ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗ ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು, ಗುರುಲಿಂಗ ಪ್ರಾಣ ಏಕೀಭವಿಸಿದ ಲಿಂಗ, ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು. ಈ ಮಹಾವಸ್ತುಗಳನರಿಯದವನು ಅರಿಯದವನು. ಈ ಮಹಾವಸ್ತುಗಳನರಿಯದವರನು ಅರಿದವನು ಅರಿಯದವನು, ಅರಿಯದವಂಗೆ ಪೂಜೆ ಎಂತಕ್ಕು ? ಪೂಜೆ ಇಲ್ಲದವಂಗೆ ಭಕ್ತಿಯಿಲ್ಲ, ಭಕ್ತಿ ಇಲ್ಲದವಂಗೆ ಗುರುಲಿಂಗಜಂಗಮಪ್ರಸನ್ನವೆಂತಪ್ಪುದು ? ಪ್ರಸನ್ನತೆಯ ಹಡೆಯದವಂಗೆ ಪ್ರಸಾದವಿಲ್ಲ, ಪ್ರಸಾದ ಪ್ರಸನ್ನತೆಯ ಹಡೆಯದವಂಗೆ ಮುಕ್ತಿ ಎಂತೂ ಇಲ್ಲ. ಇದನರಿದರಿವುದು, ಪ್ರಸನ್ನತೆಯಪ್ಪಂತೆ ನಡೆವುದು, ಪ್ರಸಾದವ ಹಡೆವುದು, ಭೋಗಿಸಿ ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ? ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ? ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ? ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ ದೇವದಾನವ ಮಾನವರೆಲ್ಲರು ನೀವೆಲ್ಲರು ಆವ ಪರಿಯಲ್ಲಿ ಗುರು ಹೇಳಿರಣ್ಣಾ? ಗುರುವಾರು ಲಘುವಾರೆಂದರಿಯರಿ, ಮನ ಬಂದಂತೆ ನುಡಿದು ಕೆಡುವಿರಾಗಿ. ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು. ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು ಮಹಾಸಂವಾದದಿಂದ ಅತಿತರ್ಕವ ಮಾಡಿ ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ, ಆ ಸಭಾಮಧ್ಯದಿ ಪರಮಾಕಾಶದಿ `ಅತ್ಯತಿಷ*ದ್ದಶಾಂಗುಲನೆನಿಪ' ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ*ದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು. ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ, `ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು `ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ ಎಂದುದಾಗಿ. `ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, `ಈಶಾನಸ್ಸರ್ವವಿದ್ಯಾನಾಂ ಎಂದುದಾಗಿ, ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ ವಿದ್ಯೆಯಲ್ಲಿ ಗುರು ಕಾಣಿರೆ, ದೀಕ್ಷೆಯಲ್ಲಿ ಗುರುವೇರಿ ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ `ಜನಿತೋಥವಿಷ್ಣೋಃ ಎಂದುದಾಗಿ, `ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ, ಮಹಾಘನತರವಪ್ಪ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು. ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ ಎಮ್ಮ ಗಣನಾಥದೇವರೇ ಗುರು ಕಾಣಿರೆ. ಇದು ಕಾರಣ, ಶರಣಮೂರ್ತಿ ಶ್ರೀಗುರು. ಶ್ರೀಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು, ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು. ತನು ಮನ ಧನವನರ್ಪಿಸುವುದು, ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ, ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರು ಲಿಂಗ ಜಂಗಮ ಪ್ರಸಾದ- ಒಂದೆ ಪರಶಿವಮೂರ್ತಿ[ಯ] ಮಹಾವಸ್ತುಗಳು ಕೇಳಿರಣ್ಣಾ. ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿ[ಸೆ] ಧರ್ಮ ಅರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ- ಈ ಚತುರ್ವಿಧಫಲಪದವಿಯ ಕೊಡುವ[ವು] ಗುರು ಲಿಂಗ ಜಂಗಮ ಪ್ರಸಾದವೆಂದು ನಂಬುವುದು, ಇದು ಸತ್ಯ, ಶಿವ ಬಲ್ಲ, ಶಿವನಾಣೆ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಗುರುಲಿಂಗಜಂಗಮವೆ ಶಿವನೆಂದು ಅರಿದು ಮರೆವನು ಶಿವಭಕ್ತನೆ ಅಲ್ಲ, ಶಿವಭಕ್ತನು ಅರಿದ ಬಳಿಕ ಮರೆಯನು. ಅರಿದು ಮರೆವನು ಮದ್ದುಕುಣಿಕೆಯ ಕಾಯ ಮೆದ್ದವನು, ಮದ್ಯ ಮಾಂಸವ ಸೇವಿಸಿದವನು, ಅರಿದು ಮರೆವವನು ಅಜ್ಞಾನಿಗಳ ಸಂಗವ ಮಾಡಿದವನು, ಶ್ವಾನನ ಮಿತ್ರನು. ಅವಂದಿರುಗಳಿಗೆ ಅರಿವು ಮರವೆ ಸಹಜವಾದ ಕಾರಣ ಅರಿದು ಮರೆವವನಲ್ಲ ಶಿವಭಕ್ತನು, ಮರೆದು ಅರಿವವನಲ್ಲ ಶಿವಭಕ್ತನು, ನಂಬಿದವನಲ್ಲ ಶಿವಭಕ್ತನು, ನಂಬಿ ಕೆಡದವನಲ್ಲ ಶಿವಭಕ್ತನು, ವಿಶ್ವಾಸವ ಮಾಡುವವನಲ್ಲ ಶಿವಭಕ್ತನು ಅವಿಶ್ವಾಸ ಮಾಡುವವನಲ್ಲ ಶಿವಭಕ್ತನು. ಮರೆದಡೆಯು ಮರೆದವನಂತೆ, ಅರಿದಡೆಯು ಶಿವನಂತೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗ್ರಂಥ: ಅಘ್ರ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಾದಿಭಿಃ ದರ್ಪಣಂ ಧೂಪದೀಪಂ ಚ ಚಾಮರಂ ಆತಪತ್ರಕಂ ಗೀತಂ ವಾದ್ಯಂ ತಥಾ ನೃತ್ಯಂ ನಮಸ್ಕಾರಂ ಜಪಂ ತಥಾ ಪ್ರದಕ್ಷಿಣಂ ಕ್ರಮೇಣೋಕ್ತಂ ಷೋಡಶಸ್ಯೋಪಚಾರಕಂ ಗಂಧಾಕ್ಷತಂ ಚ ಪುಷ್ಪಂ ಚ ವಸ್ತ್ರಾಭರಣಾನುಲೇಪನಂ ನೈವೇದ್ಯಂ ಚ ತಾಂಬೂಲಂ ಅರ್ಚನಂ ಚಾಷ್ಟಮಂ ಭವೇತ್ _ಇಂತು ಅಷ್ಟವಿಧಾರ್ಚನೆ ಷೋಡಶೋಪಚಾರವು. ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ ಮುಂತಾಗಿ ಮಾಡುವುದು. ಭಕ್ತಿ ಜ್ಞಾನ ವೈರಾಗ್ಯವಿದೆಂದರಿಯಲು ಮೋಕ್ಷ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಗುರುಸ್ವರೂಪನಾಗಿ ಮಹಾಸ್ಥಾನದಲ್ಲಿರುತ್ತಿದ್ದೆ, ಲಿಂಗಸ್ವರೂಪನಾಗಿ ಭ್ರೂಮಧ್ಯದಲ್ಲಿರುತ್ತಿದ್ದೆ, ಜಂಗಮಸ್ವರೂಪನಾಗಿ ಹೃದಯಕಮಲಮಧ್ಯದಲ್ಲಿರುತ್ತಿದ್ದೆ, ಈ ಪರಿಯಲ್ಲಿ ಅಂತರಂಗದಲ್ಲಿ ಭರಿತನಾಗಿದ್ದೆಯಯ್ಯಾ. ಬಹಿರಂಗದಲ್ಲಿ, ಶ್ರೀಗುರುಲಿಂಗವಾಗಿ ದೀಕ್ಷಿಸಿ ರಕ್ಷಿಸಿದೆ, ಶಿವಲಿಂಗವಾಗಿ ಕರಸ್ಥಲದಲ್ಲಿ ಪೂಜೆಗೊಂಡು ರಕ್ಷಿಸಿದೆ, ಜಂಗಮಲಿಂಗವಾಗಿ ಅವಗುಣಂಗಳೆಲ್ಲವನೂ ಕಳೆದು ಶಿಕ್ಷಿಸಿ ರಕ್ಷಿಸಿದೆ. ಇಂತೀ ತ್ರಿವಿಧವು ಒಂದೇ ರೂಪಾಗಿ, ಎನ್ನ ಅಂತರಂಗಬಹಿರಂಗಭರಿತನಾಗಿ ಪ್ರಸಾದವ ಕರುಣಿಸಿ ಮುಕ್ತನ ಮಾಡಿದೆಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವ ಕಂಡಲ್ಲಿ ನಿನ್ನನೇ ಕಾಬೆ, ಲಿಂಗವ ಕಂಡಲ್ಲಿ ನಿನ್ನನೇ ಕಾಬೆ, ಜಂಗಮವ ಕಂಡಲ್ಲಿ ನಿನ್ನನೇ ಕಾಬೆ. ನಿನ್ನಲ್ಲದ ಮತ್ತೊಂದ ತೋರದಿಹ ಅರಿವು ನೀನೇ ಬಲ್ಲೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಗುರುಕಾರುಣ್ಯವ ಪಡೆದು ಲಿಂಗವೇ ಪ್ರಾಣವಾಗಿ ಶ್ರೀಗುರು ಲಿಂಗ ಪ್ರಾಣ ಒಂದಾಗಿ ಕರಸ್ಥಲದಲ್ಲಿ ಶ್ರೀಗುರು ಲಿಂಗವನು ಬಿಜಯಂಗೈಸಿ ಕೊಟ್ಟ ಬಳಿಕ ಲಿಂಗದ ಅಂಗ, ಲಿಂಗದ ನೇತ್ರ, ಲಿಂಗದ ಶ್ರೋತ್ರ ಲಿಂದ ಘ್ರಾಣ, ಲಿಂಗದ ಜಿಹ್ವೆ, ಲಿಂಗದ ಹಸ್ತ ಲಿಂಗದ ಪಾದ, ಲಿಂಗದ ಶಿರ, ಲಿಂಗದ ಮನ ಲಿಂಗದ ಬುದ್ಧಿ, ಲಿಂಗದ ಚಿತ್ತ, ಲಿಂಗದ ಅಹಂಕಾರ. ಅಂಗತತ್ತ್ವವೆಲ್ಲ ಲಿಂಗತತ್ತ್ವ, ಅಂಗಕ್ರೀಯೆಲ್ಲ ಲಿಂಗಕ್ರೀ. ಇದು ಕಾರಣ, ಸೋಹಂಕ್ರೀ ಸೋಹಂಭಾವ ಶ್ರೀಗುರು ಮಾಡಿದ ಕ್ರೀ ಉಪಮಾತೀತ. ವೇದಶಾಸ್ತ್ರ ಪುರಾಣಾಗಮಂಗಳ ಕ್ರೀಯಲ್ಲ, ವಿಷ್ಣ್ವಾದಿಗಳ ಹವಣಲ್ಲ, ಲೋಕಾದಿ ಲೋಕಂಗಳ ಪರಿಯಲ್ಲ. ಇವೆಲ್ಲವ ಮೀರಿದ ವಿಪರೀತ ಮಹಾಘನ ಕ್ರೀಯ ಶ್ರೀಗುರು ತಾನೆ ಬಲ್ಲನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ ಆಗು_ಚೇಗೆಯ ರಾಗ_ದ್ವೇಷ, ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ. ಅಲ್ಪಭೂಮಿ ಅಲ್ಪಂಗಲ್ಲದೆ ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ ಅಂತಹ ಬ್ರಹ್ಮಾಂಡವನೇಕವನೂ ಆಭರಣವ ಮಾಡಿಯಿಟ್ಟುಕೊಂಡಿಪ್ಪ, ಅಂತಹ ಆಭರಣದಿಂದ ಪೂಜೆಗೊಂಡಿಪ್ಪ, ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ. ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ, ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ? ಉತ್ತಮ ಮಧ್ಯಮ ಕನಿಷ* ನಿಕೃಷ್ಟ ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ; ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ? ವೇದಶಾಸ್ತ್ರ ಪುರಾಣಾಗಮಾದಿಯಾಗಿ ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ? ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವೆ ಪರಶಿವನು ಪರಶಿವನೇ ಶರಣಭರಿತನಾಗಿ ಎಮ್ಮ ಶರಣರೇ ಗುರು. ಒಂದು ದೀಕ್ಷೆಯಲ್ಲಿ ಗುರುವೆಂದಡೆ, ನಿಮಗೆಲ್ಲಕೆ ಕರ್ತನಹ ವಿಷ್ಣು ಎಮ್ಮ ಶರಣ ಉಪಮನ್ಯುವಿನ ಕೈಯಲ್ಲಿ ದೀಕ್ಷೆಯ ಪಡೆದು ಶಿಷ್ಯನಾದನು, ಅಂತಾಗೆ ಎಮ್ಮ ಶರಣರೆ ಗುರು. ಲಿಂಗಿನಾ ಸಹ ವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹ ಚಿಂತಾ ಚ ಲಿಂಗಯೋಗೋ ನ ಸಂಶಯಃ ಲಿಂಗಾಂಗಿನಾ ಚ ಸಂಗಶ್ಶ ಲಿಂಗಿನಾ ಸಹವಾಸಿತಾ ಲಿಂಗೇನ ಸಹ ಭುಕ್ತಿಶ್ಯ ಲಿಂಗಯೊಗೋ ನ ಸಂಶಯಃ ಒಂದು ದೀಕ್ಷೆಯಲ್ಲಿ ಗುರುವೆ ನೀವು ? ನಿಮಗೆ ಕರ್ತರಹ ವಿಷ್ಣು ಬ್ರಹ್ಮ ಮೊದಲಾದವರನು ನಮ್ಮ ಶರಣರೆ ಶಿಕ್ಷಿಸಿಕೊಳ್ಳುತಿಹರಾಗಿ ನಮ್ಮ ಶರಣರೇ ಗುರು ಕಾಣಿರೋ ಸ್ವಾನುಭಾವದಲ್ಲಿ. ಗುರುವೆ ದೇವ ದಾನವ ಮಾನವರೆಲ್ಲರೂ ? ಪರಸ್ತ್ರೀಯರಿಗೆ ಅಳಪುವುದು ಹಿರಿದು ಗುರುತ್ವವೇ ? ಅಲ್ಲ. ಪರಧನ ಅನ್ಯದೈವ ಉಭಯವಿಜ್ಞಾನ ಅಜ್ಞಾನ, ದ್ವಂದ್ವಕ್ರಿಯಾ ವರ್ತಿಸುತ್ತಿಹರಾಗಿ. ಅದು ಕಾರಣ, ಸರ್ವರೂ ಲಘುವಾದರು ಅನುಭಾವಸಿದ್ಧಿಯಾದ ನಿಮ್ಮ ಶರಣರೇ ಗುರು. ಶಿವತನು ಲಿಂಗಪ್ರಾಣವಾದ ಬಳಿಕ ಉತ್ಪತ್ತಿಸ್ಥಿತಿಲಯವೆಂದು ಧ್ಯಾನಿಸುವೆ ಚಿಂತಿಸುವೆ ಅಂಜುವೆ ಮನವೇ ನೀನೊಂದು ಕ್ರಿಯಾಕರ್ಮ ಉಪಾಧಿಯಿಂದ. ತ್ರಿವಿಧಕ್ಕೆ ತತ್ಕ್ರಿಯಾಕರ್ಮ ಉಪಾಧಿಯಿಂದ ಈ ತ್ರಿವಿಧಕ್ಕೆ ತತ್ಕ್ರಿಯಾಕರ್ಮವ ಮಾಡಿ ಸಂಸಾರವ ಗೆಲಿವೆನೆಂಬೆ ಮನವೆ, ಇದು ಜ್ಞಾನವಲ್ಲ. ನಿರುಪಾಧಿಕನಾಗಿ ಮಹಾಲಿಂಗ ಕರುಣಿ ಶ್ರೀಗುರುವಾದ ಲಿಂಗವಾದ ಜಂಗಮವಾದ ಪ್ರಸಾದವಾದ ಲಿಂಗತನುವಾದ ಲಿಂಗಪ್ರಾಣವಾದ ಲಿಂಗಕ್ರೀಯಾದ. ಸರ್ವಕ್ರಿಯಾ ಕರ್ಮಂಗಳು ಲಿಂಗಕ್ರಿಯಾಕರ್ಮ, ಉತ್ಪತ್ತಿಸ್ಥಿತಿಲಯವೆಂಬುದಿಲ್ಲ ಸರ್ವವೂ ಲಿಂಗಸ್ಥಿತಿ, ದುಶ್ಚಿಂತೆಯ ಬಿಡು ನಿರುಪಾಧಿಕನಾಗು. ಗುರುಕರುಣಿಸಿದ ಲಿಂಗಕ್ಕೆ ನೀನು ಉಪಾಧಿಕ ಕ್ರೀಯ ಮಾಡದೆ ಸುಚಿತ್ತದಿಂದ ಮಹಾಲಿಂಗವನು ಧ್ಯಾನಿಸಿ ಪೂಜಿಸಿ ಚಿಂತಿಸಿ ಅಲ್ಲಿಯೇ ಸುಖಿಯಾಗು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ರಕ್ಷಿಸುವನು.
--------------
ಉರಿಲಿಂಗಪೆದ್ದಿ
ಗುರುವನರಿವನ್ನಕ್ಕರ ಅಷ್ಟಾದಶ ವಿದ್ಯೆಯನರಿಯಲುಂಟು ಓದಲುಂಟು ಕೇಳಲುಂಟು ಹೇಳಲುಂಟು. ಗುರುಕರುಣದಿಂದ ಗುರುವನರಿದ ಬಳಿಕ, ಗುರುವಲ್ಲದೆ ತಾನಿಲ್ಲ. ಕೇಳಲಿಲ್ಲ ಹೇಳಲಿಲ್ಲ, ಹೇಳಲಿಲ್ಲಾಗಿ ಅರಿಯಲಿಲ್ಲ. ಅರಿಯಲಿಲ್ಲದ ಅರಿವನರುಹಿಸಿದ ಗುರುವನರಿಯಲುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವಿನ ಮಹತ್ವವನು, ಶಿಷ್ಯನ ಗುರುತ್ವವನು ಆರಯ್ಯ ಬಲ್ಲವರು? ಗುರು ಶಿಷ್ಯನಾದ ಪರಿಯನು, ಶಿಷ್ಯ ಗುರುವಾದ ಪರಿಯನು ಆರಯ್ಯ ಬಲ್ಲವರು? ವಾಙ್ಮನೋತೀತ ಉಪಮಿಸಬಾರದ ಘನವು, ಮಹಾಕ್ರೀಯನು. ಭಕ್ತಿಯಿಂದ ಗುರು ಭಕ್ತಿವತ್ಸಲನಾಗಿ ಶಿಷ್ಯ ಗುರುವಾದ ಪರಿ, ಅದು ಬೀಜವೃಕ್ಷನ್ಯಾಯದಂತೆ ಅವಿನಾಭಾವವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ