ಅಥವಾ

ಒಟ್ಟು 30 ಕಡೆಗಳಲ್ಲಿ , 18 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ ಗುರುಲಿಂಗಜಂಗಮದ ಪೂಜೆಯ ಮಾಡಬೇಕು. ನಾಮರೂಪು ಎಂಬನ್ನಕ್ಕ ಉಭಯವನರಿಯಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು. ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು. ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು. ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು. ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು._ ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು. ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ, ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ ಮಾಯೆಯ ಬಾಯ ತುತ್ತಹುದು ಚೋದ್ಯವೇನು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಸ್ಥೂಲ ತನುವಿಂಗೆ ಶಿಲೆಯ ಮರೆಯಲ್ಲಿ ಎನ್ನ ಘಟದಲ್ಲಿ ಮೂರ್ತಿಗೊಂಡು ಬಾಹ್ಯಕ್ರೀ ಆರ್ಚನೆ ಪೂಜನೆಗಳಿಂದ ಶುದ್ಧತೆಯ ಮಾಡಿದೆ. ಸೂಕ್ಷ ್ಮ ತನುವಿಂಗೆ ಭಾವದ ಕೊನೆಯಲ್ಲಿ ಅರಿವಾಗಿ ಬಂದು ಪ್ರಕೃತಿ ಸಂಚಾರ ಮರವೆಯಿಂದ ಬಹ ತೆರನ ತೀರ್ಚಿ ಸರ್ವೇಂದ್ರಿಯಲ್ಲಿ ನೀ ನಿಂದು ಆ ಸೂಕ್ಷ ್ಮತನುವ ಶುದ್ಧವ ಮಾಡಿದೆ. ಕಾರಣತನುವಿಂಗೆ ಇಂದ್ರ ಮಹೇಂದ್ರ ಜಾಲದಂತೆ, ಮುರೀಚಿಕಾ ಜಲವಳಿಯತೆ, ವಿದ್ಯುಲ್ಲತೆಯ ಸಂಚದ ಶಂಕೆಯ ಬೆಳಗಿನಂತೆ ಸಷುಪ್ತಿಯಲ್ಲಿ ಮರವೆಯಿಂದ ಮಗ್ನನಾಗಲೀಸದೆ ಆ ಚಿತ್ತುವಿಗೆ ನೀ ಚಿತ್ತವಾಗಿ ಮೂರ್ಛೆಗೊಳಿಸದೆ ನೀನೆ ಮೂರ್ತಿಗೊಂಡೆಯಲ್ಲಾ! ಇಂತೀ ತ್ರಿವಿಧ ಸ್ವರೂಪಕ್ಕೆ ತ್ರಿವಿಧಾಂಗ ಭರಿತನಾಗಿ ತ್ರಿವಿದ ಸ್ವರೂಪ ನೀನಲಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 98 ||
--------------
ದಾಸೋಹದ ಸಂಗಣ್ಣ
ಮಲೆಯಮಂದಿರದ ವಟವೃಕ್ಷದ ಘಟದಲ್ಲಿ ಮಕ್ಷಿಕ ಮನೆಯ ಮಾಡಿ ಹಂದಿಯನೇರಿ, ಮೂಡಲಗಿರಿಯಲ್ಲಿ ಕೋಳಿ ಕೂಗಿ, ಪಶ್ಚಿಮಗಿರಿಯಲ್ಲಿ ಬೆಳಗುತೋರಿ, ವೃಕ್ಷದಡಿಯಲ್ಲಿ ಅಗ್ನಿಪುಟವಾಗಿ ಬೇರುಸುಟ್ಟು, ವೃಕ್ಷ ಉಳಿದು, ಮಕ್ಷಿಕ ಹಂದಿ ಸತ್ತುಳಿದು, ಕೂಗಡಗಿದ ಕುಕ್ಕುಟನಲ್ಲಿ ಮಕ್ಷಿಕ ಹಂದಿಯು ಕೂಡಿ ಕುಕ್ಕುಟನ ಮನೆಯಲ್ಲಿ ಅಡಗಿದರು. ಅಡಗಿದ ಭೇದವ ನಿಮ್ಮ ಶರಣಬಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಂಚಿತವನರಿವುದು ಕರ್ಮಯೋಗ. ಆಗಾಮಿಯನರಿವುದು ಆತ್ಮಯೋಗ. ಪ್ರಾರಬ್ಧವನರಿವುದು ಪರಮಯೋಗ. ಇಂತೀ ತ್ರಿವಿಧಯೋಗಂಗಳಲ್ಲಿ ತಿಳಿದು ಯೋಗ ನಿಯೋಗವೆಂಬುದ ಕಂಡು ತನ್ನಯ ಆತ್ಮನ ಸ್ಪರ್ಶಗಾಢಂಗಳ ಘಟದಲ್ಲಿ ಸ್ವಸ್ಥಾನದಲ್ಲಿಪ್ಪುದ, ಇರದೆಂಬುದ ಲಕ್ಷಿಸಿಕೊಂಡು ಸರ್ವವ್ಯವಧಾನಂಗಳಲ್ಲಿ ಸಾವಧಾನವನರಿವುದು ಪ್ರಾಣಲಿಂಗಿಯ ಕೂಟ. ಈ ಗುಣ ಸಂಗನಬಸವಣ್ಣನ ಸಂಯೋಗ. ಬ್ರಹ್ಮೇಶ್ವರಲಿಂಗದ ಕೂಟ.
--------------
ಬಾಹೂರ ಬೊಮ್ಮಣ್ಣ
ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು, ಇಲ್ಲವೆಂದು ನುಡಿವುತ್ತಿಹರು ಆಧ್ಯಾತ್ಮಯೋಗಿಗಳು. ಶರೀರದಲ್ಲಿ ಸೋಂಕಿದ ವ್ಯಾಧಿ ಆತ್ಮಂಗಲ್ಲದೆ ಶರೀರಕ್ಕುಂಟೆ ? ಘಟಕ್ಕೆ ನೋವಲ್ಲದೆ ಆತ್ಮಂಗೆ ನೋವೆಲ್ಲಿಯದೆಂಬುದು ಹುಸಿ. ಘಟದಲ್ಲಿ ತೋರುವ ಆತ್ಮನು ಘಟವ ಬಿಟ್ಟು, ಮತ್ತೆ ಘಟಕ್ಕೆ ಚೇತನಿಸಬಲ್ಲುದೆ ? ನಾನಾ ಸುಖಂಗಳ ಸುಖಿಸಬಲ್ಲುದೆ ? ಇದು ಕಾರಣ, ಕ್ರೀಯೆವಿಡಿದು ಮಾಡುವಂಗೆ ಕರ್ಮಶೇಷವಿಲ್ಲ, ನಿಃಕ್ರೀಯಲ್ಲಿ ಚರಿಸುವಂಗೆ ನಾನಾ ಭವವುಂಟಾಗಿ. ಇಂತೀ ಆತ್ಮನಲ್ಲಿ ಪರಿಭವಕ್ಕೆ ಬರಬಾರದು. ಬಂದಡೆ ಅಳಿವು ಉಳಿವನರಿಯಬೇಕು, ಅರಿಯಲಾಗಿ ಮರೆಯಬೇಕು. ಆ ಮರವೆ ತಾನೆ ತೆರಹಿಲ್ಲದರಿಕೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆತ್ಮ ಘಟದಲ್ಲಿ ನಿಂದಿಹ ಭೇದ : ನೀರು ಮಣ್ಣಿನಂತೆ, ಬೇರು ಸಾರದಂತೆ ಗಂಧ ತರುವಿನಂತೆ ಒಂದ ಬಿಟ್ಟೊಂದ ಹಿಂಗಿರವಾಗಿ, ಅಂಗ ಲಿಂಗ ಪ್ರಾಣಯೋಗ ಸಂಬಂಧ ಸಂದಿಲ್ಲ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಸ್ಥಾಣು ನರನೆಂದು, ರಜ್ಜು ಸರ್ಪನೆಂದು, ಸ್ಫಟಿಕದ ಘಟದಲ್ಲಿ ನಿಂದ ಗಜ ದಿಟವೆಂದು ನಿಬದ್ಧಿಸಿ ನೋಡಲಿಕ್ಕಾಗಿ, ಸಂದೇಹ ನಿಂದಲ್ಲಿ ಮುನ್ನಿನಂದವೆ ಆ ನಿಜಗುಣ ? ಈ ಸಂದೇಹ ನಿವೃತ್ತಿಯಾದಲ್ಲಿ ಇಷ್ಟ ಪ್ರಾಣಲಿಂಗವೆಂಬ ಉಭಯದ ದೃಷ್ಟ ಒಂದೆ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಮನಕ್ಕೆ ಸಾಹಿತ್ಯವಾದಲ್ಲದೆ, ಕಾಯಕ್ಕೆ ಸಾಹಿತ್ಯವಾಗಬಾರದು. ಆತ್ಮ ಘಟದಲ್ಲಿ ನಿಂದಲ್ಲದೆ, ಚೇತನರೂಪಾಗಿ ನಡೆಯಬಾರದು. ಇಂತೀ ದ್ವಯ ಘಟಿಸಿ ನಿಂದಲ್ಲಿ, ಏಣಾಂಕಧರ ಸೋಮೇಶ್ವರಲಿಂಗ ತಾನೆ.
--------------
ಬಿಬ್ಬಿ ಬಾಚಯ್ಯ
ಹುಟ್ಟುವ ಜೀವಿಗಳೆಲ್ಲರೂ ಹಲವು ತೆರದ ಘಟದಲ್ಲಿ ಬಂದು ತಮ್ಮ ಕ್ಷುತ್ತುವ ಕೊಂಬಂತೆ ಮತ್ರ್ಯದಲ್ಲಿ ಬಂದವರೆಲ್ಲರೂ ನಿಶ್ಚಯರಪ್ಪರೆ? ಬಚ್ಚತ ಹರಿಯಜ ರುದ್ರರು ಮೊದಲಾದವರೆಲ್ಲರೂ ಸಿಕ್ಕಿದರೇಕೆ ಮಾಯೆಗೆ? ಇದರಚ್ಚಿಗವ ಕಂಡು ನಾನು ಭಕ್ತನೆಂದಡೆ ತಪ್ಪ ಸಾಧಿಸುವ ಕಾಮಹರಪ್ರಿಯ ರಾಮನಾಥಾ.
--------------
ತಳವಾರ ಕಾಮಿದೇವಯ್ಯ
ಪೂಜಿಸುವಲ್ಲಿ ಹೂ ನೀರು ಮುಂತಾದ ಷೋಡಶ ಉಪಚರಿಯಕ್ಕೆ ನಿಲ್ಲ. ವೇದದ ಕಡೆ, ಶಾಸ್ತ್ರದ ಮೊದಲು, ಪುರಾಣದ ಸುದ್ದಿಯ ಸುಮ್ಮಾನಂಗಳಲ್ಲಿ ವಚನದ ರಚನೆಗೆ ನಿಲ್ಲ, ಮಹಾಜ್ಞಾನಿಗಳಲ್ಲಿಯಲ್ಲದೆ. ಘಟದಲ್ಲಿ ವೈಭವ, ಆತ್ಮನಲ್ಲಿ ವಿರೋಧ, ಆಚಾರದಲ್ಲಿ ಕರ್ಕಶ. ಇಂತೀ ನಿಹಿತಾಚಾರಂಗಳಲ್ಲಿ ನಿರತನಾಗಿ, ಕಾಯಕ ಕರ್ಮ, ಜೀವನ ಭಾವ, ಜ್ಞಾನದ ಒಳಗನರಿಯಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯ ಹಲವು ಭೇದಗಳಾಗಿ ಆತ್ಮನೇಕವೆಂಬುದು ಅದೇತರ ಮಾತು? ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿಯಿಲ್ಲದೆ. ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ? ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ.
--------------
ಏಕಾಂತರಾಮಿತಂದೆ
ಆರು ದೇಶದ ಮೇಲೆ ಮೂರು ಮಂಡಲವ ಕಂಡೆನಯ್ಯ, ಮೂರು ಮಂಡಲದ ಮೇಲೆ ಒಬ್ಬ ಪುರುಷನ ಕಂಡೆನಯ್ಯ. ಆ ಪುರುಷನ ಸತಿಯಳು, ತತ್ಪುರುಷಲೋಕಕ್ಕೆ ಬಂದು, ಈಶ್ವರನೆಂಬ ಮಗನ ಕೂಡಿಕೊಂಡು, ನಿಟಿಲವೆಂಬ ಘಟದಲ್ಲಿ ನಿಂದು, ಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು, ಶಿಖಾಚಕ್ರವೆಂಬ ಮೇರುವೆಯ ಹತ್ತಿ, ಪಶ್ಚಿಮಚಕ್ರವೆಂಬ ನಿರಂಜನಜ್ಯೋತಿಯ ಕೂಡಿ, ಅತ್ತತ್ತಲೆ ಪರಕ್ಕೆ ಪರವ ತೋರುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಘಟದಲ್ಲಿ ಆತ್ಮ ದಿಟಕರಿಸಿ ಇಹಾಗ ತನ್ನ ಮಠವಾವುದೆಂದರಿ. ಘಟವಳಿದು ಮಠ ತುಂಬಿ ಹೋಹಾಗ ದಿಟದ ಸುದ್ದಿಯನರಿ. ಪಥಪಯಣದಿ ಹಾದಿಯ ಕಾಣು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಇನ್ನಷ್ಟು ... -->