ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗ ಬೇರೆ, ಶರಣ ಬೇರೆಂದು ಹಂಗಿಸಿ ನುಡಿಯಲಾಗದು. ಲಿಂಗ ಬೇರೆ, ಶರಣ ಬೇರೆಯೇ? ಶಿವಶಿವ ಒಂದೇ ಕಾಣಿರಣ್ಣ. ಸುವರ್ಣ ಆಭರಣವಾಯಿತ್ತೆಂದಡೆ, ಅದು ನಾಮ ರೂಪಭೇದವಲ್ಲದೆ ವಸ್ತುಭೇದವಲ್ಲ. ಭಕ್ತಿಯ ವೈಭವದಿಂದ ಶರಣ ಸಕಾಯನಾಗಿ ಅವತರಿಸಿದೆನೆಂದಡೆ ಬೇರಾಗಬಲ್ಲನೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೆಂದಡೂ ಶರಣನೆಂದಡೂ ಒಂದೇ ಕಾಣಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವ ನೆರೆಯರಿದು ನಿಷ್ಠೆ ನಿಬ್ಬೆರಸಿದ ಬಳಿಕ ಅಹಂಕಾರ ಮಮಕಾರಂಗಳುಂಟೆ? ಪಂಚಕ್ಲೇಶಂಗಳು ಮದ ಮತ್ಸರಗಳುಂಟೆ? ಕ್ರಾಮ ಕ್ರೋಧಂಗಳು ತಾಮಸಗುಣಂಗಳುಂಟೆ? ಲಿಂಗದಂಗವೆ ಅಂಗವಾದ ಲಿಂಗದೇಹಿಗೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವ ಸ್ಥೂಲವೆಂಬರು ಕೆಲವರು, ಲಿಂಗ ಸ್ಥೂಲವಲ್ಲ. ಲಿಂಗವ ಸೂಕ್ಷ ್ಮವೆಂಬರು ಕೆಲವರು, ಲಿಂಗ ಸೂಕ್ಷ ್ಮವಲ್ಲ. ಸ್ಥೂಲ ಸೂಕ್ಷ ್ಮದ ವೇಲಣ ಜ್ಞಾನ ರೂಪು ಪರಮಾನಂದ ಪರಬ್ರಹ್ಮವೇ ಲಿಂಗವೆಂದರಿದ ಅರಿವು ಅಖಂಡ ರೂಪು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು, ತಾನೇ ಬೇರಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಲಿಂಗವನಿರಿಸಿ ನೆನೆವುತ್ತಿದ್ದ ಕಾರಣ, ಪ್ರಾಣ ಲಿಂಗವಾಯಿತ್ತು. ಆ ಲಿಂಗ ಸರ್ವಕರಣಂಗಳ ವೇಧಿಸಿ, ಕರಣಂಗಳು ಲಿಂಗ ಕಿರಣಂಗಳಾದ ಕಾರಣ ಒಳಗೆ ಕರತಳಾಮಳಕದಂತೆ ಲಿಂಗ ನೆಲೆಗೊಂಡಿತ್ತಾಗಿ ಹೊರಗೇನೆಂದೂ ಅರಿಯನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀವು ಪ್ರಾಣಲಿಂಗವಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವೇದಿಯಾದ ಶರಣಂಗೆ, ಕಂಗಳ ಕೊನೆಯಿಂದ ನೋಡಿದ ಸರ್ವಲೋಕವೆಲ್ಲ ಚಿದಾಕಾಶಮಯವಾಗಿ ತೋರುವುದಲ್ಲದೆ, ಮತ್ತೊಂದು ಪರಿಯಾಗಿ ತೋರದು ನೋಡಾ. ಆ ಶರಣನು ಬ್ರಹ್ಮಜ್ಞಾನವೇ ಜೋಡಾಗಿ ದುಃಖರಹಿತನು. ಆ ಅಜಡರೂಪ ನಿಜಯೋಗಿಯ ಜ್ಞಾನವು ಸುಷುಪ್ತಿಯನೈದಿತ್ತಾಗಿ, ಆಕಾಶದ ಕುಸುಮದಂತೆ, ತನುವಿಲ್ಲದ ಘನರೂಪನು. ಮನವೆಂಬ ಅಣುವ ನುಂಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪದದಲ್ಲಿ ಪ್ರವೇಶವಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವ ನೋಡಲೆಂದು ಅಂಗವಿಸಹೋದರೆ ಆ ಲಿಂಗ ತನ್ನತ್ತ ಪಶ್ಚಿಮಮುಖವಾಗಿ ನೋಡುತ್ತಿರೆ ತಾ ಪೂರ್ವಮುಖವಾಗಿ ನೋಡಲು ಮಹಾಶ್ಚರ್ಯದ ರೂಪಾಗಿ ಕಾಣಿಸುತ್ತದೆ ನೋಡಾ. ಉದಕದೊಳಗಣ ಜ್ಯೋತಿಯದು ಉದಯಬಿಂದು ರತ್ನದಂತೆ ತೋರುತ್ತದೆ ನೋಡಾ. ಪೂರ್ಣಚಂದ್ರನಂತೆ ಅಮೃತಮಯ ಮಂಗಲಸ್ವರೂಪ ಪರಮಾನಂದ ನೋಡಾ. ``ಯಥಾಪೋ ಜ್ಯೋತಿರಾಕಾರಂ ಬ್ರಹ್ಮಾಮೃತ ಶಿವಾತ್ಮಕಂ' ಎಂದುದಾಗಿ ಎನ್ನಲೋಚನಾಗ್ರದಲ್ಲಿ ಬೆಳಗುವ ಪರಬ್ರಹ್ಮವನು ನೆನೆದು ಸುಖಿಯಾದೆನು, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
--------------
ಸ್ವತಂತ್ರ ಸಿದ್ಧಲಿಂಗ
ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ, ಪ್ರಸಾದಿ ಭಕ್ತಿ ಬೀಜದ ಬಿತ್ತಿ ಶುದ್ಧ ಪದಾರ್ಥವ ಬೆಳೆದು, ಆ ಪದಾರ್ಥವ ಲಿಂಗಾರ್ಪಿತವ ಮಾಡಿ ಆ ಪ್ರಸಾದವ ತಾನಿಲ್ಲದೆ ಭೋಗಿಸಿ ನಿತ್ಯಸುಖಿಯಾದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗದ ಕಲೆಯನರಿದಲ್ಲದೆ ಭಕ್ತಿ ವಿರಕ್ತಿಯೆಂಬವು ದೊರಕೊಳ್ಳವು ನೋಡಾ. ಲಿಂಗದ ಕಲೆಯನರಿದಲ್ಲದೆ ಜ್ಞಾನ ಆನಂದವು ದೊರಕೊಳ್ಳವು ನೋಡಾ. ಲಿಂಗದ ಕಲೆಯನರಿದಲ್ಲದೆ ಕ್ಷಮೆ ದಮೆ ಸಮತೆ ಸದಾಚಾರಂಗಳು ದೊರಕೊಳ್ಳವು ನೋಡಾ. ಲಿಂಗದ ಕಲೆಯನರಿದಲ್ಲದೆ ಸದ್ಗುಣಗಣ ವಿನಯ ಮೃದುವಚನ ದೊರಕೊಳ್ಳವು ನೋಡಾ. ಇಂತನಂತ ಗುಣವಿಲ್ಲದಡೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಲಿಂಗವನರಿದುದಕ್ಕೆ, ಚಿಹ್ನವಲ್ಲ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗಭಕ್ತನ ಇಂದ್ರಿಯಂಗಳು, ಲಿಂಗ ಸನ್ನಿಹಿತವಾಗಿ ಲಿಂಗಾರ್ಚನೆಯ ಮಾಡಿ ಲಿಂಗಾವಧಾನಿಗಳಾಗಿ ಲಿಂಗಗರ್ಭಸದನದಲ್ಲಿ ಅಡಗಿ, ಮತ್ತಲ್ಲಿಯೆ ಉದಿಸಿ ಲಿಂಗಸೇವೆಯ ಮಾಡಿ, ಪ್ರಸಾದವ ಪಡೆದು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಿಡದೆ ವರ್ತಿಸುತ್ತಿಹವು.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗನಿಷಾ*ಭರಿತನಾದ ಕಾರಣ ಅಂಗಗುಣವಳಿದು ಕಂಗಳು ಲಿಂಗದಲ್ಲಿ ಲೀಯವಾದವಾಗಿ ಅಂಗಜನ ಭಯವಿಲ್ಲ. ಲಿಂಗವೆಂಬಂತೆ ಇಹನಾಗಿ, ಕಾಲನ ಭಯವಿಲ್ಲ. ಇಹಪರವೆಂಬೆರಡರ ದೆಸೆಯ ಹೊದ್ದನಾಗಿ ಮಾಯಾಭಯವಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣನ ಚಾರಿತ್ರ ಆವ ಲೋಕದೊಳಗೂ ಇಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ. ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ. ಲಿಂಗವೆಂಬುದು ಸರ್ವಲೋಕೋತ್ಪತ್ತಿಗೆ ಮೂಲಕಾರಣ. ಲಿಂಗವೆಂಬುದು ಜನ್ಮವಾರಿಧಿಯ ದಾಂಟಿಸುವ ಭೈತ್ರವು. ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ ಜ್ಯೋತಿರ್ಮಯ ಲಿಂಗವು. ಇಂತೀ ಲಿಂಗದ ಮರ್ಮವನರಿದವನೇ ಅರಿದವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗವೇ ತಾನಾಗಿ, ತಾನೇ ಲಿಂಗವಾಗಿ ಲಿಂಗಲೀಯವಾದ ಲಿಂಗೈಕ್ಯಂಗೆ ವಿಶ್ವಮೋಹಿನಿ ಶಕ್ತಿ ಮೋಹಕವಿಲ್ಲದೆ ಹೋಯಿತ್ತು. ಇನ್ನು ಶಬ್ದ್ದಾದಿ ವಿಷಯೇಂದ್ರಿಯಂಗಳು ವಿಷಯಭೋಗಂಗಳು ಇಲ್ಲದೆ ಹೋದವು. ಭಾನುತೇಜೋಜಾಲ ಭಾನುವಿನೊಳಡಗಿದಂತೆ ಸರ್ವ ಕರಣಂಗಳು ತನ್ನೊಳಗಡಗಿ ತಾನೆ ಉಳಿದ ಉಳುಮೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಮತ್ತಿಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಲಿಂಗದಲ್ಲಿ ಲೀಯವಾದ ಪರಮಾನಂದ ಸ್ವರೂಪಂಗೆ ಕಾಯವಿಲ್ಲ, ಕಾಯವಿಲ್ಲಾಗಿ ಕರ್ಮವಿಲ್ಲ. ಆದೆಂತೆಂದಡೆ: ಕಾರ್ಯವಿಲ್ಲದ ಕುಲಾಲಚಕ್ರಭ್ರಮಣದಂತೆ, ದೇಹವಿಡಿದು ಚರಿಸಿದನೆಂದಡೆ ದೇಹಿಯೆನಬಹುದೇ ಶರಣನಾ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಬೇರಿಲ್ಲಾ.
--------------
ಸ್ವತಂತ್ರ ಸಿದ್ಧಲಿಂಗ