ಅಥವಾ

ಒಟ್ಟು 46 ಕಡೆಗಳಲ್ಲಿ , 27 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ ಮುಟ್ಟದು ಗಂಧ ಅದೇಕೆ? ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಬ್ಥಿನ್ನದಿಂದ. ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಬ್ಥಿನ್ನವಾಯಿತ್ತು. ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ ಕುರುಹು ಹಿಂಗಿದ ದ್ವಾರದಂತೆ ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ ನೂಲು ಮುಂದಳ ಹರಿಯ ಮುಚ್ಚುವಂತೆ ಕರುಹಿನ ಬ್ಥಿನ್ನ ನಾಮನಷ್ಟವಾಗುತ್ತದೆ, ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,
--------------
ಅರಿವಿನ ಮಾರಿತಂದೆ
ಲಿಂಗವೇ ಪ್ರಾಣವಾದ ಮತ್ತೆ ಬೇರೆ ನೆನೆಯಿಸಿಕೊಂಬುದು ಇನ್ನಾವುದಯ್ಯಾ ? ಇದಿರಿಟ್ಟು ಬಂದುದ ಮುನ್ನವೆ ಮುಟ್ಟಿ ಅರ್ಪಿತ ಅವಧಾನಂಗಳಲ್ಲಿ ಸೋಂಕಿದ ಮತ್ತೆ ಪುನರಪಿಯಾಗಿ ಸೋಂಕಿದಡೆ ನಿರ್ಮಾಲ್ಯ ಕಂಡಯ್ಯಾ. ಮೊನೆಗೂಡಿ ಹಾಯ್ವ ಕಣೆಯಂತೆ ಅರ್ಪಿತಾಂಗ ಸಂಗಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಪ್ರಸಾದಿ ಭೋಗಣ್ಣ
ಅಯ್ಯಾ, ಪರಾತ್ಪರ ಸತ್ಯ ಸದಾಚಾರ ಗುರುಲಿಂಗಜಂಗಮದ ಶ್ರೀಚರಣವನು ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ, ಒಪ್ಪತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚನೆಯ ಮಾಡಿ, ಆ ಚರಣೋದಕ ಪ್ರಸಾದವನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗದೇವಂಗೆ ಕೊಟ್ಟು ಕೊಂಬುವಂತಹದೆ ಇದಿರಿಟ್ಟು ಜಂಗಮ ಪಾದೋದಕ ಪ್ರಸಾದವ ಕೊಂಬ ಆಚರಣೆಯ ನಿಲುಗಡೆ ನೋಡಾ. ಆಮೇಲೆ ಒಪ್ಪತ್ತು ಸಂಬಂಧವಿಟ್ಟು ಆಚರಿಸುವ ನಿಲುಕಡೆ ಎಂತೆಂದಡೆ: ಅಯ್ಯಾ, ನಿನ್ನ ಷಟ್‍ಸ್ಥಾನದಲ್ಲಿ ನೆಲೆಸಿರ್ಪ ಇಷ್ಟಮಹಾಲಿಂಗದೇವನ ತ್ರಿವಿಧಸ್ಥಾನದಲ್ಲಿ ಓಂ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುವೆಂಬ ತ್ರಿವಿಧ ನಾಮಸ್ವರೂಪವಾದ ಷೋಡಶಾಕ್ಷರಂಗಳೆ ಷೋಡಶವರ್ಣವಾಗಿ ನೆಲೆಸಿಪ್ಪರು ನೋಡಾ. ಇಂತು ಷೋಡಶಕಳಾಸ್ವರೂಪವಾದ ಚಿದ್ಘನ ಮಹಾಲಿಂಗದೇವನ ನಿರಂಜನ ಜಂಗಮದೋಪಾದಿಯಲ್ಲಿ ಸಗುಣ ನಿರ್ಗುಣ ಪೂಜೆಗಳ ಮಾಡಿ ಜಂಗಮಚರಣಸೋಂಕಿನಿಂ ಬಂದ ಗುರುಪಾದೋದಕವಾದಡೂ ಸರಿಯೆ, ಅದು ದೊರೆಯದಿದ್ದಡೆ, ಲಿಂಗಾಣತಿಯಿಂ ಬಂದೊದಗಿದ ಪರಿಣಾಮೋದಕವಾದಡೂ ಸರಿಯೆ, ಒಂದು ಭಾಜನದಲ್ಲಿ ಸೂಕ್ಷ್ಮದಿಂ ರಚಿಸಿ ಆ ಉದಕದೊಳಗೆ ಹಸ್ತೋದಕ ಮಂತ್ರೋದಕ ಭಸ್ಮೋದಕವ ಮಾಡಿ, ಆ ಮೇಲೆ ಅನಾದಿ ಮೂಲಪ್ರಣವ ಪ್ರಸಾದಪ್ರಣವದೊಳಗೆ ಅಖಂಡಜ್ಯೋತಿಪ್ರಣವ, ಅಖಂಡಮಹಾಜ್ಯೋತಿಪ್ರಣವವ ಲಿಖಿತವಮಾಡಿ, ಶುದ್ಧಾದಿಯಾದ ಪೂರ್ಣಭಕ್ತಿಯಿಂದ ಮಹಾಚಿದ್ಘನತೀರ್ಥವೆಂದು ಭಾವಿಸಿ ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ, ಮೂರು ವೇಳೆ ಪ್ರದಕ್ಷಿಣವ ಮಾಡಿ, ಆ ಚಿದ್ಘನ ತೀರ್ಥವನು ದ್ವಾದಶದಳ ಕಮಲದ ಮಧ್ಯದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟವಿಧಮಂತ್ರ ಸಕೀಲಂಗಳಿಂದ ಆಚಾರಾದಿ ಶೂನ್ಯಾಂತವಾದ ಅಷ್ಟವಿಧ ಲಿಂಗಧ್ಯಾನದಿಂದ ಅಷ್ಟವಿಧ ಬಿಂದುಗಳ ಸಮರ್ಪಿಸಿದಲ್ಲಿಗೆ ಅಷ್ಟವಿಧೋದಕವಾಗುವುದಯ್ಯಾ. ಆ ಇಷ್ಟಮಹಾಲಿಂಗ ಜಂಗಮವೆತ್ತಿ ಅಷ್ಟಾದಶಮಂತ್ರ ಸ್ಮರಣೆಯಿಂದ ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ. ಉಳಿದೋದಕವ ತ್ರಿವಿಧ ಪ್ರಣವಧ್ಯಾನದಿಂದ ಮುಕ್ತಾಯವ ಮಾಡಿದಲ್ಲಿಗೆ ದಶವಿಧೋದಕವೆನಿಸುವುದಯ್ಯಾ. ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪ ಪಾದತೀರ್ಥ ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ ಎಡೆಮಾಡಬೇಕಾದಡೆ ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿರ್ದಡೆ ತಾ ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯಾ. ಸಹಜಲಿಂಗಭಕ್ತರಾದಡೆ ಮುಖ ಮಜ್ಜನವ ಮಾಡಿಸಿ ತಾ ಧರಿಸುವ ವಿಭೂತಿಧಾರಣವ ಮಾಡಿಸಿ ಶಿವಶಿವಾ ಹರಹರ ಬಸವಲಿಂಗಾ ಎಂದು ಬೋಧಿಸಿ ಎಡೆಮಾಡಿಸಿಕೊಂಬುವುದಯ್ಯಾ. ಆಮೇಲೆ ತಾನು ಸ್ಥಲವಾದಡೆ ಸಂಬಂಧಪಟ್ಟು, ಪರಸ್ಥಲವಾದಡೆ ಚಿದ್ಘನ ಇಷ್ಟಮಹಾಲಿಂಗ ಜಂಗಮವ ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು ದಕ್ಷಿಣಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು ಬಂದ ಕ್ರಿಯಾಭಸಿತವ ಲೇಪಿಸಿ, ಮೂಲಪ್ರಣವ ಪ್ರಸಾದಪ್ರಣವದೊಳಗೆ ಗೋಳಕಪ್ರಣವ ಅಖಂಡಗೋಳಕಪ್ರಣವ ಅಖಂಡ ಮಹಾಗೋಳಕಪ್ರಣವ, ಜ್ಯೋತಿಪ್ರಣವ ಧ್ಯಾನದಿಂದ ದ್ವಾದಶ ಮಣಿಯ ಧ್ಯಾನಿಸಿ ಪ್ರದಕ್ಷಿಸಿ, ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ, ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ, ಪದಾರ್ಥದ ಪೂರ್ವಾಶ್ರಯವ ಕಳೆದು ಶುದ್ಧಪ್ರಸಾದವೆಂದು ಭಾವಿಸಿ, ಆ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟಾದಶ ಮಂತ್ರಸ್ಮರಣೆಯಿಂದ ಮೂರುವೇಳೆ ರೂಪ ಸಮರ್ಪಿಸಿ, ಎರಡು ವೇಳೆ ರೂಪ ತೋರಿ, ಚಿರಪ್ರಾಣಲಿಂಗ ಮಂತ್ರ ಜಿಹ್ವೆಯಲ್ಲಿಟ್ಟು ಆರನೆಯ ವೇಳೆಗೆ ಭೋಜ್ಯಗಟ್ಟಿ ಆ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ, ಷಡ್ವಿಧ ಲಿಂಗಲೋಲುಪ್ತಿಯಿಂದ ಸಂತೃಪ್ತನಾಗಿ ಆಚರಿಸಿದಾತನೆ ಗುರುಭಕ್ತನಾದ ನಿಚ್ಚಪ್ರಸಾದಿಯೆಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು. ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು. ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ ಭರಿತನಾಗಿ ಇರಬೇಕು. ಅದು ಆರೋಪಿಸಿದಲ್ಲಿ ಭಾವ ಇದಿರಿಡದಲ್ಲಿ ಬೇರೊಂದು ಬಯಕೆಯ ಅರಿತಿರಬೇಕು. ಅರಿವನರಿತೆನೆಂದು ಕುರುಹ ಮರೆದಡೆ ಆ ಮರೆವುದೆ ತನ್ನ ತಿಂಬ ಮಾಯೆ ಎಂದರಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಇಷ್ಟಲಿಂಗಸಂಬಂದ್ಥಿಗಳು ಭಕ್ತಿಸ್ಥಲವನರಿಯರು. ಪ್ರಾಣಲಿಂಗಸಂಬಂದ್ಥಿಗಳು ಮಾಹೇಶ್ವರಸ್ಥಲವನರಿಯರು. ಪ್ರಸಾದಲಿಂಗಸಂಬಂದ್ಥಿಗಳು ಪ್ರಾಣಲಿಂಗಸ್ಥಲವನರಿಯರು. ಶರಣಸ್ಥಲಭರಿತರು ಪ್ರಾಣಲಿಂಗಸಂಬಂಧವನರಿಯರು. ಐಕ್ಯ ನಿರ್ಲೇಪವಾದಲ್ಲಿ ಶರಣಸ್ಥಲ ನಿಂದಿತ್ತು. ಇಂತೀ ಐದು ಸ್ಥಲವ ಆರೋಪಿಸಿ, ಇದಿರಿಟ್ಟು ಕೂಡಿದಲ್ಲಿ ಆರುಸ್ಥಲವಾಯಿತ್ತು. ಆರುಸ್ಥಲ ವೇದ್ಥಿಸಿ ನಿಂದಲ್ಲಿ, ನೀ ನಾನೆಂಬ ಭಾವ, ಎಲ್ಲಿ ಅಡಗಿತ್ತು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂತಪ್ಪ ತ್ರಿವಿಧಾಚರಣೆಯಲ್ಲಿ ಬ್ಥಿನ್ನಜ್ಞಾನಿಗಳಾಗಿ ಬ್ಥಿನ್ನ ಕ್ರಿಯಗಳಾಚರಿಸಿ, ಬ್ಥಿನ್ನಭಾವ ಮುಂದುಗೊಂಡು ವ್ರತವನಾಚರಿಸುವ ಅಜ್ಞಾನಿಗಳಾದ ಜೀವಾತ್ಮರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ? ಮತ್ತೆಂತೆಂದೊಡೆ : ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ, ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು ತನುವಿನಲ್ಲಿ ಸ್ವಾಯತವ ಮಾಡಿ, ಆ ತನುಪ್ರಕೃತಿಯನಳಿದು ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ ದಿನಚರಿ ವಾರ ಸೋಮವಾರವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ, ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ ಸುಜ್ಞಾನಕ್ರಿಯಗಳನಾಚರಿಸುವುದೇ ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ ನಿರಂಜನಭಾವಲಿಂಗವನು - ಧನವೆಂದಡೆ ಆತ್ಮ. ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ, ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ ಮಹಾಜ್ಞಾನಾಚರಣೆಯನಾಚರಿಸುವುದೇ ದ್ವಾದಶಮಾಸ, ದ್ವಾದಶ ಚತುರ್ದಶಿ, ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ ಶಿವರಾತ್ರಿಅಮವಾಸೆಯ ವ್ರತವೆಂಬೆ. ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ, ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು ಮನು ಮುನಿ ದೇವ ದಾನವರು ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ ಇದಿರಿಟ್ಟು ಕೆಟ್ಟುಪೋದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಲ್ಪತರುವಿಂಗೆ ಅಪ್ಪು ಎಯ್ದುವಂತೆ ಇಕ್ಷುದಂಡಕ್ಕೆ ಮಧುರರಸ ಬೆಚ್ಚಂತೆ, ಕ್ಷೀರವಿರೋದ್ಥಿಗೆ ಹಗೆ ಸ್ನೇಹವಾದಂತೆ, ಆ ಉಭಯದ ಭೇದ. ಇದಿರಿಟ್ಟು ಕುರುಹು ಅರಿವ ಮನ ಎರಡಳಿದಲ್ಲಿಯೇ ಕುರುಹಳಿದು ನಿಂದುಳುಮೆ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಎಂದಿದ್ದು ಶರೀರ ಹುಸಿಯೆಂಬುದನರಿದ ಮತ್ತೆ, ತ್ರಿವಿಧಕ್ಕೆ ಕೊಂಡಾಡಲೇತಕ್ಕೆ? ಇದಿರಿಟ್ಟು ಮಾಡುವ ಮಾಟದಲ್ಲಿ ಶ್ರುತ ದೃಷ್ಟ ಅನುಮಾನದಲ್ಲಿ ಅರಿದ ಮತ್ತೆ ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನವ ಕೊಟ್ಟು ನಿರ್ಮುಕ್ತನಾಗಿರ್ಪ ಭಕ್ತನೆ ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ಸಕಲದ್ರವ್ಯಂಗಳೆಂದು ಕಲ್ಪಿಸಿ, ಇದಿರಿಟ್ಟು ಅರ್ಪಿಸಿಕೊಂಬುದು, ಅರ್ಪಿಸಿಹೆನೆಂಬುದು, ಅದಾವ ಚಿತ್ತ ? ಅದು ಉದಕ ವರ್ಣದ ಭೇದ, ವರ್ಣಕೂಟದ ಭಾವ. ಲೆಪ್ಪವ ಲಕ್ಷಿಸಿದಂತೆ, ಅದೆಂತೆಯಿದ್ದಿತ್ತು ಚಿತ್ತವಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕಾಳಿಕಾದೇವಿ, ಚಾಮುಂಡಿ, ಗಂಗೆ ಗೌರಿ, ಬನಶಂಕರಿ, ಎಲ್ಲಿ, ಏಕಲಾತಿ, ಹುಲಗಿ, ಹೊಸೂರಿ, ಸತ್ತವರು, ಹೆತ್ತವರು ಇಂತೀ ಹಲವು ಪಿಶಾಚಿಗಳ ಹೆಸರಿಂದ ಇದಿರಿಟ್ಟು ಆರಾಧಿಸಿ, ಅದರ ನೈವೇದ್ಯವೆಂದು ಶ್ರೀಗುರುವಿತ್ತ ಲಿಂಗಕ್ಕೆ ತೋರಿ ಭುಂಜಿಸುವ ಶಿವದ್ರೋಹಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ ಕಾಣಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ತತ್ವಂಗಳ ಹೊತ್ತು ವಿಸ್ತರಿಸಿ ಸ್ಥಲಂಗಳನಾಧರಿಸಿ ನಾನಾ ಭೇದಂಗಳಲ್ಲಿ ಹೊಕ್ಕು ವೇಧಿಸಿಹೆನೆಂದಡೂ, ಕಾಯ ಕರ್ಮವ ಅನುಭವಿಸುವುದ ಕಂಡು, ಜೀವ ನಾನಾ ಭವಂಗಳಲ್ಲಿ ಬರುತ್ತಿಹುದ ನೋಡಿ, ಇನ್ನಾವುದ ಶ್ರುತದಲ್ಲಿ ಕೇಳಲೇತಕ್ಕೆ ? ಇನ್ನಾವುದ ಇದಿರಿಟ್ಟು ದೃಷ್ಟವ ನೋಡಲೇತಕ್ಕೆ ? ಇನ್ನಾವ ಮನುವಿಂದ ಅನುಮಾನವನರಿಯಲೇತಕ್ಕೆ ? ಹಿಡಿದುದ ಬಿಡದೆ ಬಿಟ್ಟುದ ಹಿಡಿಯದೆ ಉಭಯದ ಒಳಗು ನಿರಿಯಾಣವಾದಲ್ಲಿ ತಾ ನಾಶನ ಸದ್ಯೋಜಾತಲಿಂಗವು ವಿನಾಶನ.
--------------
ಅವಸರದ ರೇಕಣ್ಣ
ಲಿಂಗ ಜಂಗಮಕ್ಕೆ ಮಾಡಿದ ಭಕ್ತಿ ಮನಕೆ ಮನವೇ ಸಾಕ್ಷಿಯಾಗಿರಬೇಕಲ್ಲದೆ, ಇದಿರಿಟ್ಟು ನುಡಿಯಲಾಗದು. ಅದೇನು ಕಾರಣವೆಂದರೆ : ಬಡವಂಗೆ ಭಾಗ್ಯ ದೊರೆಕೊಂಡಂತಿರಬೇಕಲ್ಲದೆ, ಎನ್ನ ಪದಾರ್ಥವ ನಾನು ಮಾಡಿದೆನು ಅವರು ಕೈಕೊಂಡರೆಂದು ತನ್ನ ಖ್ಯಾತಿ ಭಕ್ತಿಯನು ಮನ ಹಿಗ್ಗಿ ಅನ್ಯರೊಡನೆ ಹೇಳಿಕೊಂಡರೆ ಶಿವನೊಪ್ಪಿಕೊಳ್ಳನು, ಪುರಾತನರು ಮೆಚ್ಚರು. ಅಂತಪ್ಪ ಖ್ಯಾತಿಭಕ್ತನ ಡಂಭಕದ ಭಕ್ತಿಯೆಂತಾಯಿತ್ತೆಂದರೆ, ಹಾವಸಗಲ್ಲ ಮೆಟ್ಟಿ ಜಾರಿ ಬಿದ್ದು ಕೊಡನೊಡೆದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಸವಣ್ಣನುದ್ಧರಿಸಿದ ಭಕ್ತಿವಿಡಿದು, ಅಂಗದ ಮೇಲೆ ಲಿಂಗವ ಧರಿಸಿ ಗುರುಲಿಂಗಜಂಗಮವನಾರಾಧಿಸಿ, ಅವರೊಕ್ಕುದ ಕೊಂಡು ಮುಕ್ತರಾಗಲರಿಯದೆ, ಬೇರೆ ಇದಿರಿಟ್ಟು ನಂದಿ ವೀರಭದ್ರ ಮತ್ತೆ ಕೆಲವು ಲಿಂಗಂಗಳೆಂದು ಪೂಜಿಸುವ ಲಿಂಗದ್ರೋಹಿಯ ಮುಖವ ನೋಡಲಾಗದು. ಅದೇನು ಕಾರಣವೆಂದಡೆ: ಗಂಡನುಳ್ಳ ಸತಿ ಅನ್ಯಪುರುಷನನಪ್ಪುವಲ್ಲಿ ಪಾಣ್ಬರಪ್ಪರಲ್ಲದೆ ಸತ್ಯರಪ್ಪರೆರಿ ಅದು ಕಾರಣ - ಲಿಂಗವಂತನ ಕೈಯಲ್ಲಿ ಪೂಜಿಸಿಕೊಂಬ ಅನ್ಯಲಿಂಗಂಗಳೆಲ್ಲವು ಹಾದರಕ್ಕೆ ಹೊಕ್ಕ ಹೊಲೆಗೆಟ್ಟವಪ್ಪುವಲ್ಲದೆ ಅವು ಲಿಂಗಂಗಳಲ್ಲ. ತನ್ನ ಲಿಂಗದಲ್ಲಿ ಅವಿಶ್ವಾಸವ ಮಾಡಿ ಅನ್ಯಲಿಂಗಂಗಳ ಭಜಿಸುವಲ್ಲಿ ಆ ಲಿಂಗವಂತ ಕೆರ್ಪ ಕಚ್ಚಿದ ಶ್ವಾನನಪ್ಪನಲ್ಲದೆ ಭಕ್ತನಲ್ಲ. ಅದೆಂತೆಂದಡೆ: ಲಿಂಗದೇಹೀ ಶಿವಾತ್ಮಾಚ ಸ್ವಗೃಹಂ ಪ್ರತಿಪೂಜನಾತ್ (ಪೂಜನಂರಿ) ಉಭಯಂ ಪಾಪಸಂಬಂಧಂ ಶ್ವಾನಶ್ವಪಚಪಾದುಕೈಃ - ಎಂದುದಾಗಿ ಇದುಕಾರಣ, ಈ ಉಭಯವನು ಕೂಡಲಚೆನ್ನಸಂಗಯ್ಯ ಛಿದ್ರಿಸಿ ಚಿನಿಖಂಡವನಾಯ್ದು ದಿಗ್ಬಲಿ ಕೊಟ್ಟುಅಘೋರ ನರಕದಲ್ಲಿಕ್ಕುವನು
--------------
ಚನ್ನಬಸವಣ್ಣ
ಇನ್ನಷ್ಟು ... -->