ಅಥವಾ

ಒಟ್ಟು 54 ಕಡೆಗಳಲ್ಲಿ , 29 ವಚನಕಾರರು , 53 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಅಖಂಡಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹ ಮಹಾಘನಲಿಂಗದಲ್ಲಿ ವಿಶ್ವತೋ ಮುಖ, ವಿಶ್ವತೋ ಚಕ್ಷು, ವಿಶ್ವತೋ ಹಸ್ತ, ವಿಶ್ವತೋ ಪಾದ, ವಿಶ್ವತೋ ಬಾಹುವನುಳ್ಳ ಅನಾದಿ ಸದಾಶಿವತತ್ವ ಉತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಅನಾದಿ ಶಿವತತ್ವದಿಂದ ಅನೇಕ ಮುಖ, ಅನೇಕ ಚಕ್ಷು, ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಈಶ್ವರತತ್ವದಲ್ಲಿ ಸಹಸ್ರ ಶಿರ, ಸಹಸ್ರ ಅಕ್ಷ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಮಹೇಶ್ವರತತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ ಆದಿ ಸದಾಶಿವ ಉತ್ಪತ್ಯವಾಯಿತ್ತು. ಆ ಆದಿ ಸದಾಶಿವತತ್ವದಲ್ಲಿ ಷಷ್ಠ ವಕ್ತ್ರ, ದ್ವಾದಶಭುಜ, ತ್ರಿಪಾದವನುಳ್ಳ ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಆದಿ ಈಶ್ವರತತ್ವದಲ್ಲಿ ಪಂಚವಿಂಶತಿ ಮುಖ, ಪಂಚದಶಭುಜವನುಳ್ಳ ಸದಾಶಿವತತ್ವ ಉತ್ಪತ್ಯವಾಯಿತ್ತು. ಇದಕ್ಕೆ ಅತಿ ಮಹಾಗಮೇ : ``ಅಖಂಡಲಿಂಗ ಸಂಭೂತಾ ಅನಾದಿ ಸಾದಾಖ್ಯಸ್ತಥಾ | ಅನಾದಿ ವಿಶ್ವತೋಮುಖತತ್ವೇ ಚ ಅನಾದಿ ಈಶ್ವರೋದ್ಭವಃ || ಅನಾದಿ ಈಶ್ವರತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ | ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ || ಆದಿ ಸಾದಾಖ್ಯತತ್ವೇ ಚ ಆದಿ ಈಶ್ವರೋದ್ಭವಂ | ಆದಿ ಈಶ್ವರತತ್ವೇ ಚ ಆದಿ ಮಾಹೇಶ್ವರೋ ಭವೇತ್ || ಆದಿ ಮಾಹೇಶ್ವರ ಶಂಭುತೊ ಶಿವಸದಾಶಿವಾಯುವೋ | ಇತಿ ತತ್ವೋದ್ಭವಜ್ಞಾನಂ ದುರ್ಲಭಂ ಕಮಲಾನನೇ|| '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ. ವಿಷ್ಣುವಿಂಗೆ ಲಕ್ಷಿ ್ಮಯಾಗಿ ಭವಕ್ಕೆ ತಿರುಗಿದಳು ಮಾಯೆ. ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳುಮಾಯೆ. ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಗೆ ಗಂಧವಾಗಿ, ಅವರವರಂಗದಲ್ಲಿ ಹಿಂಗದ ಪ್ರತಿರೂಪಾಗಿ ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು, ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು- ತಮ್ಮ ದೈವವ ಬಿಡುವುದಾವುದುಚಿತ ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು ಶಿವಭಕ್ತಿಯಿಂದ. ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ ! ಮುಟ್ಟರೊಂದುವನು ಮೂವಿಧಿಬಟ್ಟರೊ ! ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ. ಹುಸಿದಜನ ಶಿರ ಹೋಯಿತ್ತಾದಿಯಲ್ಲಿ, ಎಸವೋದ ಕಿರುಪಶುವನುಸರಲೀಯದೆ ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ. ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ, ಕೇಳಿಯೂ ಏಕೆ ಮಾಣಿರೊ ಮಮಕರ್ತ ಕೂಡಲಸಂಗನ ಶರಣರು ಅಕ್ಷಯರದ್ಥಿಕರು, ವಿಪ್ರರು ಕೀಳು ಜಗವೆಲ್ಲರಿಯಲು !
--------------
ಬಸವಣ್ಣ
ಶಿರ ಭಾಳ ಕರ್ಣಂಗಳ ಗುಣವಿಲ್ಲ. ಶಿರ ಸುವರ್ಣದ ಕಳಸ, ಭಾಳ ಭಾಳಾಕ್ಷನರಮನೆ, ಕರ್ಣ ಕರುಣಾಳುವಿನ ಲೇಖನ. ಕಾಯವಳಿದ ಬಳಿಕ ಭ್ರಮೆಯಿಲ್ಲ. ಪರಶಿವನಲ್ಲಿ ಸೂತ್ರಧಾರಿಯಾದೆನಯ್ಯ ನಾನು ಎಲ್ಲವನರಿದು ಭಕ್ತಿಪದಾರ್ಥವನುಂಡು ಬದುಕಿದೆನಯ್ಯ ಸಂಗಯ್ಯ, ಬಸವ ಬಯಲಾಗಲು.
--------------
ನೀಲಮ್ಮ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ವಿಷ್ಣು ಬಲ್ಲಿದನೆಂಬೆನೆ ದಶಾವತಾರದಲ್ಲಿ ಭಂಗಬಟ್ಟುದಕ್ಕೆ ಕಡೆಯಿಲ್ಲ. ಬ್ರಹ್ಮ ಬಲ್ಲಿದನೆಂಬೆನೆ ಶಿರ ಹೋಗಿ ನಾನಾ ವಿಧಿಯಾದ. ವೇದ ಬಲ್ಲಿತ್ತೆಂಬೆನೆ ನಾನಾಮುಖದಲ್ಲಿ ಸ್ತುತಿಯಿಸಿತ್ತಲ್ಲದೆ ಲಿಂಗದ ನಿಲುಕಡೆಯ ಕಾಣದು. ಶಾಸ್ತ್ರ ಬಲ್ಲಿತ್ತೆಂಬೆನೆ ಶಬ್ದಕ್ರೀ. ಪುರಾಣ ಬಲ್ಲಿತ್ತೆಂಬೆನೆ ಪೂರ್ವಕ್ರೀ. ಆಗಮ ಬಲ್ಲಿತ್ತೆಂಬೆನೆ ವಾಯ ಹೊಂದಿತ್ತು. ಇದು ಕಾರಣ ಕೂಡಲಸಂಗಯ್ಯನೆ ನಿತ್ಯ, ಉಳಿದ ದೈವವೆಲ್ಲ ಅನಿತ್ಯ ಕಾಣೆ ಭೋ.
--------------
ಬಸವಣ್ಣ
ಕಂಡಮಂಡಲ ರಣಭೂಮಿಯಲ್ಲಿ ಅಖಂಡಿತಮಯರು ಕಡಿದಾಡಿ, ಹಿಡಿಖಂಡದ ಕರುಳ ಖಂಡಿಸಿ, ಶಿರ ತಂಡತಂಡದಲ್ಲಿ ದಿಂಡುರುಳಿತ್ತು. ಅಖಂಡಿತನ ಮನ ಖಂಡೆಹದ ಬೆಂಬಳಿಯ ಗಾಯದಲ್ಲಿ ಸುಖಿತನು. ರಣಭೂಮಿಯಲ್ಲಿ ಅಖಂಡಿತ ಗೆದ್ದ. ಸಗರದ ಬೊಮ್ಮನೊಡೆಯ ತನುಮನ ಕೂಡಿ ಸಂಗದ ಸಂಗಸುಖಿಯಾದ.
--------------
ಸಗರದ ಬೊಮ್ಮಣ್ಣ
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ ? ಶಿವಂಗೆ ತಪ್ಪಿದ ಕಾಮನುರಿದುದನರಿಯಾ ? ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ ? ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದಡೆ, ಭವಘೋರನರಕವೆಂದರಿಯಾ, ಮರುಳೆ ?
--------------
ಅಕ್ಕಮಹಾದೇವಿ
ಅರಸಿಯ ಪುತ್ರನು ಶಿರವಿಲ್ಲದೆ ಐದರಲ್ಲಿರಲು, ಕೋತಿಯ ತಲೆಯಲ್ಲಿ ಇರುವೆ ಪುಟ್ಟಲು, ಇಬ್ಬರು ಸತ್ತು ಶಿರ ಚಿಗಿದು, ಅರಸಿಯ ನೆರದು ಅರಸಿನಲ್ಲಿ ಅಡಗಿತ್ತು. ಅದು ಅಡಗಿದ ಸ್ಥಾನದಲ್ಲಿ ಅಡಗಿದವರು ಲಿಂಗೈಕ್ಯರು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರು ಬಡವನೆಂದು ಶಿರ ಮಣಿಯದು. ತಲೆವಾಗದ ನೆರೆ ಪರವಾದಿ ಪಾತಕರ ಮನೆಯ ಅನ್ನ ಸುರೆಯ ಮಾಂಸದ ಸಮಾನವೆಂದು ಜರೆವರು ಗುರುಹಿರಿಯರು. ಪರಶಿವ ನಿಮಗೊಲಿಯ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ವಿಷ್ಣುಮಯ ಜಗವೆಂದಡೆ ಮಹಾಪ್ರಳಯದಲ್ಲಿ ವಟಪತ್ರಶಯನನಾದ. ಸೃಷ್ಟಿಗೆ ಅಜನೆಂದಡೆ ಹುಟ್ಟಿದುದಿಲ್ಲ ಶಿರ. ಲಯಕ್ಕೆ ರುದ್ರನಾದಡೆ ಕರದ ಕಪಾಲ ಬಿಟ್ಟುದಿಲ್ಲ, ಇಂತೀ ಮೂರು ಭೇದವನರಿತು ಮೀರಿದ ತತ್ವ, ಸದಾಶಿವಮೂರ್ತಿಲಿಂಗವೊಂದೆ ಭಾವ.
--------------
ಅರಿವಿನ ಮಾರಿತಂದೆ
ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಲಶವಯ್ಯಾ. ಕೂಡಲಸಂಗಮದೇವಾ, ಕೇಳಯ್ಯಾ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
--------------
ಬಸವಣ್ಣ
ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ. ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ. ಏಕಾಂತ ಸ್ಥಾನವಾಗಿ, ಅಂತರಂಗದ ಭಾವ ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ. ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ, ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು, ಮಹಾದುಃಖಕ್ಕೊಳಗಾದರು, ನರರು. ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ. ಅಜ 21 ಭವವೆತ್ತಿ ಶಿರ ಕಳಕೊಂಡ. ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ. ದಿವಸೇಂದ್ರ ಕಿರಣ ನಷ್ಟವಾದ. ಮುನೀಂದ್ರರ್ನಷ್ಟವಾಗಿ ಮಡಿದರು. ಮನು ಮಾಂಧಾತರು ಮಂದಮತಿಗಳಾದರು. ದೇವ ದಾನವ ಮಾನವರು ಮಡಿದರು. ಇದ ನೋಡಿ ನಮ್ಮ ಶರಣರು, ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು, ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಶಿವಶರಣನ ಶಿರ ಮೊದಲು ಪಾದ ಕಡೆಯಾದವೆಲ್ಲವು ಅಮೃತಮಯವಾಗಿಹವು ನೋಡಾ. ನರಚರ್ಮಾಂಬರವ ಹೊದ್ದಿಹ ಶರಣನ ಒಳಗು ಹೊರಗೆಂಬವೆಲ್ಲ ಮೋಕ್ಷರೂಪವಾಗಿಹವು ನೋಡಾ. ಆ ಶರಣನ ಮತ್ರ್ಯರೂಪನೆಂದು ತಿಳಿಯಬಾರದು. ಆತ ಚಿದ್ರೂಪಾಕಾರ ಪರಮಾತ್ಮನು ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂದೇ ತಿಳಿವುದು.
--------------
ಸ್ವತಂತ್ರ ಸಿದ್ಧಲಿಂಗ
ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ ? ಅಲ್ಲ. ಬ್ರಹ್ಮ ಬಲ್ಲಿದನೆಂದಡೆ, ಶಿರ ಹೋಗಲದೇನು ? ಹರಿ ಬಲ್ಲಿದನೆಂದಡೆ, ಹಲವು ಭವಕ್ಕೆ ಬರಲದೇನು ? ಅಂಧಕಾಸುವ ಬಲ್ಲಿದನೆಂದಡೆ ಹರನ ಅಂಗಾಲ ಕೆಳಗೆ ಇರಲೇನು ? ದಕ್ಷ ಬಲ್ಲಿದನೆಂದಡೆ, ಹೋಮಕ್ಕೆ ಗುರಿಯಾಗಲದೇನು ? ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ ಆತನ ತಲೆಯನರಿಯಲದೇನು ? ಪರಶುರಾಮ ಬಲ್ಲಿದನೆಂದಡೆ ತನ್ನ ಬಿಲ್ಲ ಬಿಟ್ಟು ಹೋಗಲದೇನು ? ಸಹಸ್ರಾರ್ಜುನ ಬಲ್ಲಿದನೆಂದಡೆ, ತೋಳು ತುಂಡಿಸಲದೇನು ? ಅಂಬುಧಿ ಬಲ್ಲಿತ್ತೆಂದಡೆ, ಅಪೋಶನಕ್ಕೊಳಗಾಗಲದೇನು ? ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ ತಪವ ಮಾಡಲದೇನು ? ನಳರಾಜ ಬಲ್ಲಿದನೆಂದಡೆ ತನ್ನ ಸತಿಯನಿಟ್ಟು ಹೋಗಲದೇನು ? ಕೃಷ್ಣ ಬಲ್ಲಿದನೆಂದಡೆ, ಬೇಡನ ಅಂಬು ತಾಗಲದೇನು ? ರವಿ ಶಶಿಗಳು ಬಲ್ಲಿದರೆಂದಡೆ, ರಾಹುಕೇತು ಗ್ರಹಿಸಲದೇನು ? ಶ್ರೀರಾಮ ಬಲ್ಲಿದನೆಂದಡೆ, ತನ್ನ ಸತಿ ಕೋಳುಹೋಗಲದೇನು ? ಪಾಂಡವರು ಬಲ್ಲಿದರೆಂದಡೆ ತಮಗೆ ಹಳುವಟ್ಟು ಹೋಗಲದೇನು ? ಹರಿಶ್ಚಂದ್ರ ಬಲ್ಲಿದನೆಂದಡೆ, ಸ್ಮಶಾನವ ಕಾಯಲದೇನು ? ಹರನೆ ನೀ ಮಾಡಲಿಕೆ ರುದ್ರರು, ನೀ ಮಾಡಲಿಕೆ ದೇವರ್ಕಳು, ನೀ ಮಾಡಲಿಕೆ ಬಲ್ಲಿದರು, ನೀ ಮಾಡಲಿಕೆ ವೀರರು, ನೀ ಮಾಡಲಿಕೆ ಧೀರರು. ಅಮೂರ್ತಿ, ಮೂರ್ತಿ, ನಿರಾಕಾರ, ನಿರ್ಮಾಯ_ ಇಂತು ಬಲ್ಲಿದರೆಂಬವರ ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇನ್ನಷ್ಟು ... -->