ಅಥವಾ

ಒಟ್ಟು 233 ಕಡೆಗಳಲ್ಲಿ , 67 ವಚನಕಾರರು , 211 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು, ನಾನಾ ಬಹುವಿಷಯಂಗಳೆಂಬ ಸುತ್ತ ನೇಣ ಕಟ್ಟಿ, ನೋಡುವ ಕರಣಂಗಳು ಮೆಚ್ಚುವಂತೆ ಕಾಮದ ಕತ್ತಿಯ ತಪ್ಪಿ, ಕ್ರೋಧದ ಇಟ್ಟಿಯ ತಪ್ಪಿ, ಮೋಹದ ಕಠಾರಿಯ ತಪ್ಪಿ, ಮೆಟ್ಟಿದ ಮಿಳಿಗೆ ತಪ್ಪದೆ ಲೆಂಗಿಸಿ, ಸುತ್ತಣ ಕೈದ ತಪ್ಪಿಸಿ, ಚಿತ್ತ ಅವಧಾನವೆಂದು ಹಾಯ್ದುಳಿದು, ಮನವೆಂಬ ವಿಧಾಂತನಾಡಿ, ಗೆದ್ದ ಜಗಲೋಲ ಡೊಂಬರ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದ ಬಹುವಿಷಯ ಹಿಂಗಿದ ಕೂಟ.
--------------
ಸಗರದ ಬೊಮ್ಮಣ್ಣ
ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ಮನವಿದ್ದಲ್ಲಿಯೇ ನಿಮ್ಮ ನೆನೆಯಬೇಕು. ಬುದ್ಧಿಯಿದ್ದಲ್ಲಿಯೇ ನಿಮ್ಮ ವಿಚಾರಿಸಬೇಕಯ್ಯ. ಚಿತ್ತವಿದ್ದಲ್ಲಿಯೇ ನಿಮ್ಮ ನಿಶ್ಚಯಿಸಬೇಕು. ಅಹಂಕಾರವಿದ್ದಲ್ಲಿಯೇ ನಿಮ್ಮ ಮಮಕರಿಸಬೇಕಯ್ಯ. ಕಾಯವಿದ್ದಲ್ಲಿಯೇ ಸಾಯದ ಸಂಚವನರಿದು ಎಚ್ಚತ್ತಿರಬೇಕಯ್ಯ. ಜೀವಹಾರಿಯ ಕೆಡೆದು ಭೂಗತವಾಗಿ, ವಾಯುಪ್ರಾಣಿಯಾಗಿ ಹೋಹಾಗ, ಆಗ ಮುಕ್ತಿಯ ಬಯಸಿದರುಂಟೇ? ಚಿತ್ತ ಬುದ್ಧಿ ಅಹಂಕಾರ ಮನ ಜಾÕನ ಭಾವಂಗಳ ಮೀರಿದ, ನಿರ್ಭಾವ ಲಿಂಗೈಕ್ಯನಾದ ನಿರಾಶ್ರಯನಯ್ಯ ಮಾಹೇಶ್ವರನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಮದ ಗುರಿಯ ಜ್ಯೋತಿಯ ಕುಡಿವೆಳಗಿನ ಸರದಲ್ಲಿಎಸಲಿಕ್ಕಾಗಿ, ಗುರಿಯಲ್ಲಿಯೆ ಸರ ಪರಿಹರಿಸಿ, ಆ ಸರದಲ್ಲಿಯೇ ತಮ ಪರಿಹರಿಸಿತ್ತು. ಲಕ್ಷ ್ಯದಲ್ಲಿಯೆ ಚಿತ್ತ, ಚಿತ್ತದಲ್ಲಿಯೆ ಲಕ್ಷ ್ಯ ಅಲಕ್ಷ ್ಯವಾಯಿತ್ತು. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ಇಷ್ಟಲಿಂಗವಿಡಿದು ಕಾಯ ಶುದ್ಧವಾಯಿತ್ತಯ್ಯ. ಪ್ರಾಣಲಿಂಗವಿಡಿದು ಮನ ಶುದ್ಧವಾಯಿತ್ತಯ್ಯ. ಭಾವಲಿಂಗವಿಡಿದು ಚಿತ್ತ ಶುದ್ಧವಾಯಿತ್ತಯ್ಯ. ಹೀಂಗೆ ಮುಮ್ಮಯ್ಯ ಸಿರಿವಂತನಾಗಿ ನಿಶ್ಚಿಂತ ನಿರಾಕುಳಲಿಂಗವನಾಚರಿಸುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ, ಕಾಲಕರ್ಮಂಗಳ ದಂಡಿಸಿದಡಿಲ್ಲ, ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ. ಜಲಸಮಾದ್ಥೀಯಲ್ಲಿ ಕುಳಿತಡಿಲ್ಲ, ಇದಕ್ಕೆ ಶ್ಲೋಕ : ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ | ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ || ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು ಮತ್ತೆ ಅರಸಲುಂಟೇನಯ್ಯಾ? ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ ಚಿತ್ತ ಸಮಾಧನವುಳ್ಳ ಪುರುಷಂಗೆ ? ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
--------------
ಗುಹೇಶ್ವರಯ್ಯ
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ, ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮೂರುಕಾಲ ಮಣಿಯನೇರಿ ಹತ್ತಿಯನರೆವ ಹೆಂಗಳೆಯ ಚಿತ್ತ ಕಾಲವಿಡಿದು, ಕಾಳವಿಸರ್ಜಿಸಿ ಅರಳೆಯ ತನ್ನತ್ತಲೆಳಹುವದು. ಕ್ರಿಯಾಪಾದ ಜ್ಞಾನಪಾದ ಚರ್ಯಾಪಾದವೆಂಬ ಪಾದತ್ರಯದಮೇಲಿರ್ದ ಶರಣನ ಚಿತ್ತ, ಸೂಕ್ಷ್ಮಸುವಿಚಾರವಿಡಿದು ಕರಣೇಂದ್ರಿಯ ವಿಷಯಕಾಠಿಣ್ಯ ಪ್ರಕೃತಿಯ ದೂಡುತ್ತ ಸ್ವಚ್ಫ ಸೂಕ್ಷ್ಮತರಭಾವವೇದಿ ಮಹಾಘನ ಪ್ರಕಾಶವ ನೆರೆಯಲೆಳಹುವುದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿತ್ತ ಶುದ್ದವಾದಲ್ಲಿಯೆ ಮಜ್ಜನದ ಮಂಡೆ. ಆಂಗದಾಪ್ಯಾಯನವರತಲ್ಲಿಯೆ ಎಂಬುದಕ್ಕೆ ಬಾಯಿ. ಸಂದುಸಂಶಯ ಹರಿದಲ್ಲಿಯೆ ಲಿಂಗದ ಸಂಸರ್ಗ. ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಲ್ಲನೊಡೆದು ಕಲ್ಲು ಒಡಗೂಡುವಂತಾಗಬಲ್ಲಡೆ ಇಷ್ಟಲಿಂಗಸಂಬಂದ್ಥಿ. ಮಣ್ಣಿನಲ್ಲಿ ಸುಟ್ಟ ಓಡು ಮನ್ನಿನಂತಾಗಬಲ್ಲಡೆ ಭಾವಲಿಂಗಸಂಬಂದ್ಥಿ. ಇಷ್ಟಭಾವವನರಿವ ಆ ಚಿತ್ತ ದೃಷ್ಟವನರಿವುದಕ್ಕೆ ಶ್ರುತದೃಷ್ಟವೆಂತುಟೆಂದಡೆ: ವಾರಿಕಲ್ಲು ನೋಡ ನೋಡಲಿಕ್ಕೆ ನೀರಾದಂತೆ. ಇಷ್ಟ ಭಾವ ಕರಿಗೊಂಡು, ನಿಶ್ಚಯಪದವೆಂಬ ಗೊತ್ತ ಮುಟ್ಟದೆ, ಅದು ಸಶ್ಚಿತ್ತವಾದಲ್ಲಿ, ಪ್ರಾಣಲಿಂಗಸಂಬಂದ್ಥಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು. ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು. ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು. ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಬ್ಥಿನ್ನವಿಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮಾರುತನ ಸಂಗದ ಸ್ಫುಟಿತ ಪಲ್ಲವ ಕಾಷ್ಠ ತೃಣ, ಇವು ಮೊದಲಾದವೆಲ್ಲವು ಗಂಡಾಕಾರವಾಗಿ ತೋರಿ, ಸಂಚಾರ ಹಿಂಗೆ, ಮತ್ತವು ಪುನರಪಿಯಂತಾಗೆ. ಚಿತ್ತ ನಾಲ್ಕರೊಳು ಕೂಡಿದ ಮತ್ತಳಿಯೆ, ಚಿತ್ತದ ಬಂಧವಾವುದು ಹೇಳು, ಅಲೇಖನಾದ ಶೂನ್ಯಕಲ್ಲಿನ ಮನೆಯವನೆ.
--------------
ವಚನಭಂಡಾರಿ ಶಾಂತರಸ
ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ ತಾಗಿತು ಮನ ಸಂದ ಗುರಿಯ. ಅದೇತರ ಗುಣದಿಂದ? ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ ಚಿತ್ತ ಹಸ್ತದ ಲಿಂಗದ ದೃಷ್ಟ. ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು ಕಾಯದ ನೆಮ್ಮುಗೆಯಲ್ಲಿ ಕಾಣಬೇಕು. ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->