ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವೇ, ನೀನು ನನ್ನ ಲಿಂಗಕ್ಕೆ ಮಂಗಳಸೂತ್ರವಂ ಕಟ್ಟಿ ಕೊಟ್ಟಂದಿಂದ ಅನ್ಯವನರಿಯದೆ, ಆ ಲಿಂಗದಲ್ಲೇ ನಡೆವುತ್ತಿರ್ಪೆನು, ಆ ಲಿಂಗದಲ್ಲೇ ನುಡಿವುತ್ತಿರ್ಪೆನು, ಆ ಲಿಂಗದ ನಟನೆಯಂ ನೆನವುತ್ತಿರ್ಪೆನು, ಆ ಲಿಂಗದ ಮಹಿಮೆಯನೆ ಪಾಡುತ್ತಿರ್ಪೆನು, ಆ ಲಿಂಗವನೆ ಬೇಡುತ್ತಿರ್ಪೆನು, ಆ ಲಿಂಗವನೆ ಕಾಡುತ್ತಿರ್ಪೆನು, ಆ ಲಿಂಗವನೆ ಕೊಸರುತ್ತಿರ್ಪೆನು, ಆ ಲಿಂಗವನೆ ಅರಸುತ್ತಿರ್ಪೆನು, ಆ ಲಿಂಗವನೆ ಬೆರಸುತ್ತಿರ್ಪೆನು, ಆ ಲಿಂಗವಲ್ಲದೆ ಮತ್ತಾರನೂ ಕಾಣೆನು, ಮತ್ತಾರಮಾತನೂ ಕೇಳೆನು, ಮತ್ತಾರನೂ ಮುಟ್ಟೆನು, ಮತ್ತಾರನೂ ತಟ್ಟೆನು. ಲಿಂಗವು ನಾನು ಇಬ್ಬರೂ ಇಲ್ಲದ ಕಾರಣ ಎಲ್ಲವೂ ನನಗೆ ಏಕಾಂತಸ್ಥಾನವಾಯಿತ್ತು. ಎಲ್ಲೆಲ್ಲಿಯೂ ಯಾವಾಗಲೂ ಎಡೆವಿಡದೆ ಲಿಂಗದಲ್ಲೇ ರಮಿಸುತಿರ್ದೆನು. ಲಿಂಗದಲ್ಲೇ ಕಾಲವ ಕ್ರಮಿಸುತ್ತಿರ್ದೆನು ಲಿಂಗದಲ್ಲೇ ಎನ್ನಂಗಗುಣಂಗಳಂ ಕ್ಷಮಿಸುತ್ತಿರ್ದೆನು ಲಿಂಗದೊಳಗೆ ನನ್ನ, ನನ್ನೊಳು ಲಿಂಗದ ಚಲ್ಲಾಟವಲ್ಲದೆ, ಬೇರೊಂದು ವಸ್ತುವೆನಗೆ ತೋರಲಿಲ್ಲ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ, ಮಂತ್ರವೆಂಬ ಜನನಿಯ ವಿವೇಕವೆಂಬ ಸ್ತನಗಳೊಳ್ ತುಂಬಿರ್ಪ ಅನುಭವಾಮೃತರಸವನೆರೆದು, ಆಚಾರಕ್ಷೇತ್ರದಲ್ಲಿ ಬೆಳೆಸುತ್ತಿರಲು, ಅನೇಕ ಕಳೆಗಳಿಂ ಕೂಡಿದ ದಿವ್ಯಜ್ಞಾನವೆಂಬ ಯೌವನಂ ಪ್ರಾದುರ್ಭವಿಸಿ, ಸತ್ಕರ್ಮವಾಸನೆಯಿಂ ಪೋಷಿತನಾಗಿರ್ಪೆನಗೆ ಮಹಾಲಿಂಗಮೊಲಿದು, ನಿನ್ನ ಭಾವದಲ್ಲಿ ಬಂದು, ಹೃದಯದಲ್ಲಿ ನಿಂದು ಕೇಳಲು, ನೀನು ಆ ಲಿಂಗಕ್ಕೆ ಮಂಗಳಸೂತ್ರಮಂ ಕಟ್ಟಿ, ಕಲಶಕನ್ನಡಿಗಳನ್ನಿಕ್ಕಿ ಪಾಣಿಗ್ರಹಣಮಂ ಮಾಡಿ ಕೊಟ್ಟಬಳಿಕ, ರತಿಯನನುಭವಿಸಿ, ಲಿಂಗಸುಖವಂ ತನಗೀವುತ್ತಿರ್ಪನಯ್ಯಾ. ಆ ಮೇಲೆ ತನ್ನ ಮನದ ಹೆದರಿಕೆಯಂ ಬಿಡಿಸಿ, ಅಂತರಂಗಕ್ಕೆ ಕರೆದುಕೊಂಡುಬಂದು, ನಿಜಪ್ರಸಾದ ರಸದಂಬುಲವಿತ್ತು, ತನ್ನೊಡನೆ ಕೂಡುವ ಚಾತುರ್ಯಮಾರ್ಗಂಗಳಂ ಕಲಿಸುತ್ತ, ಆ ಲಿಂಗಂ ತಾನೇ ತನಗೆ ಗುರುವಾದನಯ್ಯಾ. ಆ ಮೇಲೆ ಭಾವದಲ್ಲಿ ನನ್ನ ಕೂಡಣ ಚಲ್ಲಾಟದಿಂದ ಸಂಚರಿಸುತ್ತಾ, ತಾನೇ ಜಂಗಮವಾದನಯ್ಯಾ. ತನ್ನ ಭಾವದಲ್ಲಿರ್ಪ ಇಂದ್ರಿಯವಿಷಯಂಗಳೆಲ್ಲಾ ಪುಣ್ಯಕ್ಷೇತ್ರಂಗಳಾದವಯ್ಯಾ. ಶರೀರವೇ ವಿಶ್ವವಾಯಿತ್ತಯ್ಯಾ, ತಾನೇ ವಿಶ್ವನಾಥನಯ್ಯಾ. ಪಂಚಭೂತಂಗಳೇ ಪಂಚಕೋಶವಾಯಿತ್ತಯ್ಯಾ. ಆ ಲಿಂಗಾನಂದವೇ ಭಾಗೀರಥಿಯಾಯಿತ್ತಯ್ಯಾ. ಆ ಲಿಂಗದೊಳಗಣ ವಿನಯವೇ ಸರಸ್ವತಿಯಾಗಿ, ಆ ಲಿಂಗದ ಕರುಣವೇ ಯಮುನೆಯಾಗಿ, ತನ್ನ ಶರೀರವೆಂಬ ದಿವ್ಯ ಕಾಶೀಕ್ಷೇತ್ರದಲ್ಲಿ ಹೃದಯವೆಂಬ ತ್ರಿವೇಣೀ ಮಣಿಕರ್ಣಿಕಾಸ್ಥಾನದಲ್ಲಿ ನೆಲಸಿ, ಸಕಲ ಗುಣಂಗಳೆಂಬ ಪುರುಷ ಋಷಿಗಳಿಂದ ಅರ್ಚಿಸಿಕೊಳ್ಳುತ್ತಾ ನಮ್ಮೊಳಗೆ ನಲಿದಾಡುತ್ತಿರ್ದನಯ್ಯಾ. ತನ್ನ ನಿಜಮತದಿಂ ವಿಶ್ವಸ್ವರೂಪ ಕಾಶೀಕ್ಷೇತ್ರವನು ರಕ್ಷಿಸುತಿರ್ಪ ಅನ್ನಪೂರ್ಣಾಭವಾನಿಗೂ ತನಗೂ ಮತ್ಸರಮಂ ಬಿಡಿಸಿ, ತನಗೆ ಅನ್ನಪೂರ್ಣಭವಾನಿಯೇ ಆಸ್ಪದಮಾಗಿ, ಆ ಅನ್ನಪೂರ್ಣೆಗೆ ತಾನೇ ಆಸ್ಪದಮಾಗಿರ್ಪಂತನುಕೂಲವಿಟ್ಟು ನಡಿಸಿದನಯ್ಯಾ. ಇಂತಪ್ಪ ದಿವ್ಯಕ್ಷೇತ್ರದಲ್ಲಿ ನಿಶ್ಚಿಂತಮಾಗಿ ಆ ಪರಮನೊಳಗೆ ಅಂತರಂಗದರಮನೆಯಲ್ಲಿ ನಿರ್ವಾಣರತಿಸುಖವನನುಭವಿಸುತ್ತಾ ಆ ಲಿಂಗದಲ್ಲಿ ಲೀನಮಾಗಿ ಪುನರಾವೃತ್ತಿರಹಿತ ಶಾಶ್ವತ ಪರಮಾನಂದರತಿಸುಖದೊಳೋಲಾಡುತ್ತಿರ್ದೆನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಗೋಳಕಾಕಾರಮಾದ ಮಹಾಲಿಂಗವೇ ಬೀಜ, ಅದು ಸಕಲಪ್ರಪಂಚಗಳನ್ನು ತನ್ನೊಳಗಿಟ್ಟುಕೊಂಡು, ಸಕಲಕ್ಕೂ ತಾನೇ ಕಾರಣಮಾಗಿಹುದು. ಅಂತಪ್ಪ ಮಹಾಲಿಂಗವು ಗುರುತಂತ್ರದಿಂ ಭಕ್ತಕ್ಷೇತ್ರದಲ್ಲಿ ತಾನೊಂದೆರಡಾದಲ್ಲಿ, ಶಿವಶಕ್ತಿಸ್ವರೂಪಮಾದ ವರ್ಣಶಾಖೆಗಳು ಅಭೇದಮಾಗಂಕುರಿಸಿ, ಪರ್ಣದಿಂದ ಶಾಖೆಯು ಬಲಿದು, ಶಾಖೆಯಿಂದ ಪರ್ಣವು ಬಲಿದು, ಅಂತಪ್ಪ ಶಾಖಾರೂಪಮಾದ ಮುಖಂಗಳಿಂದೊಪ್ಪುತಿರ್ಪ ವೃಕ್ಷವೇ ರುದ್ರನು. ಆ ಪರ್ಣವೇ ವಿಷ್ಣು, ಫಲವೇ ಬ್ರಹ್ಮ, ಪುಷ್ಪವೇ ಪೃಥ್ವೀ, ಫಲವೇ ಜಲ, ನನೆಯೇ ಅಗ್ನಿ, ಪರ್ಣವೇ ವಾಯು, ಆ ವೃಕ್ಷವೇ ಆಕಾಶ, ಬೀಜವೇ ಆತ್ಮ. ಅಂತಪ್ಪ ಬೀಜಕ್ಕೆ ನಿಂದಲ್ಲಿ ಫಲವರ್ಣಶಾಖೆಗಳು ವರ್ಧಿಸಿ, ಸುಖವಂ ಕೊಡುತಿರ್ಪವು. ಲಿಂಗಾರ್ಚನೆಯಂ ಮಾಡಿದಲ್ಲಿ, ಸಕಲ ದೇವತೆಗಳು ತೃಪ್ತರಾಗಿ ವರ್ಧಿಸುತಿರ್ಪರಾದ ಕಾರಣ, ವೀರಶೈವಮತದಲ್ಲಿ ಆತ್ಮಸ್ವರೂಪಮಾದ ಬೀಜ ಒಂದೆರಡಾದುದೇ ಇಷ್ಟ ಪ್ರಾಣಗಳು. ಫಲಮಧ್ಯದಲ್ಲನಂತರೂಪಮಾಗಿ ಸಕಲ ಪ್ರಪಂಚವಂ ತನ್ನೊಳಗಿಟ್ಟುಕೊಂಡು ತನ್ನನು ತಿಳಿದು ಸೃಷ್ಟಿಗೆ ತಾನೇ ಕಾರಣಮಾಗಿ, ಪರಮಾನಂದಮಹೀರುಹವು ಫಲಿಸಿ ತೃಪ್ತಿರೂಪಮಾಗಿ ಆ ಪ್ರಪಂಚಕ್ಕೆ ತಾನೇ ಕಾರಣಮಾಗಿ, ಮಿಕ್ಕವೆಲ್ಲಾ ಮಿಥ್ಯವಾಗಿ ತೋರುತ್ತಿರ್ಪುದೇ ಭಾವಲಿಂಗವು. ಅಂತಪ್ಪ ಭಾವಲಿಂಗಸಂಗದಲ್ಲಿ ನಿಸ್ಸಂಗ ನಿರ್ಭಾವಮಾದ ನಿತ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಗುರುವು ಮನದಲ್ಲಿ ಮಂತ್ರವನ್ನೂ, ತನುವಿನಲ್ಲಿ ಲಿಂಗವನ್ನೂ ಸ್ಥಾಪಿಸಿ, ಕರುಣರಸವನೆರೆಯಲಾಮಂತ್ರವು ಜಿಹ್ವೆಯಲ್ಲಂಕುರಿಸಿ, ಶರೀರವನಾವರಿಸಲಾ ಶರೀರದ ಭೂತತ್ವವಳಿದು, ಮಂತ್ರವೇ ಶರೀರವಾಯಿತ್ತು. ಲಿಂಗವು ನೇತ್ರದಲ್ಲಂಕುರಿಸಿ, ಮನಮನಾವರಿಸಿ, ಮನದ ಅಹಂಕಾರವಂ ತೊಲಗಿಸಿ, ಆ ಮನವೇ ಲಿಂಗವಾಯಿತ್ತು. ಮಂತ್ರವೇ ತನುವಾಗಿ ಮನವೇ ಲಿಂಗವಾದಲ್ಲಿ, ನಾಮಮಧ್ಯದಲ್ಲಿ ಪುರುಷನಿರ್ಪಂತೆ ಮಂತ್ರಮಧ್ಯದಲ್ಲಿ ಲಿಂಗವಿರ್ಪುದು ಸಹಜಮಾಯಿತ್ತು . ತನುಮನೋಮಧ್ಯದಲ್ಲಿರ್ಪ ಪ್ರಾಣಲಿಂಗವು ಮಂತ್ರದಲ್ಲಿ ಲೀನಮಾಯಿತ್ತು. ಮಂತ್ರದಲ್ಲಿ ಜಾಗ್ರ ಲಿಂಗದಲ್ಲಿ ಸುಷುಪ್ತಿ ನೆಲೆಗೊಂಡು, ಪ್ರಪಂಚವೆಲ್ಲಾ ಸ್ವಪ್ನಸ್ವರೂಪಮಾಗಿ, ಮಂತ್ರದಲ್ಲಿ ಜ್ಞಾನವು, ಲಿಂಗದಲ್ಲಿ ಆನಂದವು, ಈ ಎರಡರ ಸಂಗವೇ ನಿಜವು, ನಿಜವೇ ತಾನಾಗಿ, ತನ್ನಿಂದನ್ಯವೇನೂ ಇಲ್ಲದುದೆ ಕೇವಲ ಕೈವಲ್ಯವೆನಿಸುವುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ