ಮಾತಿನ ಹಂಗಿಲ್ಲದವಳಾದೆ ನಾನು.
ಅಜಾತನ ಒಲುಮೆಯಿಲ್ಲದವಳಾದೆ ನಾನು.
ಪ್ರಣವದ ಹಂಗಿಲ್ಲದವಳಾದೆ ನಾನು.
ಪ್ರಸಾದದ ಕುರುಹಿಲ್ಲದವಳಾದೆ ನಾನು.
ಪ್ರಯಾಣದ ಗತಿಯನಳಿದು
ಪರಂಜ್ಯೋತಿ ವಸ್ತುವ ಕಂಡು ನಾನು ಬದುಕಿದೆನಯ್ಯ ಸಂಗಯ್ಯ.
ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ,
ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು.
ಕಾಮಿತ ನಿಃಕಾಮಿತವ ಕಂಡು
ಬಸವನನರಿಯದೆ ಕೆಟ್ಟ ಪಾಪಿಯಾನು.
ಶಬ್ದದ ಹಂಗಿಗಳಲ್ಲಯ್ಯ ನಾನು ಸಂಗಯ್ಯನಲ್ಲಿ
ಸ್ವಯಲಿಂಗಸಂಬಂಧವೆನಗೆಂತಯ್ಯ ?
ಮನವಿಲ್ಲದ ಮಾತನಾಡಹೋದರೆ
ಆ ಮಾತು ಸೊಗಸದೆಮ್ಮಯ್ಯಂಗೆ,
ಮನ ಘನವಾಯಿತ್ತೆಂದರೆ
ಆ ಮಾತು ಸೊಗಸದೆಮ್ಮಯ್ಯಂಗೆ,
ಹೆಸರಿಲ್ಲ ರೂಪೆಂದರೆ
ಆ ಮಾತು ಸೊಗಸದೆಮ್ಮಯ್ಯಂಗೆ,
ಸಂಗಯ್ಯ ಬಸವನೆಂದರೆ[ರೆ]
[ಆ ಮಾತು] ಸೊಗಸದೆಮ್ಮಯ್ಯಂಗೆ.
ಮನವಿಲ್ಲದೆ ತನುವ ಕುಡಹೋದರೆ
ಆ ತನು ಮನದಲ್ಲಿ ನಿಂದಿತ್ತು,
ಮನತನುವಿನ ಸಂಗವಡಗಲು
ಉಭಯ ಸಮಾಧಿ ಸಾಧ್ಯವಾಯಿತ್ತಯ್ಯ.
ಹಿರಿಯತನದ ರೂಪ ಕಾಣಲು
ಪರಿಪರಿಯ ಭ್ರಮೆಯಡಗಿತ್ತಯ್ಯ.
ಇಷ್ಟ ಪ್ರಾಣದ ಭಾವದ ಸೂತಕ ಹಿಂಗಲು ಆನು ಸಂಗಯ್ಯನಲ್ಲಿ
ಬಸವನನುಭವಿಯಾದೆನಯ್ಯ.