ಅಥವಾ

ಒಟ್ಟು 20 ಕಡೆಗಳಲ್ಲಿ , 11 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಮನದ ರಜದ ಮಣ್ಣ ಕಳೆದು ದಯಾ ಶಾಂತಿಯುದಕವ ತೆಗೆವೆನಯ್ಯಾ, ಜಳಕವ ಮಾಡಿ ಯೋಗಕಂಪನಿಕ್ಕಿ ಹೊದೆವೆನಯ್ಯಾ, ಅದನೊಂದೆಡೆಗೆ ತಂದು ಬಟ್ಟಗಾಣದಲ್ಲಿಕ್ಕಿ ಹಿಳಿವೆನಯ್ಯಾ. ಹಿಳಿದ ರಸದ ಕಂಪ ಕೊಡುವ ಒಡೆಯ ನೀನೆ, ಕಪಿಲಸಿದ್ಧಮ್ಲನಾಥಯ್ಯಾ.
--------------
ಸಿದ್ಧರಾಮೇಶ್ವರ
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು ಎಂತಿದ್ದಡೇನಯ್ಯಾ ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು ಎಂತಿದ್ದಡೇನಯ್ಯಾ ಸುಚರಿತ್ರರು ಎಂತಿದ್ದಡೇನಯ್ಯಾ ಅವಲೋಹವ ಕಳೆವ ಪರುಷ ಎಂತಿದ್ದಡೇನಯ್ಯಾ ಕೂಡಲಸಂಗನ ಶರಣರು ರಸದ ವಾರುಧಿಗಳು ಎಂತಿದ್ದಡೇನಯ್ಯಾ
--------------
ಬಸವಣ್ಣ
ಭಾನು ಶಶಿ ಕಳೆಗುಂದಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ_ ವಾಯುವನರಿಯವೊ! ಆದಿಪ್ರಣಮವನರಿದಹೆನೆಂಬವಂಗೆ, ಬಯಲು ಆಕಾಶದೊಳಗೊಂದು ರಸದ ಬಾವಿ! ಮುನ್ನಾದವರೆಲ್ಲಿಯವರೆಂದೆನಬೇಡ ಗುಹೇಶ್ವರನೆಂಬ ಲಿಂಗವು ತಾನೆ ಕಂಡೆಲವೊ!
--------------
ಅಲ್ಲಮಪ್ರಭುದೇವರು
ಕಾಣಬಹುದೆ ಪರುಷದ ಗಿರಿ ಅಂಧಕಂಗೆ ಮೊಗೆಯಬಹುದೆ ರಸದ ಬಾವಿ ನಿರ್ಭಾಗ್ಯಂಗೆ ತೆಗೆಯಬಹುದೆ ಕಡವರವು ದಾರಿದ್ರಂಗೆ ಕರೆಯಬಹುದೆ ಕಾಮಧೇನು ಅಶುದ್ಧಂಗೆ ಹೊನ್ನ ಹುಳುವ ಕಂಡು ನರಿ ತನ್ನ ಬಾಲವ ಹುಣ್ಣು ಮಾಡಿಕೊಂಡಡೆ ಹೋಲಬಹುದೆ ಎನ್ನೊಡೆಯ ಕೂಡಲಸಂಗನ ಶರಣರನು ಪುಣ್ಯವಿಲ್ಲದೆ ಕಾಣಬಹುದೆ 268
--------------
ಬಸವಣ್ಣ
ಹಸಿಹುಲ್ಲು ಮೆಯ್ದ ಪಶುವಿಗೆ ಹಾಲುಂಟು, ಬೆಣ್ಣೆಯಿಲ್ಲ. ಒಣಹುಲ್ಲು ಮೆಯ್ದ ಪಶುವಿಗೆ ಹಾಲಿಲ್ಲ, ಬೆಣ್ಣೆಯುಂಟು. ಸರ್ವರು ಪಶುವಿಂಗೆ ರಸದ ಹುಲ್ಲು ಮೆಯ್ಸಿ ಹಾಲ ಕರೆದುಂಬರು. ಅದರೊಳೊಬ್ಬ ಅಧಮ ಕರಡವ ಪಶುವಿಗೆ ಮೆಯ್ಸಿ ಹಾಲ ಕರೆದುಂಬನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರಸದ ಬಾವಿಯ ತುಡುಕಬಾರದು, ಕತ್ತರಿವಾಣಿಯ ದಾಂಟಿದವಂಗಲ್ಲದೆ. ಪರುಷವಿದೆ ಕಬ್ಬುನವಿದೆ ಸಾಧಿಸಬಲ್ಲವಂಗೆ. ಶ್ರೀಶೈಲದುದಕವ ಧರಿಸಬಾರದು ಗುಹೇಶ್ವರಾ_ ನಿಮ್ಮ ಶರಣಂಗಲ್ಲದೆ.
--------------
ಅಲ್ಲಮಪ್ರಭುದೇವರು
ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು, ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ. ಅಗ್ನಿಯಂಗದ ಉದರದೊಳಗೆ ಪರಿಪರಿಯ ರಸದ ಭಾವಿ. ಆ ರಸದ ಭಾವಿಯ ತುಳಕ ಹೋದವರೆಲ್ಲ ಅಗ್ನಿಯನುಣ್ಣದೆ, ಆ ರಸವನೆ ಉಂಡು, ಅಗ್ನಿಯ ಸ್ವರೂಪವಾದರು ನೋಡ. ಅಗ್ನಿಯ ಸ್ವರೂಪವಾದುದ ಕಂಡು ಕುರುಹಳಿದು ಅರುಹಡಗಿ ನಿರವಯಲಸಮಾದ್ಥಿಯಲ್ಲಿ ನಿಂದ ನಿಬ್ಬೆರಗು ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ, ಮನದ ಜಡ ಮಣ್ಣ ಕಳೆದುದಯ್ಯಾ. ಶಾಂತ ಉದಕದೊಳಗಿಕ್ಕಿ ತೊಳೆವೆ ನೋಡಯ್ಯಾ. ಅದರುದಕವನೆ ಮಾಡಿ ಯೋಗ ಕಂಪನಿಕ್ಕಿ ಮೊರವೆ ನೋಡಯ್ಯ. ಅದನೊಂದೆಡೆ ತೆಗೆದು ಬಂದು ಬರುಗಾಣದಕ್ಕಿ ಹಿಳೆವ ನೋಡಯ್ಯ. ಹಿಳಿದ ರಸದ ಕಂಪ ತೊಡೆವೆಡೆಯನೊಬ್ಬನೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಣ್ಣೆಂಬ ಹರುಗೋಲದಲ್ಲಿ ಮಾರ ಅಂಬಿಗನಾಗಿ, ಮಥನದ ಹೊಳೆಯಲ್ಲಿ ರಸದ ಕೋಲನಿಕ್ಕಿ ಒತ್ತಲಾಗಿ, ಮಸಕಿತ್ತು ಹರುಗೋಲು. ದೆಸೆಗೆ ಹೋಗಲಾರದು, ತಡಿಗೆ ಸಾಗದು, ಮಡುವಿನಲ್ಲಿ ಮರಳಿತ್ತು. ಇದಕಂಜಿ ನಡುಗಿದೆ, ಹರುಗೋಲ ಕಂಡು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
--------------
ಮನುಮುನಿ ಗುಮ್ಮಟದೇವ
ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ, ಹೊಸಮಾಣಿಕ್ಯವ ನುಂಗಿತ್ತ ಕಂಡೆ. ನುಂಗುವಾಗ ಒಂದು, ಗುಟುಕಿಸುವಾಗ ಎರಡು, ಸ್ವಸ್ಥಾನದಲ್ಲಿ ನಿಂದಾಗ ಮೂರು, ಅದರಂಗವ ತಿಳಿದು ಕಳೆಯಬಲ್ಲಡೆ ನಿಃಕಳಂಕ ಮಲ್ಲಿಕಾರ್ಜುನ ಲಿಂಗವ ಬಲ್ಲವ.
--------------
ಮೋಳಿಗೆ ಮಾರಯ್ಯ
ವೀರಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ ಈರೇಳು ಭುವನವ ಅಮಳೋಕ್ಯವ ಮಾಡಿ ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು ಮೂರ್ತಿಗೊಳಿಸಿದವರಾರು ? ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ. ಬಿಂದುವಿನ ರಸದ ಪರೀಕ್ಷೆಯ ಭೇದವ ಚಂದ್ರಕಾಂತದ ಗಿರಿಗೆ(ಯ?) ಅರುಣ ಚಂದ್ರರೊಡನೆ ಇಂಬಿನಲ್ಲಿಪ್ಪ ಪರಿಯ ನೋಡಾ ! ಅಂಗೈಯ ತಳದೊಳು ಮೊಲೆ ಕಂಗಳಲ್ಲಿ ಕರಸನ್ನೆ ಇಂಬಿನಲ್ಲಿ ನೆರೆವ ಸುಖ ಒಂದೆ ! ಆದಿ ಅನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು. ಗುಹೇಶ್ವರನ ಶರಣ ಚೆನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ರಸದ ಬಾವಿಯ ಚೆಲ್ಲಿ, ಅಸಿಯ ಮಡುವ ಕಲಕಿ, ಕತ್ತರಿವಾಣಿಯ ಗೊತ್ತ ಕೊಯಿದು, ಕರೋತಿಯ ಕಣ್ಣ ಕುತ್ತಿ, ಅಶ್ವನ ಚಿತ್ತವ ಕಿತ್ತು, ನಿಶ್ಚಯದಲ್ಲಿ ಆಡುವವ ತಾನೆ, ನಿಜವಸ್ತು ಸದಾಶಿವಮೂರ್ತಿಲಿಂಗ
--------------
ಅರಿವಿನ ಮಾರಿತಂದೆ
ರಸದ ಸಾರ, ಗಂಧದ ಸುಗುಣ, ರೂಪಿನ ಚಿತ್ರ, ಶಬ್ದದ ಘೋಷ, ಸ್ವರ್ಶನದ ಮೃದು ಕಠಿಣಂಗಳ ಅರಿದರ್ಪಿಸಬೇಕು. ಅರಿದರ್ಪಿಸುವುದಕ್ಕೆ ಸಂದೇಹವ ಗಂಟನಿಕ್ಕಿ ಒಂದೊಂದೆಡೆಯ ಅರಿದೆಹೆನೆಂದಡೆ, ಭಿತ್ತಿ ಮೂರು, ಲಕ್ಷಣವೈದು, ಮಾರ್ಗವಾರು, ವಿಭೇದ ಮೂವತ್ತಾರು, ತತ್ವವಿಪ್ಪತ್ತೈದು, ಸ್ಥಲನೂರೊಂದರಲ್ಲಿ ಹೊರಳಿ ಮರಳಿ ಮತ್ತೊಂದರಲ್ಲಿಯೆ ಕೂಡುವುದಾಗಿ ಒಂದೆ ಎಂದು ಸಂದೇಹವ ಬಿಟ್ಟಲ್ಲಿ, ಉತ್ತರಾಂಗಿಯ ಅರ್ಪಿತ. ಉಭಯವೆಂದಲ್ಲಿ ಪೂರ್ವಾಂಗಿಯ ಉಭಯದೃಷ್ಟ ಇವು ಅಲಕ್ಷ್ಯವಾದಲ್ಲಿ ಸದ್ಯೋಜಾತಲಿಂಗವಿಪ್ಪ ಭೇದ.
--------------
ಅವಸರದ ರೇಕಣ್ಣ
ನೀರ, ಧಾರುಣಿಯೊಳಗೆ ನಾರಿ ಶೃಂಗಾರವ ಮಾಡಿ, ಈರೇಳು ಭವನವನಮಳೋಕ್ಯವ ಮಾಡಿ, ಬಿಂದು ಶಕ್ತಿಯ ಭೇದ ಸಂದ ಯೋಗದ ಸುಖವ ತಂದು ಮೂರ್ತಿಗೊಳಿಸಿದವರಾರು ? ಒಂದೆರಡರ ನುಡಿಯ ಮತ್ತೊಂದು ಗ್ರಹಿಸಿತ್ತ ಕಂಡೆ. ಬಿಂದುವಿನ ರಸದ ಪರೀಕ್ಷೆಯ ಭೇದವ ಚಂದ್ರಕಾಂತದ ಗಿರಿಗೆ ಅರುಣ ಚಂದ್ರನೊಡನೆ ಇಂಬಿನಲ್ಲಿಪ್ಪ ಪರಿಯ ನೋಡಾ ! ಅಂಗಯ್ಯ ತಳದೊಳು ಮೊಲೆ ಕಂಗಳಲ್ಲಿ ಕರಸನ್ನೆಗೆಯ್ದಿಂಬಿನಲ್ಲಿ ನೆರೆವ ಸುಖ ಅಂದಿನಾದಿಯ ಪ್ರತಿಬಿಂಬ ಇಂದೆನಗೆ ತೋರಿತ್ತು. ಗುಹೇಶ್ವರನ ಶರಣ ಚನ್ನಬಸವಣ್ಣಂಗೆ ಶರಣೆನುತಿರ್ದೆನು.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->