ಜೀವಪಶುಗಳಂ ಕೊಲ್ವ ಕಾಲವ್ಯಘ್ರನಂ ಸಂಹರಿಸಿ,
ತತ್ವರೂಪಮಪ್ಪ ವಿಚಿತ್ರವರ್ಣಮಪ್ಪ ದಿಗ್ವಸನಮುಳ್ಳುದರಿಂ
ವ್ಯಾಘ್ರಚರ್ಮಾಂಬರಧಾರಿಯಾದೆ.
ನಿನ್ನ ಶಿರಸ್ಸಿನ ಮೇಲೆ ಕರ್ಮಕೇಶಂಗಳಿಲ್ಲದೆ
ನವಗ್ರಹಸ್ವರೂಪ ಪುಷ್ಪಗಳಿಂ ಪರಿಶೋಭಿಯಾಗಿರುವುದರಿಂದ
ಗಗನಕೇಶಿಯಾದೆ.
ಅಸ್ಥಿರೂಪಮಾದುದೇ ವಜ್ರವು, ಆವಜ್ರವೇ ಪುರುಷರತ್ನವು,
ಅದು ಚ್ಯುತಿಯಿಲ್ಲದ್ದು,
ರತ್ನಂಗಳೆಂಬ ಆವಯವಂಗಳಗೆ ಶಿರೋರೂಪಮಾಗಿಹುದು,
ಅದೇ ನಿರ್ಮಲಸ್ವರೂಪಮಪ್ಪ ಜ್ಞಾನವೆಂಬ ಭಾವವು.
ಅಂತಪ್ಪ ನಿರ್ಮಲಜ್ಞಾನದಿಂ ಶೋಭಿಸಲ್ಪಟ್ಟುದರಿದಂ ಅಸ್ಥಿಮಾಲಾಧರನಾದೆ.
ಶೇಷನೇ ಮತಿಸ್ವರೂಪ, ಆಮತಿಯೇ ವಿವೇಕವು,
ಅದಕ್ಕೆ ಭಾವವೇ ಶಿರಸ್ಸು,
ಆ ಭಾವಸಹಸ್ರಮುಖದಲ್ಲಿ ಶೋಭಿಸುತ್ತಿರ್ಪ ಜ್ಞಾನರತ್ನಂಗಳಿಂ
ಮನವೆಂಬ ಪೃಥ್ವಿಗಾಧಾರಮಾಗಿರ್ಪ
ವಿವೇಕಸರ್ಪಪ್ರಕಾಶದಿಂದೊಪ್ಪುತಿರ್ಪುದರಿಂ ನಾಗಾಭರಣನಾದೆ.
ಪೃಥಿವ್ಯಾದಿ ಪಂಚಭೂತಂಗಳಿಗೊಡೆಯನಾದುದರಿಂದ ಭೂತಪತಿಯಾದೆ.
ಕಾಲನಿಂ ಕೋಟಲೆಗೊಳುತಿರ್ಪ ಜೀವಂಗಳ ಮೇಲೆ ದಯೆಯಿಂ
ಕಾಲಂಗೆ ಕಾಲರೂಪಮಾದ ನಿನ್ನ ಪ್ರಳಯಕಾಲದಲ್ಲಿ
ಸಕಲಪ್ರಪಂಚಮಂ ಸುಜ್ಞಾನಾಗ್ನಿಯಲ್ಲಿ ದಹಿಸಿ ತದ್ಭಸ್ಮಮಂ ಧರಿಸಿ,
ಪ್ರಾಣಿಗಳ ಭವತಾಪಮಂ ತಣ್ಣನೆಮಾಡಿ,
ತತ್ಪ್ರಪಂಚಸಂಹಾರಾಸ್ಥಾನವಾಸಿಯಾಗಿರ್ಪುದರಿಂ ಭಸ್ಮಧಾರಿಯೂ,
ನಾಲ್ಕು ವೇದಂಗಳು ನಾಲ್ಕುಪಾದಂಗಳಾಗಿ, ಬ್ರಹ್ಮಮುಖದಲ್ಲಿ ಗಮಿಸುತಿರ್ಪ
ನಿರ್ಮಲಧರ್ಮರಥಾರೂಢನಾಗಿರ್ಪುದರಿಂದ ನಂದಿವಾಹನಾರೂಢನಾದೆ.
ಇಂತಪ್ಪ ನಿನ್ನ ಸುಮಂಗಳ ಸ್ವರೂಪಮಂ ನಾನರಿಯದೆ,
ಅಮಂಗಲಗಳನ್ನೇ ಭಾವಿಸಿ, ಅಪರಾಧಿಯಾಗಿರ್ಪೆನ್ನ ದುರ್ಗುಣಂಗಳಂ
ನಿನ್ನಾಗ್ರಹವೆಂಬ ಚಿದಗ್ನಯಿಂ ದಹಿಸಿ,
ಕೋಪಾಂತದಲ್ಲಿಬಪ್ಪ ಪರಮಶಾಂತಿಯೊಳು ನನ್ನನಿಟ್ಟು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.