ಅಥವಾ

ಒಟ್ಟು 36 ಕಡೆಗಳಲ್ಲಿ , 19 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ. ಸಂಸಾರವೆಂಬುದು ಹುಸಿ ಕಂಡಾ ಎಲವೋ! ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ. ದಿನದಿನದ ಸುಖ ಹುಸಿ ಕಂಡಾ ಎಲ್ಲವೊ! ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ. ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!
--------------
ಗಜೇಶ ಮಸಣಯ್ಯ
ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ; ಅವರವನೊಲ್ಲರು! ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು. ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು! ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ? ನಿನ್ನ ಕೊಡನೆಮ್ಮವರೊಲ್ಲರು ಕಾಣಾ, ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು. ಮಾತಿಂಗೆ ವೇಧಿಸಿದ ಮನ ರಾಟಾಳದ ಕುಂಭದಂತೆ. ಅದ ನೇತಿಗಳೆದು ನಿಂದಲ್ಲಿ ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅವರ್ಣದಾಗಿಂಗೆ ವರ್ಣದಪರಿವಿಡಿಯಿಂದೆ ಅರಿಯಲುಂಟೆ ? ರೂಪಿಂಗೆ ರೂಪಲ್ಲದೆ ಸಯವಲ್ಲ, ನಿರೂಪಿಂಗೆ ನಿರೂಪವೇ ಸಯವಯ್ಯಾ. ಕಾಣಬಾರದುದ ಕಂಡುಹಿಡಿವರಾರು ನೋಡಾ ಮೂರುಲೋಕದೊಳಗೆ ? ಮಾರಾರಿ ಮಹಿಮರು ನಿಮ್ಮ ಶರಣರಿಗಲ್ಲದೆ ಅರಿಯಬಾರದು, ಗುರುನಿರಂಜನ ಚನ್ನಬಸವಲಿಂಗವನು, ಕುರುಹಳಿದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಈಶಾನ್ಯಮುರ್ತಿ ಮಲ್ಲಿಕಾರ್ಜುನಲಿಂಗವು, ರೂಪಿಗೆ ಬಂದ ಪರಿಯಿನ್ನೆಂತುಂಟೊ ?
--------------
ಕುರಂಗಲಿಂಗ
ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ. ರೂಪು ನಿರೂಪನೊಡಗೂಡುವ ಪರಿ ಎಂತು ಹೇಳಾ ? ಅಸಂಬಂಧ ಸಂಬಂಧವಾಗಿ ಇದೆ. ದೇಹ ಇಂದ್ರಿಯವೆಂಬ ಜಾತಿಸೂತಕವಿರಲು ಗುಹೇಶ್ವರಲಿಂಗವ ಮುಟ್ಟಬಾರದು ಕೇಳವ್ವಾ.
--------------
ಅಲ್ಲಮಪ್ರಭುದೇವರು
ಅಂಬುಧಿಯೊಳಗಾದ ನದಿಗಳು ಮರಳುವುವೆ ? ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ? ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ? ಲಿಂಗವನರಿದು ಲಿಂಗೈಕ್ಯವಾದ ಶರಣ ಮರಳಿ ಹುಟ್ಟುವನೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಎಂಟೆಸಳ ಹೂವೆಂಬರು; ಆ ಹೂವಿಂಗೆ ರೂಪಿಲ್ಲ, ಆ ರೂಪಿಂಗೆ ಕಾಯವಿಲ್ಲ. ಆ ಕಾಯವಿಲ್ಲದ ಹೂವನುಂಬಶಕ್ತಿ ಬಯಲಾದನಯ್ಯ ಸಂಗಯ್ಯ
--------------
ನೀಲಮ್ಮ
ಕಾಯದ ಮೇಲಿಹ ಲಿಂಗ ಕೈಬಿಡುವನ್ನಕ್ಕ ಕೈಗೆ ಭಿನ್ನ. ವಸ್ತ್ರವ ಬಿಟ್ಟು ನೋಡಿ ಕಾಬನ್ನಕ್ಕ ಕಂಗಳಿಗೆ ಭಿನ್ನ. ಕಂಗಳು ಕಂಡು ಮನದಲ್ಲಿ ಬೇಧಿಸುವನ್ನಕ್ಕ ರೂಪಿಂಗೆ ಭಿನ್ನ. ಉಭಯಗುಣವಳಿದು, ಎರಡರ ಅಭಿಸಂದಿಯ ಕಾಣಿಕೆ ಹಿಂಗಿ, ನಿಜವ ಕಾಣಿಸಿಕೊಂಬುದು. ತಾನಾಗಿ ಕಂಡಲ್ಲಿಯೆ ಇದಿರಿಡುವುದು, ನಾಮನಷ್ಟ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ತಾನು ತಾನೆ.
--------------
ಸಗರದ ಬೊಮ್ಮಣ್ಣ
ಎಲೆ ಅಯ್ಯಾ, ಅವರ ಗುಣಕ್ಕೆ ಮುನಿವೆನಲ್ಲದೆ ಅವರ ರೂಪಿಂಗೆ ಮುನಿವೆನೆ? ಇಲ್ಲಿಲ್ಲ. ಅವನು ಅನಾಚಾರದಲ್ಲಿ ಆಚರಿಸಿದಡೆ, ತಂದೆ ಸದಾಚಾರಕ್ಕೆ ತರಬೇಕೆಂದು [ಮುನಿವನಲ್ಲದೆ] ಆತನ ಮೇಲೆ ಮುನಿವನೆ ? ಇಲ್ಲಿಲ್ಲ. ನಾನು ಅಂತಾಗಬೇಕೆಂದು ಮುನಿವೆನಲ್ಲದೆ ಜಂಗಮಕ್ಕೆ ಮುನಿವೆನೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ನಾನರಿತು, ನಿನ್ನ ಕುರಿತೆಹೆನೆಂದಡೆ ನಿನಗೆ ಭಿನ್ನವಾದೆ. ನಿನ್ನನರಿತು, ಎನ್ನನರಿದಿಹೆನೆಂದಡೆ ಪ್ರತಿರೂಪನಾದೆ. ನಾನಿನ್ನೇತರಿಂದರಿವೆ ? ಅರಿವುದಕ್ಕೆ ಮೊದಲೆ ಅಪ್ರಮಾಣನಾದೆ. ನಾಮ ರೂಪಿಗೆ ಬಂದು ಒಡಲಾದೆ. ಒಡಲವಿಡಿದು ಕಂಡೆಹೆನೆಂದಡೆ ಅಗೋಚರ. ಒಡಲು ಹರಿದು ಕಂಡೆಹೆನೆಂದಡೆ ನಿರವಯಾಂಗ. ಇನ್ನೇವೆನಿನ್ನೇವೆ, ಸನ್ನರ್ಧ ಎನಗನ್ಯಭಿನ್ನನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿರವಯಲಿಂಗ ಲೀಲೆಗೆ ರೂಪಾಯಿತ್ತೆಂದು ನುಡಿವರು, ಬಯಲು ರೂಪಾದ ಪರಿಯಿನ್ನೆಂತೊ ? ಮೊದಲುಗೆಟ್ಟು ಲಾಭನರಸುವ ಪರಿಯಿನ್ನೆಂತೊ ? ರೂಪಿಂಗೆ ಬಂದುದು ನಿರೂಪವಾದ ಮತ್ತೆ ? ರೂಪಿಂಗೆ ಈಡಪ್ಪುದೆ ? ಇದು ಕಾರಣ, ತಮ್ಮಲ್ಲಿರ್ದ ಜ್ಞಾನವ ತಾವರಿಯದೆ, ತಾವು ಹಿಡಿದಿರ್ದ ಲಿಂಗದ ಆದಿ, ಅಳಿ ಉಳಿವ ಉಭಯವ ಭೇದಿಸಲರಿಯದೆ, ಜ್ಞಾನವ ಸಾಧಿಸಲರಿಯದೆ, ಸಾಧ್ಯರೆಂತಾದಿರೊ ? ಆ ಸಾಧ್ಯ, ನಿರುಪಮ ನಿರವಯ ಪರಂಜ್ಯೋತಿ ಲಿಂಗವ ಕುರುಹಿಡುವ ಪರಿಯಿನ್ನೆಂತೊ ? ಕುರುಹಿನ ಮರೆಯೊಳಗಿಪ್ಪ ವಸ್ತುವ ಕಾಬ ತೆರ ಇನ್ನಾವುದೊ ? ಇವೆಲ್ಲವೂ ಮರವೆಯ ಮಾತಲ್ಲದೆ, ಬರಿಯ ಹೋರಟೆಗೆ ಬಲ್ಲವರಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->