ಅಥವಾ

ಒಟ್ಟು 131 ಕಡೆಗಳಲ್ಲಿ , 52 ವಚನಕಾರರು , 112 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿನ್ನ ವಿಶೇಷ ಮಣ್ಣು ಅಧಮವೆಂದಡೆ, ಅದು ನಿಂದು ಕರಗುವುದಕ್ಕೆ ಮಣ್ಣಿನ ಕೋವೆಯೆ ಮನೆಯಾಯಿತ್ತು. ಇಷ್ಟವನರಿವ ವಸ್ತುವ ನೆಮ್ಮುವುದಕ್ಕೆ ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಇದಿರರಿದಹರೆಂದು ಮರೆಯ ಮಾಡಿ, ಗೂಢವ ನುಡಿಯಬಹುದೆ ವಸ್ತುವ ? ಅರು[ವೆ]ಯಲ್ಲಿ ಕೆಂಡವ ಕಟ್ಟಿದಡೆ ಅಡಗಿಹುದೆ ? ನೆರೆ ವಸ್ತು ಒಬ್ಬರಿಗೆ ಒಡಲೆಡೆವುಂಟೆ ? ಅರ್ಕೇಶ್ವರಲಿಂಗ ಅರಿವರ ಮನ ಭರಿತ, ಸಂಪೂರ್ಣ.
--------------
ಮಧುವಯ್ಯ
ಗೋವಿನ ಹೊಟ್ಟೆಯಲ್ಲಿ ಘೃತವಿದ್ದಡೇನೊ ಆ ಗೋವು ದಿನದಿನಕ್ಕೆ ಪುಷ್ಟವಾಗಬಲ್ಲುದೆ ? ಅದು ಕಾರಣ_ ಆ ಗೋವ ಪೋಷಿಸಿ ಕರೆದು ಕಾಸಿ, ಘೃತವ ಮಾಡಿ ಆ ಗೋವಿಂಗೆ ಕುಡಿಯಲೆರೆದಡೆ ಆ ಗೋವು ದಿನದಿನಕ್ಕೆ ಪುಷ್ಟವಹುದು. ಹಾಂಗೆ, ತನ್ನಲ್ಲಿ ವಸ್ತುವಿದ್ದಡೇನೊ ? ವಸ್ತುವ ಗುರುಮುಖದಿಂದ ಕರಸ್ಥಲಕ್ಕೆ ಪಡೆದು, ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇಧಿಸಿದಲ್ಲದೆ ಪ್ರಾಣಲಿಂಗವಾಗದು. ಕೂಡಲಚೆನ್ನಸಂಗಯ್ಯನಲ್ಲಿ, ಇಷ್ಟಲಿಂಗವ ಸತ್ಕ್ರಿಯೆಯಿಂದ ಪ್ರಾಣಕ್ಕೆ ವೇದ್ಥಿಸಿ, ತಾನೆಂಬ ಅನಿಷ್ಟವ ತೊಲಗಿಸಿದಲ್ಲದೆ ಪ್ರಾಣಲಿಂಗಸಂಬಂಧವಾಗಬಾರದು
--------------
ಚನ್ನಬಸವಣ್ಣ
ಕಂಡೆನಯ್ಯಾ, ಕಂಗಳೊಳಗೊಂದು ಹೆಸರಿಡಬಾರದು ವಸ್ತುವ. ಅದು ನಿಂದಲ್ಲಿ ನಿಲ್ಲದು, ಬಂದಲ್ಲಿ ಬಾರದು, ಹೊದ್ದಿದಲ್ಲಿ ಹೊದ್ದದು. ಇದರ ಸಂದುಸಂಶಯದಿಂದ ನಂಬಿಯೂ ನಂಬದಿನ್ನೇವೆ ? ಕಾಬಡೆ ಕಂಗಳಲ್ಲಿ ನಿಲ್ಲದು, ನೆನೆವಡೆ ಮನದಲ್ಲಿ ನಿಲ್ಲದು, ಹೊಡೆವಡೆ ಕೈಯೊಳಗಲ್ಲ. ಇದರ ಕೂಟದ ಕುಶಲವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಬಿಲ್ಲು ಕೋಲವಿಡಿದು ಮನ ಬಂದ ಪರಿಯಲ್ಲಿ ಎಚ್ಚಾಡುವಾತ ಅರ್ತಿಕಾರನಲ್ಲದೆ ಬಿಲ್ಲುಗಾರನಲ್ಲವಯ್ಯ. ಹೊನ್ನು ಹೆಣ್ಣು ಮಣ್ಣ ಬಿಟ್ಟು ಚೆನ್ನಾಗಿ ಮಂಡೆಯ ಬೋಳಿಸಿಕೊಂಡು ಹಾಡಿದ ವಚನಂಗಳೇ ಹಾಡಿಕೊಂಡು ಮುಂದೆ ವಸ್ತುವ ಸಾದ್ಥಿಸಿಕೊಳ್ಳಲರಿಯದೆ ಹಸಿದರೆ ತಿರಿದುಂಡು ಮಾತಿನಮಾಲೆಯ ಕಲಿತಾತ ವಿರಕ್ತನೆಂಬ ನಾಮಕ್ಕರುಹನಲ್ಲದೆ ಸಂಧಾನಕ್ಕರುಹನಲ್ಲ. ಅದೇನು ಕಾರಣವೆಂದೊಡೆ ಭಕ್ತಿಯೆಂಬ ಬಿಲ್ಲ ಹಿಡಿದು ಸಮ್ಯಜ್ಞಾನವೆಂಬ ಹೆದೆಯನೇರಿಸಿ ಲಿಂಗನಿಷ್ಠೆಯೆಂಬ ಬಾಣವ ತೊಟ್ಟು ಆಕಾಶದ ಮೇಲಣ ಮುಪ್ಪುರದ ಮಧ್ಯದ ಮಾಣಿಕ್ಯದ ಕಂಭವ ಮುಳುಗಲೆಚ್ಚು ಮಾಯೆಯ ಬಲುಹ ಗೆಲಿದ ಶರಣನೀಗ ಲಿಂಗಸಂಧಾನಿಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ತ್ಯಾಗಾಂಗನಾಗಿ ಕೊಡುತ್ತಿದ್ದಲ್ಲಿ ಭೋಗಾಂಗನಾಗಿ ಸುಖಿಸುತ್ತಿದ್ದಲ್ಲಿ ಯೋಗಾಂಗನಾಗಿ ವಾಯುದ್ವಾರ ಭೇದಂಗಳನರಿತು ಧ್ಯಾನ ಧಾರಣ ಸಮಾದ್ಥಿಗಳಲ್ಲಿದ್ದಡೂ ಒಂದು ಕುರಿತು ಲಕ್ಷಸಿ ವಸ್ತು ಇದೇನೆಂದು ವಿಶ್ವಾಸದಿಂದಲ್ಲದಾಗದು. ಹಿಂದಕ್ಕಾದ ದೇವಪದವಂತರು ಮುಂದಕ್ಕೆ ಅರಿದು ಕೂಡುವ ಅರುಹಿರಿಯ ಶರಣತತಿಗಳೆಲ್ಲರು ವಿಶ್ವಾಸದಿಂದಲ್ಲದೆ ದೃಷ್ಟವ ಕಾಣರು. ಇದು ಕಾರಣ, ಬಾಹ್ಯಕರ್ಮ ಅಂತರಂಗ ಶುದ್ಧ ನಿರವಯವೆಂಬುದೊಂದು ಕುರುಹಿನ ನೆಮ್ಮುಗೆ ಉಂಟಹನ್ನಕ್ಕ ವಿಶ್ವಾಸಬೇಕು. ಇದು ಸಂಗನಬಸವಣ್ಣ ಕೊಂಡು ಬಂದ ಲಿಂಗದ ಬಟ್ಟೆ. ಬ್ರಹ್ಮೇಶ್ವರಲಿಂಗವೆಂಬ ವಸ್ತುವ ಕೂಡುವ ದೃಷ್ಟ.
--------------
ಬಾಹೂರ ಬೊಮ್ಮಣ್ಣ
ದೇವರಾಜ್ಯದಲ್ಲಿ, ಧಾರೆಯ ಭೋಜನ ಅರಮನೆಯ ಓಲಗದೊಳಗೆ ಹೊಂಪುಳಿವರಿವುತ್ತ ನಾಲ್ಕೂದಿಕ್ಕಿನಲ್ಲಿ ನಾಲ್ವರ ಫಣಿಯ ಬೆಳಗು. ಜಾಣಭಾಷೆಯಲ್ಲಿ ಮಧ್ಯದಲೊಬ್ಬಳು, ಆಣತಿಯ ಸರವು. ಮಹಾದೇವಿ ಗಾಂಧಾರಿಯನು ತೋರಿ, ಒದವಿಸಿದ ಮಧುಮಾಧವಿಯನು ಭೋಜ ಗದ್ಯವನೋದಲು, ಶಿವನು ಕೇಳುತ್ತಿರೆ ಬಾಣಸಿಗ ಹಡಪದವನೆ ಬಲ್ಲನು ಕಾಣಾ. ಕೊಂಕಿಲ್ಲದೆ ಶಬುದ ರಸಭೇದವನು ರಾಣಿ ಬಲ್ಲಳು. ಕುಮುದ ಪಾತ್ರವಿಧಾಂತ ಮಾವಟಿಗ ಭೇದವನು ಮೇಲೆ ಅಂಗರಿಕನು ದೀವಟಿಗೆ ಧಾರೆವಟ್ಟದ ಜಾಣನು ಅಲ್ಲಿ ಚಂಬಕನ ಕಹಳೆ ಭೋರೆಂದು ಬಾರಿಸಿ ಪ್ರತಾಪದ ಕದಳಿಗೆ ಎದೆ ದಲ್ಲಣ. ಆರುಬಣ್ಣದ ವಸ್ತುವ ಮೂರು ಬಣ್ಣಕ್ಕೆ ತಂದು, ಕೇವಣಿಸಿದನು ಕಮಠ ಸುರಥ ಕವಾಹಾರದಾರದ ಖೂಳರ ನಾಲ್ವರ ಬಯಕೆಯನು, ದೇವ ಬಳ್ಳೇಶ್ವರನ ಕನ್ನಡ ವಿಪರೀತ.
--------------
ಬಳ್ಳೇಶ ಮಲ್ಲಯ್ಯ
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು. ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು ಕಣ್ಣು ಕಾಣದೇ ಕಾಡಬಿದ್ದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದ ಅಂಧಕರೆಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ, ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ, ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ, ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ, ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ? ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಹೆಂಡದ ಮಾರಯ್ಯ
ಮನ ಮುಟ್ಟದ ಪೂಜೆ, ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ. ವಸ್ತುವ ಮುಟ್ಟದ ಅರ್ಪಿತ, ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ, ಇದು ನಿಶ್ಚಯದ ಮುಟ್ಟಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನೆನಹಿಗೆಬಾರದ ವಸ್ತುವ ನೆನವಪರಿ ಇನ್ನೆಂತೋ ! ಭಾವಕ್ಕೆಬಾರದ ವಸ್ತುವ ಭಾವಿಸುವಪರಿ ಇನ್ನೆಂತೋ ! ನೆನೆಯದೆ ಭಾವಿಸದೆ ಎನ್ನೊಳಗೆ ಬಯಲುರೂಪವಾಗಿ ತೋರಿದನು ನೋಡಾ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ, ಜೀವವುಳ್ಳನ್ನಕ್ಕ ಅರಿವುದು ಅಭೇದ್ಯ ವಸ್ತುವ, ಉಭಯವ ಕಡೆಗಾಣಿಸಿ ನಿಂದಲ್ಲಿ ಸದಾಶಿವಮೂರ್ತಿಲಿಂಗವೆಂದು ಕುರುಹಿಡಲಿಲ್ಲ.
--------------
ಅರಿವಿನ ಮಾರಿತಂದೆ
ಪ್ರಾಣವಿಲ್ಲದ ಹೆಣ್ಣು ನಾನಾಗಿರಲು, ಆ ಪ್ರಾಣವಿಲ್ಲದ ಕಾಯಕ್ಕೆ ಪ್ರಾಣ ಪ್ರಸನ್ನರೂಪಾಯಿತ್ತು. ಎಲ್ಲವನಳಿದು ಎಲ್ಲವ ತಿಳಿದು ಎಲ್ಲಾ ವಸ್ತುವ ಕಂಡು ನಿರ್ಲೇಪಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಧರೆಯ ಉದಕ ಮಾರುತನ ಸಂಗದಿಂದ, ಆಕಾಶಕ್ಕೆ ಎಯ್ದಿ ಭುವನಕ್ಕೆ ಸೂಸುವಂತೆ, ಆತ್ಮವಸ್ತುವಿನಲ್ಲಿ ಎಯ್ದಿ ವಸ್ತುವ ಬೆರಸುವಂತೆ, ಇದು ನಿಶ್ಚಯವೆಂದರಿದ ಆ ಚಿತ್ತ ಇಷ್ಟಲಿಂಗವೇ ಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಇನ್ನಷ್ಟು ... -->