ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುಟ್ಟಿದ ಶಿಶುವಿಂಗೆ ಸುನತಿ ಇಲ್ಲ; ಹುಟ್ಟದ ಶಿಶುವಿಂಗೆ ಸುನತಿಯುಂಟು. ಸುನತಿಯಿಲ್ಲದವರು ಸತ್ತು ಸುನತ್ಯಾದವರು ಸಾಯದೆ ಇರ್ಪರು. ಇದ ಕಂಡು ಬಯಲ ಬೋದನದಲ್ಲಿ ಬೆರಗಾಗಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನಳಿದಲ್ಲದೆ ಭವ ಹಿಂಗದೆಂಬರು ಬ್ಥಿನ್ನ ಭಾವದಜ್ಞಾನಕಲಾತ್ಮರು. ಅವೇನು ತಮ್ಮ ಸಂಬಂಧವೆ? ಸಂಬಂಧವಲ್ಲ. ತಮ್ಮ ಸಂಬಂಧವಾದ ಮಲತ್ರಯವ ಪೇಳ್ವೆ. ತನುವೇ ಮಣ್ಣು, ಮನವೇ ಹೆಣ್ಣು, ಆತ್ಮವೇ ಹೊನ್ನು. ಇಂತೀ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನೊಳಗಿಟ್ಟುಕೊಂಡು ಬಾಹ್ಯದ ಮಲತ್ರಯಂಗಳ ವಿಸರ್ಜಿಸಿ ಭವಹಿಂಗಿಸಬೇಕೆಂದು ಗುಡ್ಡ ಗಂಹರವ ಸೇರುವರು. ಅವರಿಗೆ ಎಂದಿಗೂ ಭವಹಿಂಗದು. ಮತ್ತೆಂತೆಂದೊಡೆ: ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಅಂಗದ ಮೇಲೆ ಇಷ್ಟಲಿಂಗವ ಸ್ವಾಯತವ ಮಾಡಿಕೊಂಡು ಆ ಇಷ್ಟಬ್ರಹ್ಮವನು ತನುಮನಧನದಲ್ಲಿ ಸ್ವಾಯತವ ಮಾಡಿ, ಆ ತ್ರಿವಿಧ ಲಿಂಗದ ಸತ್ಕ್ರಿಯಾ ಸಮ್ಯಜ್ಞಾನ ಸ್ವಾನುಭಾವದಾಚರಣೆಯಿಂದ ಆ ತನುತ್ರಯದ ಪ್ರಕೃತಿಯನಳಿದು, ಆ ಮಾಯಾಮಲಸಂಬಂಧವೆಂಬ ಸತಿಸುತರು ಮಾತಾಪಿತೃಗಳ ಸಂಬಂಧವಿಡಿದು, ಆಚರಿಸಿದಡೆಯು ಅದಕ್ಕೇನು ಚಿಂತೆಯಿಲ್ಲ, ಇಷ್ಟುಳ್ಳವರಿಗೆ ಭವ ಹಿಂಗಿ ಮುಕ್ತಿಯಾಗುವದು. ಪ್ರಮಥಗಣಂಗಳ ಸಮ್ಮತ ಶಿವಜ್ಞಾನಿಗಳು ಮೆಚ್ಚುವರು. ಅದೇನು ಕಾರಣವೆಂದಡೆ: ಈ ಮಲಸಂಬಂಧ ಜೀವಾತ್ಮರೆಲ್ಲ ದೇಹ ಇರುವ ಪರ್ಯಂತರವಲ್ಲದೆ ಲಿಂಗಾಂಗಿಗೆ ಇದ್ದೂ ಇಲ್ಲದಂತೆ ನೋಡೆಂದನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊಲಗೇರಿಯಲ್ಲಿ ಎಲುವಿನ ಮರ ಪೂತು ಫಲವಾಗಿ, ಆ ಫಲವ ಸೇವಿಸಿದವರು ಜೀವಿಸಿದರು. ಆ ಫಲ ಸೇವಿಸದವರು ಸತ್ತು ಜೀವಿಸಿದರು. ಈ ಬೆಡಗಿನ ಕೀಲ ಬಲ್ಲರೆ ಶರಣಲಿಂಗಸಂಬಂದ್ಥಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಸಿಹುಲ್ಲು ಮೆಯ್ದ ಪಶುವಿಗೆ ಹಾಲುಂಟು, ಬೆಣ್ಣೆಯಿಲ್ಲ. ಒಣಹುಲ್ಲು ಮೆಯ್ದ ಪಶುವಿಗೆ ಹಾಲಿಲ್ಲ, ಬೆಣ್ಣೆಯುಂಟು. ಸರ್ವರು ಪಶುವಿಂಗೆ ರಸದ ಹುಲ್ಲು ಮೆಯ್ಸಿ ಹಾಲ ಕರೆದುಂಬರು. ಅದರೊಳೊಬ್ಬ ಅಧಮ ಕರಡವ ಪಶುವಿಗೆ ಮೆಯ್ಸಿ ಹಾಲ ಕರೆದುಂಬನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಕರವಿಯ ಹುರಿಯಿಲ್ಲದ ದಾರದಲ್ಲಿ ಹೊಲಿದು, ಹೊಲಿದ ಕೂಲಿಯ ಕೊಡುವರು. ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸುವರು. ಹರಕರವಿಯ ಹೊಲಿಯದೆ ಹುರಿಗೂಡಿದ ದಾರವ ಬಿಚ್ಚದೆ ಹರಿಯದೆ ಹೊಸ ಅರಿವೆಯ ಹೊಲಿದು, ಹೊಲಿದ ಕೂಲಿಯ ಕೊಳ್ಳದವರು ಊರನಾಶ್ರಯಿಸಿ ಅರಣ್ಯದಲ್ಲಿ ಚರಿಸದೆ ಬಯಲುಭೂಮಿಯಲ್ಲಿ ಚರಿಸಿ ಆರಿಗೂ ಸಿಕ್ಕದೆ ಇರ್ಪರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹುಟ್ಟಿ ಸಾಯಬೇಕೆಂಬಾತ ಶರಣನಲ್ಲ. ಸತ್ತು ಸ್ವರ್ಗದಲ್ಲಿರಬೇಕೆಂಬಾತ ಶರಣನಲ್ಲ. ಎರಡಿಲ್ಲದೆ ಇರುವಾತ ಅಚ್ಚಶರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹತ್ತಕ್ಕೆ ನೀಡಿ ಹನ್ನೊಂದಕ್ಕೆ ನೀಡದಾತ ಭಕ್ತನೇ? ಅಲ್ಲಲ್ಲ. ಭಿಕ್ಷವ ಕೊಡುವಲ್ಲಿ ಮುಖವ ನೋಡಿ ಕೊಡುವಾತ ಭಕ್ತನೇ? ಅಲ್ಲಲ್ಲ. ಗಣಾರಾಧನೆಯ ಮಾಡಿದಲ್ಲಿ ಒಳಗೊಂದು ಹೊರಗೊಂದು ನೀಡುವಾತ ಭಕ್ತನೇ? ಅಲ್ಲಲ್ಲ. ಅದೇನು ಕಾರಣವೆಂದರೆ ಇವರು ತಾಮಸಭಕ್ತರು. ಇಂತಪ್ಪ ತಾಮಸಭಕ್ತರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಡಿಯದವರಿಗೆ ಬಳೆಯನಿಡಿಸುವೆ, ಹಡದವರಿಗೆ ಬಳೆಯನಿಡಿಸದೆ. ರಂಡಿಗೆ ಬಳೆಯನಿಡಿಸುವೆ, ಮುತ್ತೈದೆಗೆ ಬಳೆಯನಿಡಿಸದೆ. ಸಣ್ಣವರಿಗೆ ಬಳೆಯನಿಡಿಸುವೆ, ದೊಡ್ಡವರಿಗೆ ಬಳೆಯನಿಡಿಸದೆ. ನೀಲಬಳೆಯನಳಿದು ಬಿಳಿಬಳೆಯನಿಟ್ಟು ಒಡೆಯದೆ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಸಿತೊಗಲಿಗೆ ಬಿಸಿಯೆಳಿಯನಿಕ್ಕಿ, ಮಚ್ಚೆಯ ಮಾಡಲು, ಮೆಟ್ಟಿದವ ಸತ್ತ, ಮೆಟ್ಟದವ ಉಳಿದ, ಉಳಿದವರು ಬಹುಮಚ್ಚಿಯ ಮೆಟ್ಟಿದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾದರಗಿತ್ತಿಗೆ ಹಲವು ಶಬ್ದ, ಪುರುಷನುಳ್ಳವರಿಗೆ ಅರೆನಾಲಿಗೆ, ನಾನು ಹಲವು ಶಬ್ದವನಳಿದು ಅರೆನಾಲಿಗೆಯನುಡುಗಿಸಿ, ಹಾದರವನಾಡಿ ಸರ್ವಕಾಯಕವ ಮಾಡುತ್ತಿರ್ಪೆನಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಿಡಿಯಿಲ್ಲದ ಉಳಿ, ಕಾವಿಲ್ಲದ ಬಾಚಿ, ಹಲ್ಲಿಲ್ಲದ ಕರಗಸ ಇಂತೀ ಆಯುಧದಿಂದ ಕಟ್ಟಿದಮನೆ ಕೆಡವಿ, ತೊಲೆ ಕಂಬವ ಕಡಿದು ಸುಟ್ಟು, ತೊಲೆ ಕಂಬವಿಲ್ಲದೆ ದಾರದಿಂ ಮನೆಯ ಕಟ್ಟಿಕೊಟ್ಟು ಹಣವ ಕೊಂಡುಂಡು ಕಾಯಕವ ಮಾಡುತ್ತಿರ್ದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಹರಾ, ಈ ಮಾಯೆ ಇದ್ದೆಡೆಯ ನೋಡಾ! ಶಿವಶಿವಾ, ಈ ಮಾಯೆ, ಇದ್ದೆಡೆಯ ನೋಡಾ! ಪುರುಷನ ಮುಂದೆ ಸ್ತ್ರೀಯಾಗಿರ್ಪಳು, ಸ್ತ್ರೀಯ ಮುಂದೆ ಪುರುಷನಾಗಿರ್ಪುದ ಕಂಡೆ. ಕೂಟಕ್ಕೆ ಸತಿಯಾಗಿರ್ಪಳು, ಮೋಹಕ್ಕೆ ಮಗಳಾಗಿರ್ಪಳು ಕಂಡೆ. ಜನನಕ್ಕೆ ತಾಯಾಗಿರ್ಪಳು, ಮೋಹವಿಳಾಸಕ್ಕೆ ಜಾರಸ್ತ್ರೀಯಾಗಿರ್ಪಳು ಕಂಡೆ. ಧರ್ಮಕ್ಕೆ ಕರ್ಮರೂಪಿಣಿಯಾಗಿರ್ಪಳು, ಕರ್ಮಕ್ಕೆ ಧರ್ಮರೂಪಿಣಿಯಾಗಿರ್ಪಳು ಕಂಡೆ. ಯೋಗಿಗಳೆಂಬವರ ಭೋಗಕ್ಕೆ ಒಳಗುಮಾಡಿತ್ತು, ಭೋಗಿಗಳೆಂಬವರ ಯೋಗಿಗಳ ಮಾಡಿತ್ತು ಕಂಡೆ. ಇಂತಪ್ಪ ಮಾಯೆಯ ಗೆಲುವಡೆ ತ್ರೈಲೋಕದೊಳಗೆ ದೇವ ದಾನವ ಮಾನವರು ಮೊದಲಾದವರ ನಾನಾರನು ಕಾಣೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಳೆಯ ರಗಳೆಯ ಹೋಲಬಲ್ಲರೆ ಭಕ್ತರೆಂಬೆ. ಹರಿವ ನೀರ ಹೋಲಬಲ್ಲರೆ ಭಕ್ತರೆಂಬೆ. ಭೂಮಿಯ ಹೋಲಬಲ್ಲರೆ ಭಕ್ತರೆಂಬೆ. ಇಷ್ಟುಳ್ಳಾತನೆ ಶಿವನಲ್ಲಿ ಸಮರಸವನುಳ್ಳ ಸದ್ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾಲುಕುಡಿದ ಶಿಶು ಸತ್ತು ವಿಷಕುಡಿದ ಶಿಶು ಬದುಕಿದುದ ಕಂಡೆ. ಬೆಣ್ಣೆಯ ತಿಂದ ಶಿಶು ಸತ್ತು ಕೆಂಡವ ತಿಂದ ಶಿಶು ಬದುಕಿದುದ ಕಂಡೆ. ಉಂಡಾಡುವ ಶಿಶು ಸತ್ತು ಉಣ್ಣದೆ ಓಡಾಡುವ ಶಿಶು ಬದುಕಿದುದ ಕಂಡೆ. ಅಂಗೈಯೊಳಗಣ ಶಿಶು ಸತ್ತು ಬೀದಿಬಾಜಾರದಲ್ಲಿರುವ ಶಿಶು ಬದುಕಿದುದ ಕಂಡೆ. ಬೆಳದಿಂಗಳೊಳಗಿನ ಶಿಶು ಸತ್ತು ಬಿಸಿಲೊಳಗಿನ ಶಿಶು ಬದುಕಿದುದ ಕಂಡೆ. ಅರಮನೆಯೊಳಗಣ ಅರಸಿಯ ಶಿಶು ಸತ್ತು ಊರೊಳಗಣ ದಾಸಿಯ ಶಿಶು ಬದುಕಿದುದ ಕಂಡೆ. ಹುಟ್ಟಿದ ಶಿಶು ಬೇನೆಯಿಲ್ಲದೆ ಸತ್ತು ಹುಟ್ಟದೆ ಬೇನೆ ಹತ್ತಿದ ಶಿಶು ಬದುಕಿದುದ ಕಂಡೆ. ಈ ಉಭಯ ಭೇದವ ಬಲ್ಲ ಶಿಶು ಚನ್ನಮಲ್ಲಯ್ಯನಲ್ಲಿ ಬಯಲಾಯಿತ್ತು. ಮತ್ತಂ, ಈ ಉಭಯ ನಿರ್ಣಯವನರಿಯದ ಶಿಶು ಮಹಾಮಲೆಯಲ್ಲಿ ಬಯಲಾಯಿತ್ತು. ಇದರಂದಚಂದ ನಿಮ್ಮ ಶರಣರೇ ಬಲ್ಲರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊತ್ತಾರೆ ಎದ್ದು ಗುಡಿಯ ಜಾಡಿಸಿ, ಪಾತಾಳಗಂಗೆಯ ಉದಕದಿಂದ ಮಜ್ಜನಕ್ಕೆರೆದು, ಭಕ್ತರ ಮನೆಗೆ ಹೋಗಿ ಭಿಕ್ಷವ ಬೇಡಿ ತಂದು ಶ್ರೀಶೈಲಲಿಂಗಕ್ಕೆ ನೈವೇದ್ಯವ ಕೊಟ್ಟು ಸುಖದಿಂದ ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹರಿವ ನೀರ ಉರಿಕೊಂಡದಲ್ಲಿ ಅರಗಿನ ಭೂಮಿ ಕರಗದಿರುವದ ಕಂಡೆ. ನವಗೋಪುರಯುಕ್ತವಾದ ಆಕಾಶದಲ್ಲಿ ಒಂದೂರ ಕಂಡೆ. ಸತಿಪತಿಸಹಿತವಾಗಿ ನವಮುಗ್ಧರಿರುವದ ಕಂಡೆ. ಊರ ನಡುವೆ ಸಹಸ್ರ ಶತಪಂಚತ್ರಯ ಏಕಕಾನಿಯ ಪಂಜರವ ಕಂಡೆ. ಅಗ್ನಿವರ್ಣ ಶ್ವೇತಮುಖದ ಗಿಳಿಯ ಕಂಡೆ. ಹಲವರು ಗಿಳಿಯ ಕಂಡು ಸಂತೋಷಬಟ್ಟು ರಕ್ಷಿಸಿ ಉಣ್ಣದೆ ಉಂಡು ಹೋಗುವದ ಕಂಡೆ. ನಾನು ಗಿಳಿಯ ಕಂಡು ಸಂತೋಷಬಟ್ಟು ರಕ್ಷಿಸಿ ಉಂಡು ಉಣ್ಣದೆ ಹೋಗುವದ ಕಂಡೆ. ಹಡದವರು ಸತ್ತು, ಹಡಿಯದವರು ಉಳಿದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾದರವನಾಡುವರಿಗೆ ಹನ್ನೆರಡು ಮಂದಿ, ಹಾದರ ಇಲ್ಲದವರಿಗೆ ಒಬ್ಬ ಪುರುಷನು. ಎನಗೆ ಹನ್ನೆರಡೂ ಇಲ್ಲ, ಒಂದೂ ಇಲ್ಲ ನೋಡೆಂದನಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಿರಿಬೇನೆಯನಳಿಯಬೇಕೆಂಬಣ್ಣಗಳು ಲಾಲಿಸಿರಯ್ಯಾ. ಆನೆಯ ತಲೆ ಒಡದು ಹಲ್ಲುಕಿತ್ತು, ಕೋತಿಯ ಕೊಂದು, ಕೋತಿಯ ಕಂಡವ ಹೆಂಡದ ಕುಡಕಿಯಲ್ಲಿ ಅಟ್ಟು ತಿಂದವರು ಹಿರಿರೋಗವ ಕಳವರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೆಂಡದ ಹರವಿಗೆ ಹಾಲಹರವಿಯ ಹೋಲಿಸಿದರೆ, ಆ ಹೆಂಡದ ಹರವಿ ಹಾಲಹರವಿಯಾಗಬಲ್ಲುದೆ ? ಮದ್ಯಪಾನದ ಘಟಕ್ಕೆ ಘೃತದಘಟ ಹೋಲಿಸಿದರೆ ಆ ಮದ್ಯಪಾನದ ಘಟ ಘೃತಘಟವಾಗಬಲ್ಲುದೆ ? ಆಡಿನ ಕೊರಳಮೊಲೆಗೆ ಆಕಳಮೊಲೆಯ ಹೋಲಿಸಿದರೆ ಆ ಆಡಿನ ಕೊರಳ ಮೊಲೆ ಆಕಳ ಮೊಲೆಯಾಗಬಲ್ಲುದೆ ? ಗುಲಗಂಜಿಗೆ ಮಾಣಿಕವ ಹೋಲಿಸಿದರೆ ಆ ಗುಲಗಂಜಿ ಮಾಣಿಕವಾಗಬಲ್ಲುದೆ ? ವಜ್ರದ ಪಾಷಾಣಕ್ಕೆ ರಂಗೋಲಿಯಕಲ್ಲು ಹೋಲಿಸಿದರೆ, ಆ ರಂಗೋಲಿಯಕಲ್ಲು ವಜ್ರವಾಗಬಲ್ಲುದೆ ? ಬಿಳಿಹೂಲಿಗೆ ಮೌಕ್ತಿಕವ ಹೋಲಿಸಿದರೆ ಆ ಬಿಳಿಹೂಲಿಯ ಹಣ್ಣು ಮುತ್ತಾಗಬಲ್ಲುದೆ ? ಇಂತೀ ದೃಷ್ಟಾಂತದಂತೆ ಲೋಕಮಧ್ಯದಲ್ಲಿ ಜೀವಾತ್ಮರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು. ಹಾಗೆ ಸುಜ್ಞಾನೋದಯವಾಗಿ- ಶ್ರೀಗುರುಕಾರುಣ್ಯದಿಂ ಸರ್ವಾಂಗಲಿಂಗಸಂಬಂಧಿಗಳಾದ ಶಿವಶರಣರು ಪಂಚಭೂತಮಿಶ್ರವಾದ ಮಿಥ್ಯದೇಹವ ಧರಿಸಿರ್ಪರು. ಇದು ಕಾರಣ ಅಂತಪ್ಪ ಭಿನ್ನಜ್ಞಾನಿಗಳಾದ ಜೀವಾತ್ಮರಿಗೆ ಸುಜ್ಞಾನಿಗಳಾದ ಶಿವಶರಣರ ಹೋಲಿಸಿದರೆ ಆ ಕಡುಪಾತಕಿ ಜಡಜೀವಿಗಳು ಶಿವಜ್ಞಾನಸಂಪನ್ನರಾದ ಶರಣಜನಂಗಳಾಗಬಲ್ಲರೆ ? ಆಗಲರಿಯರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊನ್ನು ತೆತ್ತಲ್ಲದೆ ಹೊಲ ಮಾಡಿದೆ, ಬಿಟ್ಟಿ ಬೇಗಾರಿಲ್ಲದೆ ಊರೊಳಗೆ ಇದ್ದೆ, ಸರಕಾರಕ್ಕೆ ರುಜು ಇಲ್ಲದೆ ರೈತನಾಗಿ. ಅದೆಂತೆಂದಡೆ: ಇಂತಲ್ಲದೆ ಪಾಚ್ಫಾರೈತನಲ್ಲ; ಅವ ನಕ್ರ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಗಲಳಿದು ಇರುಳಲ್ಲಿ ಒಂದು ಕತ್ತೆಯನೇರಿ, ಇಬ್ಬರ ಹೆಂಡರ ಮದುವೆಯಾಗಿ, ಒಬ್ಬಳು ಕರಾಂಡ, ಒಬ್ಬಳು ಅಜಾಂಡ. ಕರಾಂಡವೆಂಬ ಸತಿಗೆ ಕತ್ತೆಯ ಕೊಟ್ಟೆ; ಅಜಾಂಡವೆಂಬ ಸತಿಗೆ ಕಾಂಡವ ಕೊಟ್ಟೆ. ಒಬ್ಬಳ ಹಿಂದೆ ಒಬ್ಬಳ ಮುಂದೆ ಮಲಗಿ ಇಬ್ಬರ ಸಂಗದಿಂ ಒಂದು ಶಿಶುವು ಹುಟ್ಟಿ, ಒಬ್ಬಳ ಬಿಟ್ಟು ಒಬ್ಬಳ ನುಂಗಿ ಶಿಶುವು ಎನ್ನ ನುಂಗಿತ್ತು. ಆ ಶಿಶುವ ನಾ ನುಂಗಿದೆನೆಂಬುದ ನೀನರಿ ನಾನರಿಯೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾದರದಲ್ಲಿ ಹುಟ್ಟಿದ ಕೂಸಿಂಗೆ ಹಲವು ವೇಷ, ಹಲವು ಕಾಯಕ. ಹಾದರ ಇಲ್ಲದೆ ಪುಟ್ಟಿದ ಕೂಸಿಂಗೆ ಹಲವು ಕಾಯಕವಿಲ್ಲದೆ ಒಂದು ವೇಷ, ಒಂದು ಕಾಯಕ. ಎನಗೆ ಆವ ವೇಷ ಆವ ಕಾಯಕವಿಲ್ಲ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಂದಿ, ಮೊಲ, ಪಶುವ ತಿಂದವನೇ ಭಕ್ತ. ಆನೆ, ಕುದುರೆ, ನಾಯಿಯ ತಿಂದವನೇ ಮಹೇಶ್ವರ. ಕೋಣ, ಎಮ್ಮೆ, ಹುಲಿಯ ತಿಂದವನೇ ಪ್ರಸಾದಿ. ಕೋಡಗ, ಸರ್ಪ, ಉಡವ ತಿಂದವನೇ ಪ್ರಾಣಲಿಂಗಿ. ಬೆಕ್ಕನು, ಹರಿಣವನು, ಕರುಗಳನು ತಿಂದವನೇ ಶರಣನು. ಹದ್ದು, ಕಾಗೆ, ಪಿಪೀಲಿಕನ ತಿಂದವನೇ ಐಕ್ಯ. ಇಂತೀ ಎಲ್ಲವ ಕೊಂದು ತಿಂದವನ ಕೊಂದು ಯಾರೂ ಇಲ್ಲದ ದೇಶಕ್ಕೆ ಒಯ್ದು ಅಗ್ನಿ ಇಲ್ಲದೇ ಸುಟ್ಟು, ನೀರಿಲ್ಲದೆ ಅಟ್ಟು, ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಪರಿಮಾಣವಿಲ್ಲದ ಹರಿವಾಣದಲ್ಲಿ ಗಡಣಿಸಿಕೊಂಡು, ಹಿಂದು ಮುಂದಿನ ಎಡಬಲದ ಸಂಶಯಂ ಬಿಟ್ಟು ನಿಶ್ಚಿಂತನಾಗಿ, ಸ್ವಸ್ಥ ಪದ್ಮಾಸನದಲ್ಲಿ ಮುಹೂರ್ತವ ಮಾಡಿ, ಏಕಾಗ್ರಚಿತ್ತಿನಿಂದ ಹಲ್ಲು ಇಲ್ಲದೆ ಮೆಲ್ಲಬಲ್ಲರೆ ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದಿ ಎಂಬೆನಯ್ಯಾ. ಇಂತೀ ಭೇದವನು ತಿಳಿಯದೆ ಭಕ್ತರ ಮನೆಯಲ್ಲಿ ಉನ್ನತಾಸನದ ಗದ್ದುಗೆಯ ಮೇಲೆ ಕುಳಿತು, ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಪೂಜೆಗೊಂಬ ಗುರುಮೂರ್ತಿಗಳು, ಚರಮೂರ್ತಿಗಳು ಇಂತೀ ಉಭಯರು ಸತ್ತ ಶವದಿಂದತ್ತತ್ತ ನೋಡಾ. ಇಂತೀ ವಿಚಾರವನು ತಿಳಿಯದೆ ನಾವು ಪರಮವಿರಕ್ತರು, ಪಟ್ಟದಯ್ಯಗಳು, ಚರಮೂರ್ತಿಗಳು, ಗುರುಸ್ಥಲದ ಅಯ್ಯತನದ ಮೂರ್ತಿಗಳೆಂದು ಪಾದಪೂಜೆಯ ಮಾಡಿಸಿಕೊಂಡು ಪಾದವ ಪಾಲಿಸುವರೆಂದು ಭಕ್ತರಿಗೆ ತೀರ್ಥವೆಂದು ಕೊಡುವಂಥವರು ಬೀದಿಬಾಜಾರದಲ್ಲಿ ಕುಳಿತು ಸೆರೆಯ ಮಾರುವ ಹೆಂಡಗಾರರು ಇವರಿಬ್ಬರು ಸರಿ ಎಂಬೆ. ಇಂತೀ ನಿರ್ಣಯವನು ತಿಳಿಯದೆ ಭಕ್ತರನಡ್ಡಗೆಡಹಿಸಿಕೊಂಡು. ಪ್ರಸಾದವೆಂದು ತಮ್ಮ ಎಡೆಯೊಳಗಿನ ಕೂಳ ತೆಗೆದು ಕೈಯೆತ್ತಿ ನೀಡುವರು. ಪೇಟೆ ಬಜಾರ, ಬೀದಿಯಂಗಡಿ ಕಟ್ಟೆಯಲ್ಲಿ ಕುಳಿತು ಹೋತು ಕುರಿಗಳನು ಕೊಂದು ಅದರ ಕಂಡವನು ಕಡಿದು ತಕ್ಕಡಿಯಲ್ಲಿ ಎತ್ತಿ ತೂಗಿ ಮಾರುವ ಕಟುಕರು ಇವರಿಬ್ಬರು ಸರಿ ಎಂಬೆ. ಇಂತೀ ಭೇದವ ತಿಳಿಯದೆ ಗುರುಲಿಂಗಜಂಗಮವೆಂಬ ತ್ರಿಮೂರ್ತಿಗಳು ಪರಶಿವಸ್ವರೂಪರೆಂದು ಭಾವಿಸಿ ಪಾದೋದಕ ಪ್ರಸಾದವ ಕೊಂಬ ಭಕ್ತನು ಕೊಡುವಂತ ಗುರುಹಿರಿಯರು ಇವರ ಪಾದೋದಕ ಪ್ರಸಾದವೆಂತಾಯಿತಯ್ಯಾ ಎಂದಡೆ. ಹಳೆನಾಯಿ ಮುದಿಬೆಕ್ಕು ಸತ್ತ ಮೂರುದಿನದ ಮೇಲೆ ಆರಿಸಿಕೊಂಡು ಬಂದು ಅದರ ಜೀರ್ಣಮಾಂಸವನು ತಿಂದು ಬೆಕ್ಕು, ನಾಯಿ, ಹಂದಿಯ ಉಚ್ಚಿಯ ಕುಡಿದಂತಾಯಿತಯ್ಯಾ. ಇಂತಿದರನುಭಾವವನು ಸ್ವಾನುಭಾವಗುರುಮೂರ್ತಿಗಳಿಂದ ತನ್ನ ಸ್ವಯಾತ್ಮಜ್ಞಾನದಿಂದ ವಿಚಾರಿಸಿ ತಿಳಿದು ನೋಡಿ, ಇಂತಿವರೆಲ್ಲರೂ ಕೂಳಿಗೆ ಬಂದ ಬೆಕ್ಕು ನಾಯಿಗಳ ಹಾಗೆ ಅವರ ಒಡಲಿಗೆ ಕೂಳನು ಹಾಕಿ, ಬೆಕ್ಕು ನಾಯಿಗಳ ಅಟ್ಟಿದ ಹಾಗೆ ಅವರನು ಅಟ್ಟಬೇಕು ನೋಡಾ. ಇಂತಿವರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು. ಈ ಹೊಲೆಯ ಮಾದಿಗರ ಮೇಳಾಪವನು ಬಿಟ್ಟು ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವೆಂಬ ಗುರುಲಿಂಗಜಂಗಮದ ಪಾದೋದಕ ಪ್ರಸಾದವ ಕೊಳಬಲ್ಲರೆ ಆ ಭಕ್ತರಿಗೆ ಮೋಕ್ಷವೆಂಬುದು ಕರತಳಾಮಳಕ ನೋಡೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹುಟ್ಟದ ಮುನ್ನ ಹೋಗಾಡಿ ಕೊಟ್ಟು ಕೊಂಡೆ. ಹುಟ್ಟದ ಮುನ್ನ ಮೂವರ ಸೇವೆ ಮಾಡಿದೆ. ಹುಟ್ಟದ ಮುನ್ನ ಭವಿಗಳಲ್ಲಿ ಚರಿಸಿದೆ. ಹುಟ್ಟಿದ ಮೇಲೆ ನಷ್ಟವ ಮಾಡಿ ಅಂಗೈಯ ಮೇಲೆ ಹಾಲು ಕುಡಿದು ಸತ್ತು ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಗಲೋದಿ ಬ್ರಹ್ಮಂಗೆ ಪೇಳಿದೆ, ಇರುಳೋದಿ ವಿಷ್ಣುವಿಂಗೆ ಪೇಳಿದೆ, ಉಭಯವಿಲ್ಲದ ವೇಳೆಯಲ್ಲಿ ಓದಿ ರುದ್ರಂಗೆ ಪೇಳಿದೆ, ಎನ್ನ ಓದು ಕೇಳಿ ನಿದ್ರೆಯ ಕಳೆದು ಜಾಗ್ರದಲ್ಲಿ ಕುಳಿತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...