ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೇವ ದಾನವ ಮಾನವ ಋಷಿಜಂಗಳೆಲ್ಲರನು ಮಹಾಲಿಂಗವ ಕಂಡೆಹೆವೆಂದು ಅನೇಕಕಾಲಂಗಳಲ್ಲಿ ತಪವ ಮಾಡಿ, ಧ್ಯಾನವ ಮಾಡಿ, ಜಪವ ಮಾಡಿಯೂ ಕಾಣಲರಿಯದೆ ಬಳಲುತ್ತೈದಾರೆ. ಅವರಲ್ಲಿ ಸಮರ್ಥಪುರುಷರು ಕಂಡಡೆಯೂ ಕಂಡರೇನು ಫಲ? ಲಿಂಗಕ್ಕೆ ಒಲಿಯರು, ಲಿಂಗವನೊಲಿಸಿಕೊಳಲರಿಯರು, ಕೂಡಲರಿಯರು. ಅಲ್ಪಭೋಗಂಗಳನಿಚ್ಛೈಸಿ, ಆ ಭೋಗಪದವ ಪಡೆದು, ಪುಣ್ಯಪಾಪಂಗಳ ಬಲೆಯೊಳು ಬೀಳುತ್ತಿಹರು. ಅವರುಗಳ ಪರಿಯಿಲ್ಲ, ಎನಗೆ. ಶಿವ ಶಿವಾ ಮಹಾದೇವ, ಮಹಾಲಿಂಗನ ಕರುಣವನು ಏನೆಂದುಪಮಿಸಬಹುದು ಶ್ರೀಗುರುವಾಗಿ ಕರುಣಿಸಿ ಶ್ರೀಹಸ್ತದಿಂದೆನಗೆ ಜನನವ ಮಾಡಿ ಮಾತಾಪಿತನು ತಾನೆಯಾದನು. ಮಹಾದೀಕ್ಷೆಯ ಮಾಡಿ ಶ್ರೀಗುರು ತಾನೆಯಾದನು. ಮಹಾಮಂತ್ರೋಪದೇಶವ ಮಾಡಿ ಮಂತ್ರರೂಪಾಗಿ ಕರ್ಣದಲ್ಲಿ ಭರಿತವಾದನು, ಪ್ರಸಾದರೂಪಾಗಿ ಜಿಹ್ವೆಯಲ್ಲಿ ಭರಿತವಾದನು, ಮಹಾವಿಭೂತಿಯಾಗಿ ಬಾಳದಲ್ಲಿ ಭರಿತವಾದನು, ಸರ್ವಾಂಗಭರಿತವಾದನು. ಮತ್ತೆ ಮತ್ತೆ ಮಹಾಚೋದ್ಯ, ಶ್ರೀಗುರು ಲಿಂಗಮೂರ್ತಿಯನು ಪ್ರಾಣವನೇಕೀಭವಿಸಿ ಪ್ರಾಣಲಿಂಗವಾದನಾಗಿ ಅಂಗದ ಮೇಲೆ ಬಿಜಯಂಗೈದು ಅಂಗಲಿಂಗವಾದನು. ಮಹಾಲಿಂಗವಾಗಿ ಕರಸ್ಥಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದನು, ಇದೂ ವಿದಿತ. ಸುಜ್ಞಾನವನೂ ಪ್ರಸಾದವನೂ ಕರುಣಿಸಲೆಂದು ಶರಣಭರಿತನಾಗಿ ಬಂದು ಕರುಣಿಸಿದನು. ಇಂತು, ಶ್ರೀಗುರು ಲಿಂಗಜಂಗಮರೂಪಾಗಿ ಕರುಣಿಸಿ, ಪ್ರಸನ್ನನಾಗಿ ಮಹಾಪ್ರಸಾದವ ಕರುಣಿಸಿ, ಪ್ರಸಾದರೂಪವಾಗಿ ಸಲುಹಿದನು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಚತುರ್ವಿಧಪದಕ್ಕೆ ಘನಪದದಾಸೋಹದಲ್ಲಿರಿಸಿದನು. ಸರ್ವಪದ ಮಹಾಪದಕ್ಕೆ ವಿಶೇಷ ಲಿಂಗಪದದಲ್ಲಿರಿಸಿದೆನು. ಶಿವ ಶಿವಾ ಮಹಾಪದವ ನಾನೇನೆಂದುಪಮಿಸಲರಿಯೆ. ಸದ್ಗುರುಕೃಪೆ, ವಾಙ್ಮನೋತೀತ. ಮಹಾಘನಪರಿಣಾಮಸುಖವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ತಾನೆ ಬಲ್ಲ.
--------------
ಉರಿಲಿಂಗಪೆದ್ದಿ
ದೇವ, ಮಂಗಳಮಜ್ಜನಮಂ ಮಾಡಲು, ಶಿವಲಿಂಗೋದಕದಿಂ ಪಾದಾರ್ಚನೆಯಂ ಮಾಡಿ, ಹೊಂಗಳಸದೊಳಗಘ್ರ್ಯಂಗಳಂ ತುಂಬಿ ಮಧುಪರ್ಕಮಂ ಮಾಡಿ, ದೇವಾಂಗವಸ್ತ್ರಂಗಳನುಡಿಸಿ, ಷೋಡಶಾಭರಣಂಗಳಂ ತೊಡಿಸಿ, ದೇವಂಗೆ ಗಂಧಾಕ್ಷತೆ ಪುಷ್ಪಂಗಳಿಂ ಪೂಜೆಯ ಮಾಡಿ, ಅಗರು ಧೂಪಂಗಳಿಂ ಧೂಪಿಸಿ, ಮಂಗಳಾಚರಣೆ ಆರೋಗಣೆ ವೀಳ್ಯೆಯವನಳವಡಿಸಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಂಗೆ, ಗೀತವಾದ್ಯನೃತ್ಯವನಾಡಿ ಮೆಚ್ಚಿಸುವ ಗಣಂಗಳಿಗೆ ನಮೋ ನಮೋ ಎಂಬೆನು.
--------------
ಉರಿಲಿಂಗಪೆದ್ದಿ
ದೇಹವೆಂಬ ಮನೆಯಲ್ಲಿ ಮಹಾಲಿಂಗವೆಂಬರಸು ಮನವೆಂಬ ಪೀಠದ ಮೇಲೆ ಮೂರ್ತಿಗೊಂಡಿರಲು, ಅಂತಃಕರಣವೆಂಬ ಪರಿಚಾರಕರುಗಳ ಕೈಯಿಂದ ಪಂಚೇಂದ್ರಿಯಗಳೆಂಬ ಪರಿಯಾಣದಲ್ಲಿ ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪದಾರ್ಥಂಗಳನೆಡೆಮಾಡಿಸಿಕೊಂಡು ಸವಿವುತ್ತಿರಲು ಆನಂದವೆ ಮಹಾಪ್ರಸಾದವಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಸದಾ ಸನ್ನಹಿತ ಕಾಣಿರೆ.
--------------
ಉರಿಲಿಂಗಪೆದ್ದಿ
ದೂರ್ವಾಸ ಉಪಮನ್ಯು ದಧೀಚಿ ಜಮದಗ್ನಿ ಮಾರ್ಕಂಡೇಯ ಪರಾಶರ, ಮೊದಲಾದ ಋಷಿಜನಂಗಳೆಲ್ಲ ಶಿವಲಿಂಗಾರ್ಚನೆಯ ಮಾಡಿದರು. ಬ್ರಹ್ಮ ವಿಷ್ಣು ಮೊದಲಾದ ದೇವಜಾತಿಗಳೆಲ್ಲರೂ ಶಿವಲಿಂಗಾರ್ಚನೆಯ ಮಾಡಿದರು, ಕೇಳಿರೇ ದೃಷ್ಟವ: ಮತ್ಸ್ಯೇಶ್ವರ, ಕೂರ್ಮೇಶ್ವರ, ನಾರಸಿಂಹೇಶ್ವರ, ರಾಮೇಶ್ವರನೆಂದು ದಶಾವತಾರಂಗಳಲ್ಲಿ ವಿಷ್ಣು ಶಿವಲಿಂಗವ ಪ್ರತಿಷೆ*ಯ ಮಾಡಿದುದಕ್ಕೆ ವೇದಶಾಸ್ತ್ರಾಗಮಪುರಾಣಂಗಳ ಕೇಳಿ ನೋಡಿರೆ, ಅದೆಂತೆಂದಡೆ: ಯಂ ಯಂ ಕಾಯಯತೇ ಕಾಮ ತಂ ತಂ ಲಿಂಗಾರ್ಚನಂ ಲಭೀತ್ ನ ಲಿಂಗೇನವಿನಾ ಸಿದ್ಧ ದುರ್ಲಭಂ ಪರಮಂ ಪದಂ ಎಂಬುದಾಗಿ ಮತ್ತಂ; ಅಗ್ನಿಹೋತ್ರಶ್ಚ ವೇದಶ್ಚ ಯಜ್ಞಶ್ಚ ಬಹುದಕ್ಷಿಣಾಂ ಶಿವಲಿಂಗರ್ಚನಂ ಶ್ವೇತ ಕೋಟ್ಯೋಂಸಿನಾಪಿನೋ ಸಮಃ ಎಂಬುದಾಗಿ, ಇಂದ್ರ ಮೊದಲಾದ ದೇವಜಾತಿಗಳೆಲ್ಲರು ಶಿವಲಿಂಗಾರ್ಚನೆಯ ಮಾಡಿದರು. ಇವರೆಲ್ಲರು ಮರುಳರೆ, ನೀವೇ ಬುದ್ಧಿವಂತರೆ? ಕೇಳಿರೇ, ಕೆಡದಿರಿ ಕೆಡದಿರಿ, ಶ್ರೀ ಗುರುವಾಕ್ಯವನೆ ನಂಬಿ, ಗುರು ಲಿಂಗ ಜಂಗಮವನೊಂದೆ ಎಂದು ನಿಶ್ಚೈಸಿ, ಇದೇ ಅಧಿಕ, ಇದರಿಂದ ಬಿಟ್ಟು ಮತ್ತಿನ್ನಾವುದು ಅಧಿಕವಿಲ್ಲ. ಗುರುಲಿಂಗಜಂಗಮದಲ್ಲಿಯ ಭಕ್ತಿಯೇ ಭಕ್ತಿ, ಅರ್ಚನೆಯೇ ಅರ್ಚನೆ, ಸಂಗವೇ ಶಿವಯೋಗ, ಇದು ಸತ್ಯ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ದೇವನೊಂದೆ ವಸ್ತು, ಮನವೊಂದೆ ವಸ್ತು. ಸತ್ಯ, ನಿತ್ಯ, ಸಹಜ, ಉತ್ತಮ ವಸ್ತುವೆ ಉತ್ತಮ ವಸ್ತು. ಈ ಒಂದನೊಂದು ಮೆಚ್ಚಿ ಒಂದಾದಡೆ ಇಹ ಪರ ಒಂದು, ದ್ವಂದ್ವವೆಂಬುದಿಲ್ಲ. ಒಂದೆ ಇದು, ಘನಪರಿಣಾಮ ಮುಕ್ತಿಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ದಿಟದಿಟ ಈ ಬಂದುತ್ತೆ, ಈ ಬಂದುತ್ತೆ ಸಾವು, ಎನಗಿನ್ನೆಂತಯ್ಯಾ? ಸ್ಥಿರಾಯುಗಳೆನಿಪ ದೇವಜಾತಿಗಳೆಲ್ಲ ಸತ್ತುದ ಕೇಳುತ್ತಿದ್ದೇನೆ. ಮತ್ತೆಯೂ ಅರಿದು ಅಧರ್ಮವನೆ ಮಾಡುವೆನು. ಧರ್ಮವ ಮಾಡೆನು, ದುಷ್ಕರ್ಮಿ ನಾನು, ಎನಗೆಂತಯ್ಯಾ? ಸುಧರ್ಮಿ ನೀನು, ಭಕ್ತಿಜ್ಞಾನವೈರಾಗ್ಯವ ಬೇಗ ಬೇಗ ಇತ್ತು ಸಲಹಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ದೇವರಾರೋಗಣೆಯಂ ಮಾಡಿಸಿ, ಪ್ರಸನ್ನತ್ವಮಂ ಪಡೆದು ಪ್ರಸಾದಮಂ ಧರಿಸಿ ಮುಕ್ತರಪ್ಪರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ