ಅಥವಾ

ಒಟ್ಟು 130 ಕಡೆಗಳಲ್ಲಿ , 48 ವಚನಕಾರರು , 118 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನಚರಿಯೆಂಬ ಪಟ್ಟಣದಲ್ಲಿ ಕನಕರತಿಯೆಂಬರಸು, ಮನಸಿಜನೆಂಬ ಪ್ರಧಾನ, ಕನಸಕಂಡಡೆ ಅರಿವ ತಮಸೂನು ತಳವಾರ. ಇವರೆಲ್ಲರ ವಂಚಿಸಿ ಅರಸಿನ ಹೆಂಡತಿ ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದಳು. ಪ್ರಧಾನ ಕಂಡ; ಅರಸು ತಳವಾರ ಕಂಡುದಿಲ್ಲ. ಮನಸಿಜ ಕಂಡು ಬದುಕಿದೆ ಹೋಗೆಂದ. ಅರಸಿಗೆ ಕೂಪನಾದ; ಮಾನಹಾನಿಗೆ ಕೇಡಿಲ್ಲದಂತೆ. ಇಂತೀ ಭೇದವನರಿ, ಪಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಶೈವಸಿದ್ಧಾಂತಿಗಳಪ್ಪ ಕರ್ಮಕಾಂಡಿಗಳು ಸ್ಥಾವರಲಿಂಗದೆಡೆಯಲ್ಲಿ, ಹವನ ಹೋಮಾದಿ ಪವಿತ್ರಕಾರ್ಯವ ಕೈಕೊಂಡೆಡೆಯಲ್ಲಿ, ಉಚ್ಛಿಷ್ಟಾದಿ ಪಂಚಸೂತಕಗಳಂಟಿದಡೆ ಅವರು ಆ ಸೂತಕವ ಮಾನಿಸದೆ ಪರಿಶುದ್ಧಭಾವದಿಂದಿರ್ಪರು. ದೇವದೇವನಪ್ಪ ಮಹಾದೇವನನು ಲಿಂಗರೂಪದಿಂದ ಅಂಗದಲ್ಲಿ ಧರಿಸಿ ಪರಿಶುದ್ಧರಾದೆವೆಂದು ತಿಳಿಯದೆ ಸೂತಕವನಾಚರಿಸುವ ವ್ರತಗೇಡಿಗಳ ಎನಗೆ ತೋರದಿರಯ್ಯಾ_ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ, ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ ಹೇಳಯ್ಯಾ ನಿಮ್ಮ ಧರ್ಮ.
--------------
ಬಸವಣ್ಣ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
--------------
ಬಸವಣ್ಣ
ತ್ರಿವಿಧಮೂರ್ತಿಯು ಕೂಡಿ ಭಕ್ತನ ಅಂಗದಲ್ಲಿ ನಿಂದು, ತಮ್ಮ ಸಂದನಳಿವುದಕ್ಕೆ ಮಂದಿರವ ಕಟ್ಟಿದ ಅಂದವನರಿಯದೆ, ಕರ್ತೃ ಭೃತ್ಯನೆಂದು ಕೊಂಡಾಡಲೇತಕ್ಕೆ? ಕಾಯ ಜೀವಕ್ಕೆ ಹಂಗುಂಟೆ ಅಯ್ಯಾ? ಭಕ್ತನ ಸತ್ಯ ಸದಾಶಿವಮೂರ್ತಿಲಿಂಗದ ಕೃತ್ಯ.
--------------
ಅರಿವಿನ ಮಾರಿತಂದೆ
ಪರುಷ ಲೋಹವ ಸೋಂಕಿದಲ್ಲಿ ಆ ಗುಣವಳಿದು ಹೇಮವಾಯಿತ್ತಲ್ಲದೆ, ಪುನರಪಿ ಶುದ್ಧಾತ್ಮವಾದುದಿಲ್ಲ. ಗುರು ಲಿಂಗವೆಂದು ಕೊಟ್ಟಡೆ ಅಂಗದಲ್ಲಿ ಬಂಧವಾಯಿತ್ತಲ್ಲದೆ, ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ. ಇಂತಿದು ಕಾರಣದಲ್ಲಿ, ಕೆಂಡದ ಮೇಲೆ ಕಟ್ಟಿಗೆಯ ಹಾಕಿದಡೆ ಪೊತ್ತುವುದಲ್ಲದೆ, ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ? ಇದು ಕಾರಣ, ಸಂಸಾರಪಾಶದಲ್ಲಿ ಬಿದ್ದ ಗುರು ಇಂತೀ ಗುರುಸ್ಥಲನಿರ್ವಾಹಸಂಪಾದನೆ, ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ ರೂಪೋ, ವಿರೂಪೋ ? ಎಂಬುದ ತಾನರಿತಲ್ಲಿ, ಅಂಗ ಅರಿಯಿತ್ತೋ, ಆತ್ಮ ಅರಿಯಿತ್ತೋ ? ಇಂತೀ ಉಭಯದ ಸಂದಣಿಯಲ್ಲಿ ಗೊಂದಳಗೊಳಲಾರದೆ, ಆರಾರೆಂದಂತೆ ಆರೈಕೆಯಲ್ಲಿದ್ದು ; ತಾನು ತಾನಾದವಂಗೆ ಮತ್ತೇನೂ ಎನಲಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಅಂತಿರ್ದ ಬ್ರಹ್ಮದ ಅಂಗದಲ್ಲಿ ಜ್ಞಾನಚಿತ್ತು ಉದಯಿಸಿತ್ತು ನೋಡಾ. ಆ ಜ್ಞಾನಚಿತ್ತುವಿನಿಂದ ಪರಶಿವರು ಹುಟ್ಟಿದರು ನೋಡಾ. ಆ ಪರಶಿವರು ಹುಟ್ಟಿದಲ್ಲಿಗೆ ಸದಾಶಿವರು ಹುಟ್ಟಿದರು. ಆ ಸದಾಶಿವರು ಹುಟ್ಟಿದಲ್ಲಿಗೆ ಈಶ್ವರರು ಹುಟ್ಟಿದರು. ಆ ಈಶ್ವರರು ಹುಟ್ಟಿದಲ್ಲಿಗೆ ರುದ್ರರು ಹುಟ್ಟಿದರು. ಆ ರುದ್ರರು ಹುಟ್ಟಿದಲ್ಲಿಗೆ ವಿಷ್ಣುಗಳು ಹುಟ್ಟಿದರು. ಆ ವಿಷ್ಣುಗಳು ಹುಟ್ಟಿದಲ್ಲಿಗೆ ಬ್ರಹ್ಮರು ಹುಟ್ಟಿದರು. ಆ ಬ್ರಹ್ಮರು ಹುಟ್ಟಿದಲ್ಲಿಗೆ ಲೋಕಾದಿಲೋಕಂಗಳು ಸಚರಾಚರಂಗಳು ಹುಟ್ಟಿದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಖಂಡಿತವಳಿದು ಇಂದ್ರಿಯಂಗಳು ಅಖಂಡಿತವಾದವಯ್ಯಾ. ಖಂಡಿತವಳಿದು ತನ್ಮಾತ್ರೆಗಳು ಅಖಂಡಿತವಾದವಯ್ಯಾ. ಖಂಡಿತವಳಿದು ¨sõ್ಞತಿಕಂಗಳು ಅಖಂಡಿತವಾದವಯ್ಯಾ. ಪಂಚಭೂತಮಯವಾದ ಬ್ರಹ್ಮಾಂಡ ಶರಣನ ಅಂಗದಲ್ಲಿ ಪಂಚಬ್ರಹ್ಮವಾಯಿತ್ತಾಗಿ, ಇಷ್ಟ ಅಖಂಡಿತವಾಗಿ ಸೌರಾಷ್ಟ್ರ ಸೋಮೇಶ್ವರನ ಶರಣರು ಅಖಂಡಿತರಯ್ಯಾ.
--------------
ಆದಯ್ಯ
ಏರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಏರಬಲ್ಲುದೆ ? ವ್ರತಾಚಾರವ ಮೀರಿ ಕೆಟ್ಟ ಅನಾಚಾರಿ ಸದ್ಭಕ್ತರ ಕೂಡಬಲ್ಲನೆ ? ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ? ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ, ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ? ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು, ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಬಿಡಬೇಕು.
--------------
ಅಕ್ಕಮ್ಮ
ಅಂಗದಲ್ಲಿ ಆಚಾರಲಿಂಗಪ್ರಸಾದ ತಾನೆ, ಆತ್ಮನಲ್ಲಿ ಗುರುಲಿಂಗಪ್ರಸಾದ ತಾನೆ, ಪ್ರಾಣನಲ್ಲಿ ಶಿವಲಿಂಗಪ್ರಸಾದ ತಾನೆ, ಕರಣಂಗಳಲ್ಲಿ ಜಂಗಮಲಿಂಗಪ್ರಸಾದ ತಾನೆ, ವಿಷಯಂಗಳಲ್ಲಿ ಪ್ರಸಾದಲಿಂಗಪ್ರಸಾದ ತಾನೆ, ತೃಪ್ತಿಯಲ್ಲಿ ಮಹಾಲಿಂಗಪ್ರಸಾದ ತಾನೆ, ಸ್ಥೂಲಾಂಗದಲ್ಲಿ ನಿಷ್ಕಲಲಿಂಗಪ್ರಸಾದ ತಾನೆ, ಸೂಕ್ಷ್ಮಾಂಗದಲ್ಲಿ ಶೂನ್ಯಲಿಂಗಪ್ರಸಾದ ತಾನೆ, ಕಾರಣಾಂಗದಲ್ಲಿ ನಿರಂಜನಲಿಂಗಪ್ರಸಾದ ತಾನೆ, ಎನ್ನ ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿಪ್ಪ ಗುರುನಿರಂಜನ ಚನ್ನಬಸವಲಿಂಗಪ್ರಸಾದ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದಲ್ಲಿ ಲಿಂಗ! ಆ ಲಿಂಗ ಧ್ಯಾನದಲ್ಲಿಪ್ಪ ಒಡಲೊಡವೆ ಒಡೆಯರಿಗೆಂಬ; ಮಾಡಿ ಮನದಲ್ಲಿ ಹೊಳೆಯದೆ ಬಾಳೆ ಫಲದಂತಿಪ್ಪ ಮಾತಿನ ಬಟ್ಟೆಗೆ ಹೋಗದ; ಸೂತಕಶ್ರುತವ ಕೇಳದ; ಸದ್ಭಕ್ತರ ನೆನವುದೆ ಮಂತ್ರವಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದಲ್ಲಿ ಸೋಂಕಿದ ಸುಳುಹ ಮನವರಿದು, ಅಲ್ಲ ಅಹುದೆಂದು ಸಂದೇಹ ಬಿಟ್ಟಲ್ಲಿ ಅರ್ಪಿತವಲ್ಲದೆ, ಬಂದುದ ಬಂದಂತೆ, ಕಂಡುದ ಕಂಡಂತೆ, ದೃಕ್ಕಿಂಗೊಳಗಾದುದೆಲ್ಲವು ಲಿಂಗಾರ್ಪಿತವುಂಟೆ ? ಅರ್ಪಿಸಬಲ್ಲಡೆ ಅಲ್ಲ ಅಹುದೆಂಬುದ ಮುನ್ನವೆ ಅರಿದು, ಆ ಮನ ಲಿಂಗದೊಳಗಡಗಿ, ಅಂಬಿನ ಕಣೆಯಂತೆ ಮನ ಲಿಂಗದ ಅನು. ಈಶಾನ್ಯಮೂರ್ತಿ ಮಲ್ಲಿಕಾರ್ಜುನದ ಘನ
--------------
ಶಿವಲೆಂಕ ಮಂಚಣ್ಣ
ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ ವ್ಯಾದ್ಥಿಯ ಚಿಕಿತ್ಸೆಯನಾರು ಅರಿಯರಲ್ಲಾ ! ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ , ಆತ್ಮಂಗೆ ಆಣವ, ಮಾಯಾ, ಕಾರ್ಮಿಕ. ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ, ಬಂಧನದಲ್ಲಿ ಸಾವುತ್ತಿದೆ ಅಂಗ. ಈ ರೋಗ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ. ಒಂದ ಅಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ, ಒಂದ ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು. ಇದಕ್ಕನುಪಾನ ಇದಿರೆಡೆಯಿಲ್ಲ , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಇನ್ನಷ್ಟು ... -->