ಅಥವಾ

ಒಟ್ಟು 82 ಕಡೆಗಳಲ್ಲಿ , 27 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ, ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ, ರುಚಿಪದಾರ್ಥವ ಆತ್ಮಲಿಂಗಸಹವಾಗಿ, ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ, ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ, ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ, ರಸವ ಕೊಂಡವನಂತೆ,ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ, ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ, ಇಪ್ಪುದು ಸಹಭೋಜನಸ್ಥಲ. ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ, ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ, ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ.
--------------
ಅಕ್ಕಮ್ಮ
ಪರವನರಿದ ಸತ್ಪುರುಷರ ಸಂಗದಿಂದ ಶಿವಯೋಗದ ವಚನಾಮೃತವನು, ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರಮುಖದಲ್ಲಿ ಕೇಳಿ, ಮನೋಮುಖದಲ್ಲಿ ಹಾರೈಸಿ, ತೃಪ್ತಿಮುಖದಲ್ಲಿ ಸಂತೋಷವನೆಯ್ದಬಲ್ಲಡೆ ಆ ಸುಖವು ಪರಿಣಾಮವನೊಡಗೂಡುವುದು ! ಹೀಂಗಲ್ಲದೆ, ಸಂಸಾರವಿಷಯರಸವ ತಮ್ಮ ಹೃದಯಕೂಪದಲ್ಲಿ ತುಂಬಿಕೊಂಡಿಪ್ಪ ಜೀವರು ಕಾಯದಲ್ಲಿ ವಚನಾಮೃತವ ತುಂಬಿದಡೆ, ಭಿನ್ನಘಟದಲ್ಲಿ ಉದಕವ ಹೊಯ್ದಂತೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಪ್ರಸಾದಿಗೆ ಲಕ್ಷಣವಾವುದೆಂದರೆ ಹೇಳಿಹೆ ಕೇಳಿ[ರಯ]. ಕಾಯದಿಂದ ಮನಸ್ಸಿನಿಂದ ವಾಕ್ಯದಿಂದ ಸತ್ಯಶುದ್ಧವಾಗಿ, ವಿಶ್ವಾಸ ಶ್ರದ್ಧೆಯೆಡೆಗೊಂಡು ಶರೀರವನು ಪ್ರಾಣವನು ಒಡೆಯೆಂಗೆ ಸಮರ್ಪಿಸಿ ಪ್ರಸಾದವ ಕೈಕೊಳಬಲ್ಲರೆ ಪ್ರಸಾದಿಯೆಂಬೆ. ಹೀಂಗಲ್ಲದೆ ಕುಳವೆಂಬ ಕೋಳಕ್ಕೆ ಸಿಲ್ಕಿದ ಕಾಳ್ವಿಚಾರಿ ಋಣಪಾತಕರ ಪ್ರಸಾದಿ ಸದ್ಭಾವಿಯೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಿರಕ್ತನಾದ ಬಳಿಕ ವಿಷಯಕ್ಕೆ ದೂರನಾಗಿರಬೇಕು. ಒಣಗಿದ ಮರನ ವಾಯು ಅಪ್ಪಿದಂತಿರಬೇಕು. ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು. ಮೂಗ ಕಂಡ ಕನಸಿನಂತಿರಬೇಕು. ಜಾಲಗಾರ ಕಂಡ ರತ್ನದಂತಿರಬಲ್ಲಡೆ, ವಿರಕ್ತನೆಂಬೆನು. ಹೀಂಗಲ್ಲದೆ ಅರುಹುಳ್ಳವರೆಂದು ತಮ್ಮ ಅಗಮ್ಯವ ಬೀರುವ ಅಜ್ಞಾನಿಯ ಭಕ್ತನೆಂದಡೆ, ಮಾಹೇಶ್ವರನೆಂದಡೆ, ಪ್ರಸಾದಿಯೆಂದಡೆ, ಪ್ರಾಣಲಿಂಗಿಯೆಂದಡೆ, ಶರಣನೆಂದಡೆ, ಐಕ್ಯನೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು. ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು. ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಭಕ್ತಿಯೆಂಬುದು ಅಪ್ರಮಾಣು ನೋಡಾ. ಭಕ್ತನಾದಡೆ ಸರ್ವಗುಣಸಂಪನ್ನನಾಗಿ ಕರ್ತೃ ಕಾಮಿಸಿದಲ್ಲಿ ಕಾಣದಂತಿರಬೇಕು. ಕರ್ತೃ ಕ್ರೋದ್ಥಿಸಿದಲ್ಲಿ ಎನ್ನ ನಲ್ಲ ಪರಾದ್ಥೀನವೆಂದಂತಿರಬೇಕು. ಕರ್ತೃ ಲೋಬ್ಥಿಸಿದಲ್ಲಿ ತನ್ನ ಬೈಕೆಯ ತಾನೊಯ್ದನೆಂದರಿಯದಿರಬೇಕು. ಹೀಗಲ್ಲದೆ, ಇವ ತಾಳಲರಿಯದೆ ಮಾಡುವ ಮಾಟ ಆತ ಭಕ್ತನಲ್ಲ, ದಾತೃಸಂಬಂದ್ಥಿ. ಇದು ಕಾರಣ ಸದ್ಯೋಜಾತಲಿಂಗವನರಿದು ಮುಟ್ಟಬೇಕು.
--------------
ಅವಸರದ ರೇಕಣ್ಣ
[ದೇ]ವರ ಪಾದಕ್ಕೆ ಸಂದಲ್ಲಿ ಆತನ ಶರೀರವ ಸಮಾದ್ಥಿಯಲ್ಲಿ ನಿಕ್ಷೇಪವಂ ಮಾಡಿ ಲಿಂಗಭಕ್ತರಿಗೆ ವಿಭೂತಿವೀಳೆಯವಂ ಕೊಡುವುದೆ ಸ[ದಾಚಾರ]. ಹೀಂಗಲ್ಲದೆ, ಹೆಣ ಶೃಂಗಾರವ ಮಾಡಿಸಿ, ಹರೆ ಕಹಳೆ ಸಹಿತ ವಿಮಾನದಲ್ಲಿ ಕೊಂಡುಹೋಗಿ, ಹೂಳಿ, ಶ್ರಾದ್ಧ ಕೂಳ ಮಾಡು[ವರು] ಸದಾಚಾರಕ್ಕೆ ದೂರವಯ್ಯಾ ಕೂಡಲಸಂಗಮದೇವಾ.
--------------
ಬಸವಣ್ಣ
ಜ್ಞಾನಿಯ ಸಂಗ ನೇಕೆಯ ಶಿಶುವಿನಂತಿರಬೇಕು. ಜ್ಞಾನಿಯ ಸಂಗ ಭಾನುವಿನ ಉದಯದಂತಿರಬೇಕು. ಜ್ಞಾನಿಯ ಸಂಗ ಸೌಖ್ಯದ ಆಲಯದ ಠಾವಿನಂತಿರಬೇಕು. ಹೀಂಗಲ್ಲದೆ ಮಾತಿಂಗೆ ಮಾತ ಕಾಳ್ಗೆಡವವರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಲಿಂಗಪೂಜೆಯ ಮಾಡುವಲ್ಲಿ ಮನ ಗುರಿಯ ತಾಗಿದ ಕೋಲಿನಂತಿರಬೇಕು. ಶಿವಲಿಂಗಪೂಜೆಯ ಮಾಡುವಲ್ಲಿ ಶ್ರವಕ್ಕೆ ಸಂಜೀವನ ಹುಟ್ಟಿದಂತಿರಬೇಕು. ಹೀಗಲ್ಲದೆ ಪೂಜೆಯಲ್ಲ. ಒಳಗಣ ಹುಳುಕು ಮೇಲಕ್ಕೆ ನಯವುಂಟೆ, ಆ ತರು ಒಣಗುವವಲ್ಲದೆ? ಇಂತೀ ಬರುಬರ ಅರ್ಚನೆ ಹುರಿಯ ಬೊಂಬೆಯಂತೆ. ಇಂತೀ ಅರಿಗುರಿಗಳ ಪೂಜೆ ಬರುಕಟೆಯಂತೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಂಗವ ಮರೆದು ಲಿಂಗವನರಿಯಬೇಕೆಂಬರು, ಕರಣಂಗಳರತು ಘನಲಿಂಗವನರಿಯಬೇಕೆಂಬರು. ಅದು ನಾನಿಕ್ಕಿದ ತಡೆ ಕೇಳಿರಣ್ಣಾ. ಆಕಾಶ ಬಯಲಾದಡೆ ಮುಗಿಲು ರೂಪ ತೋರಿ ಅಳಿವ ಪರಿಯಿನ್ನೆಂತೊ? ನಕ್ಷತ್ರ ಚಂದ್ರ ಸೂರ್ಯಾದಿಗಳು ಗ್ರಹ ಪ್ರವರ್ತನವಹ ಪರಿಯಿನ್ನೆಂತೊ? ಅವು ವಾಯುಮಯ ಆಧಾರವಾಗಿ ತೋರುತ್ತಿಹ ನೆಮ್ಮುಗೆಯ ಇರವು. ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು, ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು. ಹೀಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ ಉಭಯದ ಅಬ್ಥಿಸಂದ್ಥಿಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅರೆಯಮೇಲೆ ಮಳೆ ಹೊಯಿದಂತೆ, ಅರಿವುಳ್ಳವರಲ್ಲಿ ಅಗಮ್ಯವುಂಟೆ ? ವಾಯು ರೂಪಾದುದುಂಟೆ ? ಸರ್ವಸಂಬಂಧವ ಅರಿದ ಶರಣನ ಕಣ್ಣಿನಲ್ಲಿಕಂಡವರುಂಟೆ ? ತಿಪ್ಪೆಯ ಮೇಲಣ ಅರುವೆಯ ಸುಟ್ಟಡೆ ದಗ್ಧವಾದಂತೆ ಇರಬೇಕು. ಹೀಂಗಿರಬಲ್ಲಡೆ ಅನುಭಾವಿ ಎಂಬೆನಯ್ಯಾ, ಅಭೇದ್ಯರೆಂಬೆನಯ್ಯಾ, ಅಂಗಲಿಂಗ ಸಂಬಂದ್ಥಿಗಳೆಂಬೆನಯ್ಯಾ. ಲಿಂಗೈಕ್ಯರೆಂಬೆ ನಿಜವಿರಕ್ತರೆಂಬೆನಯ್ಯಾ. ಹೀಂಗಲ್ಲದೆ ಆತ್ಮತೇಜಕ್ಕೆ ಹೋರಾಡುವ ಘಾತಕರ ನಿಜವಿರಕ್ತರೆಂಬರೆ ಅಮುಗೇಶ್ವರಾ ?
--------------
ಅಮುಗೆ ರಾಯಮ್ಮ
ಬಂದ ಪದಾರ್ಥವ ಸವಿದು ಚಪ್ಪರಿದು, ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ, ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ, ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು, ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ? ಲಿಂಗಕ್ಕೆ ಸಂದ ಸವಿಯ, ಹಿಂದೆ ಮುಂದೆ ಇದ್ದವರು ಕೇಳುವಂತೆ ಲಿಂಗಾರ್ಪಿತವುಂಟೆ ? ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ, ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ. ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->