ಅಥವಾ

ಒಟ್ಟು 38 ಕಡೆಗಳಲ್ಲಿ , 20 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ, ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ ನಿಂದಕ ದುರ್ಜನ ಭವಿಸಂಗ ಉಳ್ಳವರ ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ, ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷ ತಪ್ಪದು. ಇದಕ್ಕೆ ಹಿಂದೆ ನೆನೆಯಲಿಲ್ಲ, ಮುಂದೆ ನೋಡಲಿಲ್ಲ. ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ ಬಿಡಬೇಕು. ಅಂಗವ ಬಿಡದ ಭಂಡರ ಕಂಡಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ.
--------------
ಅಕ್ಕಮ್ಮ
ವೇದವನೋದಿ ಹೊನಲಲ್ಲಿ ಹೋದ ದ್ವಿಜರು, ಕೆಟ್ಟ ಕೇಡಿಂಗೆ ಕಡೆಯಿಲ್ಲ. ಅದು ಹೇಗೆಂದಡೆ:ಹೇಮದಾಸೆಗೆ ಒಕ್ಕಲಿಗಂಗೆ ದತ್ತಪುತ್ರನಾಗೆಂದು ಹೇಳಿತ್ತೆ ವೇದವು ? ಕೊರಡಿನ ಮೇಲೆ ಕುಳಿತು ತುತ್ತು ಗದ್ಯಾಣವ ನುಂಗಿ ಸೀಮೆಯಹೊರವಡಿಸಿಕೊಳ್ಳೆಂದು ಹೇಳಿತ್ತೆವೇದ? ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಹೊನ್ನಕಪಿಲೆಯ ಕೊಂದು ನರಕಕ್ಕಿಳಿಯ ಹೇಳಿತ್ತೆವೇದ? `ಅಹಿಂಸಾ ಪರಮೋ ಧರ್ಮಃ' ಎಂದೋದಿ, ಅಸುರಭೋಜನಕ್ಕೆ ಅಂಗವಿಸಿ ಕರ್ಮವ ಮಾಡಿ ಹೋತ ಕೊಂದು ತಿಂಬುದು ಪಾತಕವಲ್ಲವೆ ? `ಪರಮೋ ಧರ್ಮಃ ಹಿರಣ್ಯಗರ್ಭಃ' ಎಂದು ಹೊನ್ನ ಕಪಿಲೆಯಂ ಮಾಡಿ ಕಡಿದು ಹಂಚಿಕೊಂಬುದು ಚಾಂಡಾಲವಲ್ಲವೆ ? ಹೊಲೆಯನಂತೆ ಹುಲುವೆಣನ ಸುಟ್ಟು ಹೊರಸಿನ ಮೇಲೆ ಹತವಾದ ಕಳಗ ಹತ್ತಿದ ಹಸುವಿನ ಉತ್ಕ್ರಾಂತಿಯ ಕಾನನದಲ್ಲಿ ಕೂಳು ಭೋಜನವನುಂಡು, ಲೋಕೋಪಚಾರಕ್ಕೆ ಒಳಗಾಗಿ ಪಾಪಕರ್ಮವ ಮಾಡಿ ಸಲ್ಲದೆ ಹೋದರು ಶಿವನಲ್ಲಿಗೆ. ಕೂಡಲಚೆನ್ನಸಂಗಮದೇವ ಶಿವಭಕ್ತಂಗೊಲಿದ ಕಾರಣ ಕಂಚಿಯ ಏಳು ಕೇರಿಯ ಕೈಲಾಸಕ್ಕೊಯ್ದ.
--------------
ಚನ್ನಬಸವಣ್ಣ
ನರರು ಸುರರು ನವಕೋಟಿಯುಗಗಳ ಪ್ರಳಯಕ್ಕೆ ಒಳಗಾಗಿ ಹೋದರು, ಒಳಗಾಗಿ ಹೋಹಲ್ಲಿ ಸುರಪತಿಗೆ ಪರಮಾಯು ನೋಡಿರೆ ! ಅಂಥ ಸುರಪತಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ, ಚಿಟ್ಟಜನೆಂಬ ಋಷಿಗೆ ಒಂದು ಚಿಟ್ಟು ಸಡಿಲಿತ್ತು ನೋಡಿರೆ ! ಅಂಥ ಚಿಟ್ಟನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಚಿಪ್ಪಜನೆಂಬ ಋಷಿಗೆ ಒಂದು ಚಿಪ್ಪು ಸಡಿಲಿತ್ತು ನೋಡಿರೆ ! ಅಂಥ ಚಿಪ್ಪಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಡೊಂಕಜನೆಂಬ ಋಷಿಗೆ ಒಂದು ಡೊಂಕು ಸಡಿಲಿತ್ತು ನೋಡಿರೆ ! ಅಂಥ ಡೊಂಕಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರೋಮಜನೆಂಬ ಋಷಿಗೆ ಒಂದು ರೋಮ ಸಡಿಲಿತ್ತು ನೋಡಿರೆ ! ಅಂಥ ರೋಮಜನೆಂಬ ಋಷಿ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿಬ್ರಹ್ಮಂಗೆ ಆಯುಷ್ಯವು ನೂರಾಯಿತ್ತು ನೋಡಿರೆ ! ಅಂಥ ಆದಿಬ್ರಹ್ಮ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಆದಿನಾರಾಯಣಂಗೆ ಒಂದು ದಿನವಾಯಿತ್ತು ನೋಡಿರೆ ! ಅಂಥ ಆದಿ ನಾರಾಯಣ ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ರುದ್ರಂಗೆ ಕಣ್ಣೆವೆ ಹಳಚಿತ್ತು ನೋಡಿರೆ ! ಅಂಥ ರುದ್ರರು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಫಣಿಮುಖರೊಂದು ಕೋಟಿ, ಪಂಚಮುಖರೊಂದು ಕೋಟಿ, ಷಣ್ಮಮುಖರೊಂದು ಕೋಟಿ, ಸಪ್ತಮುಖರೊಂದು ಕೋಟಿ ಅಷ್ಟಮೂಖರೊಂದು ಕೋಟಿ, ನವಮುಖರೊಂದು ಕೋಟಿ ದಶಮುಖರೊಂದು ಕೋಟಿ_ ಇಂತಿವರೆಲ್ಲರ ಕೀರೀಟದಾಭರಣಂಗಳು ಬಿದ್ದವು ನೋಡಿರೆ ! ಅಂಥ ಸಪ್ತಕೋಟಿಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ನಂದಿವಾಹನರೊಂದು ಕೋಟಿ, ಭೃಂಗಿ ಪ್ರಿಯರೊಂದು ಕೋಟಿ ಚಂದ್ರಪ್ರಿಯರೊಂದು ಕೋಟಿ_ ಇಂತೀ ತ್ರಿಕೋಟಿಗಳ ತಲೆಗಳು ಬಾಗಿದವು ನೋಡಿರೆ ! ಅಂಥ ತ್ರಿಕೋಟಿಗಳ ತಲೆಗಳು ನವಕೋಟಿಯುಗ ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣನೀ ಸುದ್ದಿಯನೇನೆಂದುವರಿಯನು
--------------
ಚನ್ನಬಸವಣ್ಣ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ತರ್ಕ ವ್ಯಾಕರಣಾಗಮ ಶಾಸತ್ತ್ರ ಪುರಾಣ ಛಂದಸ್ಸು ನೈಘಂಟು ಜ್ಯೋತಿಷ್ಯ ಮೊದಲಾದ ಶಾಸ್ತ್ರದ ಆಸೆಯ ಭ್ರಮೆಯಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಶುದ್ಧಾತ್ಮನು. ಕತ್ತಿಸಾಧಕ ಕಠಾರಿಸಾಧಕ ಪಟಾಕಿನ ಸಾಧಕ ಮೊದಲಾದ ಬತ್ತೀಶ ಸಾಧಕದಲ್ಲಿ ಆಸೆ ಮಾಡಿತಯ್ಯ ಎನ್ನ ಮಹದಾತ್ಮನು. ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವವೆಂಬ ಅಷ್ಟೈಶ್ವರ್ಯದಲ್ಲಿ ಆಸೆ ಮಾಡಿತಯ್ಯ ಎನ್ನ ಚಿದಾತ್ಮನು. ಹೀಂಗೆ ಅಜ್ಞಾನವೆಂಬ ಭವಪಾಶದಿಂದ ಹೊಡದಾಡಿ ಸತ್ತು, ಸತ್ತು-ಹುಟ್ಟಿ ಭವಕ್ಕೆ ಒಳಗಾಗಿ ಕೆಟ್ಟೆನಯ್ಯ. ಭವರೋಗವೈದ್ಯನೆ, ಸಲಹಾ, ಶ್ರೀಗುರುಲಿಂಗಜಂಗಮವೆ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ ಗುರು ಲಿಂಗ ಜಂಗಮದ ಆದ್ಯಂತವನರಿಯದೆ ಏನೆಂದು ಪೂಜಿಸುವಿರಿ, ಆರಾಧಿಸುವಿರಿ? ಅದೆಂತೆಂದಡೆ: ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು ಲಿಂಗವಾದ ಪರಿ ಹೇಂಗೆ? ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ? ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ? ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ? ಸಕಲ ಜೀವವೆರಸಿ ಕರಗಿದ ಆಸಿಯ ಜಲ ತೀರ್ಥವಾದ ಪರಿ ಹೇಂಗೆ? ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ? ಅದೆಂತೆಂಡೆ: ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ ಅಂಗವಾದುದು ಈ ಗುರುವಲ್ಲಾ ಎಂದು ಅರಿದು ಆ ಲಿಂಗದ ಚೈತನ್ಯ ಈ ಲಿಂಗವಲ್ಲಾ ಎಂದು ಅರಿದು ಮಾಡೂದು ತನು ಮನ ಧನ ವಂಚನೆಯಳಿದು. ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು. ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲ್ಲ ಎಂದರಿದು ಧರಿಸೂದು ಶ್ರೀ ವಿಭೂತಿಯ. ಆ ಲಿಂಗದ ಶೃಂಗಾರದ ಹರಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು. ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು. ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದವನು. ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ. ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ. ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ, ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.
--------------
ನಿಃಕಳಂಕ ಚೆನ್ನಸೋಮೇಶ್ವರ
ಭೂಮಿಯಲ್ಲಿ ಹುಟ್ಟಿದ ಕಲ್ಲು ತಂದು ಲಿಂಗವೆಂದು ಹೆಸರಿಟ್ಟು, ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತರ ಸಂಯೋಗದಿಂದ ಪುಟ್ಟಿದ ಮನುಜರಿಗೆ ಭಕ್ತನೆಂದು ಹೆಸರಿಟ್ಟು, ಇಂತಪ್ಪ ಭಕ್ತಂಗೆ ಅಂತಪ್ಪ ಲಿಂಗವನು ವೇಧಾ, ಮಂತ್ರ, ಕ್ರಿಯೆ ಎಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ, ಅಂಗದ ಮೇಲೆ ಲಿಂಗಧಾರಣವ ಮಾಡಿದಡೆ, ಅದು ಲಿಂಗವಲ್ಲ, ಅವನು ಭಕ್ತನಲ್ಲ. ಅದೇನು ಕಾರಣವೆಂದಡೆ: ಅವನು ಮರಣಕ್ಕೆ ಒಳಗಾಗಿ ಹೋಗುವಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲ್ಲಿ ಉಳಿಯಿತು. ಭಕ್ತಿ ಭ್ರಷ್ಟವಾಗಿ ಹೋಯಿತು ಬಿಡಾ ಮರುಳೆ. ಇದು ಲಿಂಗಾಂಗಸ್ವಾಯುತವಲ್ಲ. ಲಿಂಗಾಂಗದ ಭೇದವ ಹೇಳ್ವೆ ಲಾಲಿಸಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಬ್ಬನ ಮಾತಕೊಟ್ಟು ಬಾಹ್ಯದಲ್ಲಿಟ್ಟು ಕೊಂದೆ. ಒಬ್ಬನ ಗುಪ್ತಭಾಷೆಯಕೊಟ್ಟು ಅಂತರಂಗದಲ್ಲಿಟ್ಟು ಕೊಂದೆ. ಒಬ್ಬನ ಮೌನಭಾಷೆಯಕೊಟ್ಟು ಆಕಾಶದಲ್ಲಿಟ್ಟು ಕೊಂದೆ. ಒಬ್ಬ ಅಧಮನಿಗೆ ತಪ್ಪದೆ ಭಾಷೆಯಕೊಟ್ಟು ಒಳಗಾಗಿ ಹಾದರವನಾಡಿ ಕಾಯಕದಲ್ಲಿರ್ಪೆನು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರೂ ಇಲ್ಲದಂದು ತಾನಹ ದೆವಸ, ತನಗೆ [ಆ]ನಾಧಾರವಾದೆ ನೋಡಾ. ಭೂಮಿಯಾಕಾಶ ಐದನೆಯ ಭೂತ ಒಳಗಾಗಿ [ಆಂ] ಬೇರೆ ತಾ ಬೇರೆ ಬಳಿಕಾದ ದೆವಸ, ತಾ ತೋರಿದಂದಹ ಆ ನೂಲ ಹಿಡಿದೆನು. ತೀವಿದ ಒಂಬತ್ತು ದ್ವೀಪಕ್ಕೆ ಭಾವವಿರಹಿತನಾಗಿ ತಾ ಹೊರಗಾದಡೆ [ಅಂ] ಹಿಡಿದೊಳಗುಮಾಡಿದನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಏಕಾದಶ ರುದ್ರರು ಹೊರಗಾದ, ಈರೇಳು ಲೋಕ ಹದಿನಾಲ್ಕು ಭುವನ ಯುಗಜುಗಂಗಳಲ್ಲಿ ಒಳಗಾಗಿ ತಿರುಗುವುದೊಂದು ಶಕ್ತಿಯ ಭೇದ. ದಶಾವತಾರವಾಗಿ ಕಾಲಕರ್ಮಂಗಳಲ್ಲಿ ಓಲಾಡುತ್ತಿಪ್ಪುದು ಒಂದು ಶಕ್ತಿಯ ಭೇದ. ಉಂಟು ಇಲ್ಲಾ ಎಂದು ನಿಶ್ಚಿಂತಕ್ಕೆ ಹೋರುವುದೊಂದು ಶಕ್ತಿಯ ಭೇದ. ಇಂತೀ ತ್ರಿವಿಧಶಕ್ತಿಯ ಆದಿ ಆಧಾರವನರಿದು ಕರ್ಮವ ಕರ್ಮದಿಂದ ಕಂಡು, ಧರ್ಮವ ಧರ್ಮದಿಂದ ಅರಿದು, ಜ್ಞಾನವ ಜ್ಞಾನದಿಂದ ವಿಚಾರಿಸಿ, ಇಂತೀ ತ್ರಿಗುಣದಲ್ಲಿ ತ್ರಿಗುಣಾತ್ಮಕನಾಗಿ, ದರ್ಪಣದಿಂದ ಒಪ್ಪಂಗಳನರಿವಂತೆ ಅರಿವು ಕುರುಹಿನಲ್ಲಿ ನಿಂದು, ಕುರುಹು ಅರಿವನವಗವಿಸಿದಲ್ಲಿ ತ್ತøಮೂರ್ತಿ ನಷ್ಟವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುವಾದಡೆ ಭೃತ್ಯರ ಚಿತ್ತವನರಿಯಬೇಕು. ಲಿಂಗವಾದಡೆ ಅರ್ಚಕನ ಚಿತ್ತದಲ್ಲಿ ಅಚ್ಚೊತ್ತಿದಂತಿರಬೇಕು. ಜಂಗಮವಾದಡೆ ಉತ್ಪತ್ತಿ ಸ್ಥಿತಿ ಲಯದ ಗೊತ್ತ ಮೆಟ್ಟದೆ ನಿಶ್ಚಿಂತನಾಗಿರಬೇಕು. ಇಂತೀ ತ್ರಿವಿಧಲಿಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ, ತ್ರಿವಿಧಾಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ, ತ್ರಿವಿಧಾಂಗ ತ್ರಿವಿಧಮಲಕ್ಕೆ ಹೊರಗಾಗಿ, ತ್ರಿವಿಧಾತ್ಮ ತ್ರಿವಿಧ ಅರಿವಿನಲ್ಲಿ ಕರಿಗೊಂಡು, ವಿಶ್ವಾಸಕ್ಕೆ ಎಡದೆರಪಿಲ್ಲದೆ ತನ್ಮಯಮೂರ್ತಿ ತಾನಾದ ನಿಜೈಕ್ಯಂಗೆ ರಾಗ ವಿರಾಗವಿಲ್ಲ, ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ. ಇಂತೀ ಭಿನ್ನಭಾವನಲ್ಲ, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿದ ಶರಣ.
--------------
ಆನಂದಯ್ಯ
ಘಟಕುಂಭದಲ್ಲಿ ಜೀವನೆಂಬ ಜೇಗಟೆ ಬಂದಿತ್ತು. ದೃಷ್ಟವ ಇಷ್ಟದಲ್ಲಿ ಕುಟ್ಟಲಾಗಿ, ಮೊಳೆ ಮುರಿದು ಒಡಲೊಡೆಯಿತ್ತು. ಅಂಗದ ಅಗ್ನಿಯಲ್ಲಿ ಬೇಯಿಸಿ, ಮೂರುಸಂಗವಡೆದ ಮಡಕೆಯ ಓಡಿನಲ್ಲಿ ಶ್ರುತ ದೃಷ್ಟ ಅನುಮಾನವೆಂಬ ಕೋಲಿನಲ್ಲಿ ಕಡೆಯಲಾಗಿ, ರಸ ಒಳಗಾಗಿ ಹಿಪ್ಪಿ ಹೊರಗಾಯಿತ್ತು, ಆ ಸುಧೆಯ ತುಂಬಿ ತಂದೆ. ಒಮ್ಮೆಗೆ ಕೊಂಡಲ್ಲಿ ಬ್ರಹ್ಮಕಲ್ಪವ ಕೆಡಿಸಿತ್ತು. ಮತ್ತೊಮ್ಮೆ ಕೊಂಡಲ್ಲಿ ವಿಷ್ಣುವಿನ ಗೊತ್ತ ಕಿತ್ತಿತ್ತು. ಮೂರೆಂದು ಮೊದಲ ಹಾಗವ ಮೀರಿದ ರುದ್ರನ ಅಗಡವ ಕಿತ್ತಿತ್ತು. ಅರೆದು ಕೊಂಡಲ್ಲಿ ಸುಧೆ, ಮರೆದು ಕೊಂಡಲ್ಲಿ ಸುರೆಯಾಗಿ, ಅರುಹಿರಿಯರ ಮರವೆಯ ಮಾಡಿತ್ತು. ನಾ ತಂದ ಬೆವಹಾರವ ಅಹವರೆಲ್ಲರೂ ಕೊಳ್ಳಿ, ಧಮೇಶ್ವರಲಿಂಗವನರಿಯಬಲ್ಲಡೆ.
--------------
ಹೆಂಡದ ಮಾರಯ್ಯ
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು. ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ ನವಪಾಷಾಣದೊಳಗಾದ ರತಿಸಂಭವ ಮುಂತಾದ ಷಟ್ಕರ್ಮ ಆಚರಣೆ ಮುಂತಾದ ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು. ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು. ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪು. ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪು. ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ. ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ. ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ. ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ ಅಗ್ನಿಗೆ ಆಕಾಶದ ಉದ್ದ ಕಾಷ*ವನೊಟ್ಟಿದಡೂ ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ. ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ, ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ ಅರಿವಿಗೆ ತುದಿ ಮೊದಲಿಲ್ಲ. ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ, ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷಿ*ಕವಂತನಾಗಿ, ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ, ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ ಬಿಂದು [ಸಾ]ರಕ್ಕೆ ಮುನ್ನವೆ ಬಿದ್ದಂತೆ ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಒಂದೆ ವಸ್ತು ಅವಸ್ಥಾತ್ರಯ ಕಿಂಚಿದಜ್ಞತ್ವ ಹೊಂ ಜೀವನೆನಿಸಿತ್ತಯ್ಯಾ, ಆ ಜೀವ ಕರ್ತೃತ್ವಭೋಕ್ತೃತ್ವಕ್ಕೆ ಒಳಗಾಗಿ `ದೇಹ ನಾನು' ಎಂದಿತ್ತಯ್ಯಾ. `ದೇಹ ನಾನು' ಎಂಬುವ ವಾಸನೆಯೊಳಗಾಗಿ, ಕಾಲತ್ರಯಕ್ಕೊಳಗಾಗಿ, ಅಸ್ವತಂತ್ರನಾಗಿ ನೆಲಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು ತಲೆದೋರುವುದಕ್ಕೆ ಮುನ್ನವೆ, ಯುಗಜುಗಂಗಳು ಪ್ರಮಾಣಿಸುವುದಕ್ಕೆ ಮುನ್ನವೆ, ನಾಲ್ಕು ವೇದ ಹದಿನಾರುಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳು ಕುರುಹುಗೊಳ್ಳುವುದಕ್ಕೆ ಮುನ್ನವೆ, ನಿರಾಳ ಸುರಾಳವೆಂಬ ಬಯಲು ಅವಗವಿಸುವುದಕ್ಕೆ ಮುನ್ನವೆ, ಬ್ರಹ್ಮಾಂಡವೆಲ್ಲಿ ಆಯಿತ್ತು ? ವಿಷ್ಣುವಿನ ಚೇತನ ಎಲ್ಲಿ ಹುಟ್ಟಿತ್ತು ? ಮಹಾರುದ್ರನ ದ್ವೇಷ ಎಲ್ಲಿ ಹುಟ್ಟಿ, ಎಲ್ಲಿ ಅಡಗಿತ್ತು ಹೇಳಾ ? ನಾದಬಿಂದುಕಳೆಗೆ ಅತೀತವಪ್ಪ ಲಿಂಗವ ಭೇದಿಸಿ ವೇಧಿಸಲರಿಯದೆ, ಭಾವಭ್ರಮೆಯಿಂದ ನಾನಾ ಸಂದೇಹಕ್ಕೆ ಒಳಗಾಗಿ, ಜೀವ ಪರಮನ ನೆಲೆಯ ಕಂಡೆಹೆನೆಂದು ಆವಾವ ಠಾವಿನಲ್ಲಿ ಕರ್ಕಶಗೊಂಬವಂಗೆ, ಪ್ರಾಣಲಿಂಗಿಯೆಂಬ ಭಾವ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->