ಅಥವಾ

ಒಟ್ಟು 58 ಕಡೆಗಳಲ್ಲಿ , 18 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಕ್ಕೆ ಕೊಟ್ಟು ಕೊಂಡರೆ ಪ್ರಸಾದ. ಜಂಗಮವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ, ಇದೇ ಪ್ರಸಾದದಾದಿ ಕಂಡಯ್ಯಾ. ಆದಿಯ ಪ್ರಸಾದವ ವೇದಿಸಬಲ್ಲರೆ ಇದೆ ಕಂಡಯ್ಯಾ. ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡದೆ ಕೊಂಡರೆ ಹುಳುಕುಂಡುದಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ, ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ. ಸುವರ್ಣ ಒಂದು ಆಭರಣ ಹಲವಾದಂತೆ. ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ. ಮತ್ತಿದಿರು ದೈವವುಂಟೆಂದು ಗದಿಯಬೇಡ. ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ.
--------------
ಅರಿವಿನ ಮಾರಿತಂದೆ
ತೋರುವಡೆ ವಿಷಯವಾಗಿರದು, ಅದು ಅರಿಯಬಾರದಾಗಿ ಅರಿಯಬಾರದು, ಅರಿಯಬಾರದಾಗಿ ಹೇಳಬಾರದ, ಹೇಳಬಾರದಾಗಿ ಕಾಣಬಾರದು. ಅದು ಅತಕ್ರ್ಯ, ಅದು ನಿನ್ನಲ್ಲಿಯೆ ಇದೆ. ಅದ ಹೇಳಲಿಲ್ಲ ಕೇಳಲಿಲ್ಲ ಅರಿಯಲಿಲ್ಲ. ಅದನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ. ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯಾ. ಇದರ ಸಂಗಸುಖದನುಭಾವವನು ಕೂಡಲಸಂಗಮದೇವ ತಾನೆ ಬಲ್ಲ.
--------------
ಬಸವಣ್ಣ
ಪ್ರಾರಬ್ಧ ಪ್ರಯತ್ನಗಳ ತಾರತಮ್ಯವನಿಲ್ಲಿ ಹೇಳಿಹೆ ಕೇಳಿರಯ್ಯಾ: ಪ್ರಯತ್ನದ ಹೆಚ್ಚು ಕುಂದಿನಂತೆ, ಇಂದಾಗಲಿ ಮುಂದಾಗಲಿ ಪ್ರಾರಬ್ಧವು ಫಲಪದವನೀವುದಲ್ಲವೆ ? ``ಅತ್ಯುತ್ಕಟೈಃ ಪುಣ್ಯಪಾಪೈರಿಹೈವ ಫಲಮಶ್ನುತೇ ಎಂದುದಾಗಿ ಪಿರಿದಪ್ಪ ಪುಣ್ಯಪಾಪಂಗಳು ಇದೆ ಜನ್ಮದಲ್ಲಿಯೆ ಫಲವನೀಯದೆ ಮಾಣವು. ವಿಶ್ವಾಮಿತ್ರನು ಕ್ಷತ್ರಿಯನಾದಡೆಯೂ, ತನ್ನ ತಪಃಪ್ರಭಾವದಿಂದ ಬ್ರಾಹ್ಮಣನಾಗಲಿಲ್ಲವೆ ? ಮಾರ್ಕಂಡೇಯನು ಅತ್ಯುತ್ಕಟವಾದ ಶಿವಭಕ್ತಿಯಿಂದ ಚಿರಂಜೀವಿಯಾಗಲಿಲ್ಲವೆ ? ರಾವಣ ಕೀಚಕಾದಿಗಳು ಪಾಪಾಧಿಕ್ಯದಿಂದ ಹತಭಾಗ್ಯರಾಗಲಿಲ್ಲವೆ ? ಅದು ಕಾರಣ_ತಾನು ಕೈಕೊಂಡ ಕಜ್ಜದಲ್ಲಿ ಪ್ರಯತ್ನವೆ ಪ್ರಾರಬ್ಧವಾಗಿ ಫಲವೀವುದರಿಂದ ಪ್ರಾರಬ್ಧಕ್ಕಿಂತ ಪ್ರಯತ್ನವೇ ಮಿಗಿಲಾಗಿಪ್ಪುದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಯ್ಯ, ಇದೆ ಮಹಾಪ್ರಭುವಿನ ಮಹಾಪ್ರಸಾದನುಸಂಧಾನದಿಂದ ಶಾಂಭವಲೋಕದ ಶಾಂಭವಗಣಂಗಳು, ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು ದೇವಲೋಕದ ದೇವಗಣಂಗಳು, ಮತ್ರ್ಯಲೋಕದ ಮಹಾಗಣಂಗಳು ಮುಂತಾಗಿ ನಿಜಾಚರಣೆ ಲಿಂಗಲೋಲುಪ್ತರಾಗಿ, ಬಯಲೊಳಗೆ ಮಹಾಬಯಲಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಭಕ್ತನಾದುದಕ್ಕೆ ಇದೆ ಚಿಹ್ನವು ನೋಡಾ, ಎಲೆ ದೇವಾ. ಕೈಯಲ್ಲಿರಲು ಮಾಂಸದ ಮುದ್ದೆ, ಬಾಯಲ್ಲಿರಲು ವಾರಾಂಗನೆಯ ತಾಂಬೂಲ, ಮನದಲ್ಲಿರಲು ಕ್ಕ್ರಯ ಭಾವ, ಕೊರಳಲ್ಲಿರಲು ಲಿಂಗ, ದೇಹದಲ್ಲಿರಲು ಲಿಂಗಲಾಂಛನ, ಜಂಗಮವೆಂದು ನಂಬುವುದು ಕಾಣಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಶುದ್ಧಕರ್ಮವಿಲ್ಲದ ಭಕ್ತಿ, ವರ್ಮವಿಲ್ಲದ ವಿರಕ್ತಿ, ಸದಾಸನ್ನದ್ಧವಿಲ್ಲದ ಪೂಜೆ, ವೃಥಾಹೋಹುದಕ್ಕೆ ಇದೆ ಪಥ. ಅನ್ನ ಉದಕ ಹೆಣ್ಣು ಹೊನ್ನು ಮಣ್ಣನಿತ್ತು ವರ್ಮವ ಮುಟ್ಟದೆ ಸತ್ಕರ್ಮವನರಿಯದೆ ಕುನ್ನಿ ಧ್ಯಾನಿಸಿ ಹೇಯವೆಂದರಿದು ತಲೆಗೊಡಹಿದಲ್ಲಿ ಮರೆದಂತಾಗದೆ, ನಿಜನಿಶ್ಚಯವನರಿದು ಕುರುಹಿಡಬೇಕು, ಸದ್ಯೋಜಾತಲಿಂಗವ.
--------------
ಅವಸರದ ರೇಕಣ್ಣ
ಆದಿಯಲ್ಲಿ ಬಯಲು, ಅಂತ್ಯದಲ್ಲಿ ಬಯಲು, ಮಧ್ಯದಲ್ಲಿ ತೋರಿ ಕೆಡುವುದದು ನೋಡಾ, ಈ ಘಟವು. ತೋರಿ ತೋರಿ ಕೆಡುವುದಕ್ಕೆ, ಈ ಜಗದ್ಲ ಇದೆ ದೃಷ್ಟ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಂಗಮವಾದುದಕ್ಕೆ ಇದೆ ಚಿಹ್ನೆ ನೋಡಾ: ಅಂಗವಿಡಿದು ಲಿಂಗವ ಪೂಜಿಸುವ; ಲಿಂಗವಿಡಿದು ಅಂಗವ ಪೂಜಿಸ ನೋಡಾ. ಶತದಳ ಸಹಸ್ರಸೂರ್ಯವರ್ಣದ ಪದ್ಮದೊಳಿಪ್ಪ ಮಹಾಂಗವನರುಹಿ, ಪ್ರಾಣಂಗಿಯ ಕೂಟವನರಿಪಾತನೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮರನುರಿದು ಬೆಂದು ಕರಿಯಾದ ಮತ್ತೆ ಉರಿಗೊಡಲಾದುದ ಕಂಡು, ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ. ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ, ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳೆತಕ್ಕುಂಟೆ ? ವಸ್ತುವಿನಲ್ಲಿ ಕರಿಗೊಂಡ ಚಿತ್ತ, ತ್ರಿವಿಧಮಲಕ್ಕೆ ಹೊರಳಿ ಮರಳುವದೆ ? ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಆತನ ಬಿರುದೆನ್ನ ಉರದಲ್ಲಿ ಇದೆ ಕಂಡಯ್ಯಾ. ಏಕೆ ಬಂದಿರೋ ಎಲೆ ಅಣ್ಣಗಳಿರಾ. ನಿಮಗಪ್ಪುವುದಕ್ಕೆಡೆಯಿಲ್ಲ. ನಿಮಗಪ್ಪುವದಕ್ಕೆಡ್ಡಬಂದಹನೆಮ್ಮ ನಲ್ಲ. ಏಕೆ ಬಂದಿರೋ, ಉರಿಲಿಂಗದೇವನನಪ್ಪಿ ಸೊಪ್ಪಾದ ಹಿಪ್ಪೆಗೆ ?
--------------
ಉರಿಲಿಂಗದೇವ
ರೂಪಿಂಗೆ ಕೇಡುಂಟು ನಿರೂಪಿಂಗೆ ಕೇಡಿಲ್ಲ. ರೂಪು ನಿರೂಪನೊಡಗೂಡುವ ಪರಿ ಎಂತು ಹೇಳಾ ? ಅಸಂಬಂಧ ಸಂಬಂಧವಾಗಿ ಇದೆ. ದೇಹ ಇಂದ್ರಿಯವೆಂಬ ಜಾತಿಸೂತಕವಿರಲು ಗುಹೇಶ್ವರಲಿಂಗವ ಮುಟ್ಟಬಾರದು ಕೇಳವ್ವಾ.
--------------
ಅಲ್ಲಮಪ್ರಭುದೇವರು
ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ? ಅಶನವ ಬಿಟ್ಟಡೇನು, ಪರಾಕಿಯಂತೆ ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ? ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ? ಏನ ಮಾಡಿದಡೇನು ? ಏನ ಕೇಳಿದಡೇನು ? ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವಾದಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ. ಲಿಂಗವಾದಡೂ ಶಕ್ತಿಸಂಪುಟವುಳ್ಳನ್ನಕ್ಕ ಭವಕ್ಕೊಳಗು. ಜಂಗಮವಾದಡೂ ತನ್ನಿರವ ತಾನರಿಯದನ್ನಕ್ಕ ಪ್ರಸಿದ್ಧಭಾವಿಯಲ್ಲ. ಇಂತೀ ಇದನರಿತು ಪೂಜಿಸಬೇಕು, ತನ್ನಯ ಜನ್ಮವ ನಿವೃತ್ತಿಯ ಮಾಡಿಕೊಳಬಲ್ಲಡೆ. ಇದೆ ಸದ್ಭಕ್ತನಿರವು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->