ಅಥವಾ

ಒಟ್ಟು 55 ಕಡೆಗಳಲ್ಲಿ , 26 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುರುಹಿನ ಕುರುಹಿನಲ್ಲಿ, ಅರಿವಿನ ಅರಿವಿನಲ್ಲಿ ಜ್ಞಾನದ ಜ್ಞಾನದಲ್ಲಿ ಇಂತೀ ಸಲೆಸಂದ ಭೇದಂಗಳಲ್ಲಿ ನಿಂದು ನೋಡು. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಅರಿವಿನ ಅರಿವು, ಬೆಳಗಾಯಿತ್ತು.
--------------
ಬಿಬ್ಬಿ ಬಾಚಯ್ಯ
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ, ಕಾಯದಲ್ಲಿ ಶುದ್ಧಪ್ರಸಾದ, ಪ್ರಾಣದಲ್ಲಿ ಸಿದ್ಧಪ್ರಸಾದ, ಜ್ಞಾನದಲ್ಲಿ ಪ್ರಸಿದ್ಧಪ್ರಸಾದ. ಈ ತ್ರಿವಿಧಪ್ರಸಾದ ನಿರ್ಣಯ ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದರ ಕಂಡಡೆ, ಅಯ್ಯ ಎಂತೆಂಬೆನವರ ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ ಏನೆಂಬೆ ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು, ಕೂಡಲಸಂಗಮದೇವಾ, ಅವರನಯ್ಯ ಎಂಬೆನು.
--------------
ಬಸವಣ್ಣ
ಮುಖಲಿಂಗದರುಶನ ಜಂಗಮದಲ್ಲಿ, ಭಾವಲಿಂಗ ದರುಶನ ಮನದಲ್ಲಿ ಸ್ವಯಲಿಂಗದರುಶನ ಕಾಯದಲ್ಲಿ, ಈ ತ್ರಿವಿಧಲಿಂಗದರುಶನ ಜ್ಞಾನದಲ್ಲಿ. ಇದು ಕಾರಣ-ಕೂಡಲಚೆನ್ನಸಂಗನಲ್ಲಿ, ಜಂಗಮಲಿಂಗದರುಶನ ಬಸವಣ್ಣಂಗಲ್ಲವೆ ಉಳಿದವರಾರಿಗೆಯೂ ಅಳವಡದು.
--------------
ಚನ್ನಬಸವಣ್ಣ
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ.
--------------
ಆದಯ್ಯ
ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ, ಅರಿವ ಅರಿವು ಫಲರಸ ಬಲಿದು ಫಳವಾದಂತೆ ಕ್ರೀ ಜ್ಞಾನದಲ್ಲಿ ನಿಂದು, ಜ್ಞಾನ ಕ್ರೀಯನವಗವಿಸಿದಲ್ಲಿ, ಉಭಯನಾಮ ನಷ್ಟವಾಯಿತ್ತು, ಸದಾಶಿವಮೂರ್ತಿಲಿಂಗವನರಿತಲ್ಲಿ.
--------------
ಅರಿವಿನ ಮಾರಿತಂದೆ
ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ. ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ. ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು ನಡೆದೆಹೆನೆಂಬುದೆ ಪರಪಾಕದ ಪಾಕುಳ. ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು, ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮತ್ರ್ಯರ ಸುಗುಣ ದುರ್ಗುಣವನೊಲ್ಲ, ನಿತ್ಯಾನಿತ್ಯವ ಮುಟ್ಟಿ ಮತ್ರ್ಯರ ಕರ್ಕಶವನೊಲ್ಲ. ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು- ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು, ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ, ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ.
--------------
ಏಲೇಶ್ವರ ಕೇತಯ್ಯ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ? ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ? ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ? ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ ದೇವದಾನವ ಮಾನವರೆಲ್ಲರು ನೀವೆಲ್ಲರು ಆವ ಪರಿಯಲ್ಲಿ ಗುರು ಹೇಳಿರಣ್ಣಾ? ಗುರುವಾರು ಲಘುವಾರೆಂದರಿಯರಿ, ಮನ ಬಂದಂತೆ ನುಡಿದು ಕೆಡುವಿರಾಗಿ. ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು. ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು ಮಹಾಸಂವಾದದಿಂದ ಅತಿತರ್ಕವ ಮಾಡಿ ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ, ಆ ಸಭಾಮಧ್ಯದಿ ಪರಮಾಕಾಶದಿ `ಅತ್ಯತಿಷ*ದ್ದಶಾಂಗುಲನೆನಿಪ' ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ*ದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು. ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ, `ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು `ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ ಎಂದುದಾಗಿ. `ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, `ಈಶಾನಸ್ಸರ್ವವಿದ್ಯಾನಾಂ ಎಂದುದಾಗಿ, ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ ವಿದ್ಯೆಯಲ್ಲಿ ಗುರು ಕಾಣಿರೆ, ದೀಕ್ಷೆಯಲ್ಲಿ ಗುರುವೇರಿ ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ `ಜನಿತೋಥವಿಷ್ಣೋಃ ಎಂದುದಾಗಿ, `ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ, ಮಹಾಘನತರವಪ್ಪ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು. ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ ಎಮ್ಮ ಗಣನಾಥದೇವರೇ ಗುರು ಕಾಣಿರೆ. ಇದು ಕಾರಣ, ಶರಣಮೂರ್ತಿ ಶ್ರೀಗುರು. ಶ್ರೀಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು, ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು. ತನು ಮನ ಧನವನರ್ಪಿಸುವುದು, ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ, ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಷೋಡಶೋಪಚಾರವಿಲ್ಲದೆ ಮುಟ್ಟಲರಿಯದವರ ಕಂಡರೆ ಅವರನೇನೆಂಬೆನಯ್ಯಾ ? ಆವ ಭಾವದಲ್ಲಿ ಆವ ಮುಖದಲ್ಲಿ ಆವ ಜ್ಞಾನದಲ್ಲಿ ಆವರನಯ್ಯಯೆಂಬೆನು ? ನಿಮ್ಮಲ್ಲಿ ಸಮ್ಯಕ್ಕಾದ ಸತ್ಯಶರಣರ ಅವರನಯ್ಯಯೆಂಬೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆಕಾಶದಲ್ಲಿಯ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ. ಆಕಾಶದಲ್ಲಿಯ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ! ಕಾಣಬಾರದು ಕಾಣಬಾರದು, ಜ್ಞಾನದಲ್ಲಿ ಆನಂದ ಅನಾನಂದವ. ಕಾಣಬಹುದು ಕಾಣಬಹುದು; ಅಜ್ಞಾನದಲ್ಲಿ ಸುಖದುಃಖೋಭಯದ್ವಂದ್ವವ. ಭೋ ಭೋ! ಕಪಿಲಸಿದ್ಧಮಲ್ಲಿಕಾರ್ಜುನ ಭೋ
--------------
ಸಿದ್ಧರಾಮೇಶ್ವರ
ಕ್ರಿಯಾಜ್ಞಾನಸಂಬಂಧವೆಂದು ನುಡಿವರು_ ಕ್ರಿಯಾಜ್ಞಾನಸಂಬಂಧವೆಂತಿರ್ಪುದೆಂದರಿಯರು. ಕ್ರೀಯಲ್ಲಿ ಅಂಗಲಿಂಗಸಂಬಂಧವನರಿಯರು, ಜ್ಞಾನದಲ್ಲಿ ಲಿಂಗಜಂಗಮಸಂಬಂಧವನರಿಯರು. ಕ್ರೀಯಲ್ಲಿ ಅರ್ಪಿತಪ್ರಸಾದಸಂಬಂಧವನರಿದು, ಜ್ಞಾನದಲ್ಲಿ ತೃಪ್ತಿಪರಿಣಾಮವನರಿದು. ಕ್ರೀಯೊಳಗಿರ್ದು ಜ್ಞಾನಸಂಪನ್ನನಾಗಿರಬಲ್ಲ ಶರಣಂಗೆ ಕ್ರಿಯೆಯೆ ತನು, ಜ್ಞಾನವೆ ಪ್ರಾಣ. ತನು ಲಿಂಗವಾಗಿ, ಪ್ರಾಣ ಜಂಗಮವಾಗಿ, ತನುವ ಸಯಮಾಡಿ, ಪ್ರಾಣವ ಲಿಂಗಜಂಗಮಕ್ಕರ್ಪಿಸಿ, ನಿರಂತರ ಸಾವಧಾನಿಯಾಗಿರಬಲ್ಲ ಪ್ರಸಾದಿಗಳ ಎನಗೊಮ್ಮೆ ತೋರಿ ಸಲಹಾ, ಕೂಡಲಸಂಗಮದೇವಾ.
--------------
ಬಸವಣ್ಣ
ತನುವಿನಲ್ಲಿ ಹಿಡಿದು, ಮನದಲ್ಲಿ ಅರಿದು ಜ್ಞಾನದಲ್ಲಿ ಕಂಡು, ಮಹಾಪ್ರಕಾಶದಲ್ಲಿ ಕೂಡಿ ಭೇದಭಾವವಿಲ್ಲದಿರಬೇಕು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಸಂಬಂಧಿಯಾಗಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಧ್ಯಾನದಲ್ಲಿ ಕುಳ್ಳಿರ್ದು, ಜ್ಞಾನದಲ್ಲಿ ನೋಡಿ, ಮೌನ ಮುಗ್ಧವ ಮಾಡಿ, ಸ್ವಾನುಭಾವದಿಂದರಿದು, ಮತ್ತೇನೇನು ಹೊದ್ದಲೀಯದೆ, ತಾನು ತಾನಾಗಿ, ಜ್ಞಾನಕ್ಕತೀತನಾಗಿ, ಧ್ಯಾನ ಧಾರಣ ಸಮಾಧಿಯ ಮೆಟ್ಟಿ ನಿಂದ ನಿಜಲಿಂಗೈಕ್ಯಂಗೆ ನಮೋ ನಮೋ ಎಂಬೆ. ಇಂದೆನ್ನ ಭವ ನಷ್ಟವಾಗಿ ಹೋದವು ಕಾಣಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮನದ ವಾಸನೆಗಳನಳಿದು, ಜ್ಞಾನದಲ್ಲಿ ಕೂಡಿ, ಸ್ವಾನುಭವ ಸಿದ್ಭಾಂತವಳವಟ್ಟಾತನೆ ಜಗದಯ್ಯ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->