ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಕರಸ್ಥಲದಲ್ಲಿಯ ಲಿಂಗಕ್ಕೆ ಬಂದ ಪದಾರ್ಥಂಗಳನರ್ಪಿಸುವೆನೆ ? ಅರ್ಪಿಸಲಮ್ಮೆ. ಅದೇನು ಕಾರಣವೆಂದಡೆ: ಎನ್ನ ಕಂಗಳು ಕಂಡವಾಗಿ, ಎನ್ನ ಶ್ರೋತ್ರಗಳು ಕೇಳಿದವಾಗಿ, ಎನ್ನ ಕೈಗಳು ಮುಟ್ಟಿದವಾಗಿ, ಎನ್ನ ನಾಸಿಕ ವಾಸಿಸಿತ್ತಾಗಿ, ಎನ್ನ ಜಿಹ್ವೆ ರುಚಿಸಿತ್ತಾಗಿ. ಇಂತಪ್ಪ ಎನ್ನ ಅಂಜಿಕೆಯ ನಿಮ್ಮ ಶರಣರು ಬಿಡಿಸಿದರಾಗಿ. ಅದೆಂತೆಂದಡೆ: ಎನ್ನ ಶ್ರೋತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನೇತ್ರದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ತ್ವಕ್ಕಿನಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ಜಿಹ್ವೆಯಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಎನ್ನ ನಾಸಿಕದಲ್ಲಿ ನಿಮ್ಮ ಸಾಹಿತ್ಯವ ಮಾಡಿದರಾಗಿ, ಅಲ್ಲಲ್ಲಿ ಅರ್ಪಿತಂಗಳಾಗುತ್ತಿರ್ದವಾಗಿ, ಇನ್ನಂಜೆ ಅಂಜೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಸರ್ವಾಂಗದಲ್ಲಿ ಲಿಂಗವೈದಾನೆ, ಐದಾನೆ, ಎನ್ನ ಮನವನರಿಯದೆ ಕೆಟ್ಟೆ ಕೆಟ್ಟೆನಯ್ಯಾ. ಎನ್ನ ಅಂತರಂಗ ಬಹಿರಂಗದಲ್ಲಿ ಲಿಂಗವೈದಾನೆ, ಮನವನರಿಯದೆ ಕೆಟ್ಟೆ ಕೆಟ್ಟೆ. ವಿಶ್ವಾಸದಿಂ ಗ್ರಹಿಸಲೊಲ್ಲದೆ ಕೆಟ್ಟೆ ಕೆಟ್ಟೆನಯ್ಯಾ. ಈ ಮನ ವಿಶ್ವಾಸದಿಂದ ಗ್ರಹಿಸಿದಡೆ ಸತ್ಯನಹೆ ನಿತ್ಯನಹೆ ಮುಕ್ತನಹೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನೊಳಗೆ ನೀನು ಪ್ರವೇಶ, ನಿನ್ನೊಳಗೆ ನಾನು ಪ್ರವೇಶ, ದೇವ ನೀನಿಲ್ಲದಿಲ್ಲ, ಭಕ್ತ ನಾನಲ್ಲದಿಲ್ಲ. ಈ ಪರಿಯ ಮಾಡುವರಿನ್ನಾರು ಹೇಳಾ ? ಎನಗೆ ನೀನೇ ಗತಿ, ನಿನಗೆ ನಾನೇ ಗತಿ ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಎನಗಾದ ಮಹಾಪದವನರಿಯದೆ ನಾನು ಬಳಲಿದೆನಯ್ಯಾ, ಎನ್ನ ಪದವ ಈಗ ಅರಿದೆನು, ಬಳಲಿಕೆ ಹೋಯಿತ್ತು ಪರಿಣಾಮವಾಯಿತ್ತು. ಶಿವ ಶಿವಾ, ಶಿವನೆ ಕರ್ತನು, ನಾನು ಭೃತ್ಯನು ಮಿಕ್ಕುವೆಲ್ಲಾ ಮಿಥ್ಯವೆಂದರಿದು ಈ ಮಹಾಜ್ಞಾನಪದಕ್ಕೆ ಈ ಘನತರಸುಖಕ್ಕೆ ಈ ಮಹಾಪರಿಣಾಮಕ್ಕೆ ಇನ್ನಾವುದೂ ಸರಿಯಲ್ಲ. ಉಪಮಾತೀತ ವಾಙ್ಮನೋತೀತ ನೀನೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ನಾನರಿಯದೆ ಪುರಾಕೃತ ಕರ್ಮಫಲದಿಂ ಕರ್ಮವಶನಾಗಿ ಅಜ್ಞಾನಿಯಾಗಿ ಮಹಾದೀನನಾಗಿದ್ದಲ್ಲಿ ಪಾಪಪುಣ್ಯ ಸುಖದುಃಖಾದಿಕ್ರಿಯಾಕರ್ಮವೆಲ್ಲವು ಎನ್ನದು, ನಾನೇ ಸಂಸಾರಿ. ಎನ್ನ ಸಂಸಾರವ ಕೆಡಿಸಿ, ಘೃಣಾಮೂರ್ತಿ ಸದ್ಗುರು ಕೃಪೆಮಾಡಿ ಪೂರ್ವಜಾತವ ಕಳೆದು ಪುನರ್ಜಾತನ ಮಾಡಿ ಶಿವಜ್ಞಾನಸಂಪನ್ನನ ಮಾಡೆ ಬದುಕಿದೆನು. ಎನ್ನ ನಿಜವನರಿದೆನು ನಾನೇ ಗುರುಪುತ್ರನು. ಕಾಯವು ಪ್ರಸಾದಕಾಯ, ಭಕ್ತಾಕಾಯನಾಗಿ ಕಾಯಲಿಂಗ ಪ್ರಾಣವು ಲಿಂಗಪ್ರಾಣವಾಗಿ ಪ್ರಾಣಲಿಂಗವು ಎನ್ನ ಶ್ರೀಗುರುಲಿಂಗ ಎನ್ನ ಜಂಗಮಲಿಂಗವು ಪ್ರಸಾದ ಲಿಂಗವು ಮಂತ್ರಲಿಂಗವು ಶ್ರೀವಿಭೂತಿ ಲಿಂಗವು ಮಹಾಜ್ಞಾನ ತಾನೆ ಲಿಂಗವು. ಸಂಸಾರದಲ್ಲಿ ಕೆಡುವ ಪ್ರಾಣಿಗಳ ಕೆಡದಂತೆ ಮಾಡಿದನು ಬೇಡಿತ್ತ ಕೊಡುವ ಲಿಂಗವನು ಬೇಡಿಕೊಳ್ಳಿರೆ. ಅನಾಥನಾಥನು ಅನಾಥಬಂಧುವು ವರದಮೂರ್ತಿಯು ದಾನಗುಣಶೀಲನು ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಅಂತರಂಗದಲ್ಲಿ ಆವರ್ತಿಸಿ ಬಹಿರಂಗದಲ್ಲಿ ವರ್ತಿಸಿ ತೋರುವೆಯಯ್ಯಾ. ಎನ್ನ ಕಂಗಳ ಮೊದಲ_ಕೊನೆಯಲ್ಲಿ ನೀ ತೋರುತ್ತಿಪ್ಪೆಯಯ್ಯಾ. ಲಿಂಗಂ ಪ್ರಕಾಶಮವ್ಯಕ್ತಂ ಲಿಂಗಂ ಪ್ರತ್ಯಕ್ಷಗೋಚರಂ ಲಿಂಗಂ ಪ್ರಸನ್ನರೂಪಂ ಚ ತಲ್ಲಿಂಗಂ ಜ್ಯೋತಿರಾತ್ಮಕಂ ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಜ್ಯೋತಿ ನೀನೇ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಮನಕ್ಕೆ ಮತ್ತೊಂದ ನೆನೆಯಲು ತೆರಹಿಲ್ಲಯ್ಯಾ ಮಹಾದೇವನು ನೀನು, ಎನ್ನ ಮನವನವಗ್ರಹಿಸಿದೆ. ಆ ಮನವು ನಿನ್ನನೇ ಅವಗ್ರಹಿಸಿತ್ತಾಗಿ. ಎನ್ನ ವಾಕ್ಕಿಂಗೆ ಮತ್ತೊಂದ ನುಡಿಯಲು ತೆರಹಿಲ್ಲಯ್ಯಾ ಮಹಾಮಂತ್ರಮಯ ನೀನು, ಎನ್ನ ವಾಕ್ಕನವಗ್ರಹಿಸಿದೆ. ಎನ್ನ ಮಂತ್ರ ನಿನ್ನನೇ ಅವಗ್ರಹಿಸಿತ್ತಾಗಿ. ಎನ್ನ ಕಾಯಕ್ಕೆ ಮತ್ತೊಂದ ಭೋಗಿಸೆ ತೆರಹಿಲ್ಲಯ್ಯ. ಮಹಾಪ್ರಸಾದರೂಪನು ನೀನು, ಎನ್ನ ಕಾಯವನವಗ್ರಹಿಸಿದೆ, ಆ ಕಾಯವು ನಿನ್ನನೇ ಅವಗ್ರಹಿಸಿದುದಾಗಿ. ಇಂತು ಮನೋವಾಕ್ಕಾಯದ ಅಂತರಂಗಬಹಿರಂಗದ ಒಳಹೊರಗೂ ಸರ್ವಾಂಗಲಿಂಗವಾದ ಕಾರಣ ಮನೋವಾಕ್ಕಾಯದ ಸ್ಥಿತಿಗತಿ ನೀನೆ ಅಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎಂಬತ್ತುನಾಲ್ಕು ಲಕ್ಷ ಯೋನಿಯೊಳು ಜನಿಸುವ ಜನನವೆಲ್ಲರಿಗೆಯು. ಆ ಜನ್ಮಾಂತರದ ಯೋನಿಗಳೊಳು ಜನಿಸದಾತನೆ ಯೋಗಿ. ಆ ಯೋಗಿ ಜನ್ಮಾಂತರ ಕಳೆದಹನು, ಹೇಗೆಂದಡೆ: ಶ್ರೀ ಗುರುಕರಪಲ್ಲವದಿಂದ ಬೆಸಲಾಯಿತ್ತಾಗಿ ನ ಮುಕ್ತಿರ್ನ ಚ ಧರ್ಮಶ್ಚ ನ ಪುಣ್ಯಂ ಚ ನ ಪಾಪಕಂ ನ ಕರ್ಮಜನ್ಮ ನೇಚ್ಛಾ ವೈ ಗುರೋಃ ಪಾದನಿರೀಕ್ಷಣಾತ್ ಎಂದುದಾಗಿ, ಇಂತು ಯೋನಿಜನ್ಮಾಂತರವ ಕಳೆದ ಶರಣಂಗೆ ಮತ್ತೆ ಭವಮಾಲೆಯುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ?
--------------
ಉರಿಲಿಂಗಪೆದ್ದಿ
ಎನ್ನಂಗದಲ್ಲಿ ನಿನಗೆ ಮಜ್ಜನ, ಎನ್ನ ಲಲಾಟದಲ್ಲಿ ನಿನಗೆ ಗಂಧಾಕ್ಷತೆ, ಎನ್ನ ತುರುಬಿನಲ್ಲಿ ನಿನಗೆ ಕುಸುಮಪೂಜೆ. ಎನ್ನ ನೇತ್ರದಲ್ಲಿ ನಿನಗೆ ನಾನಾರೂಪು ವಿಚಿತ್ರವಿನೋದ, ಎನ್ನ ಶ್ರೋತ್ರದಲ್ಲಿ ನಿನಗೆ ಪಂಚಮಹಾವಾದ್ಯ ಕೇಳಿಕೆ, ಎನ್ನ ನಾಸಿಕದಲ್ಲಿ ನಿನಗೆ ಸುಗಂಧ, ಧೂಪಪರಿಮಳ, ಎನ್ನ ಜಿಹ್ವೆಯಲ್ಲಿ ನಿನಗೆ ಷಡ್ರಸಾನ್ನನೈವೇದ್ಯ, ಎನ್ನ ತ್ವಕ್ಕಿನಲ್ಲಿ ನಿನಗೆ ವಸ್ತ್ರಾಭರಣಾಲಂಕಾರಪೂಜೆ, ಎನ್ನ ಸಚ್ಚಿದಾನಂದ ಸಜ್ಜೆಗೃಹದಲ್ಲಿ ನೀನು ಸ್ಪರ್ಶನಂಗೆಯ್ದು ನೆರೆದಿಪ್ಪೆಯಾಗಿ ನೀ ನಾನೆಂಬೆರಡಳಿದು ತಾನು ತಾನಾದ ಘನವನೇನೆಂಬೆನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ಗತಿ, ನಿನ್ನ ಗತಿ ಎನ್ನ ಕೇಳಿಕೆ, ನಿನ್ನ ಕೇಳಿಕೆ ಎನ್ನ ನೋಟವೆ, ನಿನ್ನ ನೋಟ. ಎನ್ನಂಗ ಸ್ಪರ್ಶನವೇ, ನಿನ್ನಂಗ ಸ್ಪರ್ಶನ ಎನ್ನಂಗ ಸುಖಭೋಗವೇ, ನಿನ್ನಂಗ ಸುಖಭೋಗ. ನನ್ನೊಳಗೆ ನೀನು, ನಿನ್ನೊಳಗೆ ನಾನು ಎನ್ನ ಪ್ರಾಣ ನೀನು, ನಿನ್ನ ಪ್ರಾಣ ನಾನಾದ ಕಾರಣ ಎನ್ನ ಸೋಂಕಿತ್ತೆಲ್ಲ ನಿನ್ನ ಪೂಜೆಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಎನ್ನ ಸದ್ಗುರುವು ಮಾಡುವ ಗುರುತ್ವ ಉಪಮಾತೀತವಯ್ಯ ಅದೆಂತೆಂದಡೆ:ಎನ್ನ ನೇತ್ರದಲ್ಲಿ ತನ್ನ ರೂಪ ತುಂಬಿ, ಎನ್ನ ನೇತ್ರವನು ಗುರುವು ಮಾಡಿದ. ಎನ್ನ ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ, ಎನ್ನ ಶ್ರೋತ್ರವನು ಗುರುವು ಮಾಡಿದ. ಎನ್ನ ಘ್ರಾಣದಲ್ಲಿ ಗುರುಪಾದಪದ್ಮದಲ್ಲಿಹ ಮಹಾಗಂಧವ ತುಂಬಿ ಎನ್ನ ಘ್ರಾಣವನು ಗುರುವು ಮಾಡಿದ. ಎನ್ನ ಜಿಹ್ವೆಯಲ್ಲಿ ತನ್ನ ಕರುಣಪ್ರಸಾದವ ತುಂಬಿ, ಎನ್ನ ಜಿಹ್ವೆಯನು ಗುರುವು ಮಾಡಿದ. ಎನ್ನ ಕಾಯವನು ಭಕ್ತಕಾಯ ಮಮಕಾಯವೆಂದು ಪ್ರಸಾದಕಾಯವೆಂದೆನಿಸಿ, ಎನ್ನ ಕಾಯವನು ಗುರುವು ಮಾಡಿದ. ಎನ್ನ ಪ್ರಾಣದಲ್ಲಿ ಲಿಂಗಪ್ರಾಣಸಂಬಂಧವ ಮಾಡಿ ಎನ್ನ ಪ್ರಾಣವನು ಗುರುವು ಮಾಡಿದ. ಇಂತು ಎನ್ನ ಅಂತರಂಗ ಬಹಿರಂಗವನು ಗುರುವು ಮಾಡಿ, ಸರ್ವಾಂಗವನೂ ಗುಪ್ತವ ಮಾಡಿದ ಮಹಾಶ್ರೀಗುರುವಿಂಗೆ ನಾನಿನ್ನೇನ ಮಾಡುವೆನಯ್ಯ :ಮಾಡುವೆನಯ್ಯ ಗುರು ಪೂಜೆಯನು ಆವಾವ ದ್ರವ್ಯಂಗಳನು ಆವಾವ ಪದಾರ್ಥಂಗಳನು, ಆವಾವ ಪುಷ್ಪಫಲಾದಿಗಳನು ವಿಚಾರಿಸಿ ನೋಡಿದಡೆ ಅವಾವಕ್ಕು ಗುರುತ್ವವಿಲ್ಲ ಸರ್ವದ್ರವ್ಯ ಮೂಲ ಮನ ಸರ್ವಪದಾರ್ಥಮೂಲ ಮನ ಸರ್ವರಸ ಪುಷ್ಪಫಲಾದಿಗಳೆಲ್ಲವಕ್ಕೆಯು ಮೂಲಿಗ ಮನವು ಇದು ಕಾರಣ ಸರ್ವಗುರುತ್ವವನುಳ್ಳ ಎನ್ನ ಮನೋವಾಕ್ಕಾಯ ಸಹಿತವಾಗಿ ಗುರುವಿಂಗಿತ್ತು ಎನ್ನ ಶಿರವನು ಶ್ರೀಗುರುವಿನ ದರ್ಶನ ಸ್ಪರ್ಶನವ ಮಾಡಿ ಸುಖಿಯಾಗಿಪ್ಪೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಎಲ್ಲಾ ವ್ರತಂಗಳಿಗೆ ಮೇಲಾದ ವ್ರತ ವಿಭೂತಿಯ ವ್ರತ. ಸಕಲ ದುಃಖದುರಿತಗಳ ಪರಿಹಾರವ ಮಾಳ್ಪುದೀ ಭಸ್ಮವ್ರತ. ತನುಶುದ್ಧತೆ ಮನಶುದ್ಧತೆ, ಶಿವಾತ್ಮೈಕ್ಯಮಾರ್ಗ ಸೋಪಾನಕೆ ಶ್ರೀವಿಭೂತಿ ಮುಖ್ಯವಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಎರಡ ನುಡಿದ ವಿಷ್ಣುವೇನಾದ ? ಎರಡ ನುಡಿದ ಬ್ರಹ್ಮನೇನಾದ ? ಎರಡ ನುಡಿದ ಇಂದ್ರನೇನಾದ ? ಎರಡ ನುಡಿದ ದಕ್ಷನೇನಾದ ? ಎರಡ ನುಡಿದ ವ್ಯಾಸನೇನಾದನೆಂದು, ಇವರುಗಳು ನುಡಿದ ಪರಿಯನೂ, ಅವರ ಪರಿಯನೂ ವಿಚಾರಿಸಿ ನೋಡಿದಡೆ, ಶಿವನೇ ಕರ್ತನೆಂದು ನುಡಿದು, ಮರಳಿ `ಅಹಂ ಕರ್ತಾ' ಎಂದು ನುಡಿದು ಶಾಸ್ತಿಗೊಳಗಾದರು, ಮಾನಹಾನಿಯಾದರು ನೋಡಿರೇ. ವಿಶ್ವವೆಲ್ಲವೂ ಪಶು, ಶಿವನೊಬ್ಬನೇ ಪತಿ ಸರ್ವವೆಲ್ಲವೂ ಶಕ್ತಿರೂಪು, ಶಿವನೊಬ್ಬನೇ ಪುರುಷನು ಎಂದರಿದು ಸರ್ವರೂ ಭೃತ್ಯರು, ಶಿವನೊಬ್ಬನೇ ಕರ್ತನೆಂದರಿದು ಮನ ವಚನ ಒಂದಾಗಿ ನೆನೆವುತ್ತಿಪ್ಪವರು ಶಿವನೊಂದಾದರಯ್ಯಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ದೇವನೊಬ್ಬನೆ, ಎರಡಲ್ಲ.
--------------
ಉರಿಲಿಂಗಪೆದ್ದಿ