ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು ರಾಜಿಸುತಿಪ್ಪನು ನೋಡಾ! ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು. ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ. ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಲಿಂಗಕ್ಕೆ ಮುನ್ನೂರು ಮುಖ, ಆರುಸಾವಿರ ಹಸ್ತ, ಮೂವತ್ತಾರು ಲಕ್ಷ ಪಾದಂಗಳು, ನವಕೋಟಿ ಮನೆಗಳಲ್ಲಿ ಸುಳಿದಾಡುತಿಪ್ಪನು ನೋಡಾ. ಆ ನವಕೋಟಿಬಾಗಿಲ ಮುಚ್ಚಿ ನೋಡಲು, ಕಡೆಯ ಬಾಗಿಲಲ್ಲಿ ಕಪ್ಪೆ ಕುಳಿತು ಕೂಗುತ್ತಿದೆ ನೋಡಾ. ಆ ಕೂಗಿನ ಶಬ್ದವ ಕೇಳಿ, ಪಾತಾಳಲೋಕದಲ್ಲಿಪ್ಪ ಸರ್ಪನೆದ್ದು, ಆ ಕಪ್ಪೆಯ ನುಂಗಿ, ತನ್ನ ಸುಳುವ ತಾನೇ ತೋರುತಿಪ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಬ್ಬ ಕನ್ನೆಯ ಮನೆಯೊಳಗೆ ಐವರು ಪುರುಷರ ಕಂಡೆನಯ್ಯ. ಆ ಐವರು ಪುರುಷರ ಒಂದು ಇರುವೆ ನುಂಗಿತ್ತು ನೋಡಾ. ಆ ಇರುವೆಯ ನಿರ್ವಯಲು ನುಂಗಿ ನಿಃಶಬ್ದವಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಬ್ಬ ಸತಿಯಳು ಪಂಚಮುಖದ ಸರ್ಪನ ಸಾಕುವುದ ಕಂಡನಯ್ಯ. ಮೇಲಿಂದ ಒಬ್ಬ ಗಾರುಡಿಗನು ನಾಗಸ್ವರವನೂದಲು ಆ ಸರ್ಪ ನಾಗಸ್ವರದ ನಾದವ ಕೇಳಿ ಆ ಗಾರುಡಿಗನ ನುಂಗಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂಬತ್ತು ಬಾಗಿಲ ಮನೆಯೊಳಗೆ ತುಂಬಿಕೊಂಡಿಪ್ಪ ಮಹಾಲಿಂಗವ ಕಂಡೆನಯ್ಯ. ಆ ಲಿಂಗದ ಸಂಗದಿಂದ ನಾನುನೀನೆಂಬುದ ಮರೆದು ಅವಿರಳಸ್ವಾನುಭಾವಸಿದ್ಧಾಂತವನರಿತು ನಿರಂಜನದೇಶಕೆ ಹೋಗಿ ನಿರವಯವನೈದಿದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಕಪ್ಪೆ ನವಗ್ರಹಗಳ ನುಂಗಿ ಕೂಗುತ್ತಿದೆ ನೋಡಾ. ಆ ಕೂಗ ಕೇಳಿ ಒಂದು ಸರ್ಪನು ಸ್ವರ್ಗ ಮತ್ರ್ಯ ಪಾತಾಳವನೊಡೆದು ನಿರ್ವಯಲೆಂಬ ಆದಿಯನೇರಿ ಆ ಕಪ್ಪೆಯ ನುಂಗಿರ್ದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಬ್ಬ ಶಿವನ ಕರಸ್ಥಲದಲ್ಲಿ ಐದು ಲಿಂಗವ ಕಂಡೆನಯ್ಯ. ಐದು ಲಿಂಗಕ್ಕೆ ಇಪ್ಪತ್ತೈದು ಮುಖವ ಕಂಡೆನಯ್ಯ. ಆ ಮುಖಂಗಳಲ್ಲಿ ಜ್ಞಾನಶಕ್ತಿ ಉದಯವಾದಳು ನೋಡಾ. ಆ ಸತಿಯಳ ಅಂಗನು ಕೂಡೆ, ಆ ಶಿವನ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಬ್ಬ ಮಾನವನ ಕರಸ್ಥಲದಲ್ಲಿ ಮೂರು ಲಿಂಗವ ಕಂಡೆನಯ್ಯ. ಮೂರು ಲಿಂಗದಲ್ಲಿ ಆರು ಕೇರಿಯ ಕಂಡೆನಯ್ಯ. ಆರು ಕೇರಿಯಲ್ಲಿ ಒಂಬತ್ತು ದೇಗುಲವ ಕಂಡೆನಯ್ಯ. ಆ ಒಂಬತ್ತು ದೇಗುಲದ ಮೇಲೆ ಒಂದು ಶಿವಾಲಯವಿರ್ಪುದು ನೋಡಾ. ಆ ಶಿವಾಲಯವ ಪೊಕ್ಕು, ಆ ಮಾನವನ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂಬತ್ತು ಮನೆಯೊಳಗೆ ಸುಳಿದಾಡುವ ಮಾನವಂಗೆ ಐವರು ಮಕ್ಕಳು ಹುಟ್ಟಿದರು ನೋಡಾ ! ಮೇಲಿಂದ ಒಬ್ಬ ಸತಿಯಳು ಐವರು ಮಕ್ಕಳ ಕೂಡಿಕೊಂಡು ಆ ಮಾನವನ ನುಂಗಿ, ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಳಗೆ ನೋಡಿದರೆ ನಿರಾಕುಳಲಿಂಗವು. ಹೊರಗೆ ನೋಡಿದರೆ ನಿರಾಕುಳಲಿಂಗವು. ಒಳಹೊರಗೆ ಪರಿಪೂರ್ಣವಾದ ಶರಣಂಗೆ ಇಹಲೋಕವೆಂದಡೇನಯ್ಯಾ? ಪರಲೋಕವೆಂದಡೇನಯ್ಯಾ? ಇಹಪರವನೊಳಕೊಂಡು ತಾನು ತಾನಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಮುಳ್ಳುಮೊನೆಯ ಮೇಲೆ ಅರವತ್ತು ಆರು ಕೋಟಿ ಪಟ್ಟಣಂಗಳು ಪುಟ್ಟಿಇದ್ದಾವು ನೋಡಾ ! ಪಾತಾಳಲೋಕದಲ್ಲಿ ಆಧಾರವೆಂಬ ಠಾಣ್ಯ; ಬ್ರಹ್ಮನೆಂಬ ಮುಜುಮದಾರ. ಮತ್ರ್ಯಲೋಕದಲ್ಲಿ ಸ್ವಾಧಿಷ*ವೆಂಬ ಠಾಣ್ಯ; ವಿಷ್ಣುವೆಂಬ ಹುದ್ದೆಯದಾರ. ಸ್ವರ್ಗಲೋಕದಲ್ಲಿ ಮಣಿಪೂರಕವೆಂಬ ಠಾಣ್ಯ; ರುದ್ರನೆಂಬ ಮಹಲದಾರ. ತತ್ಪುರುಷಲೋಕದಲ್ಲಿ ಅನಾಹತವೆಂಬ ಠಾಣ್ಯ; ಈಶ್ವರನೆಂಬ ಗೌಡ . ಈಶಾನ್ಯಲೋಕದಲ್ಲಿ ವಿಶುದ್ಧಿಯೆಂಬ ಠಾಣ್ಯ; ಸದಾಶಿವನೆಂಬ ಪ್ರಧಾನಿ. ಅಂಬರಲೋಕದಲ್ಲಿ ಆಜ್ಞೇಯವೆಂಬ ಠಾಣ್ಯ; ಪರಶಿವನೆಂಬ ಅರಸು. ನಾದಲಕ್ಷ ಬಿಂದುಲಕ್ಷ ಕಳಾಲಕ್ಷ ಇಂತೀ ತ್ರಿವಿಧಲಕ್ಷವನೊಳಕೊಂಡು ಪರಶಿವನೆಂಬ ಅರಸು ಕೂಡಿ ವಿಶ್ವತೋ ಬೆಳಗಿಂಗೆ ಬೆಳಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂಬತ್ತು ಮಂದಿರದೊಳಗೆ ತುಂಬಿಕೊಂಡಿರ್ಪ ಮಹಾಘನಲಿಂಗವ ಕಂಡೆನಯ್ಯ. ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ನಿಂದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ನಿತ್ಯನಿಜದಾರಂಭಕ್ಕೆ ಹೋಗಿ ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಳಹೊರಗೆ ಪರಿಪೂರ್ಣವಾಗಿಹ ಮೂಲ ಪ್ರಣವವ ತಿಳಿದು ಪರಮಾನಂದದೊಳು ಕೂಡಿ ಅತ್ತತ್ತಲೆ ಪರಕೆಪರವಶವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಬಿಚ್ಚಿ ಮೂರಾದುದ ಕಂಡೆನಯ್ಯ. ಮೂರು ಬಿಚ್ಚಿ ಆರಾದುದ ಕಂಡೆನಯ್ಯ. ಆರು ಬಿಚ್ಚಿ ಮೂವತ್ತಾರಾದುದ ಕಂಡೆನಯ್ಯ. ಮೂವತ್ತಾರರಲ್ಲಿ ಒಬ್ಬ ಸತಿಯಳಿಪ್ಪಳು. ಆ ಸತಿಯಳು ಆರು ಕೇರಿಯ ಪೊಕ್ಕು, ಮೂರು ಬಾಗಿಲ ಮುಚ್ಚಿ, ಮೀರಿದ ಲಿಂಗದಲ್ಲಿ ತಾನು ತಾನಾಗಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಲಿಂಗದ ಸಂಗದಿಂದ ಮೂವರು ಪುರುಷರು ಹುಟ್ಟಿದರು ನೋಡಾ! ಅವರಿಂಗೆ ಆರು ಮಂದಿ ಅಂಗನೆಯರ ಮದುವೆಯ ಮಾಡಿ ಒಬ್ಬ ಕುಂಟಿಣಿಗಿತ್ತಿಯು ಬಂದು ಆರು ಮಂದಿ ಅಂಗನೆಯರ ಮೂವರು ಗಂಡರಿಗೆ ಕೊಟ್ಟು ಆ ಕುಂಟಿಣಿಗಿತ್ತಿಯು ಲಿಂಗದೊಳು ಮಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಳಹೊರಗೆ ಪರಿಪೂರ್ಣವಾದ ನಿಃಕಲಪರಬ್ರಹ್ಮಲಿಂಗದೊಳು ಕೂಡಿ ನಿಃಪ್ರಿಯವಾದ ಮಹಾಮಹಿಮನ ಕಂಡು ನಿಶ್ಚಿಂತನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂಬತ್ತು ಬಾಗಿಲ ತ್ರಿಪುರದ ಮುಂದೆ ಸ್ವಯಂಪ್ರಕಾಶವೆಂಬ ಲಿಂಗವ ಕಂಡೆನಯ್ಯ. ಆ ಲಿಂಗದ ಕಿರಣದೊಳಗೆ ಐವರು ಶಕ್ತಿಯರ ಕಂಡೆನಯ್ಯ. ಒಬ್ಬ ಪುರುಷನು ಪರಬ್ರಹ್ಮದ ನಿಲವಿಂಗೆ ಹೋದೇನು ಹೋಗೆನೆಂದರೆ ತನ್ನ ಸುಳುವಿನ ಭೇದವ ತಾನೇ ನುಂಗಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಳಗ ಹೊರಗು ನುಂಗಿ, ಹೊರಗ ಒಳಗು ನುಂಗಿ, ಒಳ ಹೊರಗೆ ಇಲ್ಲದೆ, ಬೆಳಗಿಂಗೆ ಬೆಳಗು ನುಂಗಿ, ಬೆಳಗು ತನ್ಮಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ದಾರಿಯ ಮೇಲೆ ಎರಡು ಮಿಕವಿಪ್ಪವು ನೋಡಾ. ಎರಡು ಮಿಕವಿಪ್ಪಲ್ಲಿ ಮೂರು ಕೇರಿಗಳಿಪ್ಪವು ನೋಡಾ. ನಾಲ್ವರು ಪುರುಷರು ಐವರ ಸಂಗವ ಮಾಡಿ, ಆರು ದೇಶವ ಪೊಕ್ಕು, ಏಳು ಸಾಗರವ ದಾಂಟಿ, ಅಷ್ಟಕುಲ ಪರ್ವತವ ಮೆಟ್ಟಿ, ಒಂಬತ್ತು ದ್ವಾರಂಗಳ ದಾಂಟಿ, ಹತ್ತನೆಯ ಮನೆಯಲ್ಲಿ ನಿಂದು, ಬರಿದಾದ ಮನೆಗೆ ಹೋಗಿ ಬರುವ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಲ್ಲೆನೆಂಬ ಭಾವವು ಎಲ್ಲರಿಗೂ ಸಲ್ಲದು ಬಿಡಿರೊ. ಬಲ್ಲೆಬಲ್ಲೆನೆಂದು ನಾನಾ ದೇವ ದಾನವ ಮಾನವರು ಅಳಿದರು ನೋಡಾ. ಇದು ಶಿವನೊಲಿದ ಜ್ಞಾನವು, ಭಾವ ಬೆರಗಾದ ಕಾರಣ ಉದಯವಾಯಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂಬತ್ತು ಬಾಗಿಲ ಮನೆಯೊಳಗೆ ಅಂಬರಗಿತ್ತಿಯ ಕಂಡೆನಯ್ಯ. ಆ ಅಂಬರಗಿತ್ತಿಯು ಶಂಭುನಾರೇರ ಕೂಡಿಕೊಂಡು, ಸಾವಿರೆಸಳಮಂಟಪಕೆ ಹೋಗಿ, ಚಿದುಲಿಂಗಾರ್ಚನೆಯ ಮಾಡಿ, ಚಿದಾನಂದಸ್ವರೂಪವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಲಿಂಗದ ಸಂಗದಿಂದ ಒಬ್ಬ ಭಾಮಿನಿಯು ಹುಟ್ಟಿದಳು ನೋಡಾ! ಆಕೆಯ ಒಡಲಲ್ಲಿ ಸ್ವರ್ಗ ಮತ್ರ್ಯ ಪಾತಾಳವ ಕಂಡೆನಯ್ಯ. ಈರೇಳುಭುವನ ಹದಿನಾಲ್ಕು ಲೋಕಂಗಳ ಕಂಡೆನಯ್ಯ. ಅಷ್ಟಕುಲಪರ್ವತವ ಕಂಡೆನಯ್ಯ. ಸಪ್ತೇಳು ಸಾಗರವ ಕಂಡೆನಯ್ಯ. ಹತ್ತು ಮೇರುವೆಯ ಮೀರಿ, ಕಡೆಯ ಬಾಗಿಲ ಮುಂದೆ ನಿಂದಿರುವುದ ಕಂಡೆನಯ್ಯ. ಅಲ್ಲಿಂದತ್ತತ್ತ ತನ್ನ ಗಮನವ ತಾನೇ ನುಂಗಿ, ನಿರ್ವಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದು ಗುಡಿಯೊಳಗೆ ಮೂರು ಲಿಂಗವ ಕಂಡೆನಯ್ಯ. ನವಗೃಹಂಗಳ ಮೀರಿ ನಿಂದಿರುವ ಪುರುಷನ ಕಂಡು ಎನ್ನ ಮನದ ಭ್ರಾಂತು ಹಿಂಗಿತು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂಬತ್ತು ಬಾಗಿಲ ಮನೆಯೊಳಗೆ ಆರು ಮೂರು ಕೋಣೆಯ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗದ ಕಿರಣವ ಒಬ್ಬ ಸತಿಯಳು ಕಂಡು ತನ್ನ ಪುತ್ರಂಗೆ ಹೇಳಲು ಆ ಪುತ್ರನು ನಿರಾಮಯವೆಂಬ ಕರಸ್ಥಲದಲ್ಲಿ ನಿಂದು ರಾಜಿಸುತಿರ್ಪ ನೋಡಾ ! ಆ ಕರಸ್ಥಲದ ಮೇಲೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗದ ಸಂತತಿಯಲ್ಲಿ ಮೂವರು ಪೂಜಾರಿಗಳು ಲಿಂಗಾರ್ಚನೆಯ ಮಾಡುತಿರ್ಪರು ನೋಡಾ ! ಊರೊಳಗಣ ಸತಿಯಳು ಒಂಬತ್ತು ಸೋಪಾನಂಗಳನೇರಿ ಮಂಗಳಾರತಿಯನೆತ್ತಿ ಆ ಲಿಂಗಕ್ಕೆ ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಬ್ಬ ಕನ್ನೆಯು ಐದು ಮುಖದ ಪಕ್ಷಿಯ ಸಂಗವ ಮಾಡಲು ಮೇಲಿಂದ ಒಬ್ಬ ಪುರುಷನ ನೋಡಲು ಪಕ್ಷಿಯು ಗಗನಕ್ಕೆ ಹಾರಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...