ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೈ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ನೆಲನನೊಳಕೊಂಡ ಸಲಿಲ, ಸಲಿಲವನೊಳಕೊಂಡ ಅನಲ ಅನಲನನೊಳಕೊಂಡ ಅನಿಲ, ಅನಿಲನನೊಳಕೊಂಡ ಆಕಾಶ ಆಕಾಶವನೊಳಕೊಂಡ ಮನ, ಮನವನೊಳಕೊಂಡ ಬುದ್ಧಿ ಬುದ್ಧಿಯನೊಳಕೊಂಡ ಪ್ರಕೃತಿ, ಪ್ರಕೃತಿಪುರುಷಜಗವೆಲ್ಲನೊಳಕೊಂಡ ವಿಶುದ್ಧಕಾಯನು ಭಕ್ತದೇಹಿಕದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಿಃಕಾಮಿತ ಫಲವ ಕಾಮಿಸುವ ಮಹಾಕಾಮಿಯೆ ಶಿವಭಕ್ತನು, ಕ್ರೋಧಕ್ಕೆ ಕ್ರೋಧಿಸುವ ಮಹಾಕ್ರೋಧಿಯೆ ಲಿಂಗನಿಷಾ*ಪರನು, ನಿರ್ಲೋಭಕ್ಕೆ ಲೋಭಿಸುವ ಮಹಾಲೋಭಿಯೆ ಲಿಂಗಾವಧಾನಿ. ನಿರ್ಮೋಹಕ್ಕೆ ಮೋಹಿಸುವ ಮಹಾಮೋಹಿಯೆ ಲಿಂಗಾನುಭಾವಿ. ಅಷ್ಟಮದಂಗಳೊಡನೆ ಮದೋಹಂ ಎಂಬ ನಿರ್ಮದಗ್ರಾಹಿಯೆ ಲಿಂಗಾನಂದ¸õ್ಞಖ್ಯನು. ಮತ್ಸರಕ್ಕೆ ಮತ್ಸರಿಸುವ ಮಹಾಮತ್ಸರಗ್ರಾಹಕನೆ ಲಿಂಗಸಮರಸಸಂಬಂಧವೇದ್ಯನು. ಇಂತೀ ಷಡ್ವರ್ಗಂಗಳಿಗೆ ವೈರಿಯಾಗಿರ್ಪ ಶಿವಭಕ್ತನೆ ಸದ್ಭಕ್ತನು. ಆ ಭಕ್ತದೇಹಿಕದೇವ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.
--------------
ಉರಿಲಿಂಗಪೆದ್ದಿ
ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ. ಇದರ ಬೀಜಾಕ್ಷರದ ಭೇದವನರಿಯೆ, ನಿರಂಜನಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಆದಿಪ್ರಣವ, ಅನಾದಿಪ್ರಣವ, ಜ್ಯೋತಿಃಪ್ರಣವ, ಅಖಂಡಜ್ಯೋತಿಃಪ್ರಣವ, ಅಖಂಡಮಹಾಜ್ಯೋತಿಃಪ್ರಣವ, ಗೋಳಕಾಕಾರಪ್ರಣವ, ಅಖಂಡಗೋಳಕಾಕಾರಪ್ರಣವ. ಅಖಂಡಮಹಾಗೋಳಕಾಕಾರಪ್ರಣವ, ಇಂತೀ ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ. ಇದರ ಬೀಜಾಕ್ಷರದ ಭೇದವನೆನಗೆ ಕರುಣಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ* ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದಪ್ರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯಶಿಷ್ಟದ್ಧಶಾಂಗುಲಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಟದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಾನು ಕಾಮಿಸುತ್ತಿಪ್ಪ ವಸ್ತುವಿನಲ್ಲಿ ಸಾಲೋಕ್ಯವಿದೆ, ಸಾಮೀಪ್ಯವಿದೆ, ಸಾರೂಪ್ಯವಿದೆ, ಸಾಯುಜ್ಯವಿದೆ. ಧರ್ಮವಿದೆ, ಅರ್ಥವಿದೆ, ಕಾಮವಿದೆ, ಮೋಕ್ಷವಿದೆ, ನಾನರಸುವ ಬಯಕೆ ಎಲ್ಲವೂ ಇದೆ. ಎನ್ನ ಧ್ಯಾನ ಜಪತಪದಿಂದ ಸಾಧ್ಯವಪ್ಪ ಸಿದ್ಧಿ ಎಲ್ಲವೂ ಇದೆ ನೋಡಾ ಶ್ರೀಗುರುವಿನ ಕಾರುಣ್ಯದಿಂದ ಮಹಾವಸ್ತು ಕರಸ್ಥಲಕ್ಕೆ ಬಂದ ಬಳಿಕ ಸರ್ವಸುಖಂಗಳೆಲ್ಲವೂ ಇವೆ, ಇವೆ ನೋಡಾ. ಇನ್ನು ಎನ್ನ ಬಯಲ ಭ್ರಮೆಯೊಳಗೆ ಹೊಗಿಸದಿರಯ್ಯ ನಿಮ್ಮ ಬೇಡಿಕೊಂಬೆನು, ನಿಮಗೆ ಎನ್ನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಿರುಪಾಧಿಕನಾಗಿ, ನಿರ್ವಂಚಕತ್ವದಿಂದ ದಾಸೋಹವ ಮಾಡಿ, ಪರಿಣಾಮದಿಂದ ನಿತ್ಯದಾಸೋಹಿಯೆನಿಸಿದೊಡೆ, ಆ ದಾಸೋಹಿಯೆ ಸದ್ಭಕ್ತನು, ಆತನೆ ಮಾಹೇಶ್ವರ, ಆತನೇ ಪ್ರಸಾದಿ, ಆತನೇ ಪ್ರಾಣಲಿಂಗಿ, ಆತನೇ ಶರಣ, ಆತನೇ ಐಕ್ಯ. ಆತನೇ ಇಹಲೋಕ[ಪರಲೋಕ] ಪೂಜ್ಯನು, ಆತನೇ ಶ್ರೇಷ*, ಆತನೇ ವಿದ್ವಾನ್, ಆತನೇ ಸುಜ್ಞಾನಿ, ಇನಿತಲ್ಲದೆ ಶ್ರೀಗುರುಲಿಂಗಜಂಗಮ ಒಂದೆಯೆಂದು ಭಾವಿಸದರ್ಚಿಸದೆ ವಿಚಾರಿ[ಸದ] ದುರ್ಭಾವಿ ಉಪಾಧಿಕನು, ವಂಚಕನು, ದಾಸೋಹವ ಮಾಡಲರಿಯದಹಂಕಾರಿ, ಅಭಾಸನು, ಅಪೂಜ್ಯನು. ಭಕ್ತನಲ್ಲ, ಮಾಹೇಶ್ವರನಲ್ಲ. ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ; ಐಕ್ಯನಲ್ಲ; ಆತನೇ ಮೂರ್ಖನು, ಆತನೇ ಅಜ್ಞಾನಿ, ಆತನೇತಕ್ಕೆಯೂ ಬಾತೆಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ನಾನಾವಿಧದ ಪೂಜೆಗಳ ಪೂಜಿಸಿದವರೆಲ್ಲಾ ಭಕ್ತರೆ, ಹೇಳಿರಣ್ಣಾ. ವಿಷ್ಣು ಮೊದಲಾದ ದೇವಜಾತಿಗಳು ತಾರಕ ರಾವಣಾದಿ ದೇವ ದಾನವ ಮಾನವರನೇಕರು ಮಹಾದೇವನ ಪೂಜಿಸಿ ಫಲದಾಯಕರಾಗಿ ಪದಂಗಳ ಪಡೆದರು. ಈ ಫಲದಾಯಕರೆಲ್ಲರೂ ಸದ್ಭಕ್ತರಪ್ಪರೆ? ಅಲ್ಲ, ಅವರೆಲ್ಲರೂ ಉಪಾಧಿಕರು. ಪರಧನ ಪರಸ್ತ್ರೀ ಪರದೈವವ ಬಿಟ್ಟು ಪಂಚೇಂದ್ರಿಯ ಷಡ್ವರ್ಗಂಗಳ ಬಿಟ್ಟು ನಿರುಪಾಧಿಕರಾಗಿ ನಿರಂತರ ಪೂಜಿಸಿದಡೆ, ಆತನೇ ಸದ್ಭಕ್ತನು, ಆತನೇ ಮಹಾಮಹಿಮನು, ಆತನೇ ಮಹಾದೇವನಯ್ಯಾ. ಆ ಭಕ್ತಂಗೆ ಭಕ್ತದೇಹಿಕ ದೇವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಿಕ್ಷೇಪನಿಧಿಯ ಸಾಧ್ಯವ ಮಾಡಲೆಂದು ಅಂಜನಕ್ಕೆ ಭಸ್ಮವ ಮಾಡಿ, ಕೃಪಾಮೃತದಿಂ ಮರ್ದಿಸಿ ಅಂಜನವನಿಕ್ಕಿಕೊಂಡು ನಿಧಾನವ ತೆಗೆದುಕೊಂಡು ಸರ್ವಭೋಗವ ಮಾಡಬೇಕು. ಆ ಧನವನೆ ಭಸ್ಮವ ಮಾಡಿದ ಬಳಿಕ ಆ ಅಂಜನವ ಪ್ರಯೋಗಿಸುವ ಪರಿ ಎಂತಯ್ಯಾ? ಆ ನಿಧಾನವ ಗ್ರಹಿಸಿಕೊಂಡು ಇರ್ದ ಮಹಾಭೂತವು ನಾಥನನೇ ಬಲಿಯ ಬೇಡಿದಡೆ, ಆ ನಿಧಾನವ ತಂದು ಭೋಗಿಸುವವರಿನ್ನಾರಯ್ಯಾ? ಭಕ್ತಿಯನೂ ಪೂಜೆಯನೂ ಮಾಡಿಸಿಕೊಂಡು ಪ್ರಸಾದವ ಕರುಣಿಸಿ ಮುಕ್ತಿಯ ಕೊಡುವ ಶ್ರೀಗುರುಲಿಂಗಜಂಗಮವನೂ ಆಜ್ಞೆಯ ಮಾಡಿ ಆಯಸಂ ಬಡಿಸಿ, ಅವರನಪಹರಿಸಿ ದ್ರವ್ಯಮಂ ಕೊಂಡು ಅದಾರಿಗೆ ಭಕ್ತಿಯ ಮಾಡುವದು? ಅದಾರಿಗೆ ಪೂಜಿಸುವದುರಿ ಅದಾರಿಗೆ ಅರ್ಪಿಸುವದುರಿ ಹೇಳಿರೆ. ಪೂಜೆಗೊಂಬ ಲಿಂಗವ ಅಪೂಜ್ಯವಾಗಿ ಕಂಡಡೆ ಆ ಮಹಾಪಾಪಿಗೆ ಸದ್ಯವೇ ನರಕ, ಸಂದೇಹವಿಲ್ಲಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಿತ್ಯನಿರಂಜನಪರಂಜ್ಯೋತಿಲಿಂಗವು ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು ಮತ್ತೊಂದ ನೆನೆದು ಬದುಕಿಹೆನೆಂಬುದು ಅಜ್ಞಾನ ನೋಡಾ. ಸತ್ಯವು ಸರ್ವಾಂಗಲಿಂಗವೆಂಬುದನರಿಯದೆ ಮತ್ತೆ ಕಾಯವೆರಸಿ ಕೈಲಾಸಕ್ಕೆ ಹೋದೆಹೆನೆಂಬ ಬಯಕೆ ಕ್ರಮವಲ್ಲವಯ್ಯಾ. ಪಂಚಾಮೃತ ಮುಂದಿರಲು ಹಸಿದೆನೆಂದು ಲೋಗರ ಮನೆಯಲ್ಲಿ ಅನ್ನವ ಬೇಡಿ ಬಯಸುವರೆ? ಅಣ್ಣಮುಂದೆ ನಿಧಾನವಿರಲು ಬಳಸಲರಿಯದೆ ಬಡತನದಲ್ಲಿಹರೆ? ಲಿಂಗವಿಲ್ಲದವರು ಮೊದಲಾಗಿ ಲಿಂಗವ ನೆನೆದು ಬದುಕಿಹೆನೆಂಬರು. ಕಂಡು ಕಂಡು ನಂಬದಿಹುದುಚಿತವೆ? ಮುಂಗೈಯ ಕಂಕಣಕ್ಕೆ ಕನ್ನಡಿ ಬೇಡ. ಲಿಂಗವು ಅಂಗದೊಳಗಿರಲು ಲಿಂಗದ ಪರಿಯ ಅನ್ಯರ ಕೈಯಿಂದ ಕೇಳಬೇಡ. ಇದನರಿದು ಬೇರೆ ಮತ್ತೆ ಅರಸಲು ಬೇಡ ಕಾಣಿಸೆಂದು ಮನದಲ್ಲಿ ಮರುಗಬೇಡ ಮುಂದೆ ಜನ್ಮವುಂಟೆಂದು ಮನಸ್ಸಿನಲ್ಲಿ ನೋಯಬೇಡ. ಇದು ಕಾರಣ, ತನ್ನ ಕರಸ್ಥಲದಲ್ಲಿದ್ದ ವಸ್ತುವ ತಾನೆಂದರಿದಡೆ ತಾನೆ ಶಿವನು. ಇದು ಸತ್ಯ, ಶಿವ ಬಲ್ಲ, ಶಿವರ್ನಾಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಾನು ಕಾಮಿಸುವ ವಸ್ತು ಕರಸ್ಥಲಕೆ ಬಂದ ಬಳಿಕವೂ ಕಾಮಿಸಲೇನುಂಟುರಿ ಇನ್ನೇನ ಕಾಮಿಸುವೆನೆಯ್ಯಾ. `ಓಂ ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾ ಹೇ ಹಿರಣ್ಯರೂಪಾಯ ಹಿರಣ್ಯಪತಯೆ' ಎಂಬ ವಸ್ತು, `ಓಂ ಎವೈ ರುದ್ರಸ್ಯ ಭವಾನ್ಯ ಸ್ಯಾಮೃತಂ ಎಂಬ ವಸ್ತು, ಸುಖಸ್ವರೂಪನು ಅಭಯಹಸ್ತನು ಶಾಂತನು ಕರುಣಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ನಗೆ ನೀನು ಪ್ರಾಣ, ನಿನಗೆ ನಾನು ಪ್ರಾಣ. ಇನ್ನೇನೋ ಇನ್ನೇನೋ ಹಂಗಿಲ್ಲ, ಹರಿ ಇಲ್ಲ. ಮತ್ತೇನೂ ಪ್ರಪಂಚಿಲ್ಲಾಗಿ, ನೀ ನಡೆಸಿದಂತೆ ನಡೆದೆ, ನೀ ನುಡಿಸಿದಂತೆ ನುಡಿದೆ, ನೀ ನೋಡಿಸಿದಂತೆ ನೋಡಿದೆ, ನೀ ಆಡಿಸಿದಂತೆ ಆಡಿದೆ, ನೀ ಮಾಡಿಸಿದಂತೆ ಮಾಡಿದೆ. ಈ ಸುಖದುಃಖ ಪುಣ್ಯಪಾಪಕ್ಕೆ ಕಾರಣನು ನೀನೇ ಅಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಾನಾ ಪ್ರಯತ್ನದಿಂದ ಹೊನ್ನನಾರ್ಜಿಸುವಂತೆ, ನಾನಾ ಪ್ರಯತ್ನದಿಂದ ಹೊನ್ನ ಸುರಕ್ಷಿತವ ಮಾಡುವಂತೆ, ನಾನಾ ಪ್ರಯತ್ನದಿಂದ ಬೇಡಿದವರಿಗೆ ಕೊಡದೆ ಲೋಭವ ಮಾಡಿ ಸ್ನೇಹಿಸುವಂತೆ, ನಾನಾ ವಿಧದಿಂದ ವಿಚಾರಿಸಿ ವಿಚಾರಿಸಲು ಪ್ರಾಣವೇ ಹೊನ್ನೆಂಬಂತೆ, ನಾನಾ ಪರಿಯಲು ಮನ ಬುದ್ಧಿ ಚಿತ್ತಹಂಕಾರಂಗಳು ಪಂಚೇಂದ್ರಿಯಂಗಳು ಪ್ರಾಣವನು ಅವಗ್ರಹಿಸಿಕೊಂಡಿಪ್ಪಂತೆ ಶಿವಲಿಂಗವನು ಅವಗ್ರಹಿಸಿಕೊಂಡಿರಬೇಕು. ಏಕೆ? ಆ ಹೊನ್ನೇ ಶಿವನಾದ ಕಾರಣ, `ಓಂ ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ, ಎಂದುದಾಗಿ ಶಿವನೇ ಹೊನ್ನು ಕಾಣಿರೋ ಶಿವಶಿವಾ ನಾನಾ ಪ್ರಯತ್ನದಿಂದ ಕುಲವುಳ್ಳವರು ಅತ್ಯಂತ ಯೌವನೆಯಪ್ಪ ಹೆಣ್ಣಿಂಗೆ ಪ್ರಾಣಕ್ಕೆ ಪ್ರಾಣವಪ್ಪಂತೆ, ಆ ಹೆಣ್ಣಿಂಗೆ ಅಂತಃಕರಣ ಚತುಷ್ಟಯಂಗಳು ಸ್ನೇಹಿಸುವಂತೆ ಆ ಹೆಣ್ಣು ಪ್ರಾಣವಾಗಿಪ್ಪಂತೆ, ಆ ಲಿಂಗವೇ ಪ್ರಾಣವಾಗಿರಬೇಕು. ಅದಕ್ಕೆ ಹೆಣ್ಣೇ ಶಿವನಾದ ಕಾರಣ ಶಕ್ತ್ಯಾಧಾರೋ ಮಹಾದೇವಃ ಶಕ್ತಿರೂಪಾಯ ವೈ ನಮಃ ಶಕ್ತಿಃ ಕರ್ಮ ಚ ಕರ್ತಾ ಚ ಮುಕ್ತಿಶಕ್ತೈ ನಮೋ ನಮಃ ಎಂದುದಾಗಿ- ಆ ಹೆಣ್ಣು ತಾನೇ ಶಿವನು ಕಾಣಿರೋ. ನಾನಾ ಪ್ರಯತ್ನದಿಂದ ಮಣ್ಣನಾರ್ಚಿಸುವಂತೆ, ಆ ಭೂಮಿಯ ಅಗುಚಾಗಿಗೆ ಅರ್ಥಪ್ರಾಣಾಭಿಮಾನವನಿಕ್ಕಿ ಆ ಭೂಮಿಯ ರಕ್ಷಿಸಿ ಆ ಭೂಮಿಯ ಸರ್ವಭೋಗೋಪಭೋಗಂಗಳನು ಭೋಗಿಸಿ ಸುಖಿಸುವಂತೆ, ಶಿವಲಿಂಗದಿಂದ ಭೋಗಿಸಬೇಕು. ಅದೇಕೆಂದಡೆ- ಭೂಮಿಯೇ ಶಿವನಾದ ಕಾರಣ, `ಓಂ ಯಜ್ಞಸ್ಯ ರುದ್ರಸ್ಯ ಚಿತ್ಪೃಥಿವ್ಯಾಭೂರ್ಭುವಃ ಸ್ವಃ ಶಿವಂ ಶಿವೋ ಜನಯತಿ' ಎಂದುದಾಗಿ ಭೂಮಿಯೇ ಶಿವನು ಕಾಣಿರೋ ಸರ್ವಾಧಾರ ಮಹಾದೇವ. ಇದು ಕಾರಣ, ಹೊನ್ನು ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೋ. ಈ ತ್ರಿವಿಧದ ಮರೆಯಲ್ಲಿ ಶಿವನಿಪ್ಪನು ಕಾಣಿರೋ. ಇದು ಕಾರಣ, ಈ ತ್ರಿವಿಧಕ್ಕೆ ಮಾಡುವ ಸ್ನೇಹ, ಇಂತೀ ತ್ರಿವಿಧದಲ್ಲಿ ಮಾಡುವ ಲೋಭ, ಇಂತೀ ತ್ರಿವಿಧಕ್ಕೆ ಮಾಡುವ ತಾತ್ಪರ್ಯವ ಶಿವಲಿಂಗಕ್ಕೆ ಮಾಡಿದಡೆ, ಶಿವನಲ್ಲಿ ಸಾಯುಜ್ಯನಾಗಿ ಸರ್ವಭೋಗೋಪಭೋಗವ ಭೋಗಿಸಿ ಪರಮಪರಿಣಾಮ ಸುಖಸ್ವರೂಪನಾಗಿಪ್ಪನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನ ಭೂಮಿ ನರವಿಂದಾಪೋನವಹ್ನಿ ಪ್ರಾಣಾನಿಲಂಗನನೋನ ಚ ವಿದ್ಯತೇ ನಯಾತ್ಮಧ್ಯಕ್ಷಾರಂ ಪರಮಾಕಾಶಮದೇ ಭಾತೀ ತತ್ಪರಂ ಬ್ರಹ್ಮಾಂ ಎಂದು ಶ್ರುತಿ ಸಾರುತ್ತಿರಲು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೊಬ್ಬನೆ ದೇವಧ್ಯಾಯನು.
--------------
ಉರಿಲಿಂಗಪೆದ್ದಿ
ನಾನೊಂದು ಮಾಡೆಹೆನೆಂಬ ಪ್ರತಿಜ್ಞೆ ಎನಗೊಡ್ಡಿ, ನೀನದ ಕೆಡಸಿಹೆನೆಂಬ ಸ್ವತಂತ್ರಿಕೆಯ ನೀ ತಾಳುವೆ. ನಾ ಮುನ್ನ ಎಲ್ಲಿಯವನು ನೀ ಮಾಡದನ್ನಕ್ಕರರಿ ಆನೆಂಬ ಹರಿಬ್ರಹ್ಮಾದಿಗಳ ಚೈತನ್ಯಸ್ವರೂಪ ನೀನವಧಾರು ದೇವಾ, ಇಚ್ಛಾ ಜ್ಞಾನ ಕ್ರಿಯಾಶಕ್ತಿ ನಿಮ್ಮಿಚ್ಛೆ, ಎನ್ನಿಚ್ಛೆಯೆ? ಮಾಡಿಕೊಂಡ ಮದುವೆಗೆ ಹಾಡುತ್ತ ಹಂದರವನಿಕ್ಕೆಂಬ ನಾಡಗಾದೆಯ ಮಾತು ನಿಮಗಾಯಿತ್ತು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ