ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪುರುಷನ ಮರೆದು ಮಾವನ ಪೇಳುವರು. ತಂದೆಯ ಮರೆದು ಮುತ್ಯನ ಪೇಳುವರು. ಇದ್ದುದ ಮರೆದು ಇಲ್ಲದುದ ಪೇಳುವರು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ
--------------
ಕಾಡಸಿದ್ಧೇಶ್ವರ
ಪಂಚಾಕ್ಷರವೆಂದಡೆ ಪರಬ್ರಹ್ಮ. ಪಂಚಾಕ್ಷರವೆಂದಡೆ ಪರಶಿವ. ಪಂಚಾಕ್ಷರವೆಂದಡೆ ಪರವಸ್ತುವಿನ ನಾಮ. ಪಂಚಾಕ್ಷರವೆಂದಡೆ ಭವದುರಿತ ಬಿಟ್ಟೋಡುವುದು. ಪಂಚಾಕ್ಷರವೆಂದಡೆ ಬಹುಜನ್ಮದ ದೋಷ ಪರಿಹಾರವಾಗುವುದು. ಪಂಚಾಕ್ಷರವೆಂದಡೆ ಸಕಲ ತೀರ್ಥಕ್ಷೇತ್ರಯಾತ್ರೆಯಾದ ಪುಣ್ಯಫಲಪ್ರಾಪ್ತಿಯಾಗುವುದು. ಪಂಚಾಕ್ಷರವೆಂದಡೆ ಅಷ್ಟಮಹಾಸಿದ್ಧಿ ನವಮಹಾಸಿದ್ಧಿ ಅಷ್ಟಾಂಗಯೋಗದ ಫಲ ಅಷ್ಟೈಶ್ವರ್ಯಸಂಪತ್ತು ದೊರಕೊಳ್ಳುವುದು ನೋಡಾ. ಇಂತಪ್ಪ ಪಂಚಾಕ್ಷರೀಮಂತ್ರದ ಮಹತ್ವವ ಕಂಡು ಮನ ಕರಗಿ ತನು ಉಬ್ಬಿ, ಪಂಚಾಕ್ಷರಿ, ಪಂಚಾಕ್ಷರಿಯೆಂದು ನೆನೆನೆನೆದು ಭವಹರಿದು ಪರಶಿವಲಿಂಗವ ಕೂಡಿ ಸುಖಿಯಾಗಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಸಾದಗ್ರಾಹಕನಾದ ಸದ್ಭಕ್ತನು ಭೋಜನಶಾಲೆಯಲ್ಲಿ ಉಣಲಾಗದು. ರಂಗಮಂಟಪದಲ್ಲಿ ಉಣಲಾಗದು. ಕೋಣೆಯಲ್ಲಿ ಉಣಲಾಗದು. ಗೃಹದ ಬಾಗಿಲಲ್ಲಿ ಉಣಲಾಗದು. ಬಾಹ್ಯದಲ್ಲಿ ಉಣಲಾಗದು, ಒಳಗೆ ಉಣಲಾಗದು. ಇಂತೀ ಸ್ಥಾನಗಳಲ್ಲಿ ಉಣ್ಣದಾತನೇ ಶಿವಪ್ರಸಾದಿ ಎಂದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ, ನಿಮ್ಮ ಬಲ್ಲತನವ ಪೇಳಿರಯ್ಯಾ. ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ, ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ. ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ. ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ. ಶಾಸ್ತ್ರಸಂದ್ಥಿಗಳರಿರಾನಿಮ್ಮಶಾಸ್ತ್ರ ಸಾದ್ಥಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ ಒರಲಿ ಒರಲಿ ಹೋದವು ಕೇಳಿರಯ್ಯಾ. ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ ಹೋರಾಡಿ ಮಥನದಿಂದ ಹೊಡೆದಾಡಿ ಪರಶಿವನ ಕಾಣದೆ ಸತ್ತು ಹೋದರಲ್ಲಾ ! ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು ಶಿವನ ನಿಲುಕಡೆಯನೆಂದಿಗೂ ಅರಿಯವು. ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು ಮುನ್ನವೆ ಅರಿಯರು, ಅದೇನು ಕಾರಣವೆಂದಡೆ- ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ? ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ ಫಲವ ಬಯಸಿದರುಂಟೆ ? ಈ ದೃಷ್ಟಾಂತದಂತೆ ತಿಳಿದು ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ. ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ. ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚಾಂಗವ ಬರೆದು ಓದಿ ಮುಹೂರ್ತವ ಹೇಳುವರ ಕಂಡೆ. ಪಂಚಾಂಗವ ಪಿಡಿದು ಮುಹೂರ್ತವ ಕೇಳುವರ ಕಂಡೆ. ಪಂಚಾಂಗದ ಅಕ್ಷರವ ಕಲಿತು ಹೇಳುವರ ಕಂಡೆ. ಆ ಅಕ್ಷರವ ಕಲಿತು ಎಣಿಸುವರ ಕಂಡೆ. ಪಂಚಾಂಗದ ಭೇದವನು ಆರೂ ಅರಿಯರು. ಅರಿಯದೆ ನುಂಗಿ ಅಕ್ಷರವನಡಗಿಸಿ ಮರುಳನಂತೆ ಕಾಯಕವ ಮಾಡುತ್ತಿರ್ಪರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಮಥಗಣಂಗಳ ಪ್ರಸಾದಕೊಂಡದಲ್ಲಿ ಅಡಗಿದ ಗೊತ್ತ ಆರೂ ಅರಿಯರಲ್ಲ, ಬಸವಣ್ಣಂಗೆ ಪ್ರಭುದೇವರು ತೋರಿ ಕೊಟ್ಟನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚವರ್ಣದ ಗೋವಿನ ಹಾಲ ಕರದು ಬಿಸಿಲಿಗೆ ಕಾಸಿ ಹಾಲು ಬೆಣ್ಣೆ ತುಪ್ಪವ ಮಾರಿ, ಮೊಸರು ಮಜ್ಜಿಗೆ ಮಾರದೆ ಕಾಯಕ ಮಾಡುತ್ತಿರ್ದೆ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗಬ್ರ್ಥೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ. ಇಂತಪ್ಪ ಪಾದೋದಕದ ಭೇದ ಬಲ್ಲವರು ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ, ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ? ಇಂತಪ್ಪ ಪರಾಪರ ನಾಮವನುಳ್ಳ ಪರಂಜ್ಯೋತಿಸ್ವರೂಪವಾದ ಪರತತ್ವ ಪಾದೋದಕವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆಂದೆನ್ನಬಹುದು. ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ ಸತ್ಯಸದ್ಭಕ್ತರೆಂದೆನ್ನಬಹುದು. ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು ಆಣವಾದಿ ಕಾಮಿಕಾಂತ್ಯಮಾದ ಮಲತ್ರಯದ ಬಲೆಯಲ್ಲಿ ಶಿಲ್ಕಿ, ದೇಹಾದಿ ಮನಾಂತ್ಯಮಾದ ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ, ಮಂದಮತಿ ಅಧಮ ಜಂಗಮದ ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ ಮೂಗ ತುಟಿತನಕ ಕೊಯ್ದು ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಶ್ಚಿಮದೇಶದ ಧಾನ್ಯಕ್ಕೆ ಒಂದು ಸುಂಕ. ಉತ್ತರದೇಶದ ಧಾನ್ಯಕ್ಕೆ ಹಲವು ಸುಂಕ. ಒಮ್ಮನಕ್ಕೆ ಸುಂಕಿಲ್ಲ; ಇಮ್ಮನಕ್ಕೆ ಸುಂಕುಂಟು. ಒಮ್ಮನಸುಂಕದ ಹಣವ ಕೊಂಡು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಾಣಲಿಂಗಿಗೆ ಪದಾರ್ಥಪ್ರೇಮವುಂಟೆ ? ಪ್ರಾಣಲಿಂಗಿಗೆ ಪ್ರಪಂಚದ ಮೋಹವುಂಟೆ ? ಪ್ರಾಣಲಿಂಗಿಗೆ ಸ್ಥಲಕುಲದ ಅಭಿಮಾನ, ಕುಲಗೋತ್ರದ ಹಂಗು ಉಂಟೆ ? ಪ್ರಾಣಲಿಂಗಿಗೆ ಮಾತಾ-ಪಿತಾ, ಸತಿ-ಸುತ ಬಂಧುಗಳ ಸ್ನೇಹಿತರ ಮೋಹವುಂಟೆ ? ಇಂತೀ ಸರ್ವರಲ್ಲಿ ಮಮಕಾರ ಉಳ್ಳಾತ ಅಂಗಪ್ರಾಣಿಯಲ್ಲದೆ ಲಿಂಗಪ್ರಾಣಿ ಆಗಲರಿಯನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಾಣಲಿಂಗಿಗೆ ಪರದೈವ ಪೂಜೆಯುಂಟೆ ? ಪ್ರಾಣಲಿಂಗಿಗೆ ಪರರ ಸೇವಾವೃತ್ತಿಯುಂಟೆ ? ಪ್ರಾಣಲಿಂಗಿಗೆ ಪರಲೋಕದ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರೆಂಬ ಪಂಚಬ್ರಹ್ಮರು ಮೊದಲಾದ ಅನೇಕ ದೇವತೆಗಳ ಚತುರ್ವಿಧಫಲಪದ ಮೊದಲಾದ ಎಂ¨Àತ್ತೆಂಟುಕೋಟಿ ಫಲಪದದ ಮೇಲಣ ಕಾಂಕ್ಷೆಯುಂಟೆ ? ಪ್ರಾಣಲಿಂಗಿಗೆ ಮತ್ರ್ಯಲೋಕದ ಅರ್ಥೈಶ್ವರ್ಯ ಸಕಲಸಂಪದದ ಭೋಗೋಪಭೋಗವನು ಭೋಗಿಸಬೇಕೆಂಬ ಪುಣ್ಯದಮೇಲಣ ಮಮಕಾರವುಂಟೆ ? ಇಂತಪ್ಪ ಕರ್ಮದ ಶೇಷವನಳಿದುಳಿದಾತನೇ ಪ್ರಾಣಲಿಂಗಿ ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಸಾದ ಪ್ರಸಾದವೆಂದು ನುಡಿದುಕೊಂಡುಂಬಿರಿ. ಎಲ್ಲರಿಗೆಲ್ಲಿಹುದೊ ಶಿವಪ್ರಸಾದ ? ಇಂತಪ್ಪ ಪ್ರಸಾದದ ಘನವಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರೋ. ಪ್ರಸಾದವೆಂಬುದು, ಪರಾಪರನಾಮವುಳ್ಳ ಪರಮಾನಂದವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಮನಿರಂಜನ ಪರಬ್ರಹ್ಮವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಅಖಿಳಕೋಟಿ ಬ್ರಹ್ಮಾಂಡಗಳ ಗಮಿಸುವುದಕ್ಕೆ ಲಯಿಸುವುದಕ್ಕೆ ಮಾತೃಸ್ಥಾನವಾದ ಚಿತ್ಪ್ರಕಾಶವೇ ಪ್ರಸಾದ ಕಾಣಿರೋ. ಪ್ರಸಾದವೆಂಬುದು, ಪರಶಿವತತ್ವ ಪರಿಪೂರ್ಣತ್ವ ಪರಂಜ್ಯೋತಿ ಪರಮಪ್ರಕಾಶವೇ ಪ್ರಸಾದ ಕಾಣಿರೋ. ಇಂತಪ್ಪ ವಿಚಾರವ ತಿಳಿದು ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮರೆಂದೆನ್ನಬಹುದು. ಇಂತಪ್ಪ ನಿರ್ಣಯವ ತಿಳಿದು ಪ್ರಸಾದವ ಕೊಳಬಲ್ಲಡೆ ಪ್ರಸಾದಿಗಳೆನ್ನಬಹುದು; ಪ್ರಳಯವಿರಹಿತರೆಂದೆನ್ನಬಹುದು. ಸತ್‍ಸದ್ಭಕ್ತರೆಂದೆನ್ನಬಹುದು. ಇಂತೀ ಭೇದವ ತಿಳಿಯದೆ ನೀರು ಕೂಳಿಗೆ ಪಾದೋದಕ ಪ್ರಸಾದವೆಂದು ಒಡಲಹೊರವುದು ಪ್ರಸಾದವಲ್ಲ. ಅಂತಪ್ಪ ಘನಮಹಾಪ್ರಸಾದದ ಸಕೀಲಸಂಬಂಧವನರಿದು ನಿರ್ಧರಿಸಿದವರಾರೆಂದರೆ, ಹಿಂದಕ್ಕೆ ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರಾ ಎಪ್ಪತ್ತು ಪ್ರಮಥಗಣಂಗಳು ಕೊಂಡುದು ಇದೇ ಪ್ರಸಾದ. ಇನ್ನು ಮುಂದಿನವರಿಗಾದಡು ಇದೇ ಪ್ರಸಾದ. ಇಂತಪ್ಪ ಪರತತ್ವಪ್ರಸಾದಕ್ಕೆ ಸುಜ್ಞಾನಿಗಳಾಗಿ ಸತ್ಕ್ರಿಯಾ ಸಮ್ಯಜ್ಞಾನವೆಂಬ ಎರಡುಕಾಲಿಗೆ ಷಡ್ವಿಧಭಕ್ತಿ ಎಂಬ ಹಲ್ಲು ಜೋಡಿಸಿ, ಏಣಿಯ ಹಚ್ಚಿ, ನಿರ್ವಯಲಪದವನೈದಲರಿಯದೆ, ಅಹಂಕಾರ ಮಮಕಾರವೆಂಬ ಎರಡುಕಾಲಿಗೆ ಅಷ್ಟಮದವೆಂಬ ಹಲ್ಲುಜೋಡಿಸಿ ಸಪ್ತವ್ಯಸನಗಳೆಂಬ ಕೀಲುಜಡಿದು ಷಡ್ವರ್ಗಗಳೆಂಬ ಹಗ್ಗದ ಬಿರಿಯ ಬಂಧಿಸಿ, ಏಣಿಯ ಯಮಲೋಕಕ್ಕೆ ಹಚ್ಚಿ, ನರಕವ ಭುಂಜಿಸುವ ನರಕಜೀವಿಗಳಿಗೆ ಪ್ರಸಾದಿಗಳೆಂದಡೆ ನಿಮ್ಮ ಶರಣ ಚೆನ್ನಬಸವಣ್ಣ ಕಂಡು, ಇಂತಪ್ಪ ಮೂಳಹೊಲೆಯರ ಮೂಗಕೊಯ್ದು ಮೆಣಸಿನ ಹಿಟ್ಟು ತುಂಬಿ ಮೂಡಲದಿಕ್ಕಿಗೆ ಅಟ್ಟೆಂದ ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಾದೋದಕ ಪ್ರಸಾದಗಳೆಂದೆಂಬಿರಿ, ಪಾದೋದಕ ಪ್ರಸಾದದ ಬಗೆಯ ಪೇಳ್ವೆ. ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ, ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ, ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ, ಕೆರೆ ಬಾವಿ ಹಳ್ಳ ಕೊಳ್ಳ ನದಿ ಮೊದಲಾದವುಗಳ ನೀರ ತಂದು- ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ, ಆ ಜಂಗಮದ ಉಭಯಪಾದದ ಮೇಲೆರೆದು, ಪಾದೋದಕವೇ ಪರಮತೀರ್ಥವೆಂದು ಲಿಂಗ ಮುಂತಾಗಿ ಸೇವಿಸಿ, ನವಖಂಡಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ, ತಂದು ಜಂಗಮಕ್ಕೆ ಎಡೆಮಾಡಿ, ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ, ಕೊಂಡು ಸಲಿಸುವರಯ್ಯ. ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ. ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು, ಮುಕ್ತಿದೋರದು. ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ, ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ. ಇಂತಪ್ಪವರಿಗೆ ಭವ ಹಿಂಗುವದು, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಈ ಪಾದೋದಕದ ಭೇದವ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕಡುಪಾತಕರಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚವರ್ಣದ ನಗರದಲ್ಲಿ, ಕಾಲು ತಲೆಗಳಿಲ್ಲದ ದೊರೆಗಳು. ಕಣ್ಣು ಕೈಗಳಿಲ್ಲದ ಕಾರಭಾರಿಗಳು. ಗೌಡ, ಶ್ಯಾನಭೋಗರಿಂದುತ್ಪತ್ಯ, ಪರಿಚಾರಕರಿಂದ ಬಂಧನ. ಇಂತಿವರೆಲ್ಲರಿಗೆ ಒಡತಿ ಮೂರುಮುಖದ ಕುಂಪಣಿ. ಪರದೇಶಕ್ಕೈದಬೇಕಾದರೆ ಪಂಚವರ್ಣದ ಸಂಚಾರವ ಕೆಡಿಸಿ, ಕಾಲು, ತಲೆ ದೊರೆಗೆ ಬಂದಲ್ಲದೆ, ಕಣ್ಣು, ಕೈ ಕಾರಭಾರಿಗೆ ಬಂದಲ್ಲದೆ, ಗೌಡ, ಶ್ಯಾನಭೋಗ, ಪರಿಚಾರಕರ ಕೊಂದಲ್ಲದೆ, ಮೂರುಮುಖದ ಕುಂಪಣಿಯ ತಲೆಹೊಡೆದಲ್ಲದೆ ಮುನ್ನಿನ ಬಟ್ಟೆಯನರಿಯಬಾರದು. ಅರಿಯದಕಾರಣ ಅಸುಲಿಂಗಸಂಬಂಧಿಗಳಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಸಾದಿ ಪ್ರಸಾದಿಗಳೆಂದು ಹೆಸರಿಟ್ಟುಕೊಂಡು ಹಸ್ತಪÀರುಷವಿಲ್ಲದ ಪದಾರ್ಥ ಕಿಲ್ಬಿಷ ಲಿಂಗಕ್ಕೆ ಅರ್ಪಿಸಲಾಗದೆಂದು ಶ್ರುತಿವಾಕ್ಯ ಕೇಳಿ, ಲಿಂಗಜಂಗಮವ ಕಂಡಲ್ಲಿ ಅನ್ನ ಉದಕವ ಜಂಗಮದ ಹಸ್ತಪರುಷದಿಂದ ಸೇವಿಸುವರು. ಸೂಳೆಯರ ಕಂಡಲ್ಲಿ ವೀಳ್ಯವ ಕೊಟ್ಟು ಆ ವೀಳ್ಯವ ಅವರು ಅರ್ಧ ಕಡಿದು ಕೊಟ್ಟರೆ ತಿಂಬುವರು. ಎಲ್ಲಿದೆಯಯ್ಯಾ ನಿಮ್ಮ ಹಸ್ತಪರುಷ ? ಮೋಹದ ಪುತ್ರರಿಗೆ ಆವುದಾನೊಂದು ಅಮೃತಫಲವ ತಂದುಕೊಟ್ಟು ಆ ಪುತ್ರರು ಅದರ ಅರ್ಧ ಫಲವ ಸೇವಿಸಿ ತಮ್ಮ ತಂದೆಗೆ ನೀ ತಿನ್ನೆಂದು ಕೊಟ್ಟರೆ ಆ ಪುತ್ರನ ಮಮಕಾರದಿಂ ಎಂಜಲೆಂಬುದನ್ನರಿಯದೆ ತಿಂಬುವರಿಗೆ ಎಲ್ಲಿಯದಯ್ಯ ಹಸ್ತಪರುಷ ? ಇಂತಪ್ಪವರು ಪ್ರಸಾದಿಗಳೆಂದಡೆ ಶಿವಜ್ಞಾನಿಗಳಾದ ಶರಣರು ಕಂಡು ತಮ್ಮ ಹೊಟ್ಟೆಹುಣ್ಣಾಗುವತನಕ ಶಬ್ದಮುಗ್ಧರಾಗಿದ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚಾಗ್ನಿಪುರವೆಂಬ ಪಟ್ಟಣದಲ್ಲಿ ಮುದ್ದುಮುಖದ ಒಬ್ಬ ನಾರಿ ಇರ್ಪಳು. ಆ ನಾರಿಯ ಮಸ್ತಕದಲ್ಲಿ ಮೂರು ಲೋಕವನೊಳಕೊಂಡ ಮಹಾಪ್ರಕಾಶವಿರ್ಪುದು. ಆ ಪ್ರಕಾಶದೊಳಗೆ ನಿರ್ವಯಲಾಗಬಲ್ಲಡೆ ಲಿಂಗೈಕ್ಯನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪುಣ್ಯಕ್ಷೇತ್ರಯಾತ್ರೆ ಪುಣ್ಯತೀರ್ಥಸ್ನಾನವ ಮಾಡಬೇಕೆಂಬಿರಿ. ಮತ್ರ್ಯಲೋಕದ ಮಹಾಗಣಂಗಳು ನೀವು ಬಲ್ಲಾದರೆ ಪೇಳಿ, ಅರಿಯದಿದ್ದರೆ ಕೇಳಿರಯ್ಯ. ಶ್ರೀಗುರುಕಾರುಣ್ಯವ ಹಡದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯವಾದ ಒಬ್ಬ ಶಿವಭಕ್ತನ ದರ್ಶನವಾದವರಿಗೆ ಅನಂತಕೋಟಿ ಪುಣ್ಯ ಫಲದೊರಕೊಂಬುವದು. ಅದೆಂತೆಂದೊಡೆ : ಆತನ ಮಂದಿರವೇ ಶಿವಲೋಕ. ಆತನ ಕಾಯವೇ ಸತ್ಯಲೋಕ. ಆತನ ಅಂಗದ ಮೇಲೆ ಇರುವ ಲಿಂಗವೇ ಅನಾದಿಪರಶಿವಲಿಂಗ, ಆತನ ಅಂಗಳವೇ ವಾರಣಾಸಿ. ಅಲ್ಲಿ ಮುನ್ನೂರಾ ಅರುವತ್ತುಕೋಟಿ ಕ್ಷೇತ್ರಂಗಳಿರುವವು. ಆತನ ಬಚ್ಚಲವೇ ಗಂಗಾತೀರ. ಅಲ್ಲಿ ಮುನ್ನೂರರುವತ್ತುಕೋಟಿ ತೀರ್ಥಂಗಳಿರ್ಪವು. ಇಂತಪ್ಪ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು, ವಿಚಾರಿಸಿ ಕೊಳ್ಳಲರಿಯದೆ ತೀರ್ಥಕ್ಷೇತ್ರವೆಂದು ತಿರುಗುವ ವ್ರತಭ್ರಷ್ಟ ಅನಾಚಾರಿ ಮೂಳಹೊಲೆಯರಿಗೆ ನಾನೇನೆಂಬೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚವರ್ಣದ ಭೂಮಿಯ ಮೇಲಿನ ಕಣಿಯ ತಂದು ಮೂರುಮುಖದಪ್ಪಗೆ ಕೊಟ್ಟು, ಮೂರುಮಂದಿಯ ಬಿಟ್ಟು, ಐವರ ಸುಟ್ಟು, ಎಂಟುಮಂದಿಯ ಕುಟ್ಟಿ, ಗುಲ್ಲುಮಾಡದೆ ಮೂರುಮುಖದಪ್ಪನ ಕೊಂದು, ಕಣಿಯ ಕೊಂಡೊಯಿದು, ಈ ಬೆಡಗಿನ ಕೀಲವ ಬಲ್ಲಾತನೆ ಲಿಂಗಸಂಬಂಧಿ, ಇಲ್ಲದಾತನೆ ಅಂಗಸಂಬಂಧಿ ಎಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕಂದಂಬಲಿಂಗ ನಿರ್ಮಾಯಪ್ರಭುವೆ
--------------
ಕಾಡಸಿದ್ಧೇಶ್ವರ
ಪಶುವಿಗೆ ಕರುವಿನ ಮಮಕಾರ, ಜಾರಸ್ತ್ರೀಗೆ ವಿಟನ ಮಮಕಾರ, ದಾಸಿಗೆ ಶಿಶುವಿನ ಮಮಕಾರ, ವೈಜಕವ್ವೆಗಳು ನಿಮ್ಮ ಮಮಕಾರದಲ್ಲಿರ್ದು ಕಾಯಕವ ಮಾಡುತಿರ್ಪಳು ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪರ್ಣ ಉದುರಿದ ವೃಕ್ಷ ಕಡಿದು, ಕೊಂಗೆಯ ಸವರದೆ ಮನೆಯ ಕಟ್ಟಿ, ಪಾತಾಳದ ಬೇತಾಳಂಗೆ ರುದ್ರನನಾಹುತಿಯ ಕೊಟ್ಟು, ಸ್ವರ್ಗಲೋಕದ ಮಾರೇಶ್ವರಂಗೆ ವಿಷ್ಣುವಿನ ಆಹುತಿ ಕೊಟ್ಟು, ಮತ್ರ್ಯಲೋಕದ ಜಗಜಟ್ಟಿಗೆ ಬ್ರಹ್ಮನ ಆಹುತಿ ಕೊಟ್ಟು, ಉಳಿದಲೋಕದ ಭೂತಂಗಳಿಗೆ ಷಟ್‍ಸ್ಥಲದ ಭವಿಗಳ ಕೊಟ್ಟು, ಜನಿವಾರ ಹರಿದು ಗಂಧವ ಧರಿಸದೆ, ಜಳಕವ ಮಾಡದೆ, ಮಡಿ ಉಡದೆ, ಮೈಲಿಗೆಯನುಟ್ಟು, ಉಣ್ಣದ ಆಹಾರವನುಂಡು ಕಾಯಕವ ಮಾಡುತ್ತಿರ್ಪರು ನೋಡೆಂದ, ಕಾಡನೋಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪುಲ್ಲ ಕೊಯ್ಯದೆ ಹೊಡೆಯ ಹಿರಿದು ರಸವ ಹಿಂಡಿ ಪಾಕವ ಮಾಡಿ, ಹೊಡೆಹುಲ್ಲ ಬಂಕೇಶ್ವರಲಿಂಗಕ್ಕೆ ಕೊಟ್ಟು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಾಣಲಿಂಗಿ ಪ್ರಾಣಲಿಂಗಿ ಎಂಬಿರಿ, ಪ್ರಾಣಲಿಂಗದ ಸ್ವರೂಪವನಾರು ಬಲ್ಲರಯ್ಯಾ ಎಂದಡೆ, ಆರುಬಟ್ಟೆಯ ಕೆಡಿಸಿ, ಮೂರುಬಟ್ಟೆಯ ಮೆಟ್ಟಿ, ಉಭಯ ಬಟ್ಟೆಯಲ್ಲಿ ನಿಂದು ಅತ್ತಿತ್ತ ಹರಿಯದೆ, ಹಿತ್ತಲಬಾಗಿಲಲ್ಲಿ ಪೋಗದೆ ಕಮಲದ ಬಾಗಿಲಲ್ಲಿ ಪೋಗಬಲ್ಲರೆ ಅಸುಲಿಂಗಿಗಳು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪುರುಷ ಸತ್ತಬಳಿಕ ಗಂಧ ಅಕ್ಷತೆ ಧರಿಸಿ ಒಗತನವ ಮಾಡಲಿಲ್ಲ. ಸತಿಯಳ ಕೊಂದು, ಸತ್ತಪುರಷನ ಸತಿಯಳ ಕೂಡಿ ಒಗತನವ ಮಾಡುತ್ತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪಂಚವರ್ಣದ ಗೋವಿನ ಶೆಗಣೆಯ ಬೆಂಕಿಲ್ಲದೆ ಸುಟ್ಟು, ನೀರಿಲ್ಲದೆ ನೀರಲ್ಲಿ ಕಲಿಸಿ ಉಂಡಿಗಟ್ಟಿ, ಕೈಯಲ್ಲಿ ಪಿಡಿದು ಸರ್ವಾಂಗದಲ್ಲಿ ಧರಿಸಿ ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...