ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೀಕ್ಷೋಪದೇಶವ ಮಾಡಿ ಗುರುವಿನ ಕಣ್ಣ ಕಳೆದು ತಲೆ ಹೊಡೆದು ಮೂರು ಹಣವ ಕೊಂಡೆ. ದೀಕ್ಷೋಪದೇಶವ ಹಡೆದ ಭಕ್ತರ ನಾಲಗೆಯ ಕೊಯ್ದು ಕೈ ಮುರಿದು ಮೂರು ಹಣವ ಕೊಂಡೆ. ಈ ಗುರುಶಿಷ್ಯರುಭಯರ ಸಂಯೋಗಕಾಲದಲ್ಲಿರುವ ಸಾಕ್ಷಿಗಣಂಗಳ ಮನೆಯ ಸುಟ್ಟು ಮೂರು ರತ್ನವ ಕೊಂಡೆ. ಇಂತೀ ಮೂವರ ಹಣವ ತಂದು ಗುರುವಿಗೆ ಕೊಟ್ಟು ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ? ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ? ಎಲಾ ಮರುಳಗಳಿರಾ, ಕಲ್ಲು ದೇವರೆಂಬಿರಿ, ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ? ಕಟ್ಟಿಗೆ ದೇವರೆಂಬಿರಿ, ಕಟ್ಟಿಗೆ ದೇವರೆಂದರೆ ಅಗ್ನಿಯಿಂದ ಪ್ರಳಯವಾಗದೆ ? ಮಣ್ಣು ದೇವರೆಂಬಿರಿ, ಮಣ್ಣು ದೇವರಾದಡೆ ಜಲದಿಂದ ಪ್ರಳಯವಾಗದೆ ? ನೀರು ದೇವರೆಂಬಿರಿ, ನೀರು ದೇವರಾದಡೆ ಅಗ್ನಿಯಿಂದ ಅರತುಹೋಗದೆ ? ಅಗ್ನಿ ದೇವರೆಂಬಿರಿ, ಅಗ್ನಿ ದೇವರಾದಡೆ ಜಲದಿಂದ ಪ್ರಳಯವಾಗದೆ ? ಇಂತೀ ದೇವರೆಂದು ನಂಬಿ ಪೂಜಿಸಿದ ಜೀವಾತ್ಮರು ಇರುವೆ ಮೊದಲು ಆನೆ ಕಡೆ ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಾಳ ತಿರುಗಿದಂತೆ ಜನನಮರಣಗಳಿಂದ ಎಡೆಯಾಡುತಿಪ್ಪರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ, ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ, ಅಂತಪ್ಪ ಮಾಘಮಾಸದ ಚತುರ್ದಶಿದಿವಸ ಒಂದೊತ್ತು ಉಪವಾಸವ ಮಾಡಿ, ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು ಸಾಯಂಕಾಲಕ್ಕೆ ಸ್ನಾನವ ಮಾಡಿ, ಜಂಗಮವ ಕರತಂದು ಅರ್ಚಿಸಿ, ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ, ಏಕಾರತಿ ಪಂಚಾರತಿಗಳಿಂದ ಪೂಜಿಸಿ, ಪಾದೋದಕವ ಸೇವಿಸಿ, ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು ಮೊದಲಾದ ಫಲಹಾರ ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ, ಬುಂದೆ, ಲಡ್ಡು ಮೊದಲಾದ ಫಲಹಾರ. ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು, ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ ಅಂಗಕ್ಕೆ ಗಡಣಿಸಿಕೊಂಡು, ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ, ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ, ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ, ಸ್ನಾನವ ಮಾಡಿ ಬಂದು ಜಂಗಮವ ಕರಿಸಿ, ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ, ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ. ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೇವರು ದೇವರು ಎಂದು ಬಳಲುತ್ತಿರ್ಪರು ಬ್ರಹ್ಮಾಂಡದ ಜನರೆಲ್ಲರು. ಅದೇನು ಕಾರಣವೆಂದಡೆ- ತಾವೇ ದೇವರೆಂಬ ನಿಲುಕಡೆಯನರಿಯದೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದಿನಚರಿ ಮಾಸದೊಳಗೆ ಏಳು ವಾರದೊಳಗೆ ಸೋಮವಾರ ಉಪವಾಸ ಮಾಡಬೇಕೆಂಬಿರಿ. ದ್ವಾದಶಮಾಸದೊಳಗೆ ಶ್ರಾವಣಸೋಮವಾರ ಉಪವಾಸಮಾಡಬೇಕೆಂಬಿರಿ. ಮಾಘಮಾಸದ ಚತುರ್ದಶಿ ಉಪವಾಸ ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂಬಿರಿ. ಇಂತೀ ವಾರ, ಮಾಸ, ತಿಥಿಯಲ್ಲಿ ಅನ್ನ ಉದಕವ ತೊರೆದು, ಉಪವಾಸ ಮಾಡಿ, ಆತ್ಮವ ಬಳಲಿಸಿ, ತನುವನೊಣಗಿಸಿ, ನೀವು ವ್ರತವನಾಚರಿಸಿದಡೆ ನಿಮ್ಮ ಆತ್ಮದ್ರೋಹವು ಆ ದೇವತೆಗಳಿಗೆ ತಾಕಿ ಭವಭವದಲ್ಲಿ ಬೀಳುವರು. ಇದು ಕಾರಣವಾಗಿ ಉಪವಾಸ ಮಾಡಲಾಗದು. ಉಪವಾಸ ಮಾಡಿದಲ್ಲಿ ಪ್ರಯೋಜನವಿಲ್ಲ. ಅದೆಂತೆಂದಡೆ : ಉಂಡುಟ್ಟು ಲಿಂಗವ ಪೂಜಿಸಬೇಕು. ಉಣಿಸಿ ಉಡಿಸಿ ಜಂಗಮವನರ್ಚಿಸಬೇಕು. ಕೊಟ್ಟು ಕೊಂಡು ಗುರುವನರ್ಚಿಸಬೇಕು. ಇಂತೀ ತ್ರಿವಿಧದ ಭೇದ ಬಲ್ಲರೆ ಉಪವಾಸವ ಮಾಡಬಲ್ಲರೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದ್ವಾದಶಮಾಸದೊಳಗೆ ಶ್ರಾವಣಮಾಸದ ಫಲಪುಣ್ಯ ಮಹಾದೊಡ್ಡದೆಂದು, ವೇದ, ಪುರಾಣ, ಶ್ರುತಿವಾಕ್ಯಗಳಿಂದ ಕೇಳಿ, ಅಂತಪ್ಪ ಶ್ರಾವಣಮಾಸ ತಿಂಗಳಪರಿಯಂತರವಾಗಿ, ನಿತ್ಯದಲ್ಲಿ ವ್ರತವನಾಚರಿಸುವರ ಆಚರಣೆಯ ಪೇಳ್ವೆ ಅದೆಂತೆಂದಡೆ : ಶ್ರಾವಣಮಾಸ ಪಾಡ್ಯದಿವಸ ಮೊದಲು ಮಾಡಿ ನಿತ್ಯದಲಿ ಒಬ್ಬ ಜಂಗಮದ ಪಾದವ ಪಿಡಿದು, ಪತ್ರಿ ಪುಷ್ಪ ನಿತ್ಯದಲ್ಲಿ ತಂದು, ಪಾದಪೂಜೆಯ ಮಾಡಿ, ಪಾದೋದಕ ಪ್ರಸಾದವ ಕೊಂಡು ಆ ಜಂಗಮಸಹಿತನಾಗಿ ಮೃಷ್ಟಾನ್ನಭೋಜನವ ಹಾ ಹಾ ಎಂದು ಒಟ್ಟಿಸಿಕೊಂಡು ಒಡಲತುಂಬಿಸಿಕೊಂಡು, ಮತ್ತೆ ಮರಳಿ ಸಾಯಂಕಾಲಕ್ಕೆ ಫಲಹಾರವೆಂದು ಮಾಡಿಸಿ ತಿಂದು, ನಾವು ಶ್ರಾವಣಮಾಸ ಒಂದೊತ್ತು ಉಪವಾಸ, ನಿತ್ಯದಲ್ಲಿ ಜಂಗಮದ ತೀರ್ಥಪ್ರಸಾದ ತಪ್ಪದೆ ಕೊಂಬ ವ್ರತವುಳ್ಳವರೆಂದು ತಮ್ಮ ಬಿಂಕದ ಮಾತ ಮೂಢಾತ್ಮರ ಮುಂದೆ ಬೀರುವರಯ್ಯ. ಇಂತಪ್ಪ ತಾಮಸಗುಣವುಳ್ಳ ಅಹಂಕಾರಿಗೆ ವೀರಮಾಹೇಶ್ವರರೆಂದಡೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭು ಮೆಚ್ಚುವನೆ ? ಮೆಚ್ಚನಯ್ಯ ನರಕದಲ್ಲಿಕ್ಕೆಂದ ನೋಡಾ.
--------------
ಕಾಡಸಿದ್ಧೇಶ್ವರ
ದೇವರಿಗೆ ಅಗ್ನಿಯಿಲ್ಲ, ಪೂಜಾರಿಗೆ ಜಲವಿಲ್ಲ. ಜನರಿಗೆ ಜೀವವಿಲ್ಲ, ಎನಗೆ ನೀವಿಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದೇವನಾದಡೆ ಅಗ್ನಿಯ ನುಂಗಬೇಕು. ಭಕ್ತನಾದಡೆ ಮೂರು ನುಂಗಬೇಕು. ದೇವರಿಗೆ ಎರಡಿಲ್ಲ; ಎರಡುಳ್ಳನ್ನಕ್ಕ ದೇವರಲ್ಲ. ಅಗ್ನಿಯುಳ್ಳನ್ನಕ್ಕ ದೇವರಲ್ಲ. ಕ್ರಿಯಕ್ಕೆ ಹೊರತಾದವರು ದೇವರಲ್ಲ. ಇಂತಿಲ್ಲದೆ ದೇವರೆಂಬವರ ದರುಶನಕ್ಕೆ ಭವಬಂಧನವುಂಟು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ