ಅಥವಾ

ಒಟ್ಟು 97 ಕಡೆಗಳಲ್ಲಿ , 40 ವಚನಕಾರರು , 91 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ? ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ ಅರಿವಿಗೆ ಮುನಿವರುಂಟೆ ಅಯ್ಯಾ? ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದರುಂಟೆ ಅಯ್ಯಾ? ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ ಅರಿವಿಂಗೆ ಶರಣು ಮರವಿಂಗೆ ಮಥನವ ಮಾಡಿದಲ್ಲದೆ ಇರೆ. ಇದು ನೀವು ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು.
--------------
ಅರಿವಿನ ಮಾರಿತಂದೆ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಭಾವವಿಕಾರ ಕಾಯಕ್ಕೆ ಚೇಗೆ. ಕಾಯದ ಕೇಡು, ಅರಿವಿಂಗೆ ಆಶ್ರಯಿಸುವದಕ್ಕೆ ಹೀನ. ಉಭಯದಲ್ಲಿ ಬಂದುದಕ್ಕೆ ಕಾಯ ಸುಂಕವ ತೆತ್ತು, ಜೀವ ಹೋಯಿತ್ತು, ಬಂಕೇಶ್ವರಲಿಂಗದಲ್ಲಿ .
--------------
ಸುಂಕದ ಬಂಕಣ್ಣ
ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ? ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ, ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ? ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ ? ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ ? ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ? ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ. ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ. ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.
--------------
ಮೋಳಿಗೆ ಮಹಾದೇವಿ
ನಾನಾ ಬಹುವರ್ಣದ ಬೊಕ್ಕಸವ ಹೊತ್ತು ಮಾಡುವಲ್ಲಿ ಭಾವದ ಬಹುಚಿತ್ತವನರಿಯಬೇಕು. ನಾನಾ ವರ್ಣದ ಆಭರಣ, ಹದಿನೆಂಟು ಆಶ್ರಯಂಗಳ ತೊಡುವಲ್ಲಿ ದ್ರವ್ಯವ ಕೊಡುವಲ್ಲಿ ಇಂದ್ರಿಯಾತ್ಮನ ಬೆಂಬಳಿಯನರಿಯಬೇಕು. ಎಂಟುರತ್ನದ ಕಾಂತಿ, ಜೀವರತ್ನದ ಕಳೆ ಭಾವಿಸಿ ಏಕವ ಮಾಡಿ ನಡೆವುದು. ನೀವು ಕೊಟ್ಟ ಕಾಯಕ ತನುವಿಂಗೆ ಕ್ರೀ, ಆತ್ಮಂಗೆ ಅರಿವು. ಆ ಅರಿವಿಂಗೆ ಮಹಾಬೆಳಕು ಒಡಗೂಡಿ ಕರಿಗೊಂಡಲ್ಲಿ ಬೊಕ್ಕಸದ ಮಣಿಹವನೊಪ್ಪಿಸಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗಕ್ಕೆ.
--------------
ಆನಂದಯ್ಯ
ಕರದಲ್ಲಿ ಲಿಂಗವ ಪಿಡಿದುಕೊಂಡು, ಕಣ್ಣುಮುಚ್ಚಿ ಸರಜಪಮಾಲೆಯ ಬೆರಳಿಂದ ಎಳೆದೆಳೆದು ಎಣಿಸುತ್ತ, ಗುರುಮೂರ್ತಿಯ ಧ್ಯಾನಿಸುತ್ತ ಕಂಡೆನೆಂಬುತ್ತ ಇರುವರೆ ಮೂಳರಿರಾ ? ನಿಮಗೆಲ್ಲಿಯದೊ ಗುರುಧ್ಯಾನ ? ವರ ಪರವಸ್ತುವಿಂಗೆ ಸರಿ ಎನಿಸಿಕೊಂಬ ಗುರುಸ್ವಾಮಿ ನಿಮ್ಮ ನೆರೆಹೊರೆಯ ಸರಿಸಮೀಪ ಗ್ರಾಮದಲ್ಲಿರಲು ಅವರನ್ನು ಲೆಕ್ಕಿಸದೆ, ಉದಾಸೀನವ ಮಾಡಿ ಕಂಡು ನಿನ್ನ ಉಂಬ ಉಡುವ ಸಿರಿ ಸಂಪತ್ತಿನೊಳು ಅವರನು ಸತ್ಕರಿಸದೆ, ಕರದಲ್ಲಿ ನೋಡಿ ಕಂಡಿಹೆನೆಂದು ಶಿರವಂ ಬಿಗಿದು, ಕಣ್ಣನೆ ತೆರೆಯದೆ, ಸ್ವರದಲಾಗ ಪಿಟಿಪಿಟಿ ಎನ್ನುತ್ತ ಅರಿದೆವೆಂಬ ಅರಿವಿಂಗೆ ಶಿರದೂಗಿ ಬೆರಗಾಗಿ ನಗುತಿರ್ದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ, ಆ ಜಲ ನಿಲೆ ಮಣ್ಣು ಮುನ್ನಿನ ಅಂಗವ ಬೆರಸಿದಂತೆ. ಆ ಕುರುಹಿಂಗೆ ಅರಿವೆ ಆಶ್ರಯವಾಗಿ, ಆ ಅರಿವಿಂಗೆ ಕರುಹಿನ ವಾಸ ಅವಗವಿಸಿದ ಮತ್ತೆ, ಬೇರೊಂದೆಡೆಯಿಲ್ಲ, ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ರಣದಲ್ಲಿ ಧನು ಮುರಿದ ಮತ್ತೆ, ಸರವೇನ ಮಾಡುವುದು ? ಅಂಗ ಲಿಂಗವ ಮರೆದಲ್ಲಿ, ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ ? ಅರಿವಿಂಗೆ ಕುರುಹು, ಅರಿವು ಕುರುಹಿನಲ್ಲಿ ನಿಂದು, ಕಾಷ್ಠದಿಂದೊದಗಿದ ಅಗ್ನಿ ಕಾಷ್ಠವ ಸುಟ್ಟು, ತನಗಾಶ್ರಯವಿಲ್ಲದಂತಾಯಿತ್ತು. ಹಾಗಾಗಬೇಕು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಮರಹು ಬಂದಿಹುದೆಂದು ಗುರು ಕುರುಹನೆ ಕೊಟ್ಟ ; ಅರಿವಿಂಗೆ ಪ್ರಾಣಲಿಂಗ ಬೇರೆ ಕಾಣಿರಣ್ಣಾ. ನಿರ್ಣಯವಿಲ್ಲದ ಭಕ್ತಿಗೆ ಬರಿದೆ ಬಳಲಲದೇತಕೆ ? ಚೆನ್ನಮಲ್ಲಿಕಾರ್ಜುನಯ್ಯನನರಿದು ಪೂಜಿಸಿದಡೆ ಮರಳಿ ಭವಕ್ಕೆ ಬಹನೆ ?
--------------
ಅಕ್ಕಮಹಾದೇವಿ
ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ. ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ. ಅರಿವು ನಷ್ಟವಾದಲ್ಲಿ, ಉಭಯವ ಭೇದಿಸುವದಕ್ಕೆ ಅಪ್ರಮಾಣು. ರೂಪು ರುಚಿ ದೃಷ್ಟವಾಗಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಕಾಮನ ಕಣ್ಣ ಮುಳ್ಳ ಕಳೆದು ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ ತಿಳಿದು ನೋಡಾ ಸಂಗನಬಸವಣ.
--------------
ಅಲ್ಲಮಪ್ರಭುದೇವರು
ಮಂತ್ರ ಭಿನ್ನವಾಯಿತ್ತೆಂದು ಕಂಥೆಯ ಬಿಡುವರೆ ಅರಿವುಳ್ಳವರು ? ಅದು ದ್ವೇಷವಲ್ಲದೆ ಅರಿವಿಂಗೆ ಸಂಬಂಧವಲ್ಲ. ಮಂತ್ರಮಧ್ಯೇ ಭವೇಲ್ಲಿಂಗಂ ಲಿಂಗಮಧ್ಯೇ ಭವೇನ್ಮಂತ್ರಂ ಮಂತ್ರಲಿಂಗದ್ವಯೋರೈಕ್ಯಂ ಇಷ್ಟಲಿಂಗಂತು ಶಾಂಕರಿ || ' ಎಂದುದಾಗಿ, ಆ ಮಂತ್ರ ಸರ್ವರ ಆಧಾರ, ಸರ್ವರ ಆತ್ಮಬೀಜವೆಂದರಿಯದೆ ಕೇಸರಿಯ ಕನಸ ಕಂಡ ವಾರಣದಂತೆ, ಈ ಭಾಷೆಹೀನರಿಗೇಕೆ ಶಂಭುಜಕ್ಕೇಶ್ವರನು ?
--------------
ಸತ್ಯಕ್ಕ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ ? ಅವಳು ತನ್ನ ಪತಿಗೆ ಓಪಳೆ ? ಈ ಉಭಯದ ಮಾರ್ಗ ಅರಿವ ಅರಿವಿಂಗೆ, ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ ? ಇದನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ.
--------------
ಸಗರದ ಬೊಮ್ಮಣ್ಣ
ಕಿರಿಯರಾದಡೇನು ? ಹಿರಿಯರಾದಡೇನು ? ಅರಿವಿಂಗೆ ಹಿರಿದು ಕಿರಿದುಂಟೆ ? ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->