ಅಥವಾ

ಒಟ್ಟು 54 ಕಡೆಗಳಲ್ಲಿ , 26 ವಚನಕಾರರು , 53 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು. ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು. ಮರದೊಳಗಣ ಕಿಚ್ಚು ಮರನನೂ ಸುಟ್ಚು, ಇದಿರನೂ ಸುಟ್ಟು, ಪರಿಸ್ಪಂದಕ್ಕೆ ಹರಿಯಿತ್ತು. ಇಂತೀ ತ್ರಿವಿಧಭೇದದಿಂದ, ಜ್ಞಾನದ ಭೇದವನರಿ ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಕುರುಹಿನ ಕುರುಹಿನಲ್ಲಿ, ಅರಿವಿನ ಅರಿವಿನಲ್ಲಿ ಜ್ಞಾನದ ಜ್ಞಾನದಲ್ಲಿ ಇಂತೀ ಸಲೆಸಂದ ಭೇದಂಗಳಲ್ಲಿ ನಿಂದು ನೋಡು. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಅರಿವಿನ ಅರಿವು, ಬೆಳಗಾಯಿತ್ತು.
--------------
ಬಿಬ್ಬಿ ಬಾಚಯ್ಯ
ಜ್ಞಾನದ ಗಮನವ ಸಹಜದ ಉದಯದಲ್ಲಿ ಏನೆಂದರಿಯೆನು. ಲಿಂಗದ ಬೆಳಗು ಒಳಕೊಂಡುದಾಗಿ ಏನೆಂದರಿಯೆನು. ಕೂಡಲಸಂಗಮದೇವನ ಧ್ಯಾನದಿಂದ ಏನೆಂದರಿಯೆನು.
--------------
ಬಸವಣ್ಣ
ಜ್ಞಾನದ ಉಬ್ಬು ಕೊಬ್ಬಿನಲ್ಲಿ ನುಡಿವುತ್ತಿಪ್ಪರೆಲ್ಲರ (ಉಲಿವುತ್ತಿಪ್ಪರೆಲ್ಲರ ?); ನಾಮ ನಾಸ್ತಿಯಾಗದು, ತನುಗುಣ ನಾಸ್ತಿಯಾಗದು, ಕರಣಾದಿಗುಣಂಗಳು ನಾಸ್ತಿಯಾಗವು, ಕರಸ್ಥಲವು ನಾಸ್ತಿಯಾಗದು. ಇದೆತ್ತಣ ಉಲುಹೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಜ್ಞಾನದುದಯವೇ ಭಕ್ತ, ಜ್ಞಾನದ ಶೂನ್ಯವೇ ಐಕ್ಯ. ಇಂತೀ ಜ್ಞಾನದಾದ್ಯಂತವನರಿವರಿವೆ ಸರ್ವಜ್ಞನಾದ ಈಶ್ವರ ನೋಡಾ. ಅದೆಂತೆಂದಡೆ: ``ಚಿದೋದಯಶ್ಚ ಸದ್ಭಕ್ತೋ ಚಿತ್ಯೂನ್ಯಂಚೈಕ್ಯಮೇವ ಚ ಉಭಯೋರೈಕ್ಯ ವಿಜ್ಞೇಯಾತ್ಸರ್ವಜ್ಞಮೀಶ್ವರಃ'' (?) ಎಂದುದಾಗಿ ಇಂತೀ ಷಟ್ಸ್ಥಲದೊಳಗಾದ್ಯಂತವಡಗಿಹ ಭೇದವ ನೀ ನಲ್ಲದನ್ಯರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅನುವನರಿವನ್ನಕ್ಕ ಅರ್ಚನೆ, ಪುಣ್ಯವನರಿವನ್ನಕ್ಕ ಪೂಜೆ, ಶರೀರವುಳ್ಳನ್ನಕ್ಕ ಸುಖದುಃಖವ ಸಂತಾಪಿಸಬೇಕು. ತೆಪ್ಪದಲ್ಲಿ ನಿಂದು ಒತ್ತಿ ಹೊಳೆಯ ದಾಟುವಂತೆ. ಕ್ರೀಶುದ್ಧವಾದಲ್ಲಿ ಜ್ಞಾನದ ಗೊತ್ತು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಕಾಯದ ಸೂತಕವ ನೋಟದಿಂದ ಕಳೆದು, ನೋಟದ ಸೂತಕವ ಭಾವದಿಂದ ಕಳೆದು, ಭಾವದ ಪ್ರಕೃತಿ[ಯ] ಜ್ಞಾನದಿಂದ ಕಳೆದು, ಜ್ಞಾನದ ಬೆಳಗು ನಿಂದಲ್ಲಿ, ಅರ್ಕೇಶ್ವರಲಿಂಗವ ಮುಟ್ಟಿದ ಮುಟ್ಟು.
--------------
ಮಧುವಯ್ಯ
ನನ್ನ ಕೋಪವೆಂಬುದು ನಿಮ್ಮ ಕಣ್ಣು ನೋಡಯ್ಯಾ; ನಾನೇತರೊಳಗೇನು ಹೇಳಯ್ಯಾ! ನಿಮ್ಮ ಜ್ಞಾನದ ತೇಜದ ಮುಂದೆ ಎನ್ನರಿವು ಏತರದು ಹೇಳಯ್ಯಾ! ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯಾ. ಎನಗೆ ಬೇರೆ ಸ್ವತಂತ್ರತೆಯುಂಟೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜ್ಞಾನದ ಉಪಾದ್ಥಿಯಲ್ಲಿ ಸಂಗವನರಿತು ನಿರ್ಮಲಜ್ಞಾನಿಯಾಗಿ, ಪರಕೆಪರವನಾಚರಿಸಿ ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನ್ನಕ್ಕರ ? ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ ? ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ ? ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅನಾದಿ ಆದಂದು ಅನಾದಿಯ ಮರೆಯಲ್ಲಿಯಿದ್ದೆಯಯ್ಯಾ. ತತ್ವಬ್ರಹ್ಮಾಂಡವಾದಂದು ತತ್ವಬ್ರಹ್ಮಾಂಡದ ಮರೆಯಲ್ಲಿಯಿದ್ದೆಯಯ್ಯಾ. ಪಿಂಡಾಂಡವಾದಂದು ಪಿಂಡಾಂಡದ ಮರೆಯಲ್ಲಿಯಿದ್ದೆ ಅಯ್ಯಾ. ಜ್ಞಾನವಾದಂದು ಜ್ಞಾನದ ಮರೆಯಲ್ಲಿದ್ದೆ ಅಯ್ಯಾ. ನಾನಾದಂದು ನನ್ನ ಆತ್ಮದಲ್ಲಿ ನೀನೆ ಹೊಳೆವುತಿದ್ದೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಹಾನಾದ ಕಳೆಯವೆ ಲಿಂಗಕ್ಕಾಶ್ರಯವಾಗಿ, ಲಿಂಗ ಕಳೆಯವೆ ಹೃದಯಕ್ಕಾಶ್ರಯವಾಗಿ, ಹೃದಯದ ಕಳೆಯವೆ ಜ್ಞಾನಕ್ಕಾಶ್ರಯವಾಗಿ, ಜ್ಞಾನದ ಕಳೆಯವೆ ನಿತ್ಯಕ್ಕಾಶ್ರಯವಾಗಿ, ನಿತ್ಯನಿರವಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆನು.
--------------
ಘಟ್ಟಿವಾಳಯ್ಯ
ಕಳೆ ಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ. ಹೊಲೆ ಮಲವ ಕಳೆದಲ್ಲದೆ ಮನ ಶುದ್ಧವಲ್ಲ. ಜೀವನ ನೆಲೆಯನರಿದಲ್ಲದೆ ಕಾಯ ಶುದ್ಧವಲ್ಲ. ಕಾಯ ಜೀವದ ಸಂಚವನರಿದಲ್ಲದೆ ಜ್ಞಾನಲೇಪಿಯಲ್ಲ. ಇಂತೀ ಭಾವದ ಭ್ರಮಿತರಿಗೇಕೆ ಜ್ಞಾನದ ಒಳಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಿರವಯವಾದಡೆಯೂ ಭಕ್ತಿಯ ತೋರಿದ ತನುವಿನ ಮೇಲೆ ಮೂರ್ತಿಯಾಯಿತ್ತು. ಪ್ರಸಾದವಾದಡೆಯೂ ಬಸವಣ್ಣನ ಕರಸ್ಥಳದಲ್ಲಿ ಮೂರ್ತಿಯಾಯಿತ್ತು, ಪ್ರಸಾದವ ನಾನೆತ್ತ ಬಲ್ಲೆನಯ್ಯಾ ಮಡಿವಾಳ ತೋರಲಿಕೆ ಕಂಡೆನು: ಭಕ್ತಿಯ ಕಂದೆರೆದು ತೋರಿದ, ಜ್ಞಾನದ ನಿಲುಕಡೆಯ ತೋರಿದ. ಇದು ಕಾರಣ ಕೂಡಲಚೆನ್ನಸಂಗಯ್ಯಾ ಮಡಿವಾಳನೂ ಬಸವಣ್ಣನೂ ಪದಾರ್ಥವನಾರೋಗಿಸಿ ಕೊಡುತ ಕರುಣಿಸಿದ ಪ್ರಸಾದಿಯಾನು.
--------------
ಚನ್ನಬಸವಣ್ಣ
ಇನ್ನಷ್ಟು ... -->