ಅಥವಾ

ಒಟ್ಟು 24 ಕಡೆಗಳಲ್ಲಿ , 15 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಕ್ಲುಪ್ತವ ಮಾಡಿ ತನಗೆ ಬೇಕೆನ್ನ ಪ್ರಸಾದಿ ಬಸವಣ್ಣ. ಬಂದುದನತಿಗಳೆದು `ಅಲ್ಲ ಒಲ್ಲೆ' ಎನ್ನ ಪ್ರಸಾದಿ ಬಸವಣ್ಣ. ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಲೋಪಮಾಡಿದ ಪ್ರಸನ್ನ ಪ್ರಸಾದಿ ಕಾಣಾ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಬರಡು ಕರೆವಾಗ ಈಯಿತ್ತೆ? ಆ ಕೊರಡು ಚಿಗುರುವಲ್ಲಿ ಹುಟ್ಟಿತ್ತೆ? ಆಗ ತೃಣ ನುಡಿವಲ್ಲಿ ಆತ್ಮ ಜೀವಿಸಿತ್ತೆ? ಆಗ ಕಾಷ್ಠವೇಷವೆದ್ದು ನಡೆವಲ್ಲಿ ಅರಿವು ಕರಿಗೊಂಡಿತ್ತೆ? ಇಂತಿವು ವಿಶ್ವಾಸದ ಹಾಹೆ. ಗುರುಚರದಲ್ಲಿ ಗುಣ, ಶಿವಲಿಂಗ ರೂಪಿನಲ್ಲಿ ಸಲಕ್ಷಣವನರಸಿದಲ್ಲಿಯೆ ಹೋಯಿತ್ತು ಭಕ್ತಿ. ಈ ಗುಣ ತಪ್ಪದೆಂದು ಸಾರಿತ್ತು ಡಂಗುರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 61 ||
--------------
ದಾಸೋಹದ ಸಂಗಣ್ಣ
ಸಕಲ ನಿಃಕಲದಲ್ಲಿ , ಬ್ರಹ್ಮಾಂಡತತ್ತ್ವದಲ್ಲಿ ಕರ್ಮದ ಸೊಮ್ಮಿನ ಸೀಮೆಯನತಿಗಲೆದು ಅದ ಲಿಂಗವೆಂದು ತೋರಬಲ್ಲಾತ ಗುರು. ತನುಗುಣ ಸಂಬಂಧವ ತಾನೆಂದು ತೋರಲೀಯದೆ, ನಿಶ್ಚಯವ ಮಾಡಿ ತಾತ್ಪರ್ಯಕಲೆಯನಿರಿಸಿ, ಸಕಲದಲ್ಲಿ ನಿಃಕಲದಲ್ಲಿ , ರೂಪಿನಲ್ಲಿ ಅರೂಪಿನಲ್ಲಿ , ಭಾವದಲ್ಲಿ ನಿಭಾವದಲ್ಲಿ ಅವೆ ಅವಾಗಿ ತೋರಬಲ್ಲಾತ ಗುರು . ಈ ಪರಿಯಲ್ಲಿ ಎನ್ನ ಭವವ ತಪ್ಪಿಸಿದ ಕಪಿಲಸಿದ್ಧಮಲ್ಲಕಾರ್ಜುನಯ್ಯನೆಂಬ ಪರಮಗುರು.
--------------
ಸಿದ್ಧರಾಮೇಶ್ವರ
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ನಿರೂಪ ರೂಪಿನಲ್ಲಿ ಅಡಗಿ, ನಿರಾಲಂಬವಾಯಿತ್ತು ಬಸವನಲ್ಲಿ. ನಿರಾಲಂಬಮೂರ್ತಿಯಲ್ಲಿ ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ. ಅನುಭವಿಸಿ ಬಸವ ಕುಳವಳಿದು ಭ್ರಮೆಯಳಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕೆಚ್ಚಲೊಳಗೆ ಕ್ಷೀರವಿಪ್ಪಂತೆ ಚಿತ್ತದೊಳಗೆ ವಸ್ತುವಿಪ್ಪ ಭೇದವನರಿಯಬೇಕು. ಕೆಚ್ಚಲ ಹೆರೆ ಹಿಂಗಿಯಲ್ಲದೆ ಹಾಲಿಗೊಪ್ಪವಿಲ್ಲ. ಚಿತ್ತದ ಕಲೆಯ ಬಿಟ್ಟು ವಸ್ತುಮಯ ತಾನಾಗಿ ಉಭಯ ರೂಪಿನಲ್ಲಿ ಅಡಗಿದ ವಸ್ತುವ ಹೆರೆ ಹಿಂಗಿದಲ್ಲಿ ಸದಾಶಿವಮೂರ್ತಿಲಿಂಗವನರಿತುದು.
--------------
ಅರಿವಿನ ಮಾರಿತಂದೆ
ಭೃತ್ಯರೂಪೊಂದು ಭಕ್ತಿಸ್ಥಲ, ಕರ್ತೃರೂಪೊಂದು ವಸ್ತು. ಈ ಉಭಯ ಜಗದ ಹಾಹೆ ನಡೆಯಬೇಕಾದಲ್ಲಿ, ಮೂರು ಭಕ್ತಿಸ್ಥಲವಾಯಿತ್ತು. ಮೂರು ಕರ್ತೃಸ್ಥಲವಾಯಿತ್ತು. ಭಕ್ತ ಮಾಹೇಶ್ವರ ಪ್ರಸಾದಿ, ಈ ತ್ರಿವಿಧಭಾವ ಭಕ್ತಿರೂಪು. ಪ್ರಾಣಲಿಂಗಿ ಶರಣ ಐಕ್ಯ, ಈ ತ್ರಿವಿಧ [ಭಾವ] ಕರ್ತೃಸ್ವರೂಪು. ಇಂತೀ ಉಭಯಭೇದದಲ್ಲಿ, ವಸ್ತು ಮತ್ರ್ಯಕ್ಕೆ ಬಂದು, ಮುಂದೆ ಆಶ್ರಯವ ಕಟ್ಟಿದ ಕಾರಣ, ಭಕ್ತಿಗೆ ಬಸವಣ್ಣನಾಗಿ, ಆ ಭಕ್ತಿಯನೊಪ್ಪುಗೊಂಬುದಕ್ಕೆ ವಸ್ತು ಪ್ರಭುರೂಪಾಗಿ ಬಂದ ಕಾರಣದಲ್ಲಿ, ಉಭಯಸ್ಥಲ ಗೋಚರಿಸದೆಂದು ಷಟ್ಸ್ಥಲವಾಯಿತ್ತು. ಆ ಸ್ಥಲದ ನಾಮ ರೂಪಿನಲ್ಲಿ ನಾನಾಸ್ಥಲ ಒಡಲಾಯಿತ್ತು. ಪೂರ್ವಗತಿಯಾದಲ್ಲಿ ಸ್ಥಲ, ಉತ್ತರಗತಿಯಾದಲ್ಲಿ ನಿಃಸ್ಥಲ ಉಭಯನಾಮರೂಪು ಲೇಪವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ನಿರ್ಲೇಪವಾದನು.
--------------
ಮೋಳಿಗೆ ಮಾರಯ್ಯ
ಎನ್ನ ದೃಷ್ಟಿ ನಿಮ್ಮ ರೂಪಿನಲ್ಲಿ ನಿಂದು ಕಾಣದು; ಎನ್ನ ಮನ ನಿಮ್ಮ ಕಳೆಯಲ್ಲಿ ಬೆರಸಿ ಅರಿಯದು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅನುಪಮಸುಖಿಯಾನು !
--------------
ಚನ್ನಬಸವಣ್ಣ
ಈಶವೇಷವ ಧರಿಸಿದಡೇನು ವೇಷಕ್ಕೆ ಈಶನಂಜಿ ಒಲಿವನೇ? ಹೊರವೇಷ ಚೆನ್ನಾಗಿತ್ತಲ್ಲದೆ ಒಳಗೆ ಅರಿವಿಲ್ಲದ ವೇಷವೇನು? ಗ್ರಾಸಕ್ಕೆ ಭಾಜನವಾಯಿತ್ತಲ್ಲದೆ ಲಿಂಗಕ್ಕೆ ಭಾಜನವಾದುದಿಲ್ಲ. ಮತ್ತೆಂತೆಂದಡೆ: ಅರಿವು ಆಚಾರ ಅನುಭಾವ ಭಕ್ತಿ ವಿರಕ್ತಿ ನೆಲೆಗೊಂಡಿಪ್ಪ ರೂಪಿನಲ್ಲಿ ಶಿವನೊಲಿದಿರ್ಪನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ತೃಪ್ತವ ಮಾಡಿ ಮಾಡಿ ತನಗೆ ಬೇಕೆನ್ನ ಪ್ರಸಾದಿ, ಬಂದುದನತಿಗಳೆದು ಅಲ್ಲವೊಲ್ಲೆನೆನ್ನ ಪ್ರಸಾದಿ, ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಬಪ್ಪನೆಂಬ ರೂಪಿನಲ್ಲಿ ಲೋಪವ ಮಾಡಿದ ಪ್ರಸನ್ನ ಪ್ರಸಾದಿ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಬಸವಣ್ಣನು.
--------------
ಸಿದ್ಧರಾಮೇಶ್ವರ
ತ್ರಿವಿಧ ಪ್ರಸಾದವಿಲ್ಲ, ತ್ರಿವಿಧಾಕಾರವಿಲ್ಲ, ತ್ರಿವಿಧ ನಲವಿಲ್ಲ, ತ್ರಿಕಾರುಣ ರೂಪಿನಲ್ಲಿ ಪರಿಣಾಮವನಯಿದಲು ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಉದಕ ನಾನಾ ವರ್ಣದ ರೂಪಿನಲ್ಲಿ ಬೆರಸಿ ಅವರ ಛಾಯಕ್ಕೆ ಭಿನ್ನಭಾವವಿಲ್ಲದೆ, ಆ ರೂಪಿಂಗೆ ತಾ ದ್ರವವೊಡಲಾಗಿ ತೋರುವಂತೆ ಎನ್ನ ಸರ್ವಾಂಗದಲ್ಲಿ ತೋರುವ ಕೋರಿಕೆ ನೀನಾಗಿ, ಮುಕುರವ ನೋಡುವ ನೋಟದಂತೆ ಒಳಗೆ ತೋರುವ ಇರವು, ಹೊರಗಳವನ ಪ್ರತಿರೂಪಿನಂತೆ ಎಲ್ಲಿಯೂ ನೀನಾಗಿ ನಾನರಿದು ಮರೆವುದಕ್ಕೆ ತೆರಪಿಲ್ಲ. ಹಾಗೆಂದಲ್ಲಿಯೆ ನಿನ್ನ ಉಳುಮೆ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸ್ಥಾವರಕ್ಕೆ ಲಿಂಗಮುದ್ರೆ, ಪಾಷಾಣಕ್ಕೆ ಲಿಂಗಮುದ್ರೆ, ಗೋವಿಗೆ ಲಿಂಗಮುದ್ರೆ, ಮತ್ತಾವಾವ ರೂಪಿನಲ್ಲಿ ಲಿಂಗಾಂಕಿತವ ಮಾಡಿದಡೂ ಪ್ರೇತಾಂಕಿತಭೇದ. ಅದೆಂತೆಂದಡೆ ; ತರು ಫಲವ ಹೊತ್ತಂತೆ ಸವಿಯನರಿಯವಾಗಿ. ಮಾಡಿಕೊಂಡ ನೇಮಕ್ಕೆ ತಮ್ಮ ಭಾವದ ಶಂಕೆಯಲ್ಲದೆ ಧರಿಸಿದ್ದವು ಇದಾವ ಲಿಂಗವೆಂದರಿಯವು. ತಾನರಿದು ಆ ವ್ರತ ನೇಮ ಮಾಟವ ಮಾಡುವಲ್ಲಿ ಶೀಲದ ತೊಡಿಗೆ, ನೇಮದ ಖಂಡಿತ, ಮಾಟದ ಕೂಟ ಇಂತಿವನರಿದು ತನುವಿಂಗಾಚಾರ, ಮನಕ್ಕೆ ವ್ರತ, ಮಾಟಕ್ಕೆ ನೇಮ, ಕೂಟಕ್ಕೆ ನಿಶ್ಚಯ.ಇಂತೀ ಮತ್ರ್ಯದ ಆಟವುಳ್ಳನ್ನಕ್ಕ ಸದಾತ್ಮನಿಹಿತವಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
--------------
ಅಕ್ಕಮ್ಮ
ಇನ್ನಷ್ಟು ... -->