ಅಥವಾ

ಒಟ್ಟು 18 ಕಡೆಗಳಲ್ಲಿ , 12 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಾವಿನ ಹಲ್ಲಿನ ವಿಷದ ಕೊಳಪೆಯ ಮೂಲೆಯಲ್ಲಿ, ಮೂರು ಕಪ್ಪೆ ಹುಟ್ಟಿದವು. ಒಂದಕ್ಕೆ ಕಾಲಿಲ್ಲ, ಒಂದಕ್ಕೆ ಬಾಯಿಲ್ಲ, ಒಂದಕ್ಕೆ ಕಣ್ಣಿಲ್ಲ. ಕಾಲಿಲ್ಲದ ಕಪ್ಪೆ ಮೂರುಲೋಕವ ಸುತ್ತಿತ್ತು. ಬಾಯಿಲ್ಲದ ಕಪ್ಪೆ ಬ್ರಹ್ಮಾಂಡವ ನುಂಗಿತ್ತು. ಕಣ್ಣಿಲ್ಲದ ಕಪ್ಪೆ ಕಂಗಾಣದವರ ಕಂಡಿತ್ತು. ಈ ಖಂಡಮಂಡಲದ ಅಂಗವ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಕೊಟ್ಟುಕೊಂಡೆನೆಂಬುದೊಂದುಳ್ಳರೆ ಒಂದಕ್ಕೆ ಭಂಗ, ಕೊಡುಕೊಳ್ಳಿಯಳಿದುಳಿದರೆ ಎರಡಕ್ಕೆ ಬಂಗ. ಒಂದು ಭಂಗ ಭವಕ್ಕೆ ಬೀಜ, ಎರಡು ಭಂಗ ಲೀಲೆಗೇಡು, ಒಂದೆರಡರಿಯದೆ ಅಂದಂದಿಗಿತ್ತಡೆ ಅವಧಾನಿಸಿಕೊ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು ? ಒಂದಕ್ಕೆ ಜೀವವಿಲ್ಲ , ಒಂದಕ್ಕೆ ತೇಜವಿಲ್ಲ . ಕಾರಣವರಿಯದ ನಿಃಕಾರಣ ಮನುಜರ ಕೈಯಲ್ಲಿ ಲಿಂಗವಿದ್ದು ಫಲವೇನು ? ಅಂಗರಹಿತವಾದ ಸಂಗವನರಿಯರು. ಸಂಗರಹಿತವಾದ ಸುಖವನರಿಯರು. ನಿಸ್ಸಂಗಿ ನಿಂದ ನಿಲವ, ಸಕಳೇಶ್ವರದೇವಾ, ನಿಮ್ಮ ಶರಣ ಬಲ್ಲ .
--------------
ಸಕಳೇಶ ಮಾದರಸ
ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು. ಒಂದೆ ಬಿಡುಮುಡಿಯಲ್ಲಿ ಎಸಲಿಕ್ಕೆ, ಗುರಿತಪ್ಪಿ ಎಚ್ಚವನಂಗ ಬಟ್ಟಬಯಲಾಯಿತ್ತು, ಅದು ತಪ್ಪಿಹೋದ ಕಾರಣ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ ಗುರಿ, ಅರಿವ ಮನ ಸರವಾದ ಕಾರಣ.
--------------
ಸಗರದ ಬೊಮ್ಮಣ್ಣ
ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ? ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಕಾಳಮೇಘನೆಂಬ ಭೂಮಿಯಲ್ಲಿ ಕಾಳರಾತ್ರಿಯೆಂಬ ಏರಿ [ಕಟ್ಟೆ], ಮಂಜಿನ ನೀರು ತೊರೆಗಟ್ಟಿ ಹಾಯ್ದು ತುಂಬಿತ್ತು. ಆ ಕೆರೆಗೆ ತೂಬು ಬಿಸಿಲ ಸಂಭ್ರಮದ ಕಲ್ಲು, ಕಂಜನಾಳದ ನೂಲಿನ ಕಂಬ ಆ ತಲಪಿಂಗೆ. ಅಂದಿನ ಮುಚ್ಚುಳು, ಇಂದಿನ ದ್ವಾರದಲ್ಲಿ ಸೂಸುತ್ತಿರಲಾಗಿ ಸಾಳಿವನ ಬೆಳೆಯಿತ್ತು, ಕೊಯ್ದು ಅರಿಯ ಹಾಕಲಾಗಿ ಒಂದಕ್ಕೆ ಎರಡಾಗಿ ಎರಡಕ್ಕೆ ಮೂರುಗೂಡಿ ಹೊರೆಗಟ್ಟಿತ್ತು. ಹಾಕುವುದಕ್ಕೆ ಕಳನಿಲ್ಲದೆ, ನೆಡುವುದಕ್ಕೆ ಮೇಟಿಯಿಲ್ಲದೆ ಒಕ್ಕುವುದಕ್ಕೆ ಎತ್ತಿಲ್ಲದೆ, ಹೊರೆಯೆತ್ತ ಹೋಯಿತೆಂದರಿಯೆ ನಾ ಹೋದೆ, ಸದ್ಯೋಜಾತಲಿಂಗದಲ್ಲಿಗಾಗಿ.
--------------
ಅವಸರದ ರೇಕಣ್ಣ
ಬಲ್ಲವನ ನುಡಿ ಸರ್ವವೆಲ್ಲಕ್ಕೂ ನನ್ನಿ. ಬೆಲ್ಲದ ಘಟ್ಟಿ ಸರ್ವವೆಲ್ಲಕ್ಕೂ ಮಧುರ. ಕಳವಿಲ್ಲದವನ ನುಡಿ ಸರ್ವವೆಲ್ಲಕ್ಕೂ ದಿಟ. ಹುಸಿ ಒಂದಕ್ಕೆ ದಿಟವೆರಡಕ್ಕೆ ಸಂದೇಹ ಮೂರಕ್ಕೆ ಬೀಡು. ಮೂಕೊರೆಗನ ಶುದ್ಧಿಯೇತಕ್ಕೆ? ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ? ಆತ್ಮನೆಂದಡೆ ಸಾಯದು ಚಿತ್ತ , ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ. ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ, ಆ ಎರಡರ ಸಂಗದಿಂದ ರುಜೆ ಪ್ರಮಾಣು. ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ ನಾನೊಂದು ಔಷಧಿಯ ಭೇದವ ಹೇಳಿಹೆ. ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು. ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ. ಆ ಮದು ವಾಂತಿಗೆ ಸಲ್ಲ, ವಿರೋಚನವಿಲ್ಲ. ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ. ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ. ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.
--------------
ವೈದ್ಯ ಸಂಗಣ್ಣ
ಗಣಿತ ಒಂದಕ್ಕೆ ಪೂಜೆ ಒಂದೆರಡು ಮೂರಾದಲ್ಲಿ ಹತ್ತು ಶತ ಸಹಸ್ರವೆನಿಸಿತ್ತಯ್ಯಾ. ಪರಾತ್ಪರವಸ್ತು ಉಪಾಧಿವಶದಿಂದ ಈಶತ್ವ ಜೀವತ್ವ ಪ್ರಕೃತಿ ಮೊದಲಾದ ಇಂದ್ರಜಾಲವಾಯಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಂದು ಮೂವತ್ತರೊಳು ಸಂದ ಅಕ್ಷರವಾಱು ಒಂದಕ್ಕೆ ಅಕ್ಷರವು ಆರು. ಆರೂನೆಲ್ಲ ಘಟ್ಟಣಿಗೆ ಮುನ್ನ ಫಲಿತವಾಯಿತು ಮಠವು. ಮಠದಿಂದ ಮೇಲೆ ತಾಣಕಂಬನಿರುಗೆ ಕಂಬದಿಂ ಮೇಲೊಪ್ಪಿ ಇಂಬಪ್ಪ ತುಂಬಿಯ ಶಂಭುವೆಂಬಾ ಕುಸುಮ ವಿಕಾಸವಾಗೆ, ಅಂಬರದ ಮೇೀಗ ಬಿಂಬವೆಸೆದುದ ಕಂಡೆ, ಶಂಭುವೆ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಹರಿ ಹತ್ತು, ಹೊಲಿವುದೊಂದೆ ಸೂಜಿ. ಸರಗೆಂಟು, ಮಡಿಸೂದೊಂದೆ ಕೈ. ಅಡಿ ಆರು, ನಡೆವುದೊಂದೆ ಕಾಲು. ನುಡಿ ಮೂರು, ಅರಿವುದೊಂದೆ ಆತ್ಮ. ಇಂತೀ ಒಂದರೊಳಗೊಂದಡಗಿ, ಸಂದಿಲ್ಲದ ನೂಲ ಮೂಲೆಯ ಗಂಟನಿಕ್ಕಿ, ಒಂದಕ್ಕೆ ಮೂರು, ಮೂರಕ್ಕೆ ಆರು, ಆರ ವಿಭಾಗಿಸಿ ಮೂವತ್ತಾರ ಬೇರರಿವ, ಇಪ್ಪತ್ತೈದ ಮೀರಿ ಕಾಬ, ನೂರೊಂದರಲ್ಲಿ ಸೂರೆಯಾಗದೆ, ತನಗೊಂದು ತೋರೆ ಒಡಗೂಡಿದಲ್ಲಿಯ ಊರೆಲ್ಲಕೆ ದೂರದೆ, ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಒಡಗೂಡಬೇಕು.
--------------
ಸೂಜಿಕಾಯಕದ ಕಾಮಿತಂದೆ
ಅನುಭವತ್ರಯ ಒಂದಾದುದು ಅನುಭವವಯ್ಯಾ. ಒಂದಕ್ಕೆ ಮೂರೆಂಬುದು ಶ್ರ್ಕುಸಿದ್ಧ. `ತ್ರಯೋ ಗುಣಾಸ್ತ್ರೀಣಿ ವಪೂಂಷಿ' ಕಪಿಲಸಿದ್ಧಮಲ್ಲಿಕಾರ್ಜುನನ ಮಹಾಕೀನ್ಲ.
--------------
ಸಿದ್ಧರಾಮೇಶ್ವರ
ಜ್ಞಾನಗುರುವಿನ ಶ್ರೀಪಾದವಿಡಿದ ಶಿವಕವಿ ಅತೀತನೆಂತೆನೆ : ``ಪರಬ್ರಹ್ಮಸ್ವರೂಪ ಉತ್ತಮಂ ಮುಕ್ತಿ ಸಂತತಃ ದೇವದೂತಿ ಪ್ರಸನ್ನಿತೆ ಉಭಯಮಾರ್ಗ ವರಕವಿ ಮುದಿಮಮ್ ಪ್ರಳಯಕಾಲಸ್ಯ | ಆತ್ಮತೃಪ್ತಿ ನರಕವಿ ರಾಜವಂದಿತಾ ತನ್ನಿಷ್ಟ ನರಕಪಿತಃ ತ್ರಿವಿಧ ಶಬ್ದ ಶಾಸ್ತ್ರಯಿತಾರ್ಥ ಸಮೋದ್ದಿಷ್ಟ ವಚನಧಾರಿ ನಿಷ್ಕಳಂ ||''(?) ಶ್ರೀ ಶ್ರೀ ಕವಿಗಳೆಂದು ಪೆಸರಿಟ್ಟುಕೊಂಡು ನುಡಿವಣ್ಣಗಳಿರಾ ಕಾಯದ ಕೀಲನರಿತು ಕಾವ್ಯತ್ವವನು ಮಾಡಿ ಭೇದವ ಬಲ್ಲರೆ ಹೇಳಿ, ಅರಿಯದಿರ್ದೊಡೆ ಕೇಳಿ. ನಿಮ್ಮ ಅಂಗ ಪಾತಾಳವೆಂಬ ಪವನಸೂತ್ರವನು ಮೆಟ್ಟಿ ಬಿಡುವಿಲ್ಲದಂತಾ ಉಯ್ಯಾಲೆಯನಾಡುತಿಹುದು. ನಿಮ್ಮ ಅಂಗ ಭುವಿಯೆಂಬ ಭೂಚಕ್ರದ ಮೂಲ ತಿಳಿದು ನಾಭಿಮಂಡಲವೆಂಬ ಹುತ್ತದೊಳಗಿರ್ದ ನಾಗಕೂರ್ಮನೆಂಬ ಘಟಸರ್ಪನ ತಲೆಕೆಳಗಾಗಿ ಬಾಲ ಮೇಲಕಾಗಿರುವುದು ಕಾಣಿರೋ. ಯೋಗದೃಷ್ಟಿಯೆಂಬ ನಾಗೇಶ್ವರನನು ಹಿಡಿದುಕೊಂಡು ಊದಲಾಗಿ ಆಗ ನಾಗಕೂರ್ಮನೆಂಬ ಸರ್ಪ ಸಭೆಯನು ತಿಳಿಯಲಿಕ್ಕೆ ಇಳುಹಿ ತಲೆಯ ಮೇಲಕ್ಕೆ ಮಾಡಿ ಗಗನಾಕಾರವೆಂಬ ಮಂಡಲಕ್ಕೆ ಹೆಡೆಯೆತ್ತಿ ಆರ್ಭಟಿಸಿ ಝೇಂಕರಿಸಿ ನಲಿದಾಡುವಂತೆ, ನಾದವನು ತನ್ನಲ್ಲಿ ಜ್ಞಾನೋದಯದಿಂದ ಲಾಲಿಸಿ ಕೇಳಬಲ್ಲರೆ ಆತನಿಗೆ ಝೇಂಕಾರ ಮೊದಲಾದ ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ ಇಪ್ಪತ್ತೆಂಟು ದಿವ್ಯಾಗಮ, ಮೂವತ್ತೆರಡು ಉಪಶಾಸ್ತ್ರಂಗಳಲ್ಲಿ ಗೀತ ಗಾಯನ ಯತಿ ಪ್ರಾಸ ದೀರ್ಘ ಗುರು ಲಘು ಬತ್ತೀಸ ರಾಗವನು ಎತ್ತಿ ಹಾಡುವಂತ ಮೂಲದ ಕೀಲ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗ ಪಂಚಶತಕೋಟಿ ಭುವನದಲ್ಲಿ ಚಲಿಸ್ಯಾಡುವಂಥ ಮನದ ಚಂಚಲವೆಂಬ ಪಕ್ಷಿಯ ಪಕ್ಕವನು ಹರಿದು, ತನುವೆಂಬ ಪಂಜರದೊಳಗೆ ಇಂಬಿಟ್ಟುಕೊಂಡು, ತಾಮಸ ಮದಗುಣಾದಿಗಳೆಂಬ ಹುಳುಗಳ ಜಾತಿಗಳ ತೂಗಡಿಕೆ ಮದನಿದ್ರೆ ವಾಹಡಿಕೆ ಆಕಳಿಕೆ ಸೀನು ಬಿಕ್ಕಳಿಕೆ ಬದಗರ ತೇಗು ಮೊದಲಾದ ತಾಮಸಗುಣಾದಿ ಗುಣಂಗಳೆಂಬ ಹುಳುಜಾತಿಗಳನ್ನೆಲ್ಲ ತಿಂದು ನುಂಗಿ ನಿರ್ಮಲ ದೇಹಿಯಾಗಿರಬಲ್ಲರೆ ಆತನಿಗೆ ಒಂ ನಮಃಶಿವಾಯ ಎಂಬ ಷಡಕ್ಷರದ ಭೇದವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮಗೆ ಅಷ್ಟದಿಕ್ಕಿನಲ್ಲಿ ಆಡುವಂಥ ದಶರೂಪಗಳನ್ನೆಲ್ಲ ಚಿತ್ತ ಏಕ ಮಾಡಿ, ಸುಜ್ಞಾನವೆಂಬ ಹಸ್ತದಲ್ಲಿ ಹಿಡಿದು, ಮುಖದ ಮೇಲುಗಿರಿಮಂದರಪರ್ವತದ ಶಿಖರದ ತುದಿಯಲ್ಲಿ ನಿಲ್ಲಿಸಿ, ಕ್ಷೀರಸಾಗರವೆಂಬ ಸಮುದ್ರದೊಳಗೆ ಹುಚ್ಚೆದ್ದು ಸೂಸಿ ಆಡುವಂಥ ತೆರೆಗಳನ್ನೆಲ್ಲ ನಿಲ್ಲಿಸಬಲ್ಲರೆ ಆತನಿಗದು ತ್ರಿಕಾಲ ಮರಣಾದಿಗಳನ್ನೆಲ್ಲ ಗೆಲಿಯಬಲ್ಲಂಥ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಆತನಿಗೆ ಜ್ಞಾನ ಅರ್ಥ ಪದದ ಕೀಲ ವಚನಂಗಳ ಅರ್ಥ ಅನುಭಾವಂಗಳ ಮಾಡಬಲ್ಲನೆಂದೆನ್ನಬಹುದು ಕಾಣಿರೋ ! ಇಂತು ಮಂತ್ರದ ಕೀಲನರಿಯದ ಕವಿಗಳು ಕಂದಯ್ಯಗೆ ಮಹಾಪ್ರಭುಲಿಂಗಲೀಲೆ, ಕರಣಹಸಿಗೆ, ಮಿಶ್ರಾರ್ಪಣ, ನವಚಕ್ರಕೋಟಿಗಳೆಂಬ ಇಂತೀ ಭುವಿಯಲ್ಲಿ ಶಿವಾಗಮವೆಂದು ಬರಿಯ ಮಾತಿನ ಮತಿಯ ಪತ್ರವನು ಹಿಡಕೊಂಡು ಓದಿ, ಅದರೊಳಗಿನ ಅರ್ಥವನು ಭಾವಂಗಳಲಿ ತಿಳಿತಿಳಿದು ನೋಡಿ, ಜ್ಞಾತತ್ವದ ವಚನಂಗಳ ಮಾಡಿ ಇಡುವಂಥ ಕವಿಗಳು ತಮ್ಮ ಆತ್ಮದ ಶುದ್ಧಿಯ ತಾವರಿಯದೆ ಭೂತವೊಡೆದವರು ಬೊಗಳಾಡಿದಂತೆ ಆಯಿತ್ತು ಕಾಣಿರೋ. ಅದೆಂತೆಂದರೆ :ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹಂಚಿನ ಕುಡಿಕೆಯೊಳಗೆ ತುಂಬಿದ ಅರ್ಥ ಅನುಭಾವಂಗಳ ತಿಳಿತಿಳಿದು ನೋಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ರವಿಶಶಿಯಾದಿಗೂ ಹೆಸರದೆಸೆಯ ಕೊಂಡುಕೊಂಡು, ಇಂತಿವು ಮೂರನು ಕೂಡಿಕೊಂಡು, ಒಂದಕ್ಕೆ ಒಂದು ಕಟ್ಟಿ ಹಾಕಿ ಪ್ರಾಸ ಬಿದ್ದಿತೊ ಬೀಳದೊ ಎಂದು ತಮ್ಮನದಲ್ಲಿ ತಾವು ಅಳದಾಡುವಂತೆ ಒಂದು ಹೊದವಿದ ಪದ್ಯವನು ಮಾಡಿ ಇಡುವಂತಹ ಕಲಿಕೆಯ ಕವಿಗಳು ಮುಂದೆ ಅಜ್ಞಾನದಿಂದ ಮುಕ್ತಿಯ ದಾರಿಯ ಕಾಣಲರಿಯದೆ ಮುಂದುಗಾಣದ ತುರುಕರು ಅಘೋರವೆಂಬ ನರಕದ ಕಿಚ್ಚಿನ ಕೊಂಡದೊಳಗೆ ಬಿದ್ದು ಹೋರಟೆಗೊಳ್ಳುತ್ತಿದ್ದರು ಕಾಣಿರೋ. ಅದೆಂತೆಂದರೆ ; ಛಂದಸ್ಸು ನಿಘಂಟು ಅಮರ ವ್ಯಾಕರಣ ನಾನಾರ್ಥಂಗಳೆಂಬುವೆಲ್ಲ ಕವಿಯೆಂಬ ಕುಂಬಾರ ಮಾಡಿ ಸವಿದುಂಡು ಬೀದಿಯೊಳಗೆ ಬಿಟ್ಟಿರ್ದ ಎಂಜಲ ಪತ್ರಾವಳಿಯೊಳಗಿನ ಭೋಜನಕ್ಕೆ ಕವಿಗಳೆಂಬುವ ಆರುಮಂದಿ ಸೊಣಗಗಳು ಕೂಗಿಡುತಿರ್ದವು ಕಾಣಿರೋ. ಅದೆಂತೆಂದರೆ:ಕಾಮ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಕ್ರೋಧ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮದ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಸೊಣಗ. ಮೋಹ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಮಚ್ಚರ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಲೋಭ ಘನವೆಂದು ಮಾಡಿದಾತ ಒಬ್ಬ ಕವಿಯೆಂಬ ಶ್ವಾನನು. ಇಂತಿವರು ಆರು ಮಂದಿ ಕವಿಗಳೆಂಬ ಶ್ವಾನಗಳು ಕೂಡಿ ನಾ ಹೆಚ್ಚು ತಾ ಹೆಚ್ಚು ಎಂದು ಒಂದಕ್ಕೊಂದು ಕಾದಾಡಿ ಚಿತ್ತಪಲ್ಲಟವಾಗಿ, ಆ ಪತ್ರದೊಳಗಿನ ಬೋನದ ಸವಿಯನು ಬಿಟ್ಟು ಚಿತ್ತಪಲ್ಲಟವಾಗಿ, ಆ ಪತ್ರದ ತುಳಿಯನು ಹರಿದುಕೊಂಡು ತಿಂದು ಹಲವು ಕಡೆಗೆ ಹರಿದಾಡುತ್ತಿದ್ದವು ಕಾಣಿರೋ. ಅದು ಎಂತೆಂದರೆ :ಇಂತು ಕಾಯದ ಕೀಲನರಿಯದೆ ಮಾಡಿದ ಕವಿಗಳು ಕಾಲನ ಬಾಧೆಗಳೆಂಬ ಮರಣಕ್ಕೆ ಒಳಗಾಗಿ ಹೋದಂತೆ ಕುರುಡ ಕವಿಗಳಂ ಕಂಡು ನಗುತ್ತಿದ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಲಿಂಗವೆಂಬುದು ಕಾಯದ ತೊಡಕು, ಗುರುವೆಂಬುದು ಭಾವದ ತೊಡಕು, ಜಂಗಮವೆಂಬುದು ಮೂರರ ತೊಡಕು, ಜ್ಞಾನಮಯವೆಂಬುದು ಸರ್ವಮಯವೆಲ್ಲರ ತೊಡಕು. ಒಂದ ಮೆಟ್ಟಿ, ಒಂದ ಕಂಡು, ಒಂದಕ್ಕೆ ಸಂದೇಹವಿಲ್ಲದೆ ನಿಂದುದು. ಹಿಂದಳ ಮುಂದಳ ದುಂದುಗವಿಲ್ಲ ಎಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
-->