ಅಥವಾ

ಒಟ್ಟು 282 ಕಡೆಗಳಲ್ಲಿ , 32 ವಚನಕಾರರು , 167 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಗದಗಲದ ಗದ್ಗುಗೆಗಳಿಗೆ ಅಪ್ರಮಾಣದ ಲಿಂಗಪ್ರತಿಷ್ಠೆಯ ಮಾಡಿದರು ನೋಡಾ. ಅದಕ್ಕೆ ತೊಂಬತ್ತಾರಂಗುಲ ಪ್ರಮಾಣಿನ ದೇಗುಲ ನೋಡಾ. ನಾಲ್ಕೈದು ಬಾಗಿಲು ನೋಡಾ. ಬೇರೊಂದು ಬಾಗಿಲು ಮುಚ್ಚಿ ಮುಸುಕಿಹುದು. ದಶಮದ್ವಾರವ ನೆರೆಹೆವೆಂದು ಬಾಗಿಲ ಮುಚ್ಚಹೋದಡೆ ತೆಗೆವವು. ತೆಗೆಯಹೋದಡೆ ಮುಚ್ಚುವವು ನೋಡಾ. ಈ ವರ್ಮಸಕೀಲವನರಿಯದೆ ಅತಿರಥರು ಮಹಾರಥರು ತೊಳಲಿ ಬಳಲುತೈದಾರೆ. ವೀರದ್ಥೀರಸುಭಟರುಗಳೆಲ್ಲಾ ಹೇಡಿಬಳೆಯಂ ತೊಟ್ಟು ಹೆಣ್ಣಾಗಿ ಹೋದರು. ಅರುಹಿರಿಯರೆಲ್ಲಾ ಮರುಳಾಗಿ ಮತಿಗೆಟ್ಟು ಹೋದರು. ಇದನಾರಯ್ಯಾ ಬಲ್ಲವರು ? ನೀವಿಕ್ಕಿದ ಕದವ ತೆಗೆಯಬಲ್ಲವರಾರೊ ಅಯ್ಯಾ ! ತೆಗೆಯದ ಕದವನಿಕ್ಕಬಲ್ಲವರಾರೊ ಅಯ್ಯಾ ! ಪದಪಂಕದಲ್ಲಿನ ದ್ವಾರಮಂ ಕಾಯ್ದಿಪ್ಪ ದಿಟ್ಟಿಯ ಕಡೆಗಣ್ಣಿನ ಬೆಳಗಿನೊಳಗಾಡುವ ಅವ್ಯಯ ಹರಿಬ್ರಹ್ಮಾದಿಗಳು ಮೊದಲಾದ ಸಚರಾಚರದವರನೆಲ್ಲ ನುಂಗಿತ್ತು ನೋಡಾ. ಇದನಾರಿಗೂ ಅರಿಯಬಾರದು ನೋಡಾ. ನೀವಿದ್ದಲ್ಲಿ ಇಲ್ಲದಿಪ್ಪ ಶರಣರಿಗಲ್ಲದೆ ಇದರ ಭೇದವ ಬಲ್ಲವ ಅಲ್ಲಮನು. ಕಾಮನ ಕಣ್ಣಿಗೆ ಮುಳ್ಳಬೆಟ್ಟದೊಡನೆ ಮುಟ್ಟದ ಕದವು ತೆಗೆದವು. ತೆಗೆದಿದ್ದ ಬಾಗಿಲು ತಮತಮಗೆ ಮುಚ್ಚಿದವು ನೋಡಾ. ಹೂಗಲ್ಲಿಗೆ ಕಿಚ್ಚನಿಕ್ಕಿ ಆ ಬಾಗಿಲ ಕಾಯ್ದಿಪ್ಪವಳ ಮೂಗ ಮೊಲೆಯ ಕೊಯ್ದು, ಸಾಗರದ ಕಟ್ಟೆಯ ಒಡೆದು, ದಶಮ ದ್ವಾರದಲ್ಲಿ ನಿಂದು, ನಿಮ್ಮ ಹೊತ್ತಿರ್ಪವಳ ನೆತ್ತಿಗಣ್ಣಿಂದ ತೆಗೆದು ನೋಡಿ, ಏಕಾದಶದ್ವಾರದ ಸೂತ್ರ ಸೂಕ್ಷ್ಮವಿನ್ನು ಮಹಾಬೆಳಗಿನೊಳಗೆ ಸಾಸಿವೆಯ ಛಿದ್ರವ ಮಾಡಿ ಕುಂಬಳದ ಕಾಯ ಕೀಲಕೊಟ್ಟಂತೆಯಿಪ್ಪ ನಿಜಗುರು ಭೋಗೇಶ್ವರ ನಿಮ್ಮ ಇರವು, ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ ?
--------------
ಭೋಗಣ್ಣ
ನಾ ತೋಡಿದ ಬಾವಿಯಲ್ಲಿ ಡುಂಡುಕ ಭೇಕವೊಂದಾಗಿ ಇದ್ದವು. ಡುಂಡುಕ ಹಸಿದು ಭೇಕನ ನುಂಗಿತ್ತು. ಭೇಕ ಸಾಯದೆ ಡುಂಡುಕನ ಕರುಳ ತಿಂದು, ಡುಂಡುಕ ಸತ್ತು ಒಣಗಲಾಗಿ, ಅಂಗ ಬಿಗಿದು ಭೇಕನಲ್ಲಿಯೆ ಸತ್ತಿತ್ತು. ಎನ್ನ ಬಾವಿ ಕೆಟ್ಟಿತ್ತು, ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು.
--------------
ಅರಿವಿನ ಮಾರಿತಂದೆ
ಆಡುತಾಡುತ ಬಂದ ಕೋಡಗ, ಜಪವ ಮಾಡುವ ತಪಸಿಯ ನುಂಗಿತ್ತಲ್ಲಾ ! ಬೇಡ ಬೇಡೆಂದಿತ್ತು, ಮುಂದಣ ಕೇರಿಯ ಮೊಲನೊಂದು ! ಮುಂದಣ ಮೊಲನ ಹಿಂದಣ ಕೋಡಗವ ಕಂಬಳಿ ನುಂಗಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ. ಆ ಎಳೆಯ ಸರ್ಪ ಹೊರಟು, ಬೆಳಗು ಕತ್ತಲೆಯೆರಡೂ ನುಂಗಿತ್ತು. ಆ ಎಳೆಯ ಸರ್ಪನ ಕಂಡು, ಅಲ್ಲಿದ್ದ ತಳಿರ ಮರ ನುಂಗಿತ್ತು. ಆ ತಳಿರ ಮರನ ಕಂಡು ಮಹಾಬೆಳಗು ನುಂಗಿತ್ತು. ಆ ಮಹಾಬೆಳಗ ಕಂಡು, ನಾನೊಳಹೊಕ್ಕು ನೋಡಿದಡೆ, ಒಳಹೊರಗೆ ತೊಳತೊಳಗಿ ಬೆಳಗುತ್ತಿದ್ದಿತಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಸಂಗಮೇಶ್ವರದ ಅಪ್ಪಣ್ಣ
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು. ದೂರ[ದ] ಧಾತು ಸಾರಾಯದೊಳಡಗಿತ್ತು. ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ. ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು, ಘೋರ ರುದ್ರನ ದಳ ಮುರಿಯಿತ್ತು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗಗನ ಮಂಡಲದಲ್ಲಿ ಹುಟ್ಟಿದ ಶಶಿಕಳೆ ಭೂಮಂಡಲದಲ್ಲಿ ಉದಯವಾದುದ ಕಂಡೆನಯ್ಯ. ಭೂಮಂಡಲದಲುದಯವಾದ ಶಶಿಕಳೆ, ತ್ರೆ ೈಜಗವ ನುಂಗಿತ್ತು ನೋಡ. ನಾರಿಯರ ತಲೆಯ ಮೆಟ್ಟಿ, ಮೇರುವೆಯ ಹೊಕ್ಕಿತ್ತು ನೋಡಾ. ಮೇರುಗಿರಿಯ ಪರ್ವತದಲ್ಲಿಪ್ಪಾತನನೆಯ್ದೆ ನುಂಗಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು. ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು. ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ, ಹೊಡೆವವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ. ಸದಾಶಿವಮೂರ್ತಿಲಿಂಗವು ಬಚ್ಚಬಯವಾಯಿತ್ತು.
--------------
ಅರಿವಿನ ಮಾರಿತಂದೆ
ಏರಿಯಿಲ್ಲದ ಕೆರೆಯಲ್ಲಿ, ನೀರಿಲ್ಲದ ತಡಿಯಲ್ಲಿ ನಿಂದು ಮಡಕೆಯಿಲ್ಲದೆ ಮೊಗೆವುತ್ತಿದ್ದರು. ಮೊಗೆವರ ಸದ್ದ ಕೇಳಿ, ಒಂದು [ಹಾ]ರದ ಮೊಸಳೆ ಅವರೆಲ್ಲರ ನುಂಗಿತ್ತು. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಭಾವವೇನೆಂದು ಅರಿಯೆ.
--------------
ಬಿಬ್ಬಿ ಬಾಚಯ್ಯ
ಕವಡೆ ಕಟಕವ ನುಂಗಿತ್ತು, ಕುಡಿಕೆ ಹಿರಿದಪ್ಪ ಮಡಕೆಯ ನುಂಗಿತ್ತು. ಅಡಕೆ ಮರನ ನುಂಗಿದ ಮತ್ತೆ ಫಲವುಂಟೆ? ಅರ್ಚನೆ ಭಕ್ತಿಯಲಡಗಿ, ಭಕ್ತಿ ಮುಕ್ತಿಯಲಡಗಿ, ಮುಕ್ತಿ ಜ್ಞಾನದಲಡಗಿ, ಜ್ಞಾನ ನಾನೆಂಬಲ್ಲಿ ಅಡಗಿದ ಮತ್ತೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ, ಒಂದು ಹಾವಿನ ಮರಿ ಬಂದು ಹಾಯಿತ್ತು. ನವಿಲಂಜಿ ಹೋಗುತ್ತಿರಲಾಗಿ, ಹಾವಿನ ಮರಿಯ ನವಿಲಗರಿ ನುಂಗಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಚೋದ್ಯವಾದ ಕಾರಣ.
--------------
ಸಗರದ ಬೊಮ್ಮಣ್ಣ
ಊರೆಲ್ಲರು ಬೇಟೆಗೆ ಹೋಗಿ ಕೊಂದರು ಕಾಡೆಮ್ಮೆಯ. [ಅದು] ಸಂದಿಗೆ ಸಾವಿರ ರೂಪು, ಕೊಂಬಿಗೆ ಹಿಂಗದ ವೆಜ್ಜ, ಅದರಂಗದ ಕಂಗಳು ಕಪ್ಪು. ಅದ ಕೊಂದವ[ರ] ತಂದು ಕೂಡಿದೆ ನನ್ನಂಗಳದಲ್ಲಿ. ಆ ಅಂಗಳ, ಅವರ ತಿಂದು ನುಂಗಿತ್ತು. ಮೂರು ಭುವನವ ನುಂಗಿದವರ ಕಂಡು, ಹಿಂಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇದ್ದು ಜೀವನಲ್ಲ, ಸತ್ತು ಹೆಣನಲ್ಲ. ಕತ್ತಲೆ ಮುಟ್ಟಿದ ಬೆಳಗಿನಲ್ಲಿ ಸುಳಿಯದು. ಹಿಂದಾದಡೆ ಏರುವುದು, ಮುಂದಾದಡೆ ತೋರುವುದು. ಹಿಡಿಯಲ್ಲ ಕರಿಯಲ್ಲ. ಇಕ್ಕಿದ ಹೆಜ್ಜೆಯ ತೆಗೆಯದು. ಮೊನೆಗೆ ನಿಲ್ಲದು, ತೆಕ್ಕೆಗೆ ಬಾರದು. ಕಾದಬಂದ ಕಲಿಗಳನೆಲ್ಲರ ಆಗಿದಗಿದು ನುಂಗಿತ್ತು ನೋಡಾ. ಅರಿದೆಹೆನೆಂದಡೆ ಅರಿಯಬಾರದು. ಇದ ಬಲ್ಲವರಾರಯ್ಯಾ ? ಇಹಪರ ನಷ್ಟವಾದ ಮಹಾವೀರದ್ಥೀರರಿಗಲ್ಲದೆ ಮುಕ್ತಿಗೆ ದೂರವಾದ ಲಿಂಗಾಂಗಿಗಳ ನೆನಹೆಂಬ ಜೋಡಂ ತೊಟ್ಟು, ಅವರ ಕರಣಪ್ರಸಾದವೆಂಬ ವಜ್ರ ಘಟಿಕೆಯ ಧರಿಸಿ, ಗುರುಕರುಣವೆಂಬ ಅಲಗಂ ಪಿಡಿದು, ಮುಂಡ ಬಿದ್ದಡೂ ತಲೆಯಲ್ಲಿರಿವೆ. ನಿಜಗುರು ಭೋಗೇಶ್ವರಾ ನಾ ನಿಮ್ಮ ಬೇಡುವನಲ್ಲಾ.
--------------
ಭೋಗಣ್ಣ
ಇನ್ನಷ್ಟು ... -->