ಅಥವಾ

ಒಟ್ಟು 48 ಕಡೆಗಳಲ್ಲಿ , 24 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಮರುಳನ ಊಟದಂತೆ, ಮಯೂರನ ನಿದ್ರೆಯಂತೆ, ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ, ಕಟಕದಲ್ಲಿ ತೋರುವ ಅಸಿಯ ರಸೆಯಂತೆ, ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ, ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ, ಇಪ್ಪ ಸುಳಿವ ಜಂಗಮಮೂರ್ತಿಯ ಕಂಡು ನಮೋ ನಮೋ ಎಂಬೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು, ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು, ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ. ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ? ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ? ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ? ಅಂತರಂಗ ಬಹಿರಂಗ ಆತ್ಮಸಂಗ_ಈ ತ್ರಿವಿಧದ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ಕಾಮಿಗೆ ವ್ರತವುಂಟೆ, ನಿಃಕಾಮಿಗಲ್ಲದೆ? ಕ್ರೋದ್ಥಿಗೆ ವ್ರತವುಂಟೆ, ಸಮಾಧಾನಿಗಲ್ಲದೆ? ಲೋಬ್ಥಿಗೆ ವ್ರತವುಂಟೆ, ಉದಾರಿಗಲ್ಲದೆ? ಇಂತೀ ಕ್ಷಮೆ ದಮೆ ಶಾಂತಿ ಸಮಾಧಾನಸಂಪದ ಮುಂತಾಗಿ ಗುರುಲಿಂಗಜಂಗಮಕ್ಕೆ, ತನುಮನಧನದಲ್ಲಿ ನಿರತನಾಗಿ, ತನ್ನ ತ್ರಾಣಕ್ಕೆ ಇದ್ದಂತೆ ಚಿತ್ತಶುದ್ಧಾತ್ಮನಾಗಿ ಇಪ್ಪ ಮಹಾಭಕ್ತನೆ ಕೃತ್ಯವಿಲ್ಲದ ಶರಣ. ಆತನ ಪಾದ ಎನ್ನ ಹೃದಯದಲ್ಲಿ ಅಚ್ಚೊತ್ತಿದಂತಿಪ್ಪುದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಎತ್ತುಕಟ್ಟುವ ಗೊತ್ತಾಗಿಪ್ಪನು.
--------------
ಅಕ್ಕಮ್ಮ
ನೀ ನಾನೆಂಬ ಭಾವವಾರಿಂದಾಯಿತ್ತು ಹೇಳಾ? ನೀನೆಂಬುದು ಅಜ್ಞಾನ, ನಾನೆಂಬುದು ಮಾಯಾಧೀನ. ನೀನೆನ್ನದೆ ನಾನೆನ್ನದೆ ಇಪ್ಪ ಸುಖವ ಭಿನ್ನವಿಲ್ಲದೆ ಅರಿಯಬಲ್ಲಡೆ; ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು, ಶಬ್ದದಲ್ಲಿ ಸಂಚಾರಲಕ್ಷಣವನರಿತು, ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ, ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ ಒಳಗಿರುವ ಸುಗುಣವ ಹೊರಗೆ ನೇತಿಗಳೆವ ದುರ್ಗಣ[ವು] ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು. ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು, ಅರಿದು ಸೋಂಕಿದಲ್ಲಿ ಅರ್ಪಿತವೆಂದು ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ ಮುಂತಾದವನರಿವ ನಾಲಗೆ ಒಂದೊ? ಐದೊ? ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು.
--------------
ಅವಸರದ ರೇಕಣ್ಣ
ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು, ಬಯಲಾಮೃತವನೆ ಉಂಡು, ಬಯಲನೆ ಉಟ್ಟು, ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ, ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ, ಬಸವಪ್ರಿಯ ಕೂಡಲಚನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು ? ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು ? ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು ? ಇಂತೀ ಭೇದದಲ್ಲಿ ಭೇದಕನಾಗಿ ಎರಡಳಿದು ವೇದ್ಥಿಸಿ ನಿಂದಲ್ಲಿಯೆ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯ ಸ್ಥಲ.
--------------
ಬಿಬ್ಬಿ ಬಾಚಯ್ಯ
ವ್ರತಶುದ್ಧವಾಗಿ ನಡೆವಾತನೆ ಎನಗೆ ಅದ್ಥೀನದರಸು, ಪಂಚಾಚಾರ ಶುದ್ಧವಾಗಿ ನಡೆವಾತನೆ ಎನಗೆ ಸದ್ಗರುಮೂರ್ತಿ, ಆವಾವ ನೇಮಕ್ಕೂ ಭಾವಶುದ್ಧವಾಗಿ ಇಪ್ಪ ಮಹಾಭಕ್ತನೆ ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ, ಲೋಕವಿರಹಿತ ಶರಣ, ಶರಣವಿರಹಿತ ಲೋಕವೆಂಬುದು ಕಾಣಬಂದಿತ್ತು ನೋಡಾ. ಲಿಂಗವೆ ಗೂಡಾಗಿ, ಜಂಗಮವೆ ಸ್ವಾಯತವಾಗಿ ಪ್ರಸಾದವೆ ಪ್ರಾಣವಾಗಿ ಪರಿಣಾಮದಲ್ಲಿ ಇಪ್ಪ ನೋಡಯ್ಯಾ. ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಮನ ನಿಮ್ಮ ಬೆರಸಿದಡೆ ಬಿನದಕ್ಕೆ ಹೇಳುವನಲ್ಲ. ಅನುಪಮಭಕ್ತಿ ಸುಖಸಾರಾಯ ಸಮರ್ಥವಾಗಿ, ತನುವಪ್ಪಂತೆ ಇಪ್ಪ ನೋಡಾ. ಮನುಜರ ಕಂಗಳಿಗೆ ಜ್ಞಾನಮೂರ್ತಿ ಜ್ಯೋತಿಯಂತಿಪ್ಪ ಮಹಂತ ಸಕಳೇಶ್ವರದೇವನ ನಿಲವು.
--------------
ಸಕಳೇಶ ಮಾದರಸ
ಚರಣವಿಡಿದಂಗೆ ಕರುಣಿ ಕಂದೆರವೆಯ ಮಾಡಬೇಕೆಂದು, ಮರಹಿಂದ ಬಂದ ಕಾಯದ ಕರ್ಮವ ಕಳೆದು ಗುರುಲಿಂಗವು ಕರುಣಿಸಿ ಕಂದೆರವೆಯ ಮಾಡಿದ ಪ್ರಾಣಲಿಂಗ ಸಂಬಂಧವೆಂತಿದ್ದುದೆಂದರೆ: ಆಲಿ ನುಂಗಿದ ನೋಟದಂತೆ, ಬಯಲು ನುಂಗಿದ ಬ್ರಹ್ಮಾಂಡದಂತೆ, ಮುತ್ತು ನುಂಗಿದ ಉದಕದಂತೆ ಪುಷ್ಪ ನುಂಗಿದ ಪರಿಮಳದಂತೆ ಇಪ್ಪ ಮಹಾನುಭಾವದ ನುಡಿಗೆ ಗುರಿಯಾದೆನಾಗಿ ಎನ್ನ ಒಡಲ ಪರ್ಯಾಯ ಕೆಟ್ಟಿತ್ತಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹಾವು, ಕಿಚ್ಚ ಮುಟ್ಟಿಹ ಶಿಶುವೆಂದು ಹೆತ್ತತಾಯಿ ಮಗನ ಬೆಂಬತ್ತಿ ಬಪ್ಪಂತೆ ಇಪ್ಪ ನೋಡಾ, ಎನ್ನೊಡನೊಡನೆ ಕೂಡಲಸಂಗಮದೇವ ಕಾಯ್ದುಕೊಂಡಿಪ್ಪನಾಗಿ.
--------------
ಬಸವಣ್ಣ
ಭಕ್ತಕಾಯ ಮಮಕಾಯ ಕಂಡಾ ಲಿಂಗವು, ಲಿಂಗವಂತಂಗೆ ಏಕಿನ್ನು ಬೇರೆ ಚಿಂತೆ ? ಲಿಂಗವಂತಂಗೆ ಗುರು ಲಿಂಗ ಪ್ರಾಣ ಏಕವಾಗಿ, ಪ್ರಾಣಲಿಂಗವಾಗಿ ಅಂತರಂಗ ಬಹಿರಂಗಭರಿತನಾಗಿ, ಪ್ರಾಣಲಿಂಗವಾಗಿ ಅಂಗದ ಮೇಲೆ ಲಿಂಗಸ್ವಾಯತವಾಗಿ ನಿರಂತರ ಇಪ್ಪ ಕಂಡಾ. ಏಕಿನ್ನು ಬೇರೆ ಅನ್ಯರಾಸೆ ! ಲಿಂಗವಂತರು ಲಿಂಗವನೇ ಚಿಂತಿಸುವುದು ಲಿಂಗವನೇ ಆಸಗೈವುದು ಲಿಂಗವನೇ ಕೊಂಬುದು, ಲಿಂಗವಂತರಿಗೆ ಕೊಡುವುದು. ಲಿಂಗವಂತಂಗೆ ಅನುವಿದು, ಆಯತವಿದು ಬುದ್ಧಿಯಿದು, ಸಿದ್ಧಿಯಿದು, ಮುಕ್ತಿಯಿದು, ಯುಕ್ತಿಯಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->