ಅಥವಾ

ಒಟ್ಟು 28 ಕಡೆಗಳಲ್ಲಿ , 15 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು. ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು. ಸವಿದ ಸವಿಯನುಪಮಿಸಬಾರದೆಂದಡೆ ಜಿಹ್ವೆಯಿಂದ ಕುರುಹುಗೊಂಡಿತ್ತು. ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ, ನಾನಾ ಭೇದಂಗಳಿಂದ ರುಚಿಮಯವಾಯಿತ್ತು. ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು, ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ? ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ ಕುರುಹುಗೊಂಡಿತ್ತೆ ? ಇದು ಕ್ರೀ ಜ್ಞಾನ ಸಂಪುಟಸ್ಥಲ. ಈ ಉಭಯಸ್ಥಲ ಲೇಪವಾದ ಮತ್ತೆ ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ?
--------------
ಮೋಳಿಗೆ ಮಹಾದೇವಿ
ದೃಕ್ಕು ಸಕಲವನವಗವಿಸುವನ್ನಕ್ಕ, ಶ್ರೋತ್ರ ಶಬ್ದವ ವೇದ್ಥಿಸುವನ್ನಕ್ಕ, ಕ್ರೀ ಶೂನ್ಯವೆನಲೇತಕ್ಕೆ? ಭಾವಿಸಿಹೆನೆಂಬನ್ನಕ್ಕ ಕ್ರೀ ಅರಿದೆಹೆನೆಂಬನ್ನಕ್ಕ ಸೂತಕ. ಕುಕ್ಕಳಗುದಿವುದ ಹುಟ್ಟಿನಲ್ಲಿ ತೆಗೆದಿಕ್ಕುವಂತೆ, ಅದು ದೃಷ್ಟಕ್ಕ ದೃಷ್ಟ, ನಿಶ್ಚಯಕ್ಕೆ ನಿಜ. ಈ ಗುಣ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 49 ||
--------------
ದಾಸೋಹದ ಸಂಗಣ್ಣ
ಈಶ್ವರನು ಅಲಂಕೃತರೂಪಾಗಿ ಜಗವ ತಾಳಿ ಬಂದಲ್ಲಿ ಮಾಯೆಯೆಂಬ ಶಕ್ತಿ ಜ್ಯೋತಿ ಕಾಣದ ಮರೆಯಲ್ಲಿ ತಮವಡಗಿಪ್ಪ ಭೇದದಂತೆ. ಚಿತ್ತಶುದ್ಧವಿಲ್ಲದವರ ಕರ್ತೃ ಭೃತ್ಯ ಸಂಬಂಧ ಉಭಯಕ್ಕೂಸರಿ. ಅರಿದು ಮಾಡುವಲ್ಲಿ ಅವನ ಅನುವನರಿದು ಮಾಡಿಸಿಕೊಂಬಲ್ಲಿ ಲಾಗಿನ ಪಶುವಿನಂತೆ ಉಭಯಗುಣ ಭೇದ. ಉಭಯಸ್ಥಲ ನಿರತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಧ್ಯಾನವಿಲ್ಲದೆ ಲಿಂಗವ ನಿಧಾನಿಸಬಹುದೆ? ಲಿಂಗವಿಲ್ಲದೆ ಧ್ಯಾನಕ್ಕೆ ಸಂಗ ಸನ್ಮತವುಂಟೆ? ಈ ಗುಣ ಶ್ರುತ ದೃಷ್ಟ ಕೂಡಿ ಅನುಮಾನಕ್ಕೆ ಒಳಗಾದಂತೆ. ಈ ಗುಣ ಅಂಗಲಿಂಗ ಆತ್ಮಲಿಂಗ ಸಂಗ ಸುಸಂಗಿಯ ಸಂಗ, ಉಭಯಸ್ಥಲ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 51 ||
--------------
ದಾಸೋಹದ ಸಂಗಣ್ಣ
ಏಕರೂಪವಾದ ತೆರನ ತಿಳಿದು, ಆ ಏಕರೂಪು ತ್ರಿವಿಧಸಂಬಂದ್ಥಿಯಾಗಿ, ಆ ತ್ರಿವಿಧಸ್ಥಲದಲ್ಲಿ ಕರ್ತೃ ತ್ರಿವಿಧ ಕೂಡಲಾಗಿ ಕಾಯ ಜೀವದಂತೆ ಉಭಯಸ್ಥಲವಾಯಿತ್ತು. ಉಭಯಸ್ಥಲ ಪ್ರಥಮಸ್ಥಲದಲ್ಲಿ ಕೂಡಲಿಕ್ಕೆ ಏಕಸ್ಥಲ, ಐಕ್ಯ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಕಾಯದ ಮರೆಯ ಜೀವ, ಹೇಗಿಹುದೆಂಬುದನರಿ. ಜೀವದ ತ್ರಾಣದ ಕಾಯ, ಹೇಗಳಿವುದೆಂಬುದನರಿ. ಇಂತೀ ಉಭಯಸ್ಥಲ. ಕ್ರೀ ನಿಃಕ್ರೀ ಎಂಬಲ್ಲಿ ಅದೊಂದು ಭೇದ, ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪನಾದ ಕಾರಣ.
--------------
ಬಿಬ್ಬಿ ಬಾಚಯ್ಯ
ಎನ್ನ ದ್ವಿವಿಧಾಕ್ಷರದಲ್ಲಿ ಲಿಂಗ ಸ್ವರೂಪಾಗಿ ಬಂದು ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರದಲ್ಲಿ ಜಂಗಮಲಿಂಗ ಸ್ವರೂಪಾಗಿ ಬಂದು ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ದ್ವಿವಿಧಾಕ್ಷರ ತ್ರಿವಿಧಾಕ್ಷರವೇ ಅಂಗ ಪ್ರಾಣ. ಆ ಅಂಗ ಪ್ರಾಣವೇ ಉಭಯಸ್ಥಲ. ಆ ಉಭಯಸ್ಥಲದ ಭೇದವನು ದ್ವೆ ೈತಾದ್ವೆ ೈತಿಗಳೆತ್ತ ಬಲ್ಲರಯ್ಯ? ಇದನರಿದು ಸಿದ್ಧೇಶ್ವರನು ಅಂಗ ಪ್ರಾಣದಲ್ಲಿ ಲಿಂಗ ಜಂಗಮವ ಏಕಾರ್ಥವ ಮಾಡಿ ತೋರಿಸಿಕೊಟ್ಟ ಕಾರಣ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಅರ್ಕನ ಪ್ರಭೆಯೊಳಕೊಂಡ ಅರಿಸಿನದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂದಿಂತು ಲಿಂಗಸ್ಥಲವಾರಕ್ಕಂ ವಿವರ: ಆಚಾರಲಿಂಗಸ್ಥಲ ತ್ರಿವಿಧ:ಸದಾಚಾರ, ನಿಯತಾಚಾರ, ಗಣಾಚಾರ ಇದಕ್ಕೆ ವಿವರ: ಎಲ್ಲ ಜನವಹುದೆಂಬುದೆ ಸದಾಚಾರ. ಹಿಡಿದ ವ್ರತನಿಯಮವ ಬಿಡದಿಹುದೆ ನಿಯತಾಚಾರ. ಶಿವನಿಂದೆಯ ಕೇಳದಿಹುದೆ ಗಣಾಚಾರ. ಗುರುಲಿಂಗಸ್ಥಲ ತ್ರಿವಿಧ:ದೀಕ್ಷೆ, ಶಿಕ್ಷೆ, ಸ್ವಾನುಭಾವ. ಇದಕ್ಕೆ ವಿವರ : ದೀಕ್ಷೆಯೆಂದಡೆ ಗುರು, ಶಿಕ್ಷೆಯೆಂದಡೆ ಜಂಗಮ, ಸ್ವಾನುಭಾವವೆಂದಡೆ ತನ್ನಿಂದ ತಾನರಿವುದು. ಶಿವಲಿಂಗಸ್ಥಲ ತ್ರಿವಿಧ:ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ ಇದಕ್ಕೆ ವಿವರ : ಶ್ರೀಗುರು ಕರಸ್ಥಲದಲ್ಲಿ ಅನುಗ್ರಹವ ಮಾಡಿಕೊಟ್ಟುದೀಗ ಇಷ್ಟಲಿಂಗ, ತನುಗುಣ ನಾಸ್ತಿಯಾದುದೇ ಪ್ರಾಣಲಿಂಗ, ಜಾಗ್ರಸ್ವಪ್ನಸುಷುಪ್ತಿಯಲ್ಲಿ ಲಿಂಗವಲ್ಲದೆ ಪೆರತೊಂದನರಿಯದಿಪ್ಪುದೆ ತೃಪ್ತಿಲಿಂಗ. ಜಂಗಮಲಿಂಗಸ್ಥಲ ತ್ರಿವಿಧ :ಸ್ವಯ, ಚರ, ಪರ, ಇದಕ್ಕೆ ವಿವರ : ಸ್ವಯವೆಂದಡೆ ತಾನು. ಚರವೆಂದಡೆ ಲಾಂಛನ ಮುಂತಾಗಿ ಚರಿಸುವುದು. ಪರವೆಂದಡೆ ಅರಿವು ಮುಂತಾಗಿ ಚರಿಸುವುದು. ಪ್ರಸಾದಲಿಂಗಸ್ಥಲ ತ್ರಿವಿಧ :ಶುದ್ಧ, ಸಿದ್ಧ, ಪ್ರಸಿದ್ಧ ಇದಕ್ಕೆ ವಿವರ : ಶುದ್ಧವೆಂದಡೆ ಗುರುಮುಖದಿಂದ ಮಲತ್ರಯವ ಕಳೆದುಳಿದ ಶೇಷ, ಸಿದ್ಧವೆಂದಡೆ ಲಿಂಗಮುಖದಿಂದ ಕರಣಮಥನಂಗಳ ಕಳೆದುಳಿದ ಶೇಷ. ಪ್ರಸಿದ್ಧವೆಂದಡೆ ಜಂಗಮಮುಖದಿಂದ ಸರ್ವಚೈತನ್ಯಾತ್ಮಕ ತಾನೆಯಾಗಿ ಖಂಡಿತವಳಿದುಳಿದ ಶೇಷ. ಮಹಾಲಿಂಗಸ್ಥಲ ತ್ರಿವಿಧ:ಪಿಂಡಜ, ಅಂಡಜ, ಬಿಂದುಜ. ಇದಕ್ಕೆ ವಿವರ : ಪಿಂಡಜವೆಂದಡೆ ಘಟಾಕಾಶ. ಅಂಡಜವೆಂದಡೆ ಬ್ರಹ್ಮಾಂಡ. ಬಿಂದುಜವೆಂದಡೆ ಮಹಾಕಾಶ. ಇಂತು ಲಿಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಇನ್ನು ಅಂಗಸ್ಥಲವಾವುವೆಂದಡೆ: ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಇನ್ನು ಅಂಗಸ್ಥಲವಾರಕ್ಕೆ ವಿವರ : ಭಕ್ತಸ್ಥಲ ತ್ರಿವಿಧ :ಗುರುಭಕ್ತ, ಲಿಂಗಭಕ್ತ, ಜಂಗಮಭಕ್ತ. ತನುಕ್ರೀಯಿಂದ ತನುಮನಧನವನರ್ಪಿಸುವನಾಗಿ ಗುರುಭಕ್ತ. ಮನಕ್ರೀಯಿಂದ ಮನತನುಧನವನರ್ಪಿಸುವನಾಗಿ ಲಿಂಗಭಕ್ತ. ಧನಕ್ರೀಯಿಂದ ಧನಮನತನುವನರ್ಪಿಸುವನಾಗಿ ಜಂಗಮಭಕ್ತ. ಮಾಹೇಶ್ವರಸ್ಥಲ ತ್ರಿವಿಧ:ಇಹಲೋಕವೀರ, ಪರಲೋಕವೀರ, ಲಿಂಗವೀರ. ಅದಕ್ಕೆ ವಿವರ : ಮತ್ರ್ಯಲೋಕದ ಮಹಾಗಣಂಗಳು ಮೆಚ್ಚುವಂತೆ, ಷಡ್ದರ್ಶನಂಗಳ ನಿರಸನವ ಮಾಡಿ, ತನ್ನ ಸಮಯಕ್ಕೆ ಪ್ರಾಣವ ವೆಚ್ಚಿಸುವನಾಗಿ ಇಹಲೋಕವೀರ. ದೇವಲೋಕದ ದೇವಗಣಂಗಳು ಮೆಚ್ಚುವಂತೆ, ಸರ್ವಸಂಗಪರಿತ್ಯಾಗವ ಮಾಡಿ ಚತುರ್ವಿಧಪದಂಗಳ ಧರ್ಮಾರ್ಥಕಾಮಮೋಕ್ಷಂಗಳ ಬಿಟ್ಟಿಹನಾಗಿ ಪರಲೋಕವೀರ. ಅಂಗಲಿಂಗಸಂಗದಿಂದ ಸರ್ವಕರಣಂಗಳು ಸನ್ನಹಿತವಾಗಿಪ್ಪನಾಗಿ ಲಿಂಗವೀರ. ಪ್ರಸಾದಿಸ್ಥಲ ತ್ರಿವಿಧ :ಅರ್ಪಿತಪ್ರಸಾದಿ, ಅವಧಾನಪ್ರಸಾದಿ, ಪರಿಣಾಮಪ್ರಸಾದಿ ಅದಕ್ಕೆ ವಿವರ : ಕಾಯದ ಕೈಯಲ್ಲಿ ಸಕಲಪದಾರ್ಥಂಗಳು ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷೆ*ಯ ಮಾಡಿ, ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ. ಅಂಗಾಶ್ರಯವಳಿದು ಲಿಂಗಾಶ್ರಯವುಳಿದು, ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ. ಪ್ರಾಣಲಿಂಗಿಸ್ಥಲ ತ್ರಿವಿಧ :ಆಚಾರಪ್ರಾಣಿ, ಲಿಂಗಪ್ರಾಣ, ಜಂಗಮಪ್ರಾಣಿ. ಅದಕ್ಕೆ ವಿವರ : ಮನೋವಾಕ್ಕಾಯದಲ್ಲಿ ಆಚಾರವ ಅವಗ್ರಹಿಸಿಹನಾಗಿ ಆಚಾರಪ್ರಾಣಿ. ಬಾಹ್ಯೋಪಚಾರಂಗಳ ಮರೆದು ಲಿಂಗಕ್ಕೆ ತನ್ನ ಪ್ರಾಣವನೆ ಪೂಜೆಯ ಮಾಡುವನಾಗಿ ಲಿಂಗಪ್ರಾಣಿ. ಬಾಹ್ಯಭಕ್ತಿಯ ಮರೆದು ಜಂಗಮಕ್ಕೆ ತನ್ನ ತನುಮನಪ್ರಾಣಂಗಳ ನಿವೇದಿಸುವನಾಗಿ ಜಂಗಮಪ್ರಾಣಿ ಶರಣಸ್ಥಲ ತ್ರಿವಿಧ:ಇಷ್ಟಲಿಂಗಾರ್ಚಕ, ಪ್ರಾಣಲಿಂಗಾರ್ಚಕ, ತೃಪ್ತಿಲಿಂಗಾರ್ಚಕ ಅದಕ್ಕೆ ವಿವರ : ಅನಿಷ್ಟ ನಷ್ಟವಾಯಿತ್ತಾಗಿ ಇಷ್ಟಲಿಂಗಾರ್ಚಕ. ಸ್ವಯಪರವನರಿಯನಾಗಿ ಪ್ರಾಣಲಿಂಗಾರ್ಚಕ. ಇಹಪರವನರಿಯನಾಗಿ ತೃಪ್ತಿಲಿಂಗಾರ್ಚಕ. ಐಕ್ಯಸ್ಥಲ ತ್ರಿವಿಧ :ಕಾಯಲಿಂಗೈಕ್ಯ, ಜೀವಲಿಂಗೈಕ್ಯ, ಭಾವಲಿಂಗೈಕ್ಯ. ಅದಕ್ಕೆ ವಿವರ : ಕ್ರಿಯೆಯರತುದೆ ಕಾಯಲಿಂಗೈಕ್ಯ. ಅನುಭಾವವರತುದೆ ಜೀವಲಿಂಗೈಕ್ಯ. ಅರಿವು ಸಿನೆ ಬಂಜೆಯಾದುದೆ ಭಾವಲಿಂಗೈಕ್ಯ. ಇಂತೀ ಅಂಗಸ್ಥಲ ಅರಕ್ಕಂ ಹದಿನೆಂಟು ಸ್ಥಲವಾಯಿತ್ತು. ಉಭಯಸ್ಥಲ ಮೂವತ್ತಾರರೊಳಗಾದ ಸರ್ವಾಚಾರಸಂಪತ್ತನು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಭಕ್ತನ ಅಂಗಸ್ಥಲ, ಮಹೇಶ್ವರನ ಭಾವಸ್ಥಲ, ಪ್ರಸಾದಿಯ ಜ್ಞಾನಸ್ಥಲ, ಪ್ರಾಣಲಿಂಗಿಯ ಉಭಯಸ್ಥಲ, ಶರಣನ ಏಕಸ್ಥಲ, ಐಕ್ಯನ ಕೂಟಸ್ಥಲ. ಇಂತೀ ಆರುಸ್ಥಲವ ವೇಧಿಸಿ ನಿಂದಲ್ಲಿ, ಮಹದೈಕ್ಯ ಏಕಮೂರ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೇಳಿ, ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ. ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ, ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ, ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ. ಅದೆಂತೆನಲು : ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ, ಉಭಯಸ್ಥಲ, ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ, ಈ ಹದಿನೈದು ಭಕ್ತಸ್ಥಲಂಗಳು. ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ, ಈ ಒಂಬತ್ತು ಆಚಾರಲಿಂಗಸ್ಥಲಂಗಳು. ಇಂತೀ ಉಭಯ ಸ್ಥಲವು ಕೂಡಿ 24 ಸ್ಥಲಂಗಳಾಗಿ, ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು. ಮಹೇಶ್ವರಸ್ಥಲ, ಲಿಂಗನಿಷಾ*ಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ, ಈ ಒಂಬತ್ತು ಮಹೇಶ್ವರಸ್ಥಲಂಗಳು. ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ, ಈ ಒಂಬತ್ತು ಗುರುಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 18 ಸ್ಥಲಂಗಳಾಗಿ, ಸ್ವಾಧಿಷಾ*ನಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ, ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ, ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ, ಈ ಏಳು ಪ್ರಸಾದಿಸ್ಥಲಂಗಳು. ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶ್ರೂಷಾಸ್ಥಲ, ಸೇವ್ಯಸ್ಥಲ, ಈ ಒಂಬತ್ತು ಶಿವಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 16 ಸ್ಥಲಂಗಳಾಗಿ, ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ, ಶಿವಯೋಗಸಮಾಧಿಸ್ಥಲ,ಲಿಂಗನಿಜಸ್ಥಲ, ಅಂಗಲಿಂಗಸ್ಥಲ, ಈ ಐದು ಪ್ರಾಣಲಿಂಗಿಸ್ಥಲಂಗಳು, ಜೀವಾತ್ಮಸ್ಥಲ,ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೇಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ, ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಈ ಹನ್ನೆರಡು ಜಂಗಮಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 17 ಸ್ಥಲಂಗಳಾಗಿ, ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು. ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೇಶಸ್ಥಲ, ಶೀಲಸಂಪಾದನಾಸ್ಥಲ, ಈ ನಾಲ್ಕು ಶರಣಸ್ಥಲಂಗಳು. ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು. ಐಕ್ಯಸ್ಥಲ, ಸರ್ವಾಚಾರಸಂಪತ್ತಿಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ, ಈ ನಾಲ್ಕು ಐಕ್ಯಸ್ಥಲಂಗಳು. ಕೊಂಡುದು ಪ್ರಸಾದಿಸ್ಥಲ, ನಿಂದುದೋಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ, ಸ್ವಯಪರಜ್ಞಾನಸ್ಥಲ, ಭಾವಾಭಾವನಷ್ಟಸ್ಥಲ, ಜ್ಞಾನಶೂನ್ಯಸ್ಥಲ, ಈ ಒಂಬತ್ತು ಮಹಾಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು. ಇಂತೀ 101 ಸ್ಥಲಕುಳಂಗಳು ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ, ಆ ಆರು ಚಕ್ರಂಗಳನು ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ, ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ ಗುರುಲಿಂಗಜಂಗಮವ ಕುಳ್ಳಿರಿಸಿ, ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ, ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ಆ ಗುರುಲಿಂಗಜಂಗಮವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ ಮಹಾಶರಣರ ಪರಮಗುರು ಬಸವರಾಜದೇವರ ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ ? ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ ? ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ ಆಶೆಯ ಪಾಶವ ಕೊಲ್ಲಬಲ್ಲುದೆ ? ಮರೆಯ ಗ್ರಾಸವ ಕೊಂಬ ಮತ್ರ್ಯನಂತೆ ಈಷಣತ್ರಯಕ್ಕೆ ಮಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ ಈ ಯಾಚಕರುಗಳಿಗೆ ಏತರ ಬೋಧೆ ? ಇದು ನಿಹಿತದ ಉಭಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಮರನ ತಾಳೂದಕ್ಕೆ ಪೃಥ್ವಿ ಆಧಾರವಾಗಿ, ಶಾಖೆಯ ತಾಳೂದಕ್ಕೆ ಮರನಾಧಾರವಾಗಿ, ಲತೆಯ ತಾಳೂದಕ್ಕೆ ಶಾಖೆ ಆಧಾರವಾಗಿ, ಲತೆಯ ಬಿಡುಮುಡಿಯಲ್ಲಿ ಕುಸುಮತೋರಿ ಕುಸುಮದ ತೊಟ್ಟಿನಲ್ಲಿ ಕುಸುಮವಳಿದು, ಕಾಯಿ ಬಲಿದು ರಸ ಬಲಿದು ಹಣ್ಣಾದಂತೆ, ತೊಟ್ಟು ಬಿಡುವನ್ನಕ್ಕ ಕಾಯ ಶಿಲೆಯ ಪೂಜೆ, ಆತ್ಮ ಅರಿವಿನ ಪೂಜೆ. ಉಭಯಸ್ಥಲ ನಿರುತವಾಗಿ ಬಿಟ್ಟು ನಿಂದುದು ವಸ್ತುವಿನ ಉಳುಮೆ. ಆ ಉಳುಮೆ ಲೇಪವಾಗಿ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಭೃತ್ಯರೂಪೊಂದು ಭಕ್ತಿಸ್ಥಲ, ಕರ್ತೃರೂಪೊಂದು ವಸ್ತು. ಈ ಉಭಯ ಜಗದ ಹಾಹೆ ನಡೆಯಬೇಕಾದಲ್ಲಿ, ಮೂರು ಭಕ್ತಿಸ್ಥಲವಾಯಿತ್ತು. ಮೂರು ಕರ್ತೃಸ್ಥಲವಾಯಿತ್ತು. ಭಕ್ತ ಮಾಹೇಶ್ವರ ಪ್ರಸಾದಿ, ಈ ತ್ರಿವಿಧಭಾವ ಭಕ್ತಿರೂಪು. ಪ್ರಾಣಲಿಂಗಿ ಶರಣ ಐಕ್ಯ, ಈ ತ್ರಿವಿಧ [ಭಾವ] ಕರ್ತೃಸ್ವರೂಪು. ಇಂತೀ ಉಭಯಭೇದದಲ್ಲಿ, ವಸ್ತು ಮತ್ರ್ಯಕ್ಕೆ ಬಂದು, ಮುಂದೆ ಆಶ್ರಯವ ಕಟ್ಟಿದ ಕಾರಣ, ಭಕ್ತಿಗೆ ಬಸವಣ್ಣನಾಗಿ, ಆ ಭಕ್ತಿಯನೊಪ್ಪುಗೊಂಬುದಕ್ಕೆ ವಸ್ತು ಪ್ರಭುರೂಪಾಗಿ ಬಂದ ಕಾರಣದಲ್ಲಿ, ಉಭಯಸ್ಥಲ ಗೋಚರಿಸದೆಂದು ಷಟ್ಸ್ಥಲವಾಯಿತ್ತು. ಆ ಸ್ಥಲದ ನಾಮ ರೂಪಿನಲ್ಲಿ ನಾನಾಸ್ಥಲ ಒಡಲಾಯಿತ್ತು. ಪೂರ್ವಗತಿಯಾದಲ್ಲಿ ಸ್ಥಲ, ಉತ್ತರಗತಿಯಾದಲ್ಲಿ ನಿಃಸ್ಥಲ ಉಭಯನಾಮರೂಪು ಲೇಪವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ನಿರ್ಲೇಪವಾದನು.
--------------
ಮೋಳಿಗೆ ಮಾರಯ್ಯ
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ; ತಲೆವಿಡಿಯಿಲ್ಲ ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ; ತಲೆವಿಡಿಯಿಲ್ಲ್ಲ್ಲ. ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ, ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ; ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ; ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ ಸಿದ್ಧಾಂತ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 66 ||
--------------
ದಾಸೋಹದ ಸಂಗಣ್ಣ
ತನ್ನನರಿದು ಇದಿರನರಿಯಬೇಕೆಂಬುದು ಪ್ರಮಾಣು. ಇದಿರ ಗುಣವನರಿತು ತನ್ನ ಗುಣವನರಿದು ಸಂಪಾದಿಸುವುದು ಅಪ್ರಮಾಣು. ತನ್ನ ಗುಣವನರಿದು ನಡೆವವರೆಲ್ಲರನು ಕಾಣಬಹುದು. ಇದಿರ ಗುಣವನರಿತು ತನ್ನ ಗುಣವ ಸಂಬಂಧಿಸಿ ನಡೆವರೆಲ್ಲರನೂ ಕಾಣಬಾರದು. ಅದು ನುಡಿದು ನುಡಿಯಿಸಿಕೊಂಬ ಪ್ರತಿಶಬ್ದದಂತೆ. ತನ್ನ ಗುಣವೇ ತನಗೆ ತಥ್ಯ, ತನ್ನ ಗುಣವೇ ತನಗೆ ಮಿಥ್ಯ. ಇದಿರ ಗುಣವ ತಾನರಿದು ನಿಲಬಲ್ಲಡೆ ತನಗೆ ತಥ್ಯವೂ ಇಲ್ಲ ಮಿಥ್ಯವೂ ಇಲ್ಲ. ಇದು ದ್ವೈತಾದ್ವೈತದ ಭೇದ, ಸದ್ಯೋಜಾತಲಿಂಗಕ್ಕೆ ಉಭಯಸ್ಥಲ ನಾಶವಿನಾಶ.
--------------
ಅವಸರದ ರೇಕಣ್ಣ
ಇನ್ನಷ್ಟು ... -->