ಅಥವಾ

ಒಟ್ಟು 119 ಕಡೆಗಳಲ್ಲಿ , 28 ವಚನಕಾರರು , 90 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ ಒಡಲಸೂತಕ ಹರಿಯಬೇಕು. ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ದೃಕ್ಕು ಸಕಲವನವಗವಿಸುವನ್ನಕ್ಕ, ಶ್ರೋತ್ರ ಶಬ್ದವ ವೇದ್ಥಿಸುವನ್ನಕ್ಕ, ಕ್ರೀ ಶೂನ್ಯವೆನಲೇತಕ್ಕೆ? ಭಾವಿಸಿಹೆನೆಂಬನ್ನಕ್ಕ ಕ್ರೀ ಅರಿದೆಹೆನೆಂಬನ್ನಕ್ಕ ಸೂತಕ. ಕುಕ್ಕಳಗುದಿವುದ ಹುಟ್ಟಿನಲ್ಲಿ ತೆಗೆದಿಕ್ಕುವಂತೆ, ಅದು ದೃಷ್ಟಕ್ಕ ದೃಷ್ಟ, ನಿಶ್ಚಯಕ್ಕೆ ನಿಜ. ಈ ಗುಣ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 49 ||
--------------
ದಾಸೋಹದ ಸಂಗಣ್ಣ
ಇಂದ್ರಿಯಂಗಳ ಗಮನಗೆಡದೆ ಕರಣಂಗಳ ಸೂತಕ ಕಡೆಗಾಗದೆ ಆತ್ಮನ ಕುರುಹು ಅಡಗದೆ ಬರಿದೆ ಭ್ರಮೆಗೊಂಡು ಹಿರಿಯತನವ ಹೊತ್ತರಲ್ಲ ! ಮತ್ತೆ ಪೂರ್ವ ಮೊತ್ತದ ಬರಿವಿದ್ಯೆ ಬಂಧನಕ್ಕೆರಗಿ ಸಂದಿನ ಕಿಚ್ಚಿನಲ್ಲಿ ಬೆಂದರಲ್ಲ! ಒಂದುವನರಿಯದೆ ಹಿಂದಿನ ಸರಮಾಲೆಯ ಸಂಕೋಲೆಯೊಳಗಾಗಿ ಭೋಗವನರಿವರು ಕಾಣಾ ಪಂಚಾಕ್ಷರಮೂರ್ತಿಲಿಂಗವೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರ ಹೊರಗಳ ಹೊಲತಿಯ ಹಾರುವ ನೆರೆದು ತನ್ನಯ ಸೂತಕ ಹೋಯಿತ್ತು. ಹೊಲತಿಯ ಕುಲ ಹರಿದು ಹಾರುವ ಹೊಲೆಯನಾಗಿ, ಆ ಹಾರುವ ಹಾರದೆ ಸದಾಶಿವಮೂರ್ತಿಲಿಂಗಕ್ಕೆ ಒಳಗಾದ.
--------------
ಅರಿವಿನ ಮಾರಿತಂದೆ
ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ !
--------------
ಅಲ್ಲಮಪ್ರಭುದೇವರು
ಕಾಯದ ಒಲವರದಲ್ಲಿ ನಿಲುವ ಚಿತ್ತ, ಕಂಗಳ ಗೊತ್ತಿನಲ್ಲಿ ಕಟ್ಟುವಡೆದು ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ ಮನದ ಸೂತಕ ಹರಿದು ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
--------------
ಅಲ್ಲಮಪ್ರಭುದೇವರು
ಗುರುವಿನೊಡನೆ ಸಹಭೋಜನ ಮಾಡಬೇಕಾದಡೆ, ಚತುರ್ವಿಧಭಕ್ತಿಯಿಂದೆ ಗುರುವಿನೊಳಗೆ ತನುವಡಗಿರಬೇಕು. ಲಿಂಗದೊಡನೆ ಸಹಭೋಜನ ಮಾಡಬೇಕಾದಡೆ, ಸಂಕಲ್ಪ ವಿಕಲ್ಪ ಸೂತಕ ಪಾತಂಕಗಳಳಿದು ಲಿಂಗದೊಳಗೆ ಮನವಡಗಿರಬೇಕು. ಜಂಗಮದೊಡನೆ ಸಹಭೋಜನ ಮಾಡಬೇಕಾದಡೆ, ಮಜ್ಜನ ಭೋಜನ ಕುಸುಮ ಗಂಧಾನುಲೇಪನ ಅನ್ನ ವಸ್ತ್ರ ಮಣಿ ರತ್ನಾಭರಣ ಗೀತ ವಾದ್ಯ ನೃತ್ಯ ಹಾಸುಮಂಚ ಸ್ತ್ರೀಭೋಗ ಮೊದಲಾದ ಅನೇಕ ಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು. ಇಂತೀ ತ್ರಿವಿಧ ಭಕ್ತಿಯ ನಿರ್ಣಯವನರಿಯದೆ, ತನು ಮನ ಧನಂಗಳ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ನೀತಿಹೀನರು ಸಹಭೋಜನ ಕವಳ ಪ್ರಸಾದವ ಕೊಟ್ಟು ಕೊಂಡಡೆ ಹುಳುವಿನ ಕೊಂಡದಲ್ಲಿ ಮುಳುಗಿಸಿಬಿಡುವನು ನೋಡಾ ನಮ್ಮ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು ಎನ್ನನಟ್ಟಿದನಯ್ಯಾ ಶಶಿಧರನು ಮತ್ರ್ಯಕ್ಕೆ. ನಿಮ್ಮ ಮುಖದಿಂದ ಎನ್ನ ಭವ ಹರಿವುದೆಂದು ಹರಹಿಕೊಂಡಿದ್ದೆನಯ್ಯಾ ದಾಸೋಹವನು. ನಿಮ್ಮ ಬರವ ಹಾರಿ ಸವೆದವು ಒಂದನಂತ ದಿನಗಳು, ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ, ಹಿಂದಣ ಸಂದೇಹ ಸೂತಕ ಹಿಂಗಿತ್ತು. ಎನ್ನ ಪ್ರಾಣಲಿಂಗವು ನೀವೇ ಆಗಿ, ಎನ್ನ ಸರ್ವಾಂಗಲಿಂಗದಲ್ಲಿ ಸನ್ನಿಹಿತವಾಗಿ, ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ ಕೂಡಲಸಂಗಮದೇವ ಪ್ರಭುವೆ.
--------------
ಬಸವಣ್ಣ
ತಿಲದೊಳಗಣ ತೈಲ, ಫಲದೊಳಗಣ ರಸ, ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ, ಇಕ್ಷುದಂಡದ ಸಾರದ ಸವಿ, ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು. ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ, ಶಿಲೆಕುಲದ ಸೂತಕ ಬಿಡದು. ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಮರದಲ್ಲಿ ಉರಿ ಹುಟ್ಟಿ, ಅಡಗಿ ಸುಡದ ಭೇದವ ಬಲ್ಲಡೆ, ಕಾಯದ ಲಿಂಗದ ಸೂತಕವಿಲ್ಲ. ಕಲ್ಲಿನಲ್ಲಿ ಕಿಡಿ ಹುಟ್ಟಿ, ಅಲ್ಲಿ ಉರಿಯದೆ, ಆಚೆಯಲ್ಲಿ ಸಾಕಾರವ ಮುಟ್ಟಿ ಉರಿವಂತೆ, ಆ ನಿಹಿತವನರಿದಲ್ಲಿ ಪ್ರಾಣಲಿಂಗವೆಂಬ ಮನಸೂತಕವಿಲ್ಲ. ಸೂತಕ ಪ್ರಸೂತಕವಾಗಿ, ಏತಕ್ಕೂ ಒಡಲಿಲ್ಲದಿಪ್ಪುದು, ಅದೇ ಅಜಾತತ್ವ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ, ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ, ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ, ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ, ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ, ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ, ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ, ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ, ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ ಬಹಿರಂಗದ ಸೂತಕ ಹೋಯಿತ್ತಯ್ಯಾ, ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ, ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ, ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಅಮುಗಿದೇವಯ್ಯ
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು. ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು. ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
--------------
ಅಲ್ಲಮಪ್ರಭುದೇವರು
ಎನ್ನ ಜನನ ಸೂತಕ ಹೋಯಿತ್ತು ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ. ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ. ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ ಅನ್ಯದೈವವನರಿಯೆನಾಗಿ. ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ. ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು. ಎನ್ನ ಕಂಗಳ ಸೂತಕ ಹೋಯಿತ್ತು ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ. ಎನ್ನ ಕೈಯಸೂತಕ ಹೋಯಿತ್ತು ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ. ಎನ್ನ ಕಿವಿಯ ಸೂತಕ ಹೋಯಿತ್ತು ನಿಮ್ಮ ಕೀರ್ತಿಯ ಕೇಳಿ ಕೇಳಿ. ಎನ್ನ ಜಿಹ್ವೆಯ ಸೂತಕ ಹೋಯಿತ್ತು ನಿಮ್ಮ ಪರಮಪ್ರಸಾದವ ಸವಿಸವಿದು. ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ. ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
[ಅನರ್ಪಿತ] ಭುಂಜಕಂಗೆ ಎಂಜಲುಂಟಲ್ಲದೆ [ಅರ್ಪಿತ] ಭುಂಜಕಂಗೆ ಎಂಜಲೆಲ್ಲಿಯದು ? ಶಿವ ಭೋಜನವ ಮಾಡಲು ಭಾಜನವಾದಾತಂಗೆ, ಪ್ರಸಾದಭೋಗಿಗೆ ಎಂಜಲೆಲ್ಲಿಯದು ? ಕರ್ಮಭೋಗೇ ಶಿವಸ್ಯೈವ ಉಪಭೋಗವಿಶೇಷತಃ ಅಶರೀರಮಿದಂ ಗ್ರಾಹ್ಯಂ ಲಿಂಗಸಾರಾಯ ಸಂಯುತಂ ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣಂಗೆಂಜಲು ಸೂತಕ ಹೊದ್ದಲೀಯದು.
--------------
ಚನ್ನಬಸವಣ್ಣ
ಇನ್ನಷ್ಟು ... -->