೆಂಬ ಕ್ಲೇಶ ಬೇಡ. ಶಿವಾಧೀನವೆಂಬುದನರಿದು, `ತೇನ ವಿನಾ ತೃಣಾಗ್ರಮಪಿ ನ ಚಲತಿ' ಎಂಬುದನರಿದು ಪರಿಣಾಮಿಸು. ಪರಿಣಾಮದಿಂ ಲಿಂಗವನರ್ಚಿಸು ಪೂಜಿಸು ಕೇವಲ ವಿಶ್ವಾಸಂ ಮಾಡಿದಡೆ ಬೇಡಿತ್ತ ಕೊಡುವ ಇಹಪರ ಸಿದ್ಧಿ, ನೆರೆ ನಂಬು ನಂಬು ಮನವೇ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗದೊಡನೆ ಸಹಭೋಜನ ಮಾಡುವ ಸದ್ಭಕ್ತನ ಆಚರಣೆ ಕ್ರಿಯೆಗಳೆಂತುಂಟಯ್ಯಾ ಎಂದಡೆ; ಲಿಂಗ ಜಂಗಮದ ಕುಂದು ನಿಂದೆಯಂ ಕೇಳಲಾಗದು, ಕೇಳಿದಡೆ ಆ ನಿಂದಕನಂ ಕೊಲುವುದು, ಕೊಲಲಾರದಿರ್ದಡೆ ತನ್ನ ತಾನಿರಿದುಕೊಂಡು ಸಾವುದು, ಸಾಯಲಾರದಿರ್ದಡೆ ಅವನ ಬಯ್ವದು. ತನ್ನ ಅರ್ಥಪ್ರಾಣಾಭಿಮಾನವು ಶಿವಾರ್ಪಣವಾಯಿತ್ತೆಂದು ಮನದಲ್ಲಿ ಸಂತೋಷವ ತಾಳಿದಡೆ ಪ್ರಸಾದವುಂಟು. ಇಂತಲ್ಲದೆ ಮನದಲ್ಲಿ ನೋವ ತಾಳಿದಡೆ ಆಚಾರಭ್ರಷ್ಟನು. ಎನ್ನ ಮನೆ, ಎನ್ನ ಧನ, ಎನ್ನ ಸತಿಯೆಂಬನ್ನಕ್ಕರ ಅವನು ಭವಿಯ ಸಮಾನ. ಭಕ್ತನಲ್ಲ, ಪ್ರಸಾದಿಯಲ್ಲ, ಶೀಲವಂತನಲ್ಲ. ಅವನಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದತೀರ್ಥವಿಲ್ಲ, ಪ್ರಸಾದ ಮುನ್ನವೇ ಇಲ್ಲ. ಅವನಿಗೆ ಕುಂಭೀಪಾತಕನಾಯಕನರಕ ತಪ್ಪದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು ? ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ ? `ಸರ್ವೈಶ್ವರ್ಯಸಂಪನ್ನಃ ಸರ್ವೇಶತ್ವಸಮಾಯುತಃ' ಎಂದುದಾಗಿ, `ಅಣೋರಣೀಯಾನ್ ಮಹತೋ ಮಹಿಮಾನ್' ಎಂದುದಾಗಿ, `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. `ನ ಗುರೋರಧಿಕಂ ನ ಗುರೋರಧಿಕಂ ಎಂದುದಾಗಿ, ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ ಲಿಂಗಪ್ರತಿಷೆ*ಯ ಮಾಡಿದನು. ಅದೆಂತೆನಲು ಕೇಳಿರೆ : ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ ಎಂದುದಾಗಿ, `ಗುರುಣಾ ದೀಯತೇ ಲಿಂಗಂ' ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು `ಸಕಲಂ ನಿಷ್ಕಲಂ ಲಿಂಗಂ ಎಂದುದಾಗಿ, `ಲಿಂಗಂ ತಾಪತ್ರಯಹರಂ ಎಂದುದಾಗಿ, `ಲಿಂಗಂ ದಾರಿದ್ರ್ಯನಾಶನಂ ಎಂದುದಾಗಿ, `ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂ ಎಂದುದಾಗಿ, `ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂ ಎಂದುದಾಗಿ, ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾದಾನಿ ಗುರುಲಿಂಗವು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ' ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. `ಏಕಮೂರ್ತಿಸ್ತ್ರಿಧಾ ಭೇದೋ' ಎಂದುದಾಗಿ, ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ; `ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ. ಇದು ನಿಶ್ಚಯ, ಮನವೇ ನಂಬು ಕೆಡಬೇಡ. ಮಹಾಸದ್ಭಕ್ತರನೂ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು, ಇದು ನಿಶ್ಚಯ, ಶಿವನು ಬಲ್ಲನಯ್ಯಾ. ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ ಕೇವಲ ಸದ್ಭಕ್ತಿಯಿಂದ ಪೂಜಿಸುವುದು ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು, ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗದ ಮರ್ಮವನರಿವುದರಿದು, ಲಿಂಗದ ಸಂಜ್ಞೆಯ[ನ]ರಿವುದರಿದು, ಲಿಂಗವಂತಹದಿಂತಹದೆಂದರಿವುದರಿದು ನೋಡಾ. ಲಿಂಗದಲ್ಲಿಯೇ ಆಗಮವಯ್ಯ, ಭೂಮಿಯೇ ಪೀಠಿಕೆ, ಆಕಾಶವೇ ಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿಯೇ ಆಗಮವಯ್ಯ, ಲಿಂಗದಾದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ ಇಂತು ತ್ರೈಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿಯೇ ಅಗಮವಯ್ಯಾ, `ಲಿಂಗಮಧ್ಯೇ ಜಗತ್ಸರ್ವಂ ಎಂಬ ಭಾವಭರಿತಲಿಂಗ `ಬ್ರಹ್ಮವಿಷ್ಣಾದಿದೇವನಾಮಪ್ಯಗೋಚರಂ' ಎಂದು, ಮಾಹೇಶ್ವರಜ್ಯೋತಿರಿದಮಾಪಾತಾಲೇ ವ್ಯವಸ್ಥಿತಂ ಅತೀತಂ ಸತ್ಯಲೋಕಾಧೀನನಂತಂ ದಿವ್ಯಮೀಶ್ವರಂ ಇಂತಾದನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಎಂದರಿದ ಶರಣಂಗೆ ಸುಲಭ, ಮಿಕ್ಕಿದವರ್ಗೆ ಅಸುಲಭ.
--------------
ಉರಿಲಿಂಗಪೆದ್ದಿ
ಲಿಂಗವಂತನು ಲಿಂಗವಂತಂಗೆ ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ. ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ, ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ, ಲಿಂಗವೂ ಒಲಿವುದಯ್ಯಾ. ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ ನೋವು ಮಾಣದು, ಶಿವನೊಲವು ತಪ್ಪದು. ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ

ಇನ್ನಷ್ಟು ...