ಅಥವಾ

ಒಟ್ಟು 90 ಕಡೆಗಳಲ್ಲಿ , 28 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಊರ ಹೊರಗಳ ಹೊಲತಿಯ ಹಾರುವ ನೆರೆದು ತನ್ನಯ ಸೂತಕ ಹೋಯಿತ್ತು. ಹೊಲತಿಯ ಕುಲ ಹರಿದು ಹಾರುವ ಹೊಲೆಯನಾಗಿ, ಆ ಹಾರುವ ಹಾರದೆ ಸದಾಶಿವಮೂರ್ತಿಲಿಂಗಕ್ಕೆ ಒಳಗಾದ.
--------------
ಅರಿವಿನ ಮಾರಿತಂದೆ
ಮನ ಮುಟ್ಟದ ಪೂಜೆ, ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ. ವಸ್ತುವ ಮುಟ್ಟದ ಅರ್ಪಿತ, ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ, ಇದು ನಿಶ್ಚಯದ ಮುಟ್ಟಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಸುಗಂಧದ ಮೂಲದ ಬೇರಿನ ಗಂಧ ಎಲೆ ಬಳ್ಳಿಯನೇತಕ್ಕೆ ವೇಧಿಸದು ? ಕುಸುಮದ ಸುವಾಸನೆ ತನ್ನಯ ತೊಟ್ಟು ಎಲೆ ಕೊನರು ಬೇರುವನೇಕೆ ವೇಧಿಸದು ? ಇದು ಇಷ್ಟ ಪ್ರಾಣಯೋಗದ ಭೇದ. ಗಿಡುಗಿಡುವಿಗೆ ಕುರುಹಲ್ಲದೆ ಗಂಧ ಗಂಧ ಕೂಡಿದಲ್ಲಿ ದ್ವಂದ್ವವಾಗಿ ಬೆರೆದಲ್ಲಿ, ಕದಂಬಗಂಧವಲ್ಲದೆ ಒಂದರ ಗಂಧವೆಂದು ಸಂಧಿಸಿ ತೆಗೆಯಲಿಲ್ಲ. ಅವರು ನಿಂದ ನಿಂದ ಸ್ಥಲಕ್ಕೆ ಸಂಬಂಧವಾಗಿಪ್ಪರು. ಇದು ದೃಷ್ಟಾನುಭಾವಸಿದ್ಧಿ, ಸರ್ವಸ್ಥಲಭೇದ, ವಿಶ್ವತೋಮುಖರೂಪು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ತತ್ವಭಿತ್ತಿಸ್ವರೂಪನು.
--------------
ಮೋಳಿಗೆ ಮಹಾದೇವಿ
ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ, ಲಿಂಗದ ಶೇಷವ ತಾ ಕೊಂಡೆನೆಂದು ಕೊಂಡುದು ಪ್ರಸಾದ. ಇದ್ದುದು ಸಯಿದಾನವೆಂದು ಉಂಡು ಉಂಡು ಲಿಂಗಕ್ಕೆ ಕೊಡಬಹುದೆ ಅಯ್ಯಾ? ಅದು ಮುನ್ನವೆ ಲಿಂಗಾರ್ಪಿತ. ತನ್ನಯ ಸಂದೇಹಕ್ಕೆ ಕೊಟ್ಟುಕೊಂಡೆನೆಂಬ ಭೇದವಲ್ಲದೆ, ಇಂತೀ ಗುಣ ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಸ್ಥಾಣುನಿನ ರಜ್ಜು, ಮೀರಿ ಎಯ್ದದೆ ಆಡಿ, ತನ್ನಯ ಸ್ಥಾನಕ್ಕೆ ಬಹಂತೆ, ವಸ್ತುವಿನ ಗೊತ್ತಿನಿಂದ ಕಟ್ಟು ಮೀರಲಿಲ್ಲವಾಗಿ, ಐಘಟದೂರ ರಾಮೇಶ್ವರಲಿಂಗದಲ್ಲಿಗೆ ಎಯ್ದುವ ತೆರ.
--------------
ಮೆರೆಮಿಂಡಯ್ಯ
ಇಷ್ಟಪ್ರಾಣಸಂಬಂಧಯೋಗ ಭೇದದ ಪರಿ ಯಾವುದೆಂದಡೆ : ಅಕ್ಷಿಯ ಮುಚ್ಚಿದಲ್ಲಿ ನಿರೂಪಾಯಿತ್ತು, ತೆರೆದಲ್ಲಿ ರೂಪಾಯಿತ್ತು. ತನ್ನಯ ಅರಿವು ಮರವೆಯಿಂದ ಕ್ರೀ, ನಿಃಕ್ರೀಯೆಂಬ ಸಂದೇಹವಾಯಿತ್ತು. ನಿಂದ ನೀರ ನೆಳಲು, ಚರಿಸಿದಲ್ಲಿ ಅಡಗಿತ್ತು. ಆ ತೆರದ ದೃಷ್ಟವನರಿ, ಐಘಟದೂರ ರಾಮೇಶ್ವರಲಿಂಗ ಏಕಸ್ವರೂಪು.
--------------
ಮೆರೆಮಿಂಡಯ್ಯ
ಐದಕ್ಷರ ಆದಿಯಾದ, ಇಪ್ಪತ್ತೈದಕ್ಷರ ಸಂಯೋಗದ ಮೂವತ್ತಾರಕ್ಷರವಾನಂದದ ಆನಂದ ಸಾನಂದ ಶೂನ್ಯ ತನ್ನಯ ಅಂಗ ಭಾನುವಿನ ಪ್ರಭೆಯಪ್ಪ ಹೇಮ ಕಲಶಕ್ಕೆಲಸಂದಿದ ಮೇಲೆ ಆಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಕ್ತ ತನ್ನಯ ಪಾಶವ ಗುರುವಿನ ಮುಖದಿಂದ ಕಳೆವ, ಆ ಗುರು ತನ್ನಯ ಪಾಶವ ಏತರಿಂದ ಕಳೆಯಬೇಕೆಂಬುದನರಿಯಬೇಕು. ಹಾಗರಿಯದೆ ಶಾಸ್ತ್ರಪಾಠಕನಾಗಿ ಮಾತಿನ ಮಾಲೆಯ ನುಡಿ[ವ] ಜ್ಞಾತೃ ಜ್ಞಾನ ಜ್ಞೇಯವನರಿಯ[ದ] ಭಾವಶುದ್ಧವಿಲ್ಲದ ಆಚಾರ್ಯನ ಕೈಯಿಂದ ಬಂದ ಪಾಷಾಣದ ಕುರುಹು ಅದೇತಕ್ಕೂ ಯೋಗ್ಯವಲ್ಲಾ ಎಂದೆ. ಅದು ಪುನಃ ಪ್ರತಿಷ್ಠೆಯಿಂದಲ್ಲದೆ ಲಿಂಗಚೇತನವಿಲ್ಲಾ ಎಂದೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಭಕ್ತಿಯ ನುಡಿವಲ್ಲಿ ಬಾಹ್ಯವಾಗಿರಬೇಕು, ಸತ್ಯವ ನುಡಿವಲ್ಲಿ ಮರೆಯಾಗಿರಬೇಕು. ವೇಶಿ ತಿರುಗಾಡುವಲ್ಲಿ ತನ್ನಯ ವೇಷವ ತೋರಬೇಕು, ಗರತಿಯಿಹಲ್ಲಿ ತನ್ನ ಪುರುಷನ ಅಡಕದಲ್ಲಿ ಅಡಗಬೇಕು. ದಿವ್ಯಜ್ಞಾನವ ದಿವಜರಲ್ಲಿ ಹೇಳುವ ತ್ರಿವಿಧ ಗುಡಿಹಿಗಳಿಗೆ ಅರುಹಿನ ಪಥವಿಲ್ಲ, ಸದಾಶಿವಮೂರ್ತಿಲಿಂಗಕ್ಕೆ ದೂರವಾಗಿಹರು.
--------------
ಅರಿವಿನ ಮಾರಿತಂದೆ
ತನು ಹೇಳಿಗೆ, ಮನ ಸರ್ಪನಾಗಿ, ತನ್ನಯ ವಿಲಾಸಿತದಿಂದ ಹೆಡೆಯೆತ್ತಿ ಆಡುತ್ತಿರಲಾಗಿ, ನಾನಾರೂಪು ತೋ[ರುವ] ಆಕಾಶದ ಮಧ್ಯದಲ್ಲಿ, ಉಭಯನಷ್ಟವಾದ ಚಿದ್ಘನರೂಪಿನ ಹದ್ದು ಬಂದು, ಹೊಯ್ಯಿತ್ತು ಸರ್ಪನ. ಆ ಸರ್ಪ ಹದ್ದಿನ ಕೊರಳ ಸುತ್ತಿ, ಬಾಯ ಬಿಟ್ಟು ಕಚ್ಚದಂತೆ ಹೆಡೆಯೊಳು ಮುಚ್ಚಿ, ಹದ್ದೆದ್ದಾಡದಂತಿರಲು, ಆ ಬುದ್ಧಿಯ ನೆನೆದು ಒದ್ದು, ತನ್ನ ಸಖದ ಉಗುರಿನಲ್ಲಿ ಹೆಡೆ ಉಡುಗಿ, ಹಾವಿನ ತೆಕ್ಕೆ ಬಿಟ್ಟು ಹದ್ದೆದ್ದಿದಿತ್ತು ಮಹದಾಕಾಶಕ್ಕೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ.
--------------
ಸಗರದ ಬೊಮ್ಮಣ್ಣ
ಗುರುವಾದಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ. ಲಿಂಗವಾದಡೂ ಶಕ್ತಿಸಂಪುಟವುಳ್ಳನ್ನಕ್ಕ ಭವಕ್ಕೊಳಗು. ಜಂಗಮವಾದಡೂ ತನ್ನಿರವ ತಾನರಿಯದನ್ನಕ್ಕ ಪ್ರಸಿದ್ಧಭಾವಿಯಲ್ಲ. ಇಂತೀ ಇದನರಿತು ಪೂಜಿಸಬೇಕು, ತನ್ನಯ ಜನ್ಮವ ನಿವೃತ್ತಿಯ ಮಾಡಿಕೊಳಬಲ್ಲಡೆ. ಇದೆ ಸದ್ಭಕ್ತನಿರವು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಉಪಾಧಿಕಂಗೆ ಆವ ವ್ರತ, ತ್ರಿವಿಧ ಭಕ್ತಿ ಏನೂ ಇಲ್ಲ. ನಿರುಪಾಧಿಕಂಗೆ ಅವಾವ ವ್ರತ, ತ್ರಿವಿಧಭಕ್ತಿ ಉಂಟು. ಸ್ವಯಾನುಭಾವಿಗೆ ಇದಿರ ದಯೆ ದಾಕ್ಷಿಣ್ಯ ತನ್ನಯ ಅರಿವಿನ ವಿಲಾಸಿತದ ಲಕ್ಷ. ಸರ್ವಗುಣದಲ್ಲಿ ಸನ್ನದ್ಧನಾಗಿಪ್ಪುದು ಸ್ವಯಾನುಭಾವದ ಸಂಬಂಧ. ಇಂತೀ ಖಂಡಿತ ಅಖಂಡಿತ ಪರಿಪೂರ್ಣತ್ವ ವಿಭೇದವಿಲ್ಲದೆ ಪೂರ್ಣತ್ವವಾಗಿ ಇಪ್ಪುದು ಸಂಗನಬಸವಣ್ಣನ ಸತ್ಕ್ರೀಮಾರ್ಗ, ಬ್ರಹ್ಮೇಶ್ವರಲಿಂಗವನರಿದೆಹೆನೆಂದು ಉಪಾಧಿಕೆ ನಿರುಪಾಧಿಕೆಯೆಂಬುದನರಿದು ಸ್ವಯವ ಕೂಡಿಹೆನೆಂದು.
--------------
ಬಾಹೂರ ಬೊಮ್ಮಣ್ಣ
ಇನ್ನಷ್ಟು ... -->