ಅಥವಾ

ಒಟ್ಟು 13 ಕಡೆಗಳಲ್ಲಿ , 10 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಟವಿಲ್ಲದ ಕೂಟವದೇಕೋಳ ಕೂಟವಿಲ್ಲದ ಮಾಟವದೇಕೋ? ಮಾಟಕೂಟವೆರಡರನುವರಿಯಬೇಕು. ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಬೇಕು. ಕೂಟಮಾಟವೆರಡರ ಅನುಮತದಿಂದವೆ ಭಕ್ತಿ. ಇದೇ [ಕೂಟ] ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ.
--------------
ಚನ್ನಬಸವಣ್ಣ
ಅಂಬುಜಾತ ದ್ವಾರವಳಿವೆಳವಾದಡೆ, ನಾದಕ್ಕೆ ಸಿಕ್ಕುಂಟೆ ಅಯ್ಯಾ? ಶರೀರ ಸಂಪದದಲ್ಲಿದ್ದಡೆ, ಅರಿವು ಮಹದಲ್ಲಿ ನಿಂದು, ನೆರೆ ವಸ್ತು ತಾನಾದಲ್ಲಿ, ಬೇರೊಂದೆಡೆಯುಂಟೆ? ಕರಣಂಗಳ ಹಿಂಡಿಗೆ ಉರಿಯೆದ್ದ ನೆಲೆ, ನಷ್ಟವಾಗಿಯಲ್ಲದೆ ಬೇರೊಂದ ಹಿಡಿಯಲಿಲ್ಲ. ಅದು ಘಟಿಸಿ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ನಿಷ್ಠೆ ಘಟಿಸಿ ಕ್ರಿಯವಗ್ರಹಿಸಿ ಭಾವಭರಿತವಾಗಿ ಜ್ಞಾನವೆ ಅಂಗವಾಗಿ ಕ್ರಿಯೆ ಪ್ರಾಣವಾಗಿ, ಮತ್ತೆ ಜ್ಞಾನವೆ ಪ್ರಾಣವಾಗಿ ಕ್ರಿಯೆ ಅಂಗವಾಗಿ ಅಂಗಮನಕ್ರಿಭಾವ ಈ ಚತುರ್ವಿಧವೊಂದಾಗಿ, ಮತ್ತೆ ನಿಷ್ಠೆಘಟಿಸಿ ಕ್ರಿಜ್ಞಾನ ಎರಡ ವಿೂರಿನಿಂದ ಭಕ್ತವಿರಕ್ತನ ತೂರ್ಯದ ಕ್ರಿಯೆ ವೇಧಿಸಿ ನಿಂದವನ ನಿಲವು ಎಂತುಟೆಂದರೆ: ಕ್ರಿಯೆಂದರೆ ಇಷ್ಟಲಿಂಗ, ಅಂಗವೆಂದರೆ ಪ್ರಾಣಲಿಂಗ. ಆ ಪ್ರಾಣಲಿಂಗವ ಇಷ್ಟಲಿಂಗದಲ್ಲಡಗಿಸಿಕೊಂಡು ನಿಂದುದು ಎರಡಾಗಿ ಭಕ್ತನೆಂದು ಮಾಹೇಶ್ವರನೆಂದು ನಿಷ್ಠೆಯಲ್ಲಿ ನೆರೆನಿಂದಿರಲು ಮತ್ತಾ ನಿಷ್ಠೆಪಸರಿಸಿ ಆ ಭಕ್ತಮಾಹೇಶ್ವರರು ತಮ್ಮ ಮುನ್ನಿನ ನಿಷ್ಠೆಯ ಬಳಿಗೆ ಬಂದು ಎನ್ನಕ್ರಿ ನಿಮ್ಮಲ್ಲಿಯೇ ಅಡಗಿತ್ತು ಆ ಮುಕ್ತತ್ವದ ಕ್ರಿಯೊಳಗೊಂಡು ದೃಷ್ಟವ ಕಂಡು ಬರ....ಕೇಳಲಾಗಿ, ಎನ್ನ ಇಷ್ಟವಾಸರಿಸಿತ್ತೆಂದು ಹೇಳಲು ಸುಮ್ಮನೆ ಅವನ ಕೂಡೆ ಪ್ರಸಂಗಿಸಲಾಗದು. ಅದೇನು ಕಾರಣವೆಂದರೆ: ಮೊಟ್ಟ ಮೊದಲಲ್ಲಿ ಮೂರು ಭಿನ್ನವ ಕೇಳುವದು ಆ ಮೂರು ಭಿನ್ನಯೆಂತಾದವಯ್ಯಯೆಂದರೆ, ಅದರೊಳಗೈದು ಭಿನ್ನ ಉಂಟು. ಇಂತೀ ಎಂಟರೊಳಗೆ ನಾಲ್ಕು ಲಿಂಗದ ನೆಲೆ ಸಿಕ್ಕಿದರೆ ಅವೆಲ್ಲರಲ್ಲಿ ಬಂಧಿಸೂದು. ಅದಲ್ಲದೆ ನಿಂದರೆ ಮುಂದಣ ನಾಲ್ಕು ಅವನ ಭಾವವ ತೊರೆದು ನೋಡೂದು. ನೋಡಿ ನಿಶ್ಚಯವಾದ ಮತ್ತೆ ಕೂಡೆಯಿಟ್ಟುಕೊಂಡಿರ್ಪ ಸಮಯದಲ್ಲಿ, ಮೂಲಾಗ್ನಿಯ ಜ್ವಾಲೆಯಿಂದ ಮೇಲುವಾಯ್ದು ಒತ್ತಿಲಿರ್ದ ತನ್ನ ತೆತ್ತಿಗರ ನಿಲ್ಲದಂತೆ ನೀಕರಿಸುತ್ತಿರಲು, ಸಲಹಲಾರದ ತಾಯಿ ಶಿಶುವ ಬೈದು ಕೊಲುವಂತೆ ತಮ್ಮ ತ್ಯಾಗದ ಮೈಮರೆದಿರ್ದಾತನ ಎಚ್ಚರ ಮಾಡಿ, ನೀ ಮುನ್ನಲಿಂತಹವನೆಂದೆ ನುಡಿದು ಹೋಗುವ ನಿಷ್ಠೆ ಭಂಡರ ಗುಹೇಶ್ವರ ಸಾಕ್ಷಿಯಾಗಿ ಅಲ್ಲಯ್ಯನೊಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಮಹಾಜ್ಞಾನ ದಿವ್ಯಪರಿಪೂರ್ಣವಸ್ತು ಜಗಹಿತಾರ್ಥವಾಗಿ ಸ್ವಯಂಭುವೆಂಬ ಸ್ವರೂಪವ ಬಿಟ್ಟು, ಲೀಲಾಸಂಭವನಾಗಿ ಉಮಾಪತಿಯಾದಲ್ಲಿ, ಪಂಚವಕ್ತ್ರದಿಂದ ಪಂಚಭೂತಿಕಂಗಳು ಕಲ್ಪಿಸುವಲ್ಲಿ, ಕರ್ಮಶಕ್ತಿ ವಿಷ್ಣುರೂಪಾಯಿತ್ತು. ಭಾವಶಕ್ತಿ ಬ್ರಹ್ಮರೂಪಾಯಿತ್ತು. ಜ್ಞಾನಶಕ್ತಿ ರುದ್ರರೂಪಾಯಿತ್ತು. ಈ ಉಭಯವ ಘಟಿಸಿ ನಿಂದಲ್ಲಿ, ಷಡುದರ್ಶನ ಸಂಭವಿಸಿದ ಠಾವಾವುದು ? ಒಂದು ವೃಕ್ಷದಲ್ಲಿ ಹುಟ್ಟಿದ ಫಲ, ಮೊದಲೆ ಎಳದಾಗಿ, ತದನಂತರ ಮೀರಿ ಬಲಿದಲ್ಲದೆ ಬೀಜಾಂಕುರವಿಲ್ಲ. ಮರದಿಂ ಮೀರಿ ತೋರುವ ಅಂಕುರವಿಲ್ಲ. ವಸ್ತುವ ಮೀರುವ ದರ್ಶನವಿಲ್ಲ. ಅಪ್ಪು ಒಂದರಲ್ಲಿ ಹಲವು ಫಲವನನುಭವಿಸುವಂತೆ, ವಸ್ತು ಒಂದರಲ್ಲಿ ಸಕಲ ಕೃತ್ಯವ ಮಾಡಿ, ತನ್ನ ಚಿತ್ತದ ಕಲೆಯ ಹರಿದುಕೊಂಬವಂಗೆ ಅವನೊಳು ತಥ್ಯಮಿಥ್ಯ. ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ
--------------
ಮಾದಾರ ಚೆನ್ನಯ್ಯ
ಕುಂಭ ಘಟದಂತೆ ಕುರುಹಾಗಿ, ತುಂಬಿದ ಜಲದಂತೆ ಮನವಾಗಿ, ತಂಡುಲದಂತೆ ಚಿತ್ತಶುದ್ಧವಾಗಿ, ಮಾಡುವ ಕ್ರೀ ಅಗ್ನಿಯಂತಾಗಿ. ಇಂತಿವು ಕೂಡಿ ಘಟಿಸಿ, ಕ್ರೀಜ್ಞಾನ ಶುದ್ಧವಾಗಿ ಅರಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಆಶನ ಹಸಿದು ಮನುಷ್ಯರ ನುಂಗುವಾಗ ಅಸು ಆರಿಗೆಂದು ಪ್ರಮಾಣಿಸಬಹುದೆ? ಉದಕದೊಳಗೆ ಮುಳುಗುತ್ತ ತಾ ಗತಿಗೆಡುತ್ತ ಆಸೆ ದೆಸೆಯನರಿಯದೆ ಲಘುವಿನ ಮೇಲೆ ಸಾಗುತಿರ್ಪ ಸಾಧನೆವಂತರ ಸಾಗಿಸಿ ಬದುಕು; ಕ್ರೀ ನಿಃಕ್ರೀಯೆಂಬುಭಯವ ಘಟಿಸಿ ಬದುಕು, ಕಾಲಾಂತಕ ಬ್ಥೀಮೇಶ್ವರಲಿಂಗ
--------------
ಡಕ್ಕೆಯ ಬೊಮ್ಮಣ್ಣ
ಮನಕ್ಕೆ ಸಾಹಿತ್ಯವಾದಲ್ಲದೆ, ಕಾಯಕ್ಕೆ ಸಾಹಿತ್ಯವಾಗಬಾರದು. ಆತ್ಮ ಘಟದಲ್ಲಿ ನಿಂದಲ್ಲದೆ, ಚೇತನರೂಪಾಗಿ ನಡೆಯಬಾರದು. ಇಂತೀ ದ್ವಯ ಘಟಿಸಿ ನಿಂದಲ್ಲಿ, ಏಣಾಂಕಧರ ಸೋಮೇಶ್ವರಲಿಂಗ ತಾನೆ.
--------------
ಬಿಬ್ಬಿ ಬಾಚಯ್ಯ
ಲಯಭೋಗಾಧಿಕಾರವನುಳ್ಳ ಪರಶಿವನು ತಾನೆ ತತ್ವಪ್ರಭಾವಮೂರ್ತಿಯೆನಿಸಿನದಫವ್ಯಯ ಅಪ್ರಮಾಣ ಅಸಾಧ್ಯ ನಿಷ್ಕಲತತ್ವವೆ ಪಂಚಸಂಜ್ಞೆಯಿಂದಿಪ್ಪುದು, ಅದೆಂತೆಂದಡೆ: ಜಗತ್‍ಸೃಷ್ಟಿಗಾದಿ, ಅಷ್ಟತನುಗಳಿಗಾದಿ, ತ್ರಿಮೂರ್ತಿಗಳಿಗಾದಿ, ಷಟ್ತ್ರಿಂಶತತ್ವಕ್ಕಾದಿ, ಈಶ್ವರ ಸದಾಶಿವಗಾದಿಯಾಗಿಪ್ಪ, ಮೇಲಣ ಪರತತ್ವವೆ ಪರ ಅನಂತಕೋಟಿ ಬ್ರಹ್ಮಾಂಡಗಳೊಳಗೆಡವಿಡದೆ ಚರಾಚರವೆನಿಸುವ ಪ್ರಾಣಿಗಳೊಳಗೆ ಸೂಕ್ಷ್ಮವಾಗಿ, ವಟವೃಕ್ಷದೊಳಡಗಿಪ್ಪ ಬೀಜದಂತೆ ಗೂಢವಾಗಿ, ಆರಿಗೂ ಹಡೆಯಬಾರದೆ ವಿಶ್ವಕ್ಕೆ ಕಾರಣವಾಗಿಹುದೆ ಗೂಢ. ತನ್ನೊಳಗೆ ಶಿವಶಕ್ತಿಗಳ ಶರೀರ ಘಟಿಸಿ ಚರಾಚರಂಗಳು ಸ್ತ್ರೀಪುಂನನಪುಂಫಸಕವೆಂಬ ಮುದ್ರೆಯಿಂದ ಬಹುನಾಮಂಗಳಿಂದ ತನ್ನೊಳಗಿಪ್ಪ ಕಾರಣ ಶರೀರಸ್ಥ. ತನ್ನೊಳಗಿಹ ಮಾಯೆಯಿಂದ ಜಗತ್‍ಸೃಷ್ಟಿ ಮೊದಲಾದ ಸಕಲಪ್ರಪಂಚ ತೋರಿ ಆ ಪ್ರಪಂಚಿಂಗೆ ತಾನೆ ಭೂಮಿಯಾಗಿ ಎಲ್ಲವ ತನ್ನೊಳಗಿಂಬಿಟ್ಟು ತಾನೆನ್ನದ ಅಭಿನ್ನದಿಂದಹುದೆ ಲಿಂಗಕ್ಷೇತ್ರ. ಈಶ್ವರ ಸದಾಶಿವರು ಮೊದಲಾದ ಅನಂತದೇವಾತ್ಮಮೂರ್ತಿಗಳ ಜನನಂಗಳಾದಿಯಿಂದತ್ತತ್ತಲಿಪ್ಪುದೆ ಅನಾದಿ. ಇಂತಪ್ಪ ಪಂಚಸಂಜ್ಞೆಯನುಳ್ಳ ಲಿಂಗವನರಿತ ಲಿಂಗೈಕ್ಯಂಗೆ ನಮೋ ನಮೋ ಎಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸ್ಥೂಲ ಕೂಡುವಲ್ಲಿ, ಸೂಕ್ಷ್ಮ ಆಡುವಲ್ಲಿ, ಕಾರಣ ಕೂಡುವಲ್ಲಿ, ತ್ರಿವಿಧದ ಒಡಲಾವುದೆಂದರಿತು, ವಸ್ತುವಿನ ಕೂಟದ ಭೇದವ ಘಟಿಸಿ, ಮನ ತನುವಿನಲ್ಲಿ ಭಿನ್ನ ಭೇದವಿಲ್ಲದೆ, ಗಂಧ ಕುಸುಮದಂತೆ, ಹೆರೆಹಿಂಗದ ಲಿಂಗಸಂಗಸುಖವನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಹರಿ ಬ್ರಹ್ಮ ಇಂದ್ರ ಚಂದ್ರ ರವಿ ಕಾಲ ಕಾಮ ದಕ್ಷ ಇವರೊಳಗಾದ ಸಮಸ್ತ ದೇವ ದಾನವ ಮಾನವರೆಲ್ಲರು ಶಿವಲಿಂಗದೇವರನಾರಾಧಿಸಿಹೆವೆಂದು, ಜಪ ಧ್ಯಾನ ಮೌನಾದಿ ತಪ ನಾನಾವ್ರತ ನೇಮಂಗಳಂ ಕೈಕೊಂಡು, ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯಂ ಪಡೆದು ಭೋಗಿಸಿ ಸುಖಿಯಾಗಿರುತಿಹುದಕ್ಕೆ ಸಂಶಯವೇಕೆ ? ಶ್ರುತ ದೃಷ್ಟ ಅನುಮಾನದಿಂ ತಿಳಿದುನೋಡಿ ಅದಕೇನೂ ಸಂದೇಹಂ ಬಡಲಿಲ್ಲಯ್ಯಾ. ಎರಡಿಲ್ಲದೆ ಏಕವಾದ, ಭಿನ್ನದೋರದೆ ಶಿವನಂಗವಾದ ಶಿವಭಕ್ತನು ಇದರಂತೆ ಅಲ್ಲ. ಜಪ ತಪ ಧ್ಯಾನ ಮೌನ ನಾನಾವ್ರತನಿಯಮಂಗಳಂ ಕೈಕೊಂಡು ಅರ್ಚನೆ ಪೂಜನೆಯಂ ಮಾಡಿ, ಹಲವು ಪ್ರಕಾರದಿಂದೊಲಿಸಿ ಅನೇಕ ಫಲಪದಮುಕ್ತಿಯ ಪಡೆದಹೆವೆಂದು ಅಲ್ಪಾಸೆವಿಡಿದು ಭ್ರಮೆಗೊಳಗಾದ ಮರ್ಕಟಮನದ ಪರಿಯ ನೋಡಾ ! ಶಿವಶಿವ ಮಹಾದೇವಾ ಮಹಾವಸ್ತುವಿನಲ್ಲಿ ಭೇದವಿಲ್ಲದಿಪ್ಪ ಅಭೇದ್ಯ ಶರಣಂಗೆ ಜಪದ ನೇಮವೆಲ್ಲಿಯದು ? ಜಪದ ಫಲ ಕೈಸಾರಿದಂಗೆ ಧ್ಯಾನಮೌನವೆಲ್ಲಿಯದು ? ಧ್ಯಾನದೇಹ ಅಳವಟ್ಟು ಅನಂದಿಪಂಗೆ ತಪದ ತಗಹೆಲ್ಲಿಯದು ? ಇಹ-ಪರವೆಂಬ ಇದ್ದೆಸೆಗೆಟ್ಟಂಗೆ ವ್ರತನೇಮದ ನೋಂಪಿಯ ಸೂತಕವೆಲ್ಲಿಯದು ? ಉದ್ಯಾಪನೆಯಂ ಮಾಡಿ ಮಹಾಪುರುಷನಂ ಪಡೆದು ತೆರಹಿಲ್ಲದೆ ಪತಿಭಕ್ತಿಯ ಮಾಡುವ ಸಜ್ಜನ ಸತಿಗೆ ಅರ್ಚನೆ ಪೂಜನೆಯಂ ಮಾಡುವ ದಂದುಗವೆಲ್ಲಿಯದೊ ? ತನು ಮನ ಧನ ಮುಂತಾದುವೆಲ್ಲವು ಶಿವನೊಡವೆಯೆಂದು ಮಾಡುವ ಸದ್ಭಕ್ತಂಗೆ ಆವಾಗಲೂ ಶಿವನ ಸೇವೆಯ ಮಾಡುವ ಕೈಗಳಿಗೆ ಮಣಿಯ ಹಿಡಿದು ತಿರುಹಬೇಕೆಂಬ ಕೋಟಲೆಯೇಕೆ ? ಅನುಶ್ರುತವು ನೆನೆವ ಮನದ ನೆನಹ ಬಿಡಿಸಿ ಎಣಿಕೆಗಿಕ್ಕಿ ಸಂದೇಹಿಸುವ ಸಂಚಲವೇಕೆ ? ಅನಿಮಿಷನಾಗಿ ನೋಡುವ ದೃಷ್ಟಿಗೆ, ಎವೆಯ ಮರೆ ಮಾಡಿಕೊಂಡು ಕಣ್ಣುಮುಚ್ಚಲೇತಕ್ಕೆ ? ಕಣ್ಣು ಮನ ಕೈ (ಈ) ತ್ರಿಸ್ಥಾನದಲ್ಲಿರಿಸಲರಿಯದೆ ಭೇದವ ಮಾಡಿ ಅಗಲಿಸುವ ಜಪ ತಾನೇಕೆ ? ಪರಿಪೂರ್ಣವಾಗಿಹ ಸರ್ವಪದವನೀವ ಸ್ವತಂತ್ರ ಪರಾತ್ಪರವಸ್ತುವನಗಲಿ ದೂರಕಿಕ್ಕಿ, ಎಡೆದೆರಹ ಮಾಡಿ ಖಂಡಿಸಿ (ಕಂಡಹೆ)ನೆಂಬ ಧ್ಯಾನಮನವೇಕೆ ? ಸಮರ್ಥತೆಯನುಳ್ಳ ಮಹಾಪದದೊಳಗಿದ್ದು, ಅಲ್ಪಪದವ ಸಾಧಿಸೇನೆಂದು ಕಾಯವ ದಂಡಿಸಿ ಆತ್ಮನಿಗ್ರಹವ ಮಾಡಿ, ಬಟ್ಟೆಗುತ್ತಗೆತನವ ಹಣ್ಣಿ, ತಗಹಿನಲ್ಲಿ ಕುಳ್ಳಿರ್ದು ಬೇಡಿಕೊಂಬ ತಪ ತಾನೇಕೆ ? ಮುಟ್ಟಿತ್ತೆಲ್ಲ ಪವಿತ್ರ, ನೋಡಿತ್ತೆಲ್ಲ ಪಾವನ, ನಿರ್ಮಾಯನೆಂಬ ನಿರ್ಮಳಾಂಗ ನಿತ್ಯಶುದ್ಧದಾಸೋಹದೊಳಿರುತ ಸೂತಕ ಬಿಡದೆಂದು, ಜಡಕ್ರೀಯಿಂದ ಭಾಷೆಗೊಡಲ ಗುರಿಮಾಡಿ ಮೀಸಲಾಗಿಹ ಪ್ರಾಣವನಿರಿದುಕೊಂಡು ಸಾವ ಸಂಕಲ್ಪ ವ್ರತನೇಮವೇಕೆ ? ಪೂಜೆಯು ಪೂಜ್ಯನು ಪೂಜಿಸುವವ_ ಈ ತ್ರಿವಿಧದೋಜೆಯ ಸೂತ್ರಾತ್ಮಕ ತಾನೆ ಎಂಬ ಹವಣನರಿದು, ಅರಿವಿಂಗಾಶ್ರಯವಾಗಿರಲರಿಯದೆ; ನಾನಾ ಪರಿಯಿಂದ ಒಲಿಸಿ ಮೆಚ್ಚಿಸಿ ಸ್ವರ್ಗಾದಿ ಭೋಗ ಧರ್ಮಕರ್ಮವನುಂಬ ಕೈಕೂಲಿಕಾರಕರ್ಮಿಗಳಂತೆ ಮಾಡುವ ಅರ್ಚನೆ ಪೂಜನೆಯ ಆಯಸವೇಕೆ ? ಜಪದ ಜಾಡ್ಯದ ಜಂಜಡದವನಲ್ಲ, ಧ್ಯಾನಮೌನದಿಂದ ಬಿಗಿದು ಬೆರೆತಿಹ ಬಂಧನದವನಲ್ಲ. ತಪದ ದಂಡನೆಯ ತಗಹಿನವನಲ್ಲ, ವ್ರತನೇಮದ ಸೂತಕಿಯಲ್ಲ, ಅರ್ಚನೆ ಪೂಜನೆಯ ಫಲ[ಗ್ರಾಹ]ಕನಲ್ಲ, ಹರಕೆಗೆ ಹವಣಿಸಿ ಬೆರೆತಹನಲ್ಲ, ನೆವದಿಂದ ತದ್ದಿನವ ಮಾಡಬೇಕೆಂಬ ಉದ್ದೇಶಿಯಲ್ಲ, ವರುಷಕ್ಕೊಂದು ತಿಥಿಯೆಂದು ಕೂಡಿ ಮಾಡುವ ಕೀರ್ತಿವಾರ್ತೆಗೆ ಮುಯ್ಯಾನುವನಲ್ಲ, ಮಿಕ್ಕಾದ ಕಿರುಕುಳ ಬಾಧೆ ಆಧಿವಿಡಿಯದ ಸಹಜಸಂತೋಷಿ, ಸರ್ವಾಂಗದೊಳ್ ತನ್ಮಯನಾಗಿರುತ್ತ, ಭಿನ್ನವೇಕೆ ? ಹಾಲ ಸಾಗರದೊಳಗೋಲಾಡುತಿರ್ದು ಓರೆಯಾವಿನ ಬೆನ್ನ ಹರಿವನಲ್ಲ, ಪರುಷದ ಗಿರಿ ಕೈಸಾರಿರಲು; ನಾಡ ಮಣ್ಣ ಕೂಡಲಿಕ್ಕಿ ತೊಳೆದು ಹಾಗವ ಸಾಧಿಸಬೇಕೆಂಬ ಧಾವತಿಯವನಲ್ಲ, ಅತ್ಯಂತ ಸ್ನೇಹದಿಂದ ನೆನಹಿನಲ್ಲಿ ಮನಕ್ಕೆ ಬಂದು ನೆಲೆಗೊಂಡಿರುತ್ತಿರಲು `ಆಹಾ ಪುಣ್ಯವೆ' ಎಂದು ಕ್ರೀಡಿಸುವ ರತಿಸುಖವಂ ಬಿಟ್ಟು ನೆನಹಿನ ಆಸೆಯಿಂದ ತೊಳಲಿ ಬಳಲುವ ಮರಹಿನವನಲ್ಲ. ಕೆಲವು ಮತದವರಂತೆ ಕಂಡಹೆನೆಂದರಿಸಿ ಆಡುವನಲ್ಲ ಕೆಲವು ಮತದವರಂತೆ ತೆರಪಿಟ್ಟು ಅರಸುವನಲ್ಲ ತಾನಲ್ಲದನ್ಯವಿಲ್ಲವೆಂದು ಅಹಂಕರಿಸಿ ಬೆರೆವವನಲ್ಲ. ಮತ್ತೆ ಉಳಿದಾದ ಕಾಕುಮತದ ಸೊಗಸಿಗೆಳಸನಾಗಿ, ಹೊಲಬುಗೆಡುವನಲ್ಲ. ಹೊತ್ತುದ ಹುಸಿ ಮಾಡಿ ಮತ್ತೆ ಉಂಟೆಂದು ಭೇದವ ಮಾಡುವ ದುಷ್ಟದುಷ್ಕರ್ಮಿಗಳ ಪರಿಯವನಲ್ಲ. ಮಾಡಿಹೆನೆಂಬ ಸಂಸಾರದ ಬಂಧನದವನಲ್ಲ. ಮಾಡಲೊಲ್ಲೆನೆಂಬ ವಿಕಳವಾವರಿಸಿಹ ವೈರಾಗ್ಯದ ಉದಾಸೀನದವನಲ್ಲ. ಋತುವುಳ್ಳ ಸತಿಯ ರತಿಕೂಟದಂತೆ ಮುಂದೆ ಅಗಲಿಸುವ ಕಷ್ಟದ ಸುಖವನೊಲುವನಲ್ಲ. ಋತುವರತ ಸತಿಯ ರತಿಕೂಟದಂತೆ ಅಗಲಿಕೆಯಿಲ್ಲದ ಸುಖದ ಸಂಯೋಗದ ನೆಲೆಯನರಿದಾತಂಗೆ; ಮಾಡುವಾತ ತಾನು ಮಾಡಿಸಿಕೊಂಬಾತ ತಾನು ಸೋಹ ದಾಸೋಹ ತಾನೆಂದು ಬೇರೆನ್ನದೆ ದಾತೃ ಭೋಕ್ತೃ ಶಿವನೊಬ್ಬನಲ್ಲದೆ, ಬೇರೆ ಬೇರೆ ತಮತಮಗೆ ಒಡೆಯರುಂಟೆ ? ಇಲ್ಲ. ಆದಿ ಪರಶಿವ ತಾನೆ ಎಂದು ಮಾಡುವ ಮಾಟ, ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಿ ನಿಂದು ನಿರಾಶೆಯ ಕುಳ(ನಿರಾಕುಳರಿ)ದ ಅನುವನರಿತು ನಿಜವೆಡೆಗೊಂಡ ನಿಲವ ಪ್ರಮಾಣಿಸಿ ಕಾಬಂತೆ, ಮಾಡಬೇಕೆಂದು ದ್ರವ್ಯವ ಸಂಕಲ್ಪಿಸಿ ಕೊಟ್ಟವರಾರು ? ಮಾಡಬೇಕೆಂಬ ಅರಿವಿನ ಕಣ್ದೆರೆಸಿದವರಾರು ? ಮಾಡುವೆನೆಂದು ನೆನೆವ ಚೇತನದ ಪ್ರಾಣವ ತಂದಿರಿಸಿದವರಾರು ? ಮಾಡಿಹೆನೆಂಬ, ಮಾಡಬೇಕೆಂಬ, ಮಾಡುವ_ ಇವನೆಲ್ಲವ ಅರಿವಡಿಸಿಕೊಂಡಿಹ ಕಾಯವ ರೂಪಿಸಿದರಾರು ? ಆದಿಯಿಂದವೆ ನುಡಿದು ನಡೆದು ರೂಪಾಗಿ ಪ್ರಭಾವಿಸಿ ವ್ಯಾಪಾರಕ್ಕೆ ಸಂದೆವೆಂಬ ಹವಣಗಾರರು ಬರಿಯ ವಳಾವಳಿಯಿಂದ, ನಾ ಮಾಡಿದಹೆನೆಂದು ಪ್ರತಿಜ್ಞೆಯಂ ಕೈಕೊಂಡು, ಇಲ್ಲದುದನುಂಟುಮಾಡಿ, ಪಡೆದು ಸಾಧಿಸೆಹೆನೆಂಬ ಬಯಕೆಯ ಸಂಭ್ರಮದಾಯಸ ತಲೆಗೇರಿ, ಉಬ್ಬಿ ಹರಿದಾಡುವ, ಅವಿಚಾರದ ಮನದ, ಮರವೆ ಬಲಿದ ಇರವಿನ ಪರಿಯ ನೋಡಾ ! ಶಿವ ಮಹಾದೇವಾ. ಶಿವ ತನ್ನ ಲೀಲಾ ವಿನೋದಕ್ಕೆ ಸಕಲವನು ರೂಪಿಸಿ ಆಗುಮಾಡಿಕೊಂಡಿರುತ್ತಿರಲು, ಹುಚ್ಚುಗೊಂಡಂತೆ ಎಲ್ಲವೂ ನನ್ನಿಂದಾಯಿತು, ನಾ ಮಾಡಿದೆನೆಂದು ಉಲಿವ ದೇಹಿಯ ಇನ್ನೇನೆನಬಹುದಯ್ಯ ? ಅವರಿಂದಾದ ಒಡವೆಯ ಅವರಿಗೆ ಈವುದು, ಉಪಚರಿಯವೆ ? ನದಿಯುದಕವ ನದಿಗರ್ಪಿಸುವಂತೆ ಒಡೆಯಂಗೊಡವೆಯನರ್ಪಿಸಿ ತಾ ಶುದ್ಧನಾಗಿ ನಡೆನುಡಿಯಲ್ಲಿ ಕವಲುದೋರದೆ ತನ್ನಲ್ಲಿ ತಾನೆ ತಿಳಿದು, ಘನವೆಡೆಗೊಂಡ ಮಹಾನುಭಾವಿಗಳು; ಎಲ್ಲವನಳವಡಿಸಿಕೊಂಡಿಹ ಕಾಯವ ಗುರುವೆಂದೆ ಸಾಧಿಸಿದ ನೆನೆವ ಚೇತನದ ಪ್ರಾಣವ ಲಿಂಗವೆಂದೆ ಭಾವಿಸಿದ ಅರಿವಿನ ಜ್ಞಾನವ ಜಂಗಮವೆಂದೆ ಅರಿದ ನಮ್ಮ ಕೂಡಲಚೆನ್ನಸಂಗಮದೇವರು.
--------------
ಚನ್ನಬಸವಣ್ಣ
ಮುಟ್ಟದ ಮುನ್ನ ದಿಟ ಘಟಿಸಿ ನಿಂದುದು ಸಟೆಯಿಲ್ಲ ಕಾಣಿರೆ ! ಮುಟ್ಟಿತ್ತೆ ಮಹಾಪ್ರಸಾದ ಕೂಡಲಚೆನ್ನಸಂಗನಲ್ಲಿ.
--------------
ಚನ್ನಬಸವಣ್ಣ
ಬರಬಾರದ ಬರವು ನೆರದಲ್ಲಿ, ಹುಟ್ಟಬಾರದ ಹುಟ್ಟು ಘಟಿಸಿ ಬಂದಾತನೆ ಶರಣ. ತೋರಬಾರದ ರೂಪವನು ತೋರಿ ನಡೆವಾತನೆ ಶರಣ. ನೋಡಬಾರದ ನೋಟ ನೀಟಾಗಿ ನಿಂದಲ್ಲಿ ಕಾಟ ಬೇಟದ ಕಳವಳವ ದಾಟಿಸಿ, ಮರೆದಿರುವ ಮಡದಿ-ಪುರುಷರ ನಡೆಯಲ್ಲಿ ಎರಡಿಲ್ಲದಿಪ್ಪ ಮಹಿಮ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ತ್ರಿವಿಧ ಘಟಿಸಿ ಕುರುಹಾದಲ್ಲಿ, ಕುರುಹು ಅರಿವನರಿದುದಿಲ್ಲ. ಆ ಅರಿವಿಂದ ಕುರುಹ ಪ್ರಮಾಣಿಸಿ, ಮಧುರದಂಡದಂತೆ ಉಭಯವನರಿ. ಅರಿದಲ್ಲಿ ಅರ್ಕೇಶ್ವರಲಿಂಗನ ಭಾವದ ಕೂಟ.
--------------
ಮಧುವಯ್ಯ
-->