ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ ದ್ವಾದಶಮಂತ್ರವ ಕಲಿಸಿದ. ಒಂದು ಮಂತ್ರದಿಂದ ಮತ್ರ್ಯಲೋಕವ ಸುಟ್ಟೆ. ಒಂದು ಮಂತ್ರದಿಂದ ಪಾತಾಳಲೋಕವ ಸುಟ್ಟೆ. ಒಂದು ಮಂತ್ರದಿಂದ ಸ್ವರ್ಗಲೋಕವ ಸುಟ್ಟೆ. ಮೂರು ಮಂತ್ರದಿಂದ ಮುಪ್ಪುರದರಸುಗಳ ಕೊಂದೆ. ಆರು ಮಂತ್ರದಿಂದ ಆರು ವರ್ಣವ ಸುಟ್ಟೆ. ಇಂತೀ ಮಂತ್ರವ ಮಂತ್ರಿಸುವ ವೇಳೆಯಲ್ಲಿ ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕÀರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲೆಯಿಲ್ಲದ ಬಾವಿಗೆ ಕಾವಲಿಲ್ಲದ ಯಾತ, ಹುರಿಯಿಲ್ಲದ ಹಗ್ಗ, ಎತ್ತಿಲ್ಲದೆ ನೀರು ಜಗ್ಗಿ, ಫಲವಡ್ಡಿ ಅರಸು ಪ್ರಧಾನಿಗೆ ಕೊಡದೆ, ಸಮಗಾರ ಹೊಲೆಮಾದಿಗರು ಮೊದಲಾದ ಕುರುಡ ಕುಂಟರಾದ ಅಧಮರಿಗೆ ಕೊಟ್ಟು ಕಾಯಕವಳಿದು ಕಾಯಕದಲ್ಲಿರ್ದರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲದೊಳಗಣ ಮಧುರದಂತೆ; ಶಿಲೆಯೊಳಗಣ ಜ್ಯೋತಿಯಂತೆ; ಶಬ್ದದೊಳಗಣ ನಿಶ್ಯಬ್ದದಂತೆ; ಕಪ್ಪಿನೊಳಗಣ ರೂಪಿನಂತೆ ಇರ್ದಿರಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲನಿಲ್ಲದ ಭೂಮಿಯ ಪಕ್ಷಿ ನೆಲದಲ್ಲಿ ಬಂದು ಚರಿಸಲು, ಆ ನೆಲದೊಡೆಯರು ಚರಿಸ್ಯಾಡುವ ಪಕ್ಷಿಗೆ ಬಲಿಯ ಬೀಸಿ ಕೊಂಡು ಎಲ್ಲರು ತಿಂದು, ತಿಂದ ಪಕ್ಷಿಯ ನಾ ಕೊಂದು ಪಾಕವ ಮಾಡಿ ಬಾಲದಂಡಂಗೆ ಕೊಟ್ಟು ಬೇಟೆಯನಾಡುವೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿನ್ನಿನವರೂ ಇಂದಿನವರೂ ನಾಳಿನವರೂ ಹೋದ ದಾರಿ ಒಂದಲ್ಲದೆ ಎರಡಿಲ್ಲ ನೋಡೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಂದಿಯ ತಂದಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ಅಜ್ಜ ಪಣಜ ಸತ್ತದ್ದು ಕೇಳುತ್ತಿದ್ದಿ, ನಿಮ್ಮ ತಾಯಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಾಯಿಯ ತಾಯಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ತಾಯಿಯ ಅಜ್ಜಿ ಪಣಜಿ ಸತ್ತದ್ದು ಕೇಳುತ್ತಿದ್ದಿ. ನಿನ್ನ ಸತಿಸುತರು ಒಡಹುಟ್ಟಿದ ಬಂಧುಗಳು ಸ್ನೇಹಿತರು ಬೀಗರು ಮೊದಲಾದ ಸಕಲಲೋಕಾದಿಲೋಕಂಗಳು ನಿಮ್ಮ ಕಣ್ಣಮುಂದೆ ವೃಕ್ಷದ ಪರ್ಣಗಳು ಉದುರಿದ ಹಾಗೆ ಸಕಲರು ಅಳಿದುಹೋಗುವುದ ನೋಡುತ್ತಿದ್ದಿ. ಇದಲ್ಲದೆ ದೃಷ್ಟಾಂತ: ಒಬ್ಬ ರೋಮಜಋಷಿಗೆ ಮೂರುವರೆಕೋಟಿ ರೋಮಂಗಳುಂಟು, ಅಂತಹ ಋಷಿಗೂ ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗವೆಂಬ ಚತುರ್ಯುಗ ಪ್ರಳಯವಾದಲ್ಲಿ ಒಂದು ರೋಮ ಉದುರುವದು. ಹೀಗೆ ಈ ಪರಿಯಲ್ಲಿ ಮೂರುವರೆಕೋಟಿ ರೋಮಂಗಳು ಉದುರಿದಲ್ಲಿ ಆ ರೋಮಋಷಿಯೆಂಬ ಮುನೀಶ್ವರನು ಪ್ರಳಯವಾಗುವನು. ಮತ್ತೆ ದೇವಲೋಕದ ಸನಕ ಸನಂದಾದಿ ಮುನಿಜನಂಗಳು ಅನಂತಕೋಟಿ ಋಷಿಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ತೆತ್ತೀಸಕೋಟಿ ದೇವರ್ಕಳು ಇಂತಿವರೆಲ್ಲರು ಎತ್ತಲಾನುಕಾಲಕ್ಕೆ ಮರಣಕ್ಕೆ ಒಳಗಾದರು. ವೇದಾಗಮ ಶಾಸ್ತ್ರ ಪುರಾಣ ಶ್ರುತಿ ಪ್ರಮಾಣಗಳಿಂದ ಮತ್ತೆ ಹರ, ಗುರು, ಪುರಾತನರ ವಾಕ್ಯದಿಂದ ನಿಮ್ಮ ಉಭಯ ಕರ್ಣದಿಂ ಕೇಳುತ್ತಿದ್ದಿ. ಇಂತೀ ಎಲ್ಲವನು ಕಂಡು ಕೇಳಿ ಗಾಢನಿದ್ರೆಯ ಮನುಷ್ಯನ ಹಾಂಗೆ ನಿನ್ನ ನಿಜಸ್ವರೂಪವ ಮರದು ತ್ರಿವಿಧಮಲವ ಕಚ್ಚಿ ಶುನಿ ಶೂಕರನ ಹಾಗೆ ಕಚ್ಚಿ ಕಡಿದಾಡಿ ಸತ್ತು ಹೋಗುವ ವ್ಯರ್ಥಗೇಡಿ ಮೂಳ ಹೊಲೆಮಾದಿಗರ ಕಿವಿ ಹರಿದು, ಕಣ್ಣುಗುಡ್ಡಿಯ ಮೀಟಿ, ನೆತ್ತಿಯ ಮೇಲೆ ಮೂರು ಪಟ್ಟೆಯನೆ ಕೆತ್ತಿ ಅವನ ಮುಖದ ಮೇಲೆ ಹೆಂಡಗಾರನ ಮುಖದಿಂದ ಲೊಟ್ಟಲೊಟ್ಟನೆ ಉಗುಳಿಸಿ ಪಡುವಲದಿಕ್ಕಿಗೆ ಅಟ್ಟೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲವಿಲ್ಲದ ಭೂಮಿ ಭಾಗವ ಮಾಡಿ ಕಳ್ಳಿ ಮುಳ್ಳ ಹಚ್ಚದೆ ಶೀಗರೀ ಗಜಗ ಹಚ್ಚಿ, ಉಳ್ಳಿ ಮೂಲಂಗಿ ಬಳ್ಳೊಳ್ಳಿ ಸಬ್ಬಸಗಿ ನಾರಗಡ್ಡೆ ಮೊದಲಾದ ಕಿರುಕುಳ ಬಾಡವ ಬಿತ್ತದೆ, ತೆಂಗು ಹಲಸು ಮಾವು ಮೊದಲಾದ ಅಮೃತಫಲದ ವೃಕ್ಷವ ಬಿತ್ತಿ, ನೀರಿಲ್ಲದೆ ಫಲವಡ್ಡಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಿಲ್ಲದೆ ಬೆಳೆದ ಹುಲ್ಲು ಮೆಯ್ದ ಪಶುವಿನ ಹಾಲು ಸಣ್ಣವರಿಗಲ್ಲದೆ ದೊಡ್ಡವರಿಗೆ ಇಲ್ಲ. ಒಣಹುಲ್ಲು ಮೆಯ್ದ ಪಶುವಿನ ಹಾಲು ಬಡವರಿಗಲ್ಲದೆ ಬಲ್ಲಿದರಿಗಿಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲವಿಲ್ಲದ ಭೂಮಿಯ ಮಣ್ಣನ್ನು ತಂದು, ಲದ್ದಿ ಉಸುಕವ ಬೆರೆಸದೆ ಮಡಿಕೆಯ ಮಾಡಿ, ಸುಡದೆ ಮಾರಿ ಹಣವಕೊಂಡು ಯಾರಿಗೂ ಕೊಡದೆ ಉಂಡು ಸುಖದಿಂದ ಕಾಯಕವ ಮಾಡುತಿರ್ಪರು ನೋಡೆಂದ ಶ್ರೀಗುರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನವಖಂಡಮಂಡಲದೊಳಗೊಂದು ಅದ್ಭುತವಾದ ಪಟ್ಟಣವಿಪ್ಪುದು. ಆ ಪಟ್ಟಣಕ್ಕೆ ಮೂರಾರು ಕೊತ್ತಲ, ಎರಡೆಂಟು ಬುರುಜು, ಸಪ್ತ ಅಗಳತ, ಎಂಟೊಂದು ದರವಾಜ, ಉಭಯ ಕವಾಟ, ಷಡ್ವಿಧನಾಯಕರು, ಐವರು ತಳವಾರರು, ಮೂರುಮಂದಿ ಹುದ್ದೇದಾರರು, ನಾಲ್ಕುಮಂದಿ ಕರಣಿಕರು, ತಲೆಯಿಲ್ಲದ ಮಂತ್ರಿ, ಕಣ್ಣಿಲ್ಲದ ರಾಜನಾಗಿಹ, ಮೂರಾರು ಕೆಡಿಸಿ, ಎರಡೆಂಟು ಹಿಟ್ಟಗುಟ್ಟಿ, ಸಪ್ತ ಎಂಟೊಂದ ಮುಚ್ಚಿ, ಎರಡು ಕಿತ್ತು, ಆರು ಆಯಿದು ಹರಿಗಡಿದು, ಮೂರುನಾಲ್ಕು ಮುರಿಗಡಿದು, ಮಂತ್ರಿಗೆ ತಲೆ ರಾಜನಿಗೆ ಕಣ್ಣು ಬಂದಲ್ಲದೆ, ಆ ಪಟ್ಟಣ ಆರಿಗೂ ಸೌಖ್ಯವೇ? ಸೌಖ್ಯವಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಲ ಫಲ, ಉತ್ತತ್ತಿ, ಮಾವಿನ ಹಣ್ಣಿನಂತೆ ಇರುವರು ಮತ್ರ್ಯರು. ಹಲಸು, ತೆಂಗು, ದಾಳಿಂಬರದಂತೆ ಇರುವರು ಸ್ವರ್ಗದವರು. ಹಾಲು ಸಕ್ಕರೆ ಬೆಲ್ಲ ತುಪ್ಪದಂತೆ ಇರುವರು ನಿಮ್ಮವರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲವಿಲ್ಲದ ಭೂಮಿಯಲ್ಲಿ ಪುಟ್ಟಿದ ವೃಕ್ಷದ ಬೇರ ತಂದು ನೀರಿಲ್ಲದೆ ಅರದು ಗುಳಿಗೆಯ ಕಟ್ಟಿ, ಕಣ್ಣು ತಲೆಯಿಲ್ಲದವರಿಗೆ ಒಂದು ಗುಳಿಗಿ, ಕೈಕಾಲು ಇಲ್ಲದವಂಗೆ ಎರಡು ಗುಳಿಗಿ, ಸೂಲದವಂಗೆ ಮೂರು ಗುಳಿಗಿ, ಹಿರಿರೋಗದವರಿಗೆ ಆರು ಗುಳಿಗಿ, ಈ ವೈದ್ಯಕ್ಕೆ ನಿದ್ರೆಯ ತೊರದು ತಣ್ಣೀರು ತಂಗಳನ್ನವನುಣ್ಣದೆ ಬಿಸಿನೀರು ಬಿಸಿ ಅನ್ನವ ಸೇವಿಸಬೇಕು. ಈ ಪಥ್ಯವ ಪಾಲಿಸಿದವರಿಗೆ ಗುಳಿಗಿ ಸಾಧ್ಯವಾಗಿ ಸರ್ವಸಿದ್ಧಿಸುವುದು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾ ಪುಟ್ಟಿದುದ ಎಲ್ಲರೂ ಬಲ್ಲರು. ನೀ ಪುಟ್ಟಿದುದನಾರೂ ಅರಿಯರಲ್ಲಾ ! ನನ್ನ ಗುಣಚಾರಿತ್ರ ಎಲ್ಲರೂ ಬಲ್ಲರು ; ನಿನ್ನ ಗುಣಚಾರಿತ್ರವನಾರೂ ಅರಿಯರಲ್ಲಾ ! ಎನ್ನಾಟ ಸೂಳೆಯರ ಬ್ಯಾಟ ನಿನ್ನಾಟ ಹೊಲತಿಯರ ಕೂಟ. ಎನ್ನವರು ನಿನ್ನ ಸೇರರು, ನಿನ್ನವರು ಎನ್ನ ಸೇರರು. ಇಂತೀ ಉಭಯದ ಸಂದ ತಿಳಿದಾತನೇ ಐಕ್ಯ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿರವಯನೆಂಬ ಗಣೇಶ್ವರನ ಶಿಷ್ಯ ನಿರಾಮಯನೆಂಬ ಗಣೇಶ್ವರ. ನಿರಾಮಯನೆಂಬ ಗಣೇಶ್ವರನ ಶಿಷ್ಯ ನಿರಾಕುಳನೆಂಬ ಗಣೇಶ್ವರ. ನಿರಾಕುಳನೆಂಬ ಗಣೇಶ್ವರನ ಶಿಷ್ಯ ನಿರ್ಭೇದ್ಯನೆಂಬ ಗಣೇಶ್ವರ. ನಿರ್ಭೇದ್ಯನೆಂಬ ಗಣೇಶ್ವರನ ಶಿಷ್ಯ ನಿರ್ಮಳ ನಿಜೈಕ್ಯನೆಂಬ ಗಣೇಶ್ವರ. ನಿರ್ಮಳ ನಿಜೈಕ್ಯನೆಂಬ ಗಣೇಶ್ವರನ ಶಿಷ್ಯ ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರ. ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರನ ಶಿಷ್ಯ ನಿರಾಕಾರ ನಿರಾವರಣನೆಂಬ ಗಣೇಶ್ವರ. ನಿರಾಕಾರ ನಿರಾವರಣನೆಂಬ ಗಣೇಶ್ವರನ ಶಿಷ್ಯ ನಿರುಪಮನೆಂಬ ಗಣೇಶ್ವರ. ನಿರುಪಮನೆಂಬ ಗಣೇಶ್ವರನ ಶಿಷ್ಯ ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರ. ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರನ ಶಿಷ್ಯ ಸರ್ವಾಧಾರ ಸದಾಶಿವನೆಂಬ ಗಣೇಶ್ವರ. ಸರ್ವಾಧಾರ ಸದಾಶಿವನೆಂಬ ಗಣೇಶ್ವರರ ಸ್ವರೂಪರಾದಂಥ ಆದಿನಾಥೇಶ್ವರದೇವರು. ಆದಿನಾಥೇಶ್ವರದೇವರ ಶಿಷ್ಯರು ಸತ್ಯೇಶ್ವರದೇವರು. ಸತ್ಯೇಶ್ವರದೇವರ ಶಿಷ್ಯರು ಘಟಯಂತ್ರದೇವರು. ಘಟಯಂತ್ರದೇವರ ಶಿಷ್ಯರು ಭೃಕುಟೇಶ್ವರದೇವರು. ಭೃಕುಟೇಶ್ವರದೇವರ ಶಿಷ್ಯರು ವಿಶ್ವೇಶ್ವರದೇವರು. ವಿಶ್ವೇಶ್ವರದೇವರ ಶಿಷ್ಯರು ಮುಕ್ತೇಶ್ವರದೇವರು. ಮುಕ್ತೇಶ್ವರದೇವರ ಶಿಷ್ಯರು ಬ್ರಹ್ಮೇಶ್ವರದೇವರು. ಬ್ರಹ್ಮೇಶ್ವರದೇವರ ಶಿಷ್ಯರು ಶಿವದೇವಯ್ಯನವರು. ಶಿವದೇವಯ್ಯನವರ ಶಿಷ್ಯರು ಶಿವಜ್ಞಾನೇಶ್ವರದೇವರು. ಶಿವಜ್ಞಾನೇಶ್ವರದೇವರ ಶಿಷ್ಯರು ಓಂಕಾರದೇವರು. ಓಂಕಾರದೇವರ ಶಿಷ್ಯರು ಸೋಮಲಿಂಗದೇವರು. ಸೋಮಲಿಂಗದೇವರ ಶಿಷ್ಯರು ಸಂಗಮೇಶ್ವರದೇವರು. ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ. ಹಾಂಗೆಂದು ಅನಾದಿವಿಡಿದು ಬಂದ ಗುರುಶಿಷ್ಯಸಂಬಂಧ, ಹಾಂಗೆ ಅನಾದಿವಿಡಿದು ಬಂದ ಲಿಂಗ, ಅನಾದಿವಿಡಿದು ಬಂದ ಜಂಗಮ, ಅನಾದಿವಿಡಿದು ಬಂದ ಪಾದೋದಕ-ಪ್ರಸಾದ, ಅನಾದಿವಿಡಿದು ಬಂದ ವಿಭೂತಿ-ರುದ್ರಾಕ್ಷಿ-ಮಂತ್ರ, ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ. ಅನಾದಿವಿಡಿದು ಬಂದ ವೀರಶೈವಷಟ್‍ಸ್ಥಲದ ಆಚಾರವು. ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಿಲ್ಲದ ಮರದ ಬೇರ ತಂದು, ಏಳು ಗುಳಿಗೆಯ ಮಾಡಿ ಎನ್ನ ಕೈಯೊಳಗೆ ಕೊಟ್ಟನು ಗೊಲ್ಲನು. ಆ ಏಳು ಗುಳಿಗೆಯನು- ಒಂದು ಬ್ರಹ್ಮಂಗೆ ಕೊಟ್ಟೆ, ಒಂದು ವಿಷ್ಣುವಿಂಗೆ ಕೊಟ್ಟೆ, ಒಂದು ಈಶúರಂಗೆ ಕೊಟ್ಟೆ, ಒಂದು ಸದಾಶಿವಂಗೆ ಕೊಟ್ಟೆ, ಒಂದು ರುದ್ರಂಗೆ ಕೊಟ್ಟೆ, ಒಂದು ಪರಮೇಶ್ವರಂಗೆ ಕೊಟ್ಟೆ, ಒಂದು ನಾ ನುಂಗಿ ಸತ್ತು ಬದುಕಿ ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಿಲ್ಲದ ಭೂಮಿಯಲ್ಲೊಂದು ಬೇರಿಲ್ಲದ ವೃಕ್ಷಪುಟ್ಟಿ, ಆ ವೃಕ್ಷದಗ್ರದಲ್ಲಿ ನವರತ್ನಯುಕ್ತವಾದ ಶ್ವೇತವರ್ಣದ ಪಟ್ಟಣವಿಹುದು. ಆ ಪಟ್ಟಣಕ್ಕೆ ದಾಳಿಯನಿಕ್ಕಿ, ರಾಜನ ಸೆರೆಕೊಂಡೊಯ್ಯಬೇಕೆಂದು ಮೂರುಲೋಕದ ರಾಜರು ಹವಣಿಸಿ ಹಿಂದಕ್ಕೆ ಬಿದ್ದರು. ಅದರೊಳೊಬ್ಬ ರಾಜಂಗೆ ತಲೆಯಿಲ್ಲದೆ ಕಣ್ಣು ಬಂದು, ಕೈಕಾಲಿಲ್ಲದೆ ಪಟ್ಟಣಕ್ಕೆ ದಾಳಿಯನಿಕ್ಕಿ ರಾಜನ ಕೊಂಡೊಯ್ದ ಭೇದವ ಬಲ್ಲಾದಡೆ ಚಿಲ್ಲಿಂಗಸಂಬಂಧಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೆಲನಿಲ್ಲದ ಭೂಮಿಯಲ್ಲಿ ಪುಟ್ಟಿದ ವೃಕ್ಷದ ಬೇರು ತಂದು, ಆ ಬೇರಿನಿಂದ ಮೂರೆಸಳ ತೆಗೆದು, ಆರು ಕಾಲು ಹಚ್ಚಿ, ಒಂದು ಬುಟ್ಟಿಯ ಹೆಣೆದು, ಆ ಬುಟ್ಟಿಯನ್ನು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವರೆಂಬ ಪಂಚಮೂರ್ತಿಗಳು ಬಂದರೆ ಕೊಡೆನು. ಕೈಕಾಲು ಕಣ್ಣಿಲ್ಲದ ಅಧಮ ಮೋಟನು ಬಂದರೆ ಕೊಟ್ಟೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಿಲ್ಲದ ಸಮುದ್ರದಲ್ಲಿ ಅಗ್ನಿಯು ಪುಟ್ಟಿ, ಭೂಮಿಯ ತಳದಲ್ಲಿ ಪ್ರಜ್ವಲಿಸಿ, ಆಕಾಶವನಡರಿ, ನೀರ ಕುಡಿದು ಭೂಮಿಯ ನುಂಗಿ ಅಂಗಜನ ಅರಮನೆಯಲ್ಲಿ ಅಂಗಸಹಿತ ನಿರ್ವಯಲಾದ ಭೇದವ ತಿಳಿಯಬಲ್ಲರೆ ಲಿಂಗೈಕ್ಯನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಿಲ್ಲದ ಸಾಗರದಲ್ಲಿರ್ಪ ಮತ್ಸ್ಯಕ್ಕೆ ಮುಳ್ಳಿಲ್ಲದ ಗಾಳವ ಹಾಕಿ, ನೂಲಿಲ್ಲದ ದಾರವ ಹಚ್ಚಿ ಎಳೆದು ಕೊಲ್ಲುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀರಿಲ್ಲದ ಭೂಮಿಯ ಹರಳು ತಂದು ಊರ ಮಧ್ಯದ ನಡುವೆ ಬೆಂಕಿಯಿಲ್ಲದೆ ಸುಡಲು, ಊರ ಸುಟ್ಟು ಹರಳುಳಿದು ಉಳಿದ ಹರಳ ಕಂಗಳು ನುಂಗಿ ಹಿಂಗದೆ ಹಿಂಗಿಸುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನೀಲವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ. ಪಂಚವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ. ಶ್ವೇತವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ. ಮುತ್ತಿನವರ್ಣದ ಮಾಣಿಕಕ್ಕೆ ಐದುಹೊನ್ನು ಕೊಟ್ಟೆ. ರಕ್ತವರ್ಣದ ಮಾಣಿಕಕ್ಕೆ ನಾಲ್ಕುಹೊನ್ನು ಕೊಟ್ಟೆ. ಅಗ್ನಿವರ್ಣದ ಮಾಣಿಕಕ್ಕೆ ಒಂದುಹೊನ್ನು ಕೊಟ್ಟೆ. ಸೂರ್ಯಪ್ರಕಾಶದ ಮಾಣಿಕಕ್ಕೆ ಮತ್ರ್ಯಲೋಕವ ಕೊಟ್ಟೆ. ಚಂದ್ರಕಾಂತಿಯ ಮಾಣಿಕಕ್ಕೆ ಸ್ವರ್ಗಲೋಕವ ಕೊಟ್ಟೆ, ಅಗ್ನಿಕಾಂತಿಯ ಮಾಣಿಕಕ್ಕೆ ಪಾತಾಳಲೋಕವ ಕೊಟ್ಟೆ ಇಂತೀ ರತ್ನವ ಕೊಂಡು ಮಣಿಯ ಸುಟ್ಟು ಬೂದಿಯ ಧರಿಸಿ ಕಾಯಕವ ಮಾಡುತಿರ್ದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾನು ಪರಶಿವತತ್ವದಿಂ ಭಿನ್ನವಾಗಿ ಶಿವಕೃಪೆಯಿಂ ಮತ್ರ್ಯಲೋಕದಲ್ಲಿ ದೇಹಸಂಬಂಧಿಯಾಗಿ ಪುಟ್ಟದೇ ಮೋಹಯೆಂದು ಇರುತ್ತಿರಲು, ಎನ್ನ ಕುಲದವರೆಂದಡೆ ಜೀವಾತ್ಮರು. ಅಂತಪ್ಪ ಜೀವಾತ್ಮರು ಬಂದು ನೀನಾವ ಕುಲದವನೆಂದು ವಿಚಾರಿಸಲು ಎನ್ನ ನಿಜವ ಮರೆದು ನಾನು ಕರಿಕುಲದವನೆಂದಡೆ ನಗುವರಯ್ಯ ನಿಮ್ಮ ಶರಣರು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನವಖಂಡಪೃಥ್ವಿ ಎಂಬುದು ಪಂಚಶತಕೋಟಿ ಯೋಜನ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಕ್ಕೆ ಮಂಡಲಾಕಾರವಾದ ಭೂಮಂಡಲ ಒಂದೇ ಅಂತಪ್ಪ ಭೂಮಂಡಲದ ಮಧ್ಯದಲ್ಲಿ ಸಪ್ತಸಮುದ್ರ, ಸಪ್ತದ್ವೀಪಾಂತರ ಹಿಮಾಚಲ ಮಹಾಮೇರುವರ್ಪತ ಮೊದಲಾದ ಅಷ್ಟ ಪರ್ವತಂಗಳು. ಕಾಶಿ, ರಾಮೇಶ್ವರ ಮೊದಲಾದ ಮುನ್ನೂರಾ ಅರುವತ್ತು ಕ್ಷೇತ್ರಂಗಳು. ಕೃಷ್ಣಾ, ಭಾಗೀರಥಿ, ಯಮುನಾ, ಸರಸ್ವತಿ, ಗಂಗಾ ಮೊದಲಾದ ಅರುವತ್ತಾರುಕೋಟಿ ತೀರ್ಥಂಗಳು ಇಂತೀ ತೀರ್ಥಕ್ಷೇತ್ರಂಗಳ ತೆತ್ತೀಸಕೋಟಿ ದೇವರ್ಕಳು ಸ್ಥಾಪಿಸಿದರು. ಮತ್ತಂ, ಮಂದಮತಿಗಳಾದ ಜೀವಾತ್ಮರು ಕೂಡಿ, ಇದು ದೇವಭೂಮಿ, ಇದು ಹೊಲೆಭೂಮಿ, ಇದು ಮಠಮಾನ್ಯದ ಭೂಮಿ, ಇದು ಗ್ರಾಮ ಗೃಹದ ಭೂಮಿ, ಇದು ಲಿಂಗಸ್ಥಾಪನೆಯಾದ ರುದ್ರಭೂಮಿ, ಇದು ಶ್ಮಶಾನ ಭೂಮಿ ಎಂದು ಹೆಸರಿಟ್ಟು ಸ್ಥಾಪನೆಯ ಮಾಡುವಿರಿ. ಎಲಾ ದಡ್ಡ ಪ್ರಾಣಿಗಳಿರಾ, ಇದಕೊಂದು ದೃಷ್ಟವ ಪೇಳ್ವೆ ಕೇಳಿರಯ್ಯಾ. ಅದೆಂತೆಂದೊಡೆ : ಒಂದು ನದಿಯಲ್ಲಿ ಕೋಲು ಹಾಕಿ, ಗೆರೆಯ ಬರೆದು ಎರಡು ಮಾಡಿ, ಇದು ಸೀ ಉದಕ, ಇದು ಲವಣೋದಕವೆಂದಡೆ ಆಗಬಲ್ಲುದೇನಯ್ಯಾ ? ಆಗಲರಿಯದು. ಮತ್ತಂ, ಒಂದೇ ಬೇವಿನಮರದೊಳಗೆ ಒಂದು ಶಾಖೆಗೆ ಮಾವಿನಹಣ್ಣು, ಒಂದು ಶಾಖೆಗೆ ಬೇವಿನಹಣ್ಣು, ಒಂದು ಶಾಖೆಗೆ ಬಾಳೆಯಹಣ್ಣು, ಒಂದು ಶಾಖೆಗೆ ಹಸಲು, ನೀರಲಹಣ್ಣು, ಆಗೆಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು ಎಂಬ ಹಾಗೆ. ಇಂತೀ ದೃಷ್ಟದಂತೆ ಒಂದು ನವಖಂಡಮಂಡಲಭೂಮಿಯೊಳಗೆ, ಇದು ಮಂಗಲಭೂಮಿ, ಇದು ಅಮಂಗಳಭೂಮಿ, ಇದು ಶುದ್ಧಭೂಮಿ, ಇದು ಅಶುದ್ಧಭೂಮಿ, ಎಂದಡೆ ಆಗಬಲ್ಲವೇನಯ್ಯಾ ? ಆಗಲರಿಯವು. ಅದೇನು ಕಾರಣವೆಂದಡೆ : ಆದಿ ಅನಾದಿಯಿಂದತ್ತತ್ತಲಾದ ಪರಶಿವನ ಮಹಾ ಪ್ರಸಾದದಿಂದುದ್ಭವಿಸಿದ ಬ್ರಹ್ಮಾಂಡವು, ಒಮ್ಮೆ ಶುದ್ಧ ಒಮ್ಮೆ ಅಶುದ್ಧವಾಗಬಲ್ಲುದೆ ಎಲೆ ಮರುಳ ಮನುಜರಿರಾ. ನಿಮ್ಮ ಮನದ ಸಂಕಲ್ಪ ವಿಕಲ್ಪದಿಂ ಶುದ್ಧ ಅಶುದ್ಧವಾಗಿ ತೋರುವುದಲ್ಲದೆ. ನಿಮ್ಮ ಮನದ ಸಂಕಲ್ಪವನಳಿದಡೆ ಸಕಲಬ್ರಹ್ಮಾಂಡಗಳೆಲ್ಲ ನಿರ್ಮಳವಾಗಿ ತೋರುವವು. ನಿಮ್ಮ ಮನದ ಸಂಕಲ್ಪವನಳಿಯದಿರ್ದಡೆ ಸಕಲಬ್ರಹ್ಮಾಂಡಗಳೆಲ್ಲ ಅಮಂಗಳವಾಗಿ ತೋರುವವು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ