ಅಥವಾ

ಒಟ್ಟು 265 ಕಡೆಗಳಲ್ಲಿ , 62 ವಚನಕಾರರು , 223 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣು ನೋಡಿ ರೂಪ ಹೇಳದಂತಿರಬೇಕು. ಕಿವಿ ಕೇಳಿ ಶಬ್ದವ ನುಡಿಯಲರಿಯದಂತಿರಬೇಕು. ಮನವುಂಡು ಡರ್ರನೆ ತೇಗಿ ರುಚಿಯ ಪೇಳಲರಿಯದಂತಿರಬೇಕು. ಮನವ ತೋರುವ ಗುರುವಿನ ಕಾರುಣ್ಯದನುವ ಕಾಬ ಶಿಷ್ಯಂಗೆ, ಮನೋಮೂರ್ತ ಮುನ್ನವೆಯಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಭರಿತಾರ್ಪಣ ಸಹಭೋಜನ ನೈವೇದ್ಯ ಸಹ ಇಂತೀ ತ್ರಿವಿಧಭೇದಂಗಳ ಅಂಗೀಕರಿಸಿದ ಮತ್ತೆ ಕರುಳಿಲ್ಲದ ಕಲಿಯಂತೆ, ಒಡಲಿಲ್ಲದ ಅಂಗದಂತೆ, ಸಂಗವಿಲ್ಲದ ನಿರಂಗದಂತೆ, ದಗ್ಧಪಟದಂತೆ, ಒಂದನೂ ಹೊದ್ದದ ಬಹುವರ್ಣದಂತೆ, ಅಂಗವಿದ್ದೂ ಅಳಿದು ತೋರುವ ನಿರಂಗಿಗಲ್ಲದೆ ಈ ತ್ರಿವಿಧ ವ್ರತ ಪ್ರಸಾದವಿಲ್ಲ. ನಾನು ಎನಗೆ ಬಂದ ಕುತ್ತಕ್ಕೆ ಹಾಡಿ ಹರಸಿ ಮದ್ದನರೆವುತ್ತಿದ್ದೇನೆ, ಎನ್ನ ಕಾಡಬೇಡ. ಕ್ರೀ ತಪ್ಪದೆ ಎನ್ನ ಕೂಡಿಕೊ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.
--------------
ಅಕ್ಕಮ್ಮ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ತ್ರೈಮೂರ್ತಿಗಳು ನಿನ್ನ ಸಾಕಾರದ ಶಾಖೆ. ತ್ರೈಮೂರ್ತಿಗಳು ನಿನ್ನ ಅಪ್ಪುವಿನ ಅಂಕುರ ಶಕ್ತಿ. ಇಂತೀ ಸರ್ವಗುಣ ಸಂಪನ್ನನಾಗಿ ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಗೆ ಪಿಂಡವ ಕೊಟ್ಟು ರುದ್ರಂಗೆ ಕಂಡೆಹವ ಕೊಟ್ಟು ಹಿಂಗಿದೆ. ನೀನಿದರಂದವನೊಲ್ಲದೆ ಅಂಗಕ್ಕೆ ಮಯ ನೀನೇ, ನಿರಂಗಕ್ಕೆ ಸಂಗ ನೀನೇ. ಹಿಂಗೂದಕ್ಕೆ ನಿನ್ನಂಗ ಅನ್ಯ ಬ್ಥಿನ್ನವಲ್ಲ. ಮುಕುರದ ಮರೆಯಲ್ಲಿ ತೋರುವ ಪ್ರತಿರೂಪಿನಂತೆ ಸಕಲದೇವರ ಚೈತನ್ಯಭಾವ ನಿನ್ನ ಉಷ್ಣ ಬಿಂದು, ಸಕಲದೇವರ ಶಾಂತಿ ನಿನ್ನ ಸಮಾನ ಬಿಂದು, ಇಂತಿವ ಹೇಳುವಡೆ ವಾಙ್ಮನಕ್ಕತೀತ ಅತ್ಯತಿಷ್ಠದ್ದಶಾಂಗುಲ ನಾರಾಯಣ ನಯನಪೂಜಿತ ಪ್ರಿಯ ರಾಮೇಶ್ವರಲಿಂಗ ನಾ ನೀನಾದೈಕ್ಯ.
--------------
ಗುಪ್ತ ಮಂಚಣ್ಣ
ಮರುಳನ ಊಟದಂತೆ, ಮಯೂರನ ನಿದ್ರೆಯಂತೆ, ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ, ಕಟಕದಲ್ಲಿ ತೋರುವ ಅಸಿಯ ರಸೆಯಂತೆ, ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ, ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ, ಇಪ್ಪ ಸುಳಿವ ಜಂಗಮಮೂರ್ತಿಯ ಕಂಡು ನಮೋ ನಮೋ ಎಂಬೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸತ್ಕ್ರಿಯಾನುಭಾವದಿಂದೆ ಕಾಯದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ, ಕಂಗಳಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಸೂಕ್ಷ್ಮ ತತ್ವದಲ್ಲಿ ಷೋಡಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸಮ್ಯಕ್ ಜ್ಞಾನಾನುಭಾವದಿಂದೆ ಮನದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಮನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಕಾರಣತತ್ವದಲ್ಲಿ ದಶಕಳೆಯೊಳು ನಿಂದು ಅನಂತಕೋಟಿ ಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಮಹಾಜ್ಞಾನಾನುಭಾವದಿಂದೆ ಭಾವದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಭಾವದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ. ಎನ್ನ ಸರ್ವಾಂಗದಲ್ಲಿ ಮೂವತ್ತೆಂಟು ಕಳಾತೀತನಾಗಿ ಅಗಣಿತಕೋಟಿಪ್ರಕಾಶಮಯದಿಂದೊಪ್ಪುವ ಗುರುನಿರಂಜನ ಚನ್ನಬಸವಲಿಂಗವೆಂಬ ಪ್ರಾಣಲಿಂಗವನು ಮಹದರುವಿನ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಜ್ಞಾನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಹಭೋಜನವ ಮಾಡುವನ ಇರವು ಹೇಗೆಂದಡೆ: ದಗ್ಧಪಟದಂತೆ, ಮಂಜಿನ ರಂಜನೆಯ ವಾರಿಯ ಧೂಮದಂತೆ, ಒಡಲಿನ ಆತ್ಮನ ಭೇದದಂತಿರಬೇಕು. ಆಕಾಶದ ಸಾಕಾರದಲ್ಲಿ ತೋರುವ ನಾನಾ ಛಾಯದಂತೆ, ಒಂದು ವರ್ಣದಲ್ಲಿ ನಿಲ್ಲದೆ ತೋರುವ ತೋರಿಕೆಯಂತೆ, ಕಾಯದ ಛಾಯವ ತೊಟ್ಟಿದ್ದಲ್ಲಿ ಲಿಂಗಕ್ಕೂ ತನಗೂ ಸಹಭೋಜನ ಸಲವುದೆಂದೆ. ಅದು ಉರಿಯೊಳಗಳ ಕರ್ಪುರದಂತೆ, ಕರ್ಪುರದೊಳಗಳ ಉರಿಯಂತೆ. ಅನ್ಯಬ್ಥಿನ್ನವಿಲ್ಲದಿರಬೇಕು, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಅಂತರಂಗದಲ್ಲಿ ಆವರಿಸಿ, ಬಹಿರಂಗದಲ್ಲಿ ತೋರುವೆ. ಕಂಗಳ ಕೊನೆಯಲ್ಲಿ ಮೂರುತಿಯಾಗಿ, ಮನದ ಕೊನೆಯಲ್ಲಿ ತೋರುವೆ. ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ ಉರಿಲಿಂಗದೇವ ನೀನಯ್ಯಾ.
--------------
ಉರಿಲಿಂಗದೇವ
ಮನವಿಕಾರದಲ್ಲಿ ತೋರುವ ಸುಳುಹು ತನುವಿಕಾರದಲ್ಲಿ ಕಾಣಿಸಿಕೊಂಡ ಮತ್ತೆ ಅರಿವಿನ ಭೇದ ಎಲ್ಲಿ ಅಡಗಿತ್ತು ? ಅರಿದು ತೋರದ ಮತ್ತೆ ನೆರೆ ಮುಟ್ಟಬಲ್ಲುದೆ ತ್ರಿವಿಧದ ಗೊತ್ತ ? ಇಂತೀ ಭಗಧ್ಯಾನರನೊಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ ನಿಂದ ಇಂಗಡಲಿನ ಅಡಿಯ ಕಂಡವರುಂಟೆ? ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ? ಅದು ಸರಿಹರಿದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 99 ||
--------------
ದಾಸೋಹದ ಸಂಗಣ್ಣ
ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ, ಹೆತ್ತ ತಾಯಿಗೆ ಮಲತಾಯ ತೋರುವಂತೆ, ಸತ್ಯಕ್ಕೆ ಅಸತ್ಯವ ತೋರುವ ಭಕ್ತಿಹೀನ ತೊತ್ತುಗುಲವರಿದು ಸತ್ತಹಾಗೆ ಸುಮ್ಮನಿರಿರೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ ತನ್ನ ಚಿದ್ವಿಲಾಸದಿಂದ ತಾನೆ ಜಗತ್ಪಾವನಮೂರ್ತಿಯಾಗಿ, ತನ್ನಂತರಂಗ ಬಹಿರಂಗದಲ್ಲಿ ಭಕ್ತಿ ಜ್ಞಾನ ವೈರಾಗ್ಯ ಪಟ್ಸ್ಥಲಮಾರ್ಗವಿಡಿದು ಭಕ್ತಿಪ್ರಿಯರಾಗಿ, ತಮ್ಮಂತರಂಗದೊಳಗೆ ಷಡ್ವಿಧಸಕೀಲ ಛತ್ತೀಸಸಕೀಲ ನಾಲ್ವತ್ತೆಂಟುಸಕೀಲ ಐವತ್ತಾರುಸಕೀಲ ಅರುವತ್ತಾರುಸಕೀಲ ತೊಂಬತ್ತಾರುಸಕೀಲ ನೂರೆಂಟುಸಕೀಲ ಇನ್ನೂರ ಹದಿನಾರುಸಕೀಲ ಮೊದಲಾದ ಸಮಸ್ತಸಕೀಲಂಗಳನೊಳಕೊಂಡು, ಬೆಳಗುವ ಗುರು ಲಿಂಗ ಜಂಗಮವ ಕಂಗಳು ತುಂಬಿ, ಮನ ತುಂಬಿ ಭಾವ ತುಂಬಿ ಕರಣಂಗಳು ತುಂಬಿ, ತನು ತುಂಬಿ ಪ್ರಾಣ ತುಂಬಿ ಸರ್ವಾಂಗ ತುಂಬಿ, ಅರ್ಚಿಸಲರಿಯದೆ, ಹಲವನರಸಿ, ತೊಳಲುವ ಮೂಳರ ಕಂಡು ಬೆರಗಾದೆ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹರಿ ನಾನೆಂದಲ್ಲಿ ಭವಮದಗಜಕ್ಕೆ ಹರಿಯಲ್ಲದೆ, ದಶಾವತಾರದ ಹರಿಯಲ್ಲ ನೋಡಾ. ಹರ ನಾನೆಂದಲ್ಲಿ ಸರ್ವಭಾವನಾವಿರಹಿತ ನಾನಲ್ಲದೆ, ಪಂಚಕೃತ್ಯಾದ್ಥಿಕಾರಿ ಹರನಲ್ಲ ನೋಡಾ. ನರ ನಾನೆಂದಲ್ಲಿ ಉತ್ಪತ್ತಿವಿರಹಿತ ನಾನಲ್ಲದೆ, ಉತ್ಪತ್ತ್ಯದ್ಥಿಕಾರಿ ನರ ನಾನಲ್ಲ ನೋಡಾ. ತೋರುವ ಸಚರಾಚರ ನಾನೆಂದಲ್ಲಿ ಜಡಾಜಡ ನಾನಲ್ಲದೆ, ಜನನ ಮರಣ ಪೊದ್ದಿ ಸಚರಾಚರ ನಾನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->