ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನೋಡುವಡೆ ಎನ್ನ ಕಣ್ಣಿಂಗೆ ಗೋಚರವಲ್ಲ ಆ ಕಾಯ ಕಲ್ಯಾಣ. ಆ ಕಾಯ ಕಲ್ಯಾಣದೊಳಗೆ ಸರೋವರದಷ್ಟದಳಂಗಳ ಮಧ್ಯದಲ್ಲಿ ಹೆಟ್ಟಿಗೆಯಿರಲು ಆ ಹೆಟ್ಟಿಗೆಯ ಕುರುಹ ಕಂಡು ನಿಷ್ಠೆಯ ಇರವನರಿದೆನಯ್ಯ ಸಂಗಯ್ಯ.
--------------
ನೀಲಮ್ಮ
ನೀರುಂಡ ಸಾರ ನಿಸ್ಸಾರವಾಯಿತ್ತಯ್ಯ. ನಿರಾಳದಪದ ನಿಃಪ್ರಪಂಚಿನಲ್ಲಿ ಅಡಗಿತ್ತಯ್ಯ. ಅಂಗದ ಸಂಗವ ಹರಿದು ನಿರಂಗಿಯಾದೆ ನಾನು. ಉಲುಹಡಗಿದೆ ನಾನು ಸಂಗಯ್ಯನಲ್ಲಿ ಪ್ರಸನ್ನ ಮೂರುತಿಯುಳ್ಳವಳಾದೆನಯ್ಯ.
--------------
ನೀಲಮ್ಮ
ನಿರೂಪ ರೂಪಿನಲ್ಲಿ ಅಡಗಿ, ನಿರಾಲಂಬವಾಯಿತ್ತು ಬಸವನಲ್ಲಿ. ನಿರಾಲಂಬಮೂರ್ತಿಯಲ್ಲಿ ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ. ಅನುಭವಿಸಿ ಬಸವ ಕುಳವಳಿದು ಭ್ರಮೆಯಳಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ನಾಡನಾಳಹೋದರೆ, ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು. ಹಗೆಯಳಿದು ನಿಸ್ಸಂಗವಾಯಿತ್ತು. ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.
--------------
ನೀಲಮ್ಮ
ನವಕಲ್ಪಿತದ ರೂಪನರಿದು, ನವಯೌವನದ ಸ್ವರೂಪವ ಕಂಡು, ನವಪ್ರಣವವಾಯಿತ್ತಯ್ಯಾ. ನವಮಾಸವಳಿದು ನವಯೌವನ ಉದಯವಾಯಿತ್ತಯ್ಯಾ, ಸಂಗಯ್ಯಾ, ಬಸವಯ್ಯ ನಿಮ್ಮ ತದ್ರೂಪವಾದಬಳಿಕ. || 176 ||
--------------
ನೀಲಮ್ಮ
ನಿರ್ಮೂಲವಾಯಿತ್ತಾಹಾ ನಿರಾಲಂಬವಾಯಿತ್ತಾಹಾ ! ನಿರಾಕುಳವಾಯಿತ್ತಾಹಾ ! ಪುಣ್ಯದಫಲ ತೋರಿ ಬಯಲನೆ ಕೂಡಿತ್ತು. ಆ ಬಯಲು ನಿರ್ವಯಲಾಯಿತ್ತು. ಆ ನಿರ್ವಲಯನುಡುಗಿ ನಿಜಸುಖಿಯಾದೆನಯ್ಯಾ ನಾನು. ಸಂಗಯ್ಯನಲ್ಲಿ ನಿಶ್ಶೂನ್ಯವಾಯಿತ್ತಯ್ಯಾ.
--------------
ನೀಲಮ್ಮ
ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ? ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ? ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ? ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?
--------------
ನೀಲಮ್ಮ
ನನಗೊಂದು ತಾಣವಾಗಿಯದೆ ನಾನತ್ತಲಡಗಲೇಬೇಕು. ನಾನು ನಿರಾಳ ಸಂಬಂಧಿಯಾಗಿರಲು ಪ್ರತಿಯಿಲ್ಲದ ರೂಪನರುಹು ಕುರುಹ ಮಾಡಲು ಒಡಲಿಲ್ಲದ ಹುಯ್ಯಲ ಕಂಡೆ ನಾನು. ಸಂಗಯ್ಯನಲ್ಲಿ ಇರಪರವಳಿದು ಪ್ರಸಾದಿಯಾದೆನು.
--------------
ನೀಲಮ್ಮ
ನಿಷ್ಠೆಯೆಂಬುದನೊಂದ ತೋರಿ ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ. ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ. ಅನುಭವಸುಖವಳಿದು ಅಪ್ರತಿಮ ಇರವ ಕಂಡು ಬದುಕಿದೆನಯ್ಯ, ಸಂಗಯ್ಯ ಬಸವನಡಗಿದ ಕಾರಣ ಕಾಯವ ನಾನಳಿದೆನು.
--------------
ನೀಲಮ್ಮ
ನನ್ನನಾರೂವರಿಯರು, ನಾನು ಸ್ವರ್ಗಿಯಲ್ಲ ಅಪವರ್ಗಿಯಲ್ಲ; ನನ್ನನಾರೂವರಿಯರು, ನಾನು ಮುಕ್ತಳಲ್ಲ ಅಮುಕ್ತಳಲ್ಲ. ನನ್ನನಾರೂ ಅರಿಯರು, ಸಂಗಯ್ಯನಲ್ಲಿ ರೂಪಿಲ್ಲದ ಹೆಣ್ಣಾದ ಕಾರಣ ನನ್ನನಾರೂ ಅರಿಯರು.
--------------
ನೀಲಮ್ಮ
ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ? ನಾನಾರ ರೂಪ ನಿಜವಿಡಲಯ್ಯಾ ಬಸವಾ ? ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ? ನಾನಾರ ಮನವನಂಗೈಸಲಯ್ಯಾ ಬಸವಾ ? ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ. ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ
--------------
ನೀಲಮ್ಮ
ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ, ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು. ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು.
--------------
ನೀಲಮ್ಮ
ನಾನಾವ ಗಮನವ ಕಂಡೆನಯ್ಯ ? ನಾನಾವ ಬ್ರಹ್ಮವನರಿದೆನಯ್ಯ ? ನಾನಾವ ತೃಪ್ತಿಯನರಿದೆನಯ್ಯ ? ಇಷ್ಟದಂಗಸುಖವ ಕಂಡು ಸುಖಿಯಾದೆನಯ್ಯ. ಮನವಿಲ್ಲ ತನುವಿಲ್ಲ ಆಧಾರಾದಿ ಸುಖವಿಲ್ಲ ಶುದ್ಧ ನಿಃಕಲ ತತ್ವವಿಲ್ಲವಯ್ಯ. ಸಂಗಯ್ಯ, ಆತ್ಮಸುಖ ಸಂಭಾಷಣೆಯಂತಯ್ಯ ಸಂಗಯ್ಯನ ಗುರುಬಸವ.
--------------
ನೀಲಮ್ಮ
ನಮಗಾರ ಸಂಗವಿಲ್ಲ, ನಮಗಾರ ಸಂಗವಿಲ್ಲ; ನಮಗಾರ ಪರವಶವಿಲ್ಲ, ನಮಗಾರ ಇಹಪರವಿಲ್ಲ; ನಮಗಾರ ಪರವಿಲ್ಲ, ನಮಗೆ ಹೃದಯದ ಹಂಗಿಲ್ಲವಯ್ಯಾ. ನಮಗೆ ನಿಮ್ಮ ಹಂಗಿಲ್ಲ, ಸಂಗಯ್ಯನಲ್ಲಿ ಬಸವಸ್ವಯಲಿಂಗಿಯಾದಬಳಿಕ.
--------------
ನೀಲಮ್ಮ
ನಡೆನೋಟವಿಲ್ಲವೆ ತೃಪ್ತಿಯ ಕೂಡಲು ? ಆ ನಡೆನೋಟ ತೃಪ್ತಿಯಲ್ಲಿ ಸುಯಿದಾನವಾಯಿತ್ತು. ಆ ಸುಯಿದಾನ ಸುಖದಲ್ಲಿ ನೆಲೆಗೊಳ್ಳಲು ನಡವ ಗಮನ ಉಡುಗಿತ್ತು. ಸಂಗ ನಿಸ್ಸಂಗವಾಯಿತ್ತು ಸಂಗಯ್ಯ.
--------------
ನೀಲಮ್ಮ
ನಮ್ಮ ಹಂಗಿಗನಲ್ಲ ಬಸವಯ್ಯನು. ನಮ್ಮ ಸಂಗಿಗನಲ್ಲ ಬಸವಯ್ಯನು. ನಮ್ಮ ಇಹದವನಲ್ಲ ಬಸವಯ್ಯನು. ನಮ್ಮ ಪರದವನಲ್ಲ ಬಸವಯ್ಯನು. ಪ್ರಸಾದವೇದ್ಯಶರಣ ಬಸವಯ್ಯನು. ಪ್ರಸನ್ನಕಾಯವಾದನಯ್ಯ ಸಂಗಯ್ಯಾ.
--------------
ನೀಲಮ್ಮ
ನಡವ ಕಾಲಿಂಗೆ ಶಕ್ತಿ ನಿಃಶಕ್ತಿಯಾಯಿತ್ತು. ನುಡಿವ ನಾಲಗೆಗೆ ವಚನ ನಿರ್ವಚನವಾಯಿತ್ತು. ಶಬ್ದ ನಿಃಶಬ್ದವಾಗಿ ಪ್ರಾಣ ಪರಿಣಾಮವಾಗಿ ಕಾಯದ ಕುರುಹನಳಿದು ಶಬ್ದನಂದಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ನಾನು ನಿಮ್ಮವಳಲ್ಲವಯ್ಯಾ, ನಾನು ಅನಿಮಿಷನವರವಳು. ನಾನು ನಿಮ್ಮವಳಲ್ಲವಯ್ಯಾ, ನಾನು ಅಜಗಣ್ಣನವರವಳು. ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಭುವಿನಸಂತತಿಯವಳು. ನಾನು ನಿಮ್ಮವಳಲ್ಲವಯ್ಯಾ, ನಾನು ಮಾದಾರಚೆನ್ನಯ್ಯನ ಮೊಮ್ಮಗಳು. ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಸಾದಿಗಳ ಮನೆಯ ಕೀಳುದೊತ್ತು. ನಾನು ನಿಮ್ಮವಳಲ್ಲವಯ್ಯಾ, ಸಂಗಯ್ಯ, ನಾನು ಬಸವಯ್ಯನ ಮನೆಯ ತೊತ್ತಿನಮಗಳು.
--------------
ನೀಲಮ್ಮ
ನಿರೋಧವಳಿದು ನಿರಾಕಾರವಾಯಿತ್ತು ಬಸವಾ, ನಿರಾಕುಳದ ಭಕ್ತಿ ನಿರ್ವಯಲಾಯಿತ್ತು ಬಸವಾ. ನಿಃಪ್ರಪಂಚಿಕನಾದೆ ಬಸವಾ, ನಿಃಪರಿಣಾಮಿಯಾದೆ ಬಸವಾ, ರೂಪು ನಿರೂಪುವಿಡಿದ ಬಸವಾ. ಸಂಗಯ್ಯನ ಮನಃಪ್ರೀತಿಯ ಬಸವಾ ಭರಿತ ನಿರ್ಭರಿತವಾಯಿತು.
--------------
ನೀಲಮ್ಮ
ನೆಲೆಯಿಲ್ಲದ ಜಲವ ಹೊಕ್ಕಡೆ ಆ ಜಲದ ನೆಲೆಯೆ ಕಾಣಬಂದಿತ್ತು ಎನಗೆ. ಪಕ್ಷಿಯ ರೆಕ್ಕೆಯ ಕಂಡು ಅಕ್ಕಜಂ ಭೋ ಎನಲೊಡನೆ, ಆ ನೀರೊಳಗೆ ಉದಾರತೆಯಾದೆನಯ್ಯಾ ನಾನು. ಸಂಗಯ್ಯನಲ್ಲಿ ಬಸವಯ್ಯ ಕುರುಹಳಿದಮೂರ್ತಿಯಾದನು.
--------------
ನೀಲಮ್ಮ
ನಡೆಯಲಿಲ್ಲ ನುಡಿಯಲಿಲ್ಲ ಕಾಣಲಿಲ್ಲ ಕೇಳಲಿಲ್ಲ ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮವಿಲ್ಲ ಏನೂ ಇಲ್ಲ ಏನೆಂದೆನಲಿಲ್ಲ ಸಂಗಯ್ಯ.
--------------
ನೀಲಮ್ಮ
ನಾವು ನಮ್ಮ ವಶವಲ್ಲದವರ ಸಂಗವ ಮಾಡಲಿಲ್ಲ ನಾವು ನಮ್ಮ ಪ್ರತಿಯಿಲ್ಲದ ಮೂರ್ತಿಯ ಕಂಡು ಕಲಿಯುಗಸಂಪನ್ನೆಯಾದೆನಯ್ಯ. ಸರ್ವಸಮಯಾಚಾರವ ಕಂಡು ಸರ್ವಶೀಲವ ತಿಳಿದೆನಯ್ಯ ಸಂಗಯ್ಯ.
--------------
ನೀಲಮ್ಮ
ನೆನೆಯಲಾಗದು ಎನ್ನ ಹೆಣ್ಣೆಂದು ನೀವು ಭಕ್ತರು. ನೆನೆಯಲಾಗದು ಎನ್ನ ಭಕ್ತೆಯೆಂದು ನೀವು ಶರಣರು. ನೆನೆಯಲಾಗದು ಎನ್ನ ಮುಕ್ತೆಯೆಂದು ನೀವು ಶರಣರು. ನೆನೆಯಲಾಗದು ಎನ್ನ ರೂಪು ನಿರೂಪಿಯಾದವಳೆಂದು ನೀವು ನೆನದಹನೆಂಬ ನೆನಹು ನೀವೆ ನೀವೆಯಾದ ಕಾರಣ ಸಂಗಯ್ಯನಲ್ಲಿ ಪುಣ್ಯವಿಲ್ಲದ ಹೆಣ್ಣ ನೀವೇತಕ್ಕೆ ನೆನೆವಿರಿ ?
--------------
ನೀಲಮ್ಮ
ನೆನಹು ನಷ್ಟವಾಯಿತ್ತು ಬಸವಾ, ಲೀಯವಾಗಲು. ಇತರೇತರ ಮಾರ್ಗವನರಿಯದೆ ಇದ್ದೆನಯ್ಯಾ ಬಸವಾ, ಸಂಗಯ್ಯನಲ್ಲಿ ಲೀಯವನೆಯ್ದಲು.
--------------
ನೀಲಮ್ಮ