ಅಥವಾ
(51) (38) (5) (1) (2) (4) (0) (0) (8) (5) (0) (2) (0) (0) ಅಂ (20) ಅಃ (20) (29) (3) (19) (3) (0) (6) (0) (13) (0) (0) (0) (0) (0) (0) (0) (25) (0) (6) (2) (23) (18) (0) (15) (13) (22) (3) (4) (0) (13) (3) (42) (1) (32) (22) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಇಷ್ಟಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಜಂಗಮಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು. ಗುರು ಲಿಂಗ ಜಂಗಮದ ಈ ತ್ರಿವಿಧಪ್ರಸಾದವ ಸೇವಿಸುವಲ್ಲಿ ಏಕರತಿಯಾಗಿರಬೇಕು. ಅಂತಲ್ಲದೆ, ಅನ್ಯಲಿಂಗ ಪ್ರಸಾದವ ಕೊಳಲಾಗದು. ಅದೇನು ಕಾರಣವೆಂದಡೆ: ವೀರಶೈವ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಂಬ ಕ್ರಿಯೆಗೆ ಬಾರದಾಗಿ. ಭಕ್ತಾಂಗಕೋಟಿಗಳಲ್ಲಿ ಬೇರೆ ಬೇರೆ ಲಿಂಗ ತೋರಿತ್ತೆಂದಡೆ ಅದು ಬೇರಾಗಬಲ್ಲುದೆ? ಹಲವು ಘಟ ಜಲಗಳಲ್ಲಿ ಚಂದ್ರನೊಬ್ಬ ತೋರಿದಂತೆ ಇಂತೀ ಪರಿಯಲ್ಲಿ ಎಸೆವುದು. ಬಹುಲಿಂಗಭಾವಂಗಳೆಂದಡೆ ಬೇರಾಗಬಲ್ಲುದೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅಂಗ ಹಲವಾದಡೇನು ಅಲ್ಲಿ ತೋರುವುದೊಂದೇ ವಸ್ತು.
--------------
ಸ್ವತಂತ್ರ ಸಿದ್ಧಲಿಂಗ
ಗುರುವೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು. ಹಿಂದೊಂದನಾಡುವರು, ಮುಂದೊಂದನಾಡುವರು. ಮತ್ತೆ, ನಂಬದೆ, ಭಕ್ತರಂತೆ, ಪಾದೋದಕ ಪ್ರಸಾದಕ್ಕೆ ಕೈಯ್ಯನಾನುವರು. ಈಶ ವೇಷವ ತೊಟ್ಟ, ವೇಷಧಾರಕರು, ತಾವೆ, ಭಕ್ತರೆಂಬರು. ಇವರು, ಮಾಯಾಪಾಶದಲ್ಲಿ, ಘಾಸಿಯಾಗದೆ ಮಾಣ್ಬರೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಜಾತ್ಯಂಧಕರು.
--------------
ಸ್ವತಂತ್ರ ಸಿದ್ಧಲಿಂಗ
ಗುರುವ ತಲೆಯಲ್ಲಿ ಹೊತ್ತು ನಡೆವ ಶಿಷ್ಯನಲ್ಲಿ ಗುರುವಡಗಿ ಶಿಷ್ಯ ಗುರುವಾದ ಪರಿಯ ಬಲ್ಲವರಾರಯ್ಯಾ? ಗುರುವಿನ ಗುರುತ್ವ ಶಿಷ್ಯಂಗಾಯಿತ್ತು, ಶಿಷ್ಯನ ಶಿಷ್ಯತ್ವ ಎಲ್ಲಿ ಹೋಯಿತ್ತೆಂದರಿಯಬಾರದು. ಗುರುವಿಲ್ಲದ ಶಿಷ್ಯಂಗೆ ಪರವಿಲ್ಲ. ಪರವಿಲ್ಲದ ಶಿಷ್ಯ ಸ್ವಯಂವಾಗನೆಂಬುದ ನಿಮ್ಮ ಶರಣರ ಅನುಭಾವದಲ್ಲಿ ಕಂಡೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರುವ ಬೆಸಗೊಳಹೋದಡೆ, ಗುರುವೆನ್ನಂತರಂಗವನರಿದು, ಜೀವ ಪರಮರ ಏಕವ ಮಾಡಿ ತೋರಿ, ಕಾಯದ ಕಂಗಳಲ್ಲಿರಿಸಿ, ಮನವ ಕೊನೆಯಲ್ಲಿ ನೆಲೆಗೊಳಿಸಿ, ಸರ್ವಾಂಗದಲ್ಲಿಯೂ, ಲಿಂಗಸಂಬಂಧವ ಮಾಡಿ ತೋರಿದನಯ್ಯಾ, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಗುರುವೇ ನಮೋ ನಮೋ. ಶರಣಾಗತರಕ್ಷಕ ಗುರುವೇ ನಮೋ ನಮೋ. ಕೀಡಿ ಕುಂಡಲಿಯ ಉಪದೇಶದಂತೆ, ಎನ್ನ ನಿಮ್ಮಂತೆ ಮಾಡಿದ ಗುರುವೇ ನಮೋ ನಮೋ. ನಿತ್ಯ ಪರಮೈಶ್ವರ್ಯದ ಮುಕ್ತಿರಾಜ್ಯವ ಕೊಟ್ಟ ಗುರುವೇ ನಮೋ ನಮೋ. ಸಕಲವನೆನ್ನೊಳಗಿರಿಸಿ, ಸಕಲದೊಳಹೊರಗೆ ಎನ್ನ ವ್ಯಾಪಕವ ಮಾಡಿ ತೋರಿದ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಗುರುವೇ ನಮೋ ನಮೋ.
--------------
ಸ್ವತಂತ್ರ ಸಿದ್ಧಲಿಂಗ
ಗುರು ಲಿಂಗ ಜಂಗಮ ಪ್ರಸಾದವೆಂಬ ಚತುರ್ವಿಧದ ಏಕರಸವೇ ಪಾದೋದಕವೆನಿಸುವುದು. ಆ ಪಾದೋದಕ ರೂಪಾದಾತನೇ ಭಕ್ತನು. ಆ ಭಕ್ತನೊಳಗೆ ಅಡಗಿ ತೋರುವ ಗುರುಲಿಂಗ ಜಂಗಮ ಪ್ರಸಾದಕ್ಕೆ ಆ ಭಕ್ತನೆ ಆಧಾರ. ಆ ಭಕ್ತಂಗೆ ಚತುರ್ವಿಧವೊಂದಾದ ಲಿಂಗವೇ ಆಧಾರ. ಇಂತು ಒಂದನೊಂದು ಬಿಡದೆ ಒಂದಕೊಂದಾಧಾರ ಆಧೇಯವಾಗಿಹುದೆ, ಲಿಂಗಭಕ್ತನ ಇರವು ತಾನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರುಹಸ್ತಸರೋಜಗರ್ಭ ಮಧ್ಯದಲ್ಲಿ ಹುಟ್ಟಿದ ಶಿಷ್ಯನೆಂಬ ಸತಿಯು, ಗುರುವಿನ ಸದ್ಭಾವಗರ್ಭ ಮಧ್ಯದಲ್ಲಿ ಹುಟ್ಟಿದ ಲಿಂಗವೆಂಬ ಪತಿಯು, ಸಹೋದರ ಸಂಬಂಧದಿಂದರ್ದರಾಗಿ, ಶರಣಸತಿ, ಲಿಂಗಪತಿಯಾದ ಪರಿಹೊಸತು. ಇದು ವಿಪರೀತ ನೋಡ. ಸತಿಪತಿಗಳಿಬ್ಬರೂ ಹೆತ್ತವರ ಕೊಂದು, ತಾವು ಸತ್ತರು. ಇವರು ಮೂವರು ಸತ್ತ ಠಾವನರಿದೆನೆಂದಡೆ ಆರಿಗೂ ಅಸದಳ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಅವರು ಸತ್ತ ಠಾವ ನೀವೇ ಬಲ್ಲಿರಿ.
--------------
ಸ್ವತಂತ್ರ ಸಿದ್ಧಲಿಂಗ
ಗುರುವೆನೆ ಲಿಂಗವೆಂದರಿದ ಕಾರಣ, ಗುರುವ ಲಿಂಗದಲ್ಲಿ ಕಂಡೆ. ಲಿಂಗವನೆ ಜಂಗಮವೆಂದರಿದ ಕಾರಣ ಲಿಂಗವ ಜಂಗಮದಲ್ಲಿ ಕಂಡೆ. ಜಂಗಮವನೆ ನಾನೆಂದರಿದ ಕಾರಣ, ಜಂಗಮವ ನನ್ನಲ್ಲಿ ಕಂಡೆ. ನನ್ನನೆ ನಿನ್ನಲ್ಲಿ ಅರಿದ ಕಾರಣ, ನನ್ನ ನಿನ್ನಲ್ಲಿ ಕಂಡೆ. ಈ ಪರಿಯಿಂದ ಗುರು ಲಿಂಗ ಜಂಗಮ ಸಹಿತ, ನಾ ನಿನ್ನೊಳಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರುವ ನರಭಾವದಲ್ಲಿ ಕಂಡಡೆ, ನರಕ ತಪ್ಪದು ನೋಡಯ್ಯಾ. ಗುರುವ ಹರಭಾವದಲ್ಲಿ ಕಂಡಡೆ, ಮೋಕ್ಷ ತಪ್ಪದು ನೋಡಯ್ಯಾ. ಗುರುಪೂಜೆಯೆ ಹರಪೂಜೆಯೆಂದರಿದು, ಗುರುಪೂಜೆಯ ಮಾಡಿದಡೆ, ಹರಪೂಜೆ ತಪ್ಪದು ನೋಡಯ್ಯ. ಗುರುವಿನ ಒಲುಮೆಯೇ ಹರನ ಒಲುಮೆ. ಇದು ಸತ್ಯ. ನೀನೇ ಬಲ್ಲೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಭಕ್ತನ, ಗುರುಭಕ್ತಿಯಿದು.
--------------
ಸ್ವತಂತ್ರ ಸಿದ್ಧಲಿಂಗ
ಗುರುದೇವನೆ ಮಹಾದೇವನು, ಗುರುದೇವನೇ ಪರಶಿವನು. ನಿಃಕಲಪರವಸ್ತು ಗುರುವಾಗಿ, ಸಕಲರೂಪಾದ ನೋಡಯ್ಯಾ. ಮಹಾಜ್ಞಾನನಿಧಿ, ಶಿಷ್ಯಾನುಗ್ರಹ ಕಾರಣವಾಗಿ. ``ಯಶ್ಯಿವಸ್ಸಗುರುಜ್ರ್ಞೇಯೋ ಯೋಗ ಗುರುಸ್ಸಶ್ಯಿವಃ ಸ್ಮøತಃ' ಎಂದುದಾಗಿ ಪರಶಿವ ತಾನೆ ಗುರುರೂಪಾಗಿ ವರ್ತಿಸುತ್ತಿದ್ದ ನೋಡಯ್ಯಾ, ಮಹಾಕರುಣಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಗರುಡನ ಗರಿಯ ಮುರಿದು, ಉರಗನ ಸಪ್ತ ಡೊಂಕ ತಿದ್ದಿ, ಅಷ್ಟಪ್ರಕೃತಿ ಗುಣವ ನಷ್ಟವ ಮಾಡಿ, ಕುಂಡಲಿಯನಂಡಲೆದು, ಬಲಿದೆತ್ತಿ ಮದ್ಯಮಾರ್ಗದಲ್ಲಿ ನಡೆಸಿ, ಊಧ್ರ್ವಸ್ಥಾನದಲ್ಲಿ ನಿಲಿಸಿದಡೆ, ಒಂದು ಮಾತು ಕೇಳಬಹುದು. ಆ ಮಾತಿನ ಬೆಂಬಳಿಯಲ್ಲಿ; ಜ್ಯೋತಿರ್ಲಿಂಗವ ಕಂಡು ಕೂಡಿದರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
ಗುರುವನರಿದು ಗುರುಭಕ್ತಿಯ ಮಾಡಿ, ಲಿಂಗವನರಿದು ಲಿಂಗಭಕ್ತಿಯ ಮಾಡಿ, ಜಂಗಮವನರಿದು ಜಂಗಮಭಕ್ತಿಯ ಮಾಡಿ, ತ್ರಿವಿಧವನು ಒಂದೆಂದು ಕಂಡು, ತ್ರಿವಿಧ ಭಕ್ತಿಸಂಪನ್ನರಾದವರ ಭಕ್ತರೆಂಬೆನು, ಅಲ್ಲದವರ ಉದರ ಪೋಷಕರೆಂಬೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರುವ ನಿಂದಿಸಿದವನು ಲಿಂಗವ ನಿಂದಿಸಿದವ. ಲಿಂಗವ ನಿಂದಿಸಿದವನು ಜಂಗಮವ ನಿಂದಿಸಿದವ. ಜಂಗಮವ ನಿಂದಿಸಿದವನು ಲಿಂಗವ ನಿಂದಿಸಿದವ. ಗುರುವ ನಿಂದಿಸಿದವನು ಜಂಗಮವ ನಿಂದಿಸಿದವ. ಜಂಗಮವ ನಿಂದಿಸಿವನು ಲಿಂಗವ ನಿಂದಿಸಿದವ. ಗುರುವ ನಿಂದಿಸಿದವ. ಪರವಸ್ತುವೊಂದೇ ಗುರು ಲಿಂಗ ಜಂಗಮವೆಂಬ ನಾಮ ಪಡೆಯಿತ್ತೆಂದಡೆ ಬೇರಾಗಬಲ್ಲುದೆ? ಈ ಮರ್ಮವನರಿಯದವಂಗೆ ಗುರು ಲಿಂಗ ಜಂಗಮವಿಲ್ಲವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರುತತ್ತ್ವವನರಿದು ಆ ಶ್ರೀಗುರುವಿನಿಂದ ಶಿವದೀಕ್ಷೆಯಾದ ಪರಮಾದ್ವೆ ೈತಶಿಷ್ಯನು ಆ ಜ್ಞಾನಗುರುವಿನ ಆನಂದೈಕ್ಯ ಪಾದೋದಕವ ಕೊಂಡು ಪಾದೋದಕ ರೂಪವಾದ ಶಿಷ್ಯನಲ್ಲಿ ಗುರುವಡಗಿ, ಗುರುವಿನಲ್ಲಿ ಶಿಷ್ಯನಡಗಿ, ಗುರುಶಿಷ್ಯರೊಂದಾದ ಘನವನುಪಮಿಸಬಹುದೆ?, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಏಕರಸವಾದುದನು.
--------------
ಸ್ವತಂತ್ರ ಸಿದ್ಧಲಿಂಗ
ಗಿರಿ ತರು ಗುಹೆ ಮಹಾವಿಪಿನ ಸರೋವರದಲ್ಲಿ ಹಿರಿದುಗ್ರತಪವ ಮಾಡುತ್ತ ಪವನಾಹಾರ, ಪರ್ಣಾಹಾರ, ಜಲಾಹಾರ, ಘಳಾಹಾರ ನಿರಾಹಾರದಲ್ಲಿದ್ದಡೇನು? ತನು ಮನ ರೂಪವಾದ ಮಾಯೆ ಕಾಡದೆ ಬಿಡುವಳೆ? ತನುವಿನಲ್ಲಿ ವ್ಯಾಪಾರ ಮನದಲ್ಲಿ ವ್ಯಾಕುಲವಾಗಿ ಕಾಡದೆ ಬಿಡುವಳೆ? ಈ ಮಾಯೆಯ ಗೆಲುವುದಕ್ಕೊಂದುಪಾಯವ ಕಾಬುದು. ಅದೆಂತೆಂದಡೆ, ಕಂಗಳ ಕೊನೆಯಲ್ಲಿ ಲಿಂಗದ ನೋಟ. ಮನದ ಕೊನೆಯಲ್ಲಿ ಲಿಂಗದ ನೆನಹು. ಜಿಹ್ವೆಯ ಕೊನೆಯಲ್ಲಿ ಶಿವಮಂತ್ರ. ಭಾವದ ಕೊನೆಯಲ್ಲಿ ಶಿವಾನುಭಾವ ನೆಲೆಗೊಂಡಡೆ, ಅಂಗದ ಅವಯವಂಗಳೆಲ್ಲ ಲಿಂಗದ ಅವಯವಂಗಳಾಗಿ, ಕೀಟಭ್ರಮರನಂತೆ ತಾನೇ ಶಿವನಹನು. ಇಂತಪ್ಪ ಲಿಂಗಾನುಭಾವಿ ಲಿಂಗಸಂಗಿಗೆ ಅಂಗವಿಲ್ಲ. ಅಂಗವಿಲ್ಲದ ನಿತ್ಯ ನಿರ್ಮಲಂಗೆ, ಮಾಯಾಮಲಿನ ಮುನ್ನವೆ ಹೊದ್ದದಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗಂಡಿಂಗೆ ಹೆಣ್ಣುರೂಪಾಗಿ ಕಾಡಿತ್ತು ಮಾಯೆ. ಹೆಣ್ಣಿಂಗೆ ಗಂಡುರೂಪಾಗಿ ಕಾಡಿತ್ತು ಮಾಯೆ. ಆ ಹೆಣ್ಣು ಗಂಡಿಗೆ ಸುತರೂಪಾಗಿ ಕಾಡಿತ್ತು ಮಾಯೆ. ಮಣ್ಣು ಹೆಣ್ಣು ಹೊನ್ನಾಗಿ ಕಾಡಿತ್ತು ಮಾಯೆ. ಈ ತೂಳದ ಮೇಳದ ಜಗವನಾಳಿಗೊಂಡಿತ್ತು ಮಾಯೆ. ಈ ಮಾಯೆ ಎಲ್ಲರ ಮೋಹಿಸಿ ಹಲ್ಲು ಕಿತ್ತು ತರಕಟ ಕಾಡಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಲ್ಲದವರ ಹುಲ್ಲಿಂದ ಕಡೆ ಮಾಡಿತ್ತು ಮಾಯೆ.
--------------
ಸ್ವತಂತ್ರ ಸಿದ್ಧಲಿಂಗ
ಗುರು ಶಿಷ್ಯ ಭಾವದಿಂದ, ಪ್ರಶ್ನೋತ್ತರವಾಗಿ ಕೇಳುವಾತ ಶಿಷ್ಯನು, ಜ್ಞಾನದ್ವಾರದಿಂದ ಹೇಳುವಾತ ಗುರು. ಪೂರ್ವಪಕ್ಷಭೇದದಿಂದ ಶರೀರಾದಿ ಸಮಸ್ತ ಲೋಕವನು ತೋರಿಸಿ, ಉತ್ತರಪಕ್ಷದರಿವಿನ ಭೇದದಿಂದ ಶರೀರಾದಿ ವಿಶ್ವರು ಲಿಂಗದಲ್ಲಿ ಲೀಯವಾದ ನಿಲವ ತೋರಿದ ಗುರು ಸರ್ವಾಚಾರಜ್ಞಾನಸಾರ ಪರಾಯಣ ಶಿವನು ಭೂತಸಂಯುಕ್ತನು. ಶಿಷ್ಯನ ಸಂಶಯವ ಛೇದಿಸಿ, ನಿಜವ ತೋರಿದ ಆ ಗುರುವಿನ ಶ್ರೀಪಾದಕ್ಕೆ, ನಮೋ ನಮೋ ಎಂಬೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಗುರು ಶಿಷ್ಯನ ಕೊಂದು ಶಿಷ್ಯನಾದನು. ಶಿಷ್ಯ ಹೋಗಿ ಮರಳಿ ಗುರುವ ಕೊಂದು ಗುರುವಾದನು. ಗುರು ಶಿಷ್ಯರೊಬ್ಬರನೊಬ್ಬರು ಕೊಂದು ಇಬ್ಬರೂ ಸತ್ತರು. ಇವರಿಬ್ಬರೂ ಸತ್ತ ಠಾವದೊಬ್ಬರಿಗೂ ಕಾಣಬಾರದು, ಸತ್ತ ಸಾವ ಕಂಡೆಹೆನೆಂದು ಉಟ್ಟುದನಳಿದು ಬತ್ತಲೆ ಹೋಗಿ ತಲೆವಾಗಿಲ ತೆಗೆದು ನೋಡಲು ಇವರಿಬ್ಬರೂ ಒಬ್ಬನೊಳಗಳಿದು ಒಬ್ಬನೈದಾನೆ. ಇಂತಿವರಿಬ್ಬರೂ ಸತ್ತ ಸಾವನಾರಿಗೂ ಅರಿಯಬಾರದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಕರುಣವುಳ್ಳವರಿಗಲ್ಲದೆ.
--------------
ಸ್ವತಂತ್ರ ಸಿದ್ಧಲಿಂಗ
ಗುರುಮುಖವಿಲ್ಲದೆ ತಾನೆ ಆಯಿತ್ತೆಂಬರು. ಆ ಗುರುವು ಹಿಡಿದಲ್ಲದೆ ಅವುದು ಇಲ್ಲ ನೋಡಾ. ಶಿವನಿಂದಲಾಯಿತ್ತು ಎಂಬ ನುಡಿಯನಾಲಿಸಲಾಗದು, ತಾ ಮಾಡಿದ ದೋಷವನು. ತನ್ನ ಮನವಿಕಾರಕ್ಕೆ ತಾ ಹೋಗಿ ಶಿವನ ಹಳಿವುದಕ್ಕೆ ಸಂಬಂಧವೇನು? ಮಹಾಜ್ಞಾನಿಯಾಗಿ ಪೂರ್ವದಲ್ಲಿ ತಾ ಪಡೆದುದು ತನಗೆ ತಪ್ಪುವದೆ? ಭಾವ ಕರದಲ್ಲಿ ಮನ ಹುಟ್ಟಿದ ಮೇಲೆ ಗುರುವೆಯಾಗಿ ಚರಿಸುವಲ್ಲಿ ಆತಂಗೆ ಕೊರತೆ ಬರಲು ಆತನ ಅಂತು ಇಂತು ಎಂದು ಜರೆಯಲೇತಕ್ಕೆ? ಸಂಬಂಧವನು ಆರೂ ಮೀರಲಾಗದು ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ