ಅಥವಾ

ಒಟ್ಟು 170 ಕಡೆಗಳಲ್ಲಿ , 44 ವಚನಕಾರರು , 147 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಹಿಲ್ಲದ ಮಹಾಘನ ಪರಿಪೂರ್ಣ ಲಿಂಗಭರಿತವೆಂದೇ ಭಾವಿಸಿ, ಪೂಜಿಸಿ, ಮರಳಿ ಬಿದ್ದಿತ್ತು ಕೆಡೆಯಿತ್ತು ಎಂಬ ಅಜಾÕನವ ನೋಡಾ ! ತೆರಹಿಲ್ಲದ ಪರಿಪೂರ್ಣ ಲಿಂಗವು, ಬೀಳಲಿಕ್ಕೆ ತೆರಹುಂಟೆ ? ಅರಿಯರು ಪ್ರಾಣಲಿಂಗದ ನೆಲೆಯನು. ಅರಿಯದೆ ಅಜಾÕನದಲ್ಲಿ ಕುರುಹು ಬಿದ್ದಿತ್ತೆಂದು ಪ್ರಾಣಘಾತವ ಮಾಡಿಕೊಂಡು ಸಾವ ಅಜಾÕನಿಗ? ನೋಡಾ ! ಅರದು ಕೂಡಿ ಸ್ವಯವಾಗಿರ್ದ ಲಿಂಗವು ಓಕರಿಸಿತ್ತೆಂದು ಆ ಲಿಂಗದೊಡನೆ ಪ್ರಾಣಘಾತವ ಮಾಡಿಕೊಂಡು ಸಾವ ಅಜಾÕನಿಗಳಿಗೆ ಅಘೋರ ನರಕ ತಪ್ಪದು ಕಾಣಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಇಂದ್ರಿಯಂಗಳ ಗಮನಗೆಡದೆ ಕರಣಂಗಳ ಸೂತಕ ಕಡೆಗಾಗದೆ ಆತ್ಮನ ಕುರುಹು ಅಡಗದೆ ಬರಿದೆ ಭ್ರಮೆಗೊಂಡು ಹಿರಿಯತನವ ಹೊತ್ತರಲ್ಲ ! ಮತ್ತೆ ಪೂರ್ವ ಮೊತ್ತದ ಬರಿವಿದ್ಯೆ ಬಂಧನಕ್ಕೆರಗಿ ಸಂದಿನ ಕಿಚ್ಚಿನಲ್ಲಿ ಬೆಂದರಲ್ಲ! ಒಂದುವನರಿಯದೆ ಹಿಂದಿನ ಸರಮಾಲೆಯ ಸಂಕೋಲೆಯೊಳಗಾಗಿ ಭೋಗವನರಿವರು ಕಾಣಾ ಪಂಚಾಕ್ಷರಮೂರ್ತಿಲಿಂಗವೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುರುಹಿಟ್ಟಲ್ಲಿ ಅರಿವು ನಷ್ಟವಾಯಿತ್ತು. ಅರಿವ ನುಂಗಿದ ಕುರುಹು, ಇದಿರಭಾವಕ್ಕೊಡಲಾಯಿತ್ತು. ತನ್ಮಯ ನಷ್ಟವಾಗಿ, ಉಭಯದೋರದೆ ನಿಂದಲ್ಲಿ, ಆ ನಿಲವು ತಾನೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಪಂಚತತ್ವಂಗಳುವಿಡಿದಾಡುವ ಚತುರ್ದಶೇಂದ್ರಿಯ ವಿಕಾರಂಗಳು ತಾನಲ್ಲ, ತನ್ನವಲ್ಲ. ತನುವುಂಟೆಂದಡೆ ಅಹಮ್ಮಾದಿಗೆ ಸಂದು, ಬಂಧಮೋಕ್ಷಂಗಳಿಗೊಳಗಾಯಿತ್ತು ನೋಡಾ. ಕುರುಹಿಲ್ಲದ ಲಿಂಗ ಅರಿವಿನೊಳು ಬಳಿಸಂದಡೆ ಅರಿವು ಕುರುಹು ತೆರಹಿಲ್ಲದೆ ನಿಂದ ನಿಲವು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜ ತಾನಾದ ಶರಣ.
--------------
ಆದಯ್ಯ
ಜೀವಪರಮನೊಂದು ಮಾಡಬೇಕೆಂಬುದೊಂದು ಕುರುಹು. ಜ್ಞಾನ ಕ್ರಿಯೆಯಿಂದೆ ಕೂಡಬೇಕೆಂಬುದೊಂದು ಕುರುಹು ನಾನೇನಾಗಬೇಕೆಂಬುದೊಂದು ಕುರುಹು. ಇದು ಕಾರಣ ಕುರುಹಳಿದಲ್ಲದೆ ಇರವಾಗಬಾರದು. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೈಕ್ಯಂಗೆ ಜೀವನಿಲ್ಲ, ಪರಮನಿಲ್ಲ, ಜ್ಞಾನವಿಲ್ಲ, ಕ್ರಿಯೆಯಿಲ್ಲ, ನಾನು ಇಲ್ಲ ನೀನು ಇಲ್ಲ ತಾನು ತಾನಾಗಿರ್ಪನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರುಹು ತಲೆದೋರಿದಲ್ಲಿ ವಿಷ ಬೆಲ್ಲವು ಇಕ್ಷುರಸವಾಯಿತ್ತು. ಅರುಹು ತಲೆದೋರಿದಲ್ಲಿ ಅಂಬರ ಅವಯವಕ್ಕೆ ಹೊಂದಿತ್ತಯ್ಯಾ. ಅರುಹು ತಲೆದೋರಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಕುರುಹು ನಾನೆಂದು ತಿಳಿಯಬಂದಿತ್ತಯ್ಯಾ ಯೋಗಿನಾಥಾ.
--------------
ಸಿದ್ಧರಾಮೇಶ್ವರ
ಅರಿವರತು ಕುರುಹು ನಷ್ಟವಾದ ಬಳಿಕ ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟಿವಾಳಂಗೆ ? ಅರಿವನಾರು ? ಅರುಹಿಸಿಕೊಂಬನಾರು ? ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಶರಣ ಘಟ್ಟಿವಾಳನಲ್ಲದೆ ನೆರೆ ಅರಿವರಾರೊ ?
--------------
ಚನ್ನಬಸವಣ್ಣ
ತನ್ನ ಮರೆದಲ್ಲಿ ಲಿಂಗವ ಮರೆಯಬೇಕು. ತನ್ನನರಿತಲ್ಲಿ ಲಿಂಗವನರಿಯಬೇಕು. ಉಭಯಭಾವ ಅಳವಟ್ಟಲ್ಲಿ ಮುಂದಕ್ಕೊಂದು ಕುರುಹು ಏನೂ ಎನಲಿಲ್ಲ. ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ ಕುರುಹಾಗುತ್ತಿದ್ದಿಹಿತ್ತು.
--------------
ಬಿಬ್ಬಿ ಬಾಚಯ್ಯ
ದೃಷ್ಟಕ್ಕೆ ದೃಷ್ಟ ಮುಂದಿಲ್ಲ, ಇಲ್ಲ. ಮಾಡಿದಡೇನಹುದೊ? ಮಾಡದಿರ್ದಡೇನಹುದೊ? ಗುಹೇಶ್ವರನೆಂಬ ಅರುಹಿನ ಕುರುಹು ಮಂದಿಲ್ಲ, ಇಲ್ಲ. ಮಾಡಿದಡೇನಹುದೊ?
--------------
ಅಲ್ಲಮಪ್ರಭುದೇವರು
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ. ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ. ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ. ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ, ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ.
--------------
ಅಲ್ಲಮಪ್ರಭುದೇವರು
ಸದ್ವಾಸನ ಧರ್ಮಚರಿತೆಯ ವರ್ಮವನುಳಿದು ದುಷ್ಕರ್ಮಬಾಧೆಯ ಉರಿಯೊಳು ತೊಳಲುವ ಭಾವ ಭಕ್ತಿತ್ರಯದ ಯುಕ್ತಿಯನರಿವುದು ಚೋದ್ಯ ಕಾಣಾ. ಹಿಡಿದ ಕುರುಹು ಹೊತ್ತ ಹೊರೆ ನಡೆವ ಬಟ್ಟೆ ಮಿಥ್ಯ ಮಾಯಾ ಬದ್ಧ ನೋಡಾ. ಇಂತಿರ್ದ ಅರುವಿಗೆ ಕುರುಹುಗಾಣಿಸದಿರ್ದನು ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ಶರಣ ಭಕ್ತಸಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ, ಸಿದ್ಧದೆಸೆಯಲ್ಲಿ ಅರಸಲಹುದೆ ? ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ ? `ಶಿವಭಕ್ತಸಮಾವೇಶೇ ನ ಜಾತಿಪರಿಕಲ್ಪನಾ ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ ' ಎಂದುದಾಗಿ, ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳರನೇನೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಇನ್ನಷ್ಟು ... -->