ಅಥವಾ

ಒಟ್ಟು 29 ಕಡೆಗಳಲ್ಲಿ , 17 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?
--------------
ನೀಲಮ್ಮ
ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು. ಲಿಂಗಭಕ್ತನಾದಡೆ ಮನದಾಸೆಯ ಬಿಡಬೇಕು. ಜಂಗಮಭಕ್ತನಾದಡೆ ಧನದಾಸೆಯ ಬಿಡಬೇಕು. ಗುರುವಿನ ಅನುವನರಿಯನಾಗಿ ಗುರು ಸಂಬಂದ್ಥಿಯಲ್ಲ. ಲಿಂಗದ ನಿಲವನರಿಯನಾಗಿ ಲಿಂಗಸಂಬಂದ್ಥಿಯಲ್ಲ. ಜಂಗಮದಲ್ಲಿ ನಿಜವನರಿಯನಾಗಿ ಜಂಗಮ ಸಂಬಂದ್ಥಿಯಲ್ಲ. ಇದು ಕಾರಣ, ಗುರುಲಿಂಗಜಂಗಮವನರಿಯಲೇ ಆಗದು, ನೆರೆ ಅರಿದಡೆ, ಅರಿಯಬೇಕು ನಿಃಕಳಂಕ ಮಲ್ಲಿಕಾರ್ಜುನಲ್ಲಿ. ಆ ಶರಣ ಉರಿಯುಂಡ ಕರ್ಪುರದಂತೆ.
--------------
ಮೋಳಿಗೆ ಮಾರಯ್ಯ
ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ, ವಾಮದೇವಮುಖವೆ ಎನಗೆ ಚೆನ್ನಬಸವಣ್ಣನಯ್ಯಾ, ಅಘೋರಮುಖವೆ ಎನಗೆ ಮಡಿವಾಳಯ್ಯನಯ್ಯಾ, ತತ್ಪುರುಷಮುಖವೆ ಎನಗೆ ಸಿದ್ಧರಾಮಯ್ಯನಯ್ಯಾ, ಈಶಾನಮುಖವೆ ಎನಗೆ ಪ್ರಭುದೇವರಯ್ಯಾ, ಹೃದಯದ ಮುಖವೆ ಎನಗೆ ಗಣಂಗಳಯ್ಯಾ. ಇಂತಿವರ ಶ್ರೀಚರಣದಲ್ಲಿ ಉರಿಯುಂಡ ಕರ್ಪುರದಂತೆ ಬೆರಸಿದೆನಯ್ಯಾ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಇಂತೀ ಅಷ್ಟಾವರಣವ ಸದ್ಗುರುಮುಖದಿಂ ಚಿದಂಗಚಿದ್ಘನಲಿಂಗದ ಮಧ್ಯದಲ್ಲಿ ಸಂಬಂಧವಿಟ್ಟು, ಏಕಲಿಂಗನಿಷ್ಠಾಪರತ್ವದಿಂದ ಸ್ಥೂಲಕಂಥೆಯ ಧರಿಸಿ ಸತ್ಕಾಯಕ-ಸತ್ಕ್ರಿಯಾ-ಸಮ್ಯಜ್ಞಾನ-ಸದ್ಭಕ್ತಿ- ಸದಾಚಾರಸನ್ನಿಹಿತರೆ ನೂತನಗಣಂಗಳೆನಿಸುವರು ನೋಡ. ಅದರಿಂ ಮೇಲೆ ಚಿದಂಗ-ಚಿತ್ಪ್ರಾಣಾಂಗದ ಮಧ್ಯದಲ್ಲಿ ಚಿದ್ಘನಲಿಂಗ-ಚಿತ್ಪ್ರಾಣಲಿಂಗವ ಸದ್ಗುರುಮುಖದಿಂ ಸಂಬಂಧವಿಟ್ಟು ಆ ಲಿಂಗದ ಮಧ್ಯದಲ್ಲಿ ಸಾಕಾರ-ನಿರಾಕಾರವಾದ ಷೋಡಶಾವರಣವ ಸಂಪೂರ್ಣವಮಾಡಿಕೊಂಡು, ಸೂಕ್ಷ್ಮತನುವೆಂಬ ಕಂಥೆಯ ಧರಿಸಿ ಕಂಗಳಾಲಯದ ಜ್ಯೋತಿರ್ಲಿಂಗದ ಮಧ್ಯದಲ್ಲಿ ಮನವ ಮುಳುಗಿಸುವರೆ ಆದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ತ್ರಿವಿಧಾಂಗ-ಚಿದ್ಘನ ತ್ರಿವಿಧಲಿಂಗವ ಸದ್ಗುರುಮುಖದಿಂ ಸಂಬಂದ್ಥಿಸಿಕೊಂಡು ಆ ಲಿಂಗಾಂಗದ ಮಧ್ಯದಲ್ಲಿ ಕ್ರಿಯಾಷ್ಟಾವರಣ-ಜ್ಞಾನಾಷ್ಟಾವರಣ-ಮಹಾಜ್ಞಾನಾಷ್ಟಾವರಣವ ಸಂಬಂಧವಿಟ್ಟು, ಕಾರಣತನುವೆಂಬ ಕಂಥೆಯ ಧರಿಸಿ, ಹೃತ್ಕಮಲಮಧ್ಯದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗಮಧ್ಯದಲ್ಲಿ ಭಾವವ ಮುಳುಗಿಸಿ ಬಚ್ಚಬರಿಯಾನಂದದಲ್ಲಿ ಪರಿಪೂರ್ಣಾನಂದದಿಂದಾಚರಿಸುವರೆ ಅನಾದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ಅಷ್ಟಾಂಗದ ಮಧ್ಯದಲ್ಲಿ ಚಿದ್ಘನ ಅಷ್ಟಲಿಂಗಂಗಳ ಸದ್ಗುರುಮುಖದಿಂ ಧರಿಸಿ, ಆ ಲಿಂಗಾಂಗದ ಮಧ್ಯದಲ್ಲಿ ಅರುವತ್ತುನಾಲ್ಕು ತೆರದಾವರಣವ ಸಂಬಂದ್ಥಿಸಿಕೊಂಡು ತಮ್ಮ ಸರ್ವಾಂಗದಲ್ಲಿ ಅಷ್ಟವಿಧಕಮಲಂಗಳ ಕಂಡು, ಆ ಕಮಲಮಧ್ಯದಲ್ಲಿ ನೆಲಸಿರ್ಪ ಚತುರ್ವಿಧ ಬಿಂದುಲಿಂಗ, ಷಡ್ವಿಧ ಧಾತುಲಿಂಗ, ದಶವಿಧ ಕ್ಷೇತ್ರಲಿಂಗ, ದ್ವಾದಶ ವಿಕೃತಿಲಿಂಗ, ಷೋಡಶ ಕಳಾಲಿಂಗ, ದ್ವಿವಿಧ ವಿದ್ಯಾಲಿಂಗ, ಸಹಸ್ರ ಶಿವಕಳಾಲಿಂಗ, ತ್ರಿವಿಧ ವಿವೇಕಲಿಂಗ ಇಂತೀ ಅಷ್ಟವಿಧಕಮಲಂಗಳ ಮಧ್ಯದಲ್ಲಿ ನೆಲಸಿರ್ಪ ಅಷ್ಟವಿಧಲಿಂಗಗಳ ಅಷ್ಟವಿಧ ಹಸ್ತಗಳಿಂದ, ಅಷ್ಟವಿಧಾರ್ಚನೆ, ಷೋಡಶೋಪಚಾರಂಗಳ ಮಾಡಿ, ಎರಡಳಿದು ಏಕರೂಪವಾಗಿ ನಿರಾವಯ ಕಂಥೆಯ ಧರಿಸಿ, ಪರತತ್ವ ಜ್ಯೋತಿರ್ಮಯಲಿಂಗದೊಳಗೆ ಉರಿಯುಂಡ ಕರ್ಪುರದಂತೆ ಸಮರಸವಾದರು ನೋಡ. ಅವರಾರೆಂದಡೆ : ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು, ದೇವಲೋಕದ ದೇವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳು ಮುಂತಾದವರು ಬಯಲೊಳಗೆ ಮಹಾಬಯಲು ಬೆರದಂತಾದರು ನೋಡ. ಇಂತೀ ಸರ್ವಾಚಾರಸಂಪತ್ತಿನಾಚರಣೆಯನಾಚರಿಸುವರೆ ನಿರಾವಯಗಣಂಗಳೆನಿಸುವರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಆನಳಿದೆನು ನೀನಳಿದೆನೆಂಬ ಶಬ್ದವಡಗಿ ನಿಃಶಬ್ದವಾಗಿ, ನಿಃಶೂನ್ಯಮಂಟಪದಲ್ಲಿ ನಿಂದು ನಾನು ಉರಿಯುಂಡ ಕರ್ಪೂರದಂತಾದೆನಯ್ಯ. ಕರ್ಪೂರ ಉರಿಯುಂಡು ಕರವಳಿದು ಸುಖವ ಉಡುಗಿದೆನಯ್ಯ. ಸುಖವಡಗಿ ದುಃಖ ನಿರ್ದ್ವಂದ್ವವಾಗಿ ನಿರೂಪು ಸ್ವರೂಪುವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಮುತ್ತುಂಡ ಉದಕವ ತಂದು ಕಾಣಲುಂಟೆ ? ಉರಿಯುಂಡ ಕರ್ಪುರವ ತಂದು ಕಾಣಲುಂಟೆ ? ಗುರುನಿರಂಜನ ಚನ್ನಬಸವಲಿಂಗಾ ನೀನುಂಡ ಶರಣನ ತಂದು ಕಾಣಲುಂಟೆ ಮೂರು ಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರಸ್ಥಲದ ಲಿಂಗವೆ ಕಾಯಕ್ಕೆ ವೇಧಿಸಿದಲ್ಲಿ, ಕಾಯ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇಧಿಸಿದಲ್ಲಿ ಪ್ರಾಣ ಲಿಂಗವಾಯಿತ್ತು, ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇಧಿಸಿದಲ್ಲಿ ಭಾವ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇಧಿಸಿದಲ್ಲಿ ಜ್ಞಾನ ಲಿಂಗವಾಯಿತ್ತು. ಅಂತಾದ ಕಾರಣ_ನಮ್ಮ ಗುಹೇಶ್ವರನ ಶರಣಂಗೆ, ಅರಿವರತು ಕುರುಹು ನಿಷ್ಪತಿಯಾಗಿ, ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು
--------------
ಅಲ್ಲಮಪ್ರಭುದೇವರು
ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ ಹೇಳಿಹೆ ಕೇಳಿರಣ್ಣ : ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ; ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ; ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ; ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ; ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ; ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ ; ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ ; ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ. ಇನ್ನು ಷಟ್‍ಸ್ಥಲದ ನಿರ್ಣಯವ ಕೇಳಿ : ಭಕ್ತಸ್ಥಲ ಬಸವಣ್ಣಂಗಾಯಿತ್ತು ; ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು ; ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು ; ಪ್ರಾಣಲಿಂಗಿಸ್ಥಲ ಸಿದ್ಭರಾಮಯ್ಯಂಗಾಯಿತ್ತು ; ಶರಣಸ್ಥಲ ಪ್ರಭುದೇವರಿಗಾಯಿತ್ತು; ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.- ಭಕ್ತಸ್ಥಲದ ವಿವರವು : ಗುರುಲಿಂಗಜಂಗಮವು ಒಂದೆಯೆಂದು ಕಂಡು ಸದಾಚಾರದಲ್ಲಿ ನಡೆವನು, ತ್ರಿಕಾಲ ಮಜ್ಜನವ ನೀಡುವನು, ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು, ಆಪ್ಯಾಯನಕ್ಕೆ ಅನ್ನವ ನೀಡುವನು, ಜಂಗಮಕ್ಕೆ ಪ್ರತಿ ಉತ್ತರವ ಕೊಡನು. ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು. ಸಾಕ್ಷಿ : 'ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ | ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ || ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾದ್ಥಿಕಂ | ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||' ಇನ್ನು ಮಾಹೇಶ್ವರಸ್ಥಲದ ವಿವರವು : ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ ಇವು ಪಂಚಮಹಾಪಾತಕವು, ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇರ್ದು ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು. ಸಾಕ್ಷಿ : 'ಪರಸ್ತ್ರೀಯಂ ಪರಾರ್ಥಂ ಚ ವರ್ಜಿತೋ ಭಾವಶುದ್ಧಿಮಾನ್ | ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||' ಇನ್ನು ಪ್ರಸಾದಿಸ್ಥಲದ ವಿವರ : ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು, ಅನರ್ಪಿತವ ವರ್ಜಿಸುವುದು, ಲಿಂಗದೊಡನೆ ಉಂಬುವುದು, ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ. ಇನ್ನು ಪ್ರಾಣಲಿಂಗಿಸ್ಥಲದ ವಿವರವು : ಸುಗುಣ ದುರ್ಗುಣ ಉಭಯವನತಿಗಳೆದು ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ. ಇನ್ನು ಶರಣಸ್ಥಲದ ವಿವರವು : ಸತಿಪತಿಭಾವ ಅಂಗಲಿಂಗವಾಗಿಪ್ಪುದು, ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು, ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು. ಸಾಕ್ಷಿ : 'ಪತಿರ್ಲಿಂಗಂ ಸತೀ ಚಾsಹಂ ಇತಿ ಯುಕ್ತಂ ಸನಾತನಃ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||' ಇನ್ನು ಐಕ್ಯಸ್ಥಲದ ವಿವರವು : ಅರಿಷಡ್ವರ್ಗಂಗಳಿಲ್ಲದಿಹರು, ನಿರ್ಭಾವದಲ್ಲಿಹರು, ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು, ಉರಿಯುಂಡ ಕರ್ಪುರದ ಹಾಗೆ ಇಹರು, ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು. ಸಾಕ್ಷಿ : 'ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಸಯೋಗವತ್||' ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ ಅಂದೇನೊ ಇಂದೇನೊ ? ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಮುಯ್ಯೂರ ಮನೆಯೊಳಗೆ ನಾನು ಸಂಸಾರವ ಮಾಡುತ್ತಿರಲು, ಮೂವರು ದಿಬ್ಬಣಿಗರು ಬಂದು ಮುಖಕನ್ನಡಿಯ ತೋರಿ ಮುದ್ದುಗೈಯಲು ಆನು ಮೂಲಪ್ರಣವಸ್ವರೂಪಳಾದೆನು. ಹಿತಪತಿಸುತನ್ಯಾಯದಂತೆ ಅಪ್ರತಿಮನ ಸುಖಕ್ಕೆ ಮನವನಿಂಬುಗೊಟ್ಟು ಆನು ಉರಿಯುಂಡ ಕರ್ಪೂರದಂತೆ ತೆರಹಿಲ್ಲದಿರ್ದೆನಯ್ಯಾ ಸಂಗಯ್ಯ ನಿಮ್ಮಲ್ಲಿ, ಬಸವಯ್ಯನೆನ್ನಲ್ಲಿ ಅಡಗಲು.
--------------
ನೀಲಮ್ಮ
ಮಹಾಲಿಂಗಂ ತ್ರಯೋಲಿಂಗಂ ಷಡ್ವಿಧಂ ಚ ತಯೋರ್ಮುಖಂ ತ್ರಿವಿಧ್ರೈಕಮುಖಂಲಿಂಗಂ ಮಹಾಲಿಂಗಂತು ದರ್ಶನಂ || ಇಂತೆಂದುದಾಗಿ, ಒಂದು ಮೂರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು. ಆ ಮೂರು ಆರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು. ಆ ಆರು ಮೂವತ್ತಾರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಸಂಗಪರಿತ್ಯಾಗಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಾವಧಾನಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಾಂಲಿಂಗಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಕಾರಣಯುತನಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವನಿರ್ವಾಣಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಬಸವಣ್ಣನ ಮಹಾಮಹಿಮೆಯನು ನೀವೆ ಬಲ್ಲಿರಿ. ಅಸಂಖ್ಯಾತ ಪುರಾತರು ಪ್ರಭುದೇವರು ಮುಖ್ಯವಾದ ಮಹಾಮಹಿಮರ ನಿಲುವಿನ ಶ್ರೀಚರಣಕ್ಕೆ ನಾನು ಶರಣಾರ್ಥಿ ಶರಣಾರ್ಥಿ ಎಂದೆನುತ್ತ ಶಬ್ದಮುಗ್ಧ ಮೂಗನಾದೆ. ಉರಿಯುಂಡ ಕರ್ಪುರದಂತೆ, ನಿಮ್ಮ ಶ್ರೀಚರಣವ ನಾನೆಯ್ದೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ಕರುಣ ಪ್ರಸಾದವ ಕೊಂಡು ನಾನು ಬಸವಣ್ಣನ ಮುಂದೆ ಬಯಲಾಗಿ ಹೋದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಅಯ್ಯಾಎನ್ನ ಗುರು ಎನಗೆ ಉಪದೇಶವ ಮಾಡಿದ ಭೇದವ ಎಲ್ಲ ಗಣಂಗಳು ಕೇಳಿ. ಮಲತ್ರಯಂಗಳ ಹರಿದು, ಕರ್ಮೇಂದ್ರಿಯಂಗಳ ಜ್ಞಾನೇಂದ್ರಿಯ ಮಾಡಿ, ಕಾಯ ಜೀವ ಪ್ರಾಣ ಈ ತ್ರಿವಿಧವರತು ಭೇದವನರುಹಿಸಿದ. ಉರಸ್ಥಲದ ಪರಂಜ್ಯೋತಿಲಿಂಗವ ಎನ್ನ ಕರಸ್ಥಲಕ್ಕೆ ಕೊಟ್ಟರು. ಆ ಗುರು ಕೊಟ್ಟ ಲಿಂಗವೆಂಬ ದರ್ಪಣವ ನೋಡಿ, ಎನ್ನ ಮನೆವೆಂಬ ಸರ್ಪ ಆ ದರ್ಪಣದಲ್ಲಿ ಲೀಯವಾಯಿತ್ತು. ಇದು ಕಾರಣ, ಎನ್ನ ರೂಪೆಲ್ಲ ಉರಿಯುಂಡ ಕರ್ಪುರದಂತಾಯಿತ್ತು, ಆಲಿ ನುಂಗಿದ ನೋಟದಂತಾಯಿತ್ತು. ಪುಷ್ಪ ನುಂಗಿದ ಪರಿಮಳದಂತೆ ಬಯಲು ನುಂಗಿದ ಬ್ರಹ್ಮಾಂಡದಂತೆ, ಅಂಗಲಿಂಗ ಸಂಗಸಂಯೋಗವಾದ ಭೇದ. ಇದ ಹಿಂಗದೆ ಶರಣ ಸಂಗವ ಮಾಡಿದವರಂಘ್ರಿಯಲ್ಲಿ ಐಕ್ಯವಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಇದನು ಕಂಗಳ ಪಟಲ ಹರಿದ ಲಿಂಗೈಕ್ಯರೇ ಬಲ್ಲರು.
--------------
ಹಡಪದ ಅಪ್ಪಣ್ಣ
ಬೆಳಕಿನ ಕಳೆಯಲ್ಲಿ. ನಾಗವಾಯುವ ನಿಲಿಸಿದರು ಸುಚಿತ್ತ ಸುಬುದ್ಧಿ ಸುಗೋಷಿ*ಯ ಸುಜ್ಞಾನದ ಬೆಳಗಿನ ಕಳೆಯೊಡನೆ ಸುಳಿದಾಡುವ ಮಹಾಲಿಂಗವಂತರ ಅನುಭಾವದಲ್ಲಿ. ಕೂರ್ಮವಾಯುವ ನಿಲಿಸಿದರು, ಶಿವಶ್ರುತಿ ಶಿವಮಂತ್ರ ಷಡಕ್ಷರಿ ಬೀಜಂಗಳ ಜಪಿಸುವಲ್ಲಿ. ಕೃಕರ ವಾಯುವ ನಿಲಿಸಿದರು ಚತುರ್ವಿಧ ಪುರುಷಾರ್ಥಂಗಳ ಕಳೆದು ಷಡ್ವಿಧ ದಾಸೋಹ ಭಕ್ತರತಿಯಾನಂದ ಸೂಕ್ಷ್ಮಸಂಬಂಧದ ಕೂಟದಲ್ಲಿ ತೆರಹಿಲ್ಲದ ತನ್ನ ತಾನರಿವಲ್ಲಿ. ದೇವದತ್ತವಾಯುವ ನಿಲಿಸಿದರು ಶಿವಲಿಂಗವೆ ಲಿಂಗ ಶಿವಭಕ್ತರೆ ಕುಲಜರು, ಶಿವಾಗಮವೆ ಆಗಮ, ಶಿವಾಚಾರವೆ ಆಚಾರವೆಂಬ ಏಕೋಭಾವದ ನಿಷೆ*ಯಿಂದ ಭಾಷೆಯ ನುಡಿದು ದೃಢವಿಡಿದು ಅನ್ಯವ ಜರಿವಲ್ಲಿ. ಧನಂಜಯ ವಾಯುವ ನಿಲಿಸಿದರು, ಅನಂತ ಪರಿಯಲ್ಲಿ ಧಾವತಿಗೊಂಡು ಕಾಯಕ್ಲೇಶದಿಂದ ತನು ಮನ ಬಳಲಿ ಗಳಿಸಿದಂತಹ ಧನವ ಅನರ್ಥವ ಮಾಡಿ ಕೆಡಿಸದೆ, ಲಿಂಗಾರ್ಚನೆಯ ಮಾಡಿ ಗುರುಲಿಂಗಜಂಗಮವೆಂಬ ತ್ರಿವಿಧ ದಾಸೋಹದ ಪರಿಣಾಮದಲ್ಲಿ, ಈ ದಶವಾಯುಗಳ ಪ್ರಯತ್ನಕ್ಕೆ ಧ್ಯಾನ ಗಮನ ಸಂಗ ಸುಬುದ್ಧಿ ನಿರ್ಗುಣ ತಮಂಧ ಕೋಪ ಚಿಂತೆ ಎಂಬಿವನರಿದು, ದುಶ್ಚಿತ್ತವ ಮುರಿದು, ಅಹಂಕಾರವಳಿದು, ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತರಾಗಬೇಕು ಕಾಣಿರೆ, ಎಲೆ ಅಣ್ಣಗಳಿರಾ ! ಅಲ್ಲಲ್ಲಿ ಇವರ ಓತು, ಭರವ ಕೆಡಿಸಿ ತಗ್ಗಲೊತ್ತಿ, ಮೇಲೆ ತಲೆಯೆತ್ತಲೀಯದೆ ದಶವಾಯುಗಳ ದಶಸ್ಥಾನದಲ್ಲಿ [ನಿಲಿಸಿ] ದಶಾವಸ್ಥೆಯಿಂದ ಲಿಂಗವನೊಲಿಸಿದ ಮಹಾಮಹಿಮನ ಮಸ್ತಕವೆ ಶ್ರೀಪರ್ವತ, ಲಲಾಟವೆ ಕೇತಾರವೆನಿಸುವುದು. ಆತನ ಹೃದಯದಲ್ಲಿ ಅಷ್ಟಷಷ್ಟಿ ತೀರ್ಥಂಗಳಿಪ್ಪವು. ಆತನ ಶ್ರೀಪಾದ ವಾರಣಾಸಿ ಅವಿಮುಕ್ತಕ್ಷೇತ್ರದಿಂದ ವಿಶೇಷ. ಆತನ ಪಾದಾಂಗುಷ*ಕ್ಕೆ ಸಮಸ್ತ ತೀರ್ಥಕ್ಷೇತ್ರ ಸಪ್ತಸಮುದ್ರಂಗಳ ತಿರುಗಿ ಮಿಂದ ಒಂದು ಕೋಟಿ ಫಲ ಸರಿಯಲ್ಲ. ಆತನು ಸತ್ಯವೆಂಬ ವೃಕ್ಷವನೇರಿ, ನಿಷೆ*ಯೆಂಬ ಕೊನೆಯ ಹಿಡಿದು ಪರಬ್ರಹ್ಮವೆಂಬ ಫಲವ ಸುವಿವೇಕದಿಂದ ಸವಿದು ಸುಖಿಯಾಗಿರ್ಪನಾಗಿ, ಆತನು ಪುಣ್ಯಪಾಪವೆಂಬೆರಡರ ಸುಖದುಃಖದವನಲ್ಲ; ಗತಿ ಅವಗತಿಯೆಂಬೆರಡರ ಮತಿಗೇಡಿಯಲ್ಲ; ಧರ್ಮ ಕರ್ಮವೆಂಬೆರಡರ ಭ್ರಮೆಯವನಲ್ಲ; ಆತನ ನಿಲವು ಪುಷ್ಪ ನುಂಗಿದ ಪರಿಮಳದಂತೆ, ಆಲಿಕಲ್ಲು ನುಂಗಿದ ಅಪ್ಪುವಿನಂತೆ, ಅಗ್ನಿ ಆಹುತಿಗೊಂಡ ಘೃತದಂತೆ, ಕಬ್ಬುನವುಂಡ ನೀರಿನಂತೆ, ಉರಿಯುಂಡ ಕರ್ಪುರದಂತೆ ! ಆತಂಗೆ ತೋರಲೊಂದು ಪ್ರತಿಯಿಲ್ಲ, ಎಣೆಯಿಲ್ಲ. ಆತ ನಿತ್ಯ ನಿರಂಜನ ಚಿನ್ಮಯ ಚಿದ್ರೂಪ ನಿಶ್ಚಿಂತ ನಿರಾಳನಯ್ಯಾ. ಕೂಡಲಚೆನ್ನಸಂಗಮದೇವಾ, ನಿಮ್ಮ ಪ್ರಾಣಲಿಂಗ ಸಂಬಂಧಿಯ ನಿಲವು ಮಹವ ನುಂಗಿದ ಬಯಲೊ !
--------------
ಮಾರುಡಿಗೆಯ ನಾಚಯ್ಯ
ಭಕ್ತನಾದಲ್ಲಿ ಧರಿತ್ರಿಯಂತಿರಬೇಕು. ಮಾಹೇಶ್ವರನಾದಲ್ಲಿ ಅಪ್ಪುವಿನಂತಿರಬೇಕು. ಪ್ರಸಾದಿಯಾದಲ್ಲಿ ವಹ್ನಿಯಂತಿರಬೇಕು. ಪ್ರಾಣಲಿಂಗಿಯಾದಲ್ಲಿ ಶುಕ್ತಿ ಕೊಂಡ ವಿಷದಂತಿರಬೇಕು. ಶರಣನಾದಲ್ಲಿ ಉರಿಯುಂಡ ಕರ್ಪುರದಂತಿರಬೇಕು. ಐಕ್ಯನಾದಲ್ಲಿ ಹಸುಳೆ ಕಂಡ ಕನಸಿನಂತಿರಬೇಕು. ಹೀಂಗರಿದಡೆ ಆರರಲ್ಲಿ ಲೇಪ, ಮೂರರಲ್ಲಿ ಮುಕ್ತಿ. ಇದ ಮೀರಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂತಪ್ಪ ಘನವನಗಲಿಸಿದ ಮಹಾಪ್ರಸಾದಿಯ ನಿಲವೆಂತಿಪ್ಪುದೆಂದರೆ, ಉರಿಯುಂಡ ಕರ್ಪುರದಂತೆ, ಶರಧಿಯ ಬೆರೆದ ಸಾರದಂತೆ, ನೀರೊಳಗೆ ಬಿದ್ದ ಆಲಿಯಂತೆ, ಉರಿಯ ಗಿರಿಯನೆಚ್ಚ ಅರಗಿನ ಬಾಣದಂತೆ, ಪರಿಮಳವನುಂಡ ಹರಿಯಂತೆ. ಇದರ ವಿವರವನರಿದರೆ, ಪರವ ಬಲ್ಲವ, ತನ್ನ ಬಲ್ಲವ, ಎಲ್ಲವು ತನ್ಮಯನಾಗಿರುವ. ಇಂತಪ್ಪ ಅಣುವಿಂಗಣುವಾಗಿ ನಿಂದ ಮಹಾಪ್ರಸಾದವ ನಾನೆತ್ತ ಬಲ್ಲೆನಯ್ಯಾ ? ಇದ ಬಲ್ಲ ಪ್ರಸಾದಿಗಳ ಸೊಲ್ಲಿನೊಳಗೆ ನಾನಡಗಿದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ತಾರಕ ನುಂಗಿದ ಜಲವ, ಬೇರೆ ಶೋಧಿಸಲುಂಟೆ ಅಯ್ಯಾ ? ಉರಿಯುಂಡ ಘೃತವ ಅಳೆವುದಕ್ಕೆ ಈಡುಂಟೆ ಅಯ್ಯಾ ? ನಿಶ್ಚಯ ನಿಜವ ಗೊತ್ತಿಂಗೆ ತರಬಹುದೆ ಅಯ್ಯಾ ? ಇಷ್ಟ ವಸ್ತುವಿನಲ್ಲಿ ಲೇಪವಾಗಿ ಮತ್ತೊಂದು ಕುರುಹಿಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->