ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈ ಧರೆಯ ಮೇಲೆ ಹುಟ್ಟಿ ಕಲ್ಲದೈವಂಗಳಿಗೆ ಎರಗಿದರೆ ಭವ ಹಿಂಗುವುದೇ ? ಹಿಂಗದು ನೋಡಾ. ಅದೇನು ಕಾರಣವೆಂದಡೆ: ಮನದ ಗುಣಾದಿಗಳ ಶುದ್ಧಮಾಡಲರಿಯದೆ ನಿಶ್ಚಿಂತ ನಿರ್ಮಲ ಲಿಂಗದಲ್ಲಿ ಕೂಡಲರಿಯದೆ ಹಲವು ದೈವಂಗಳಿಗೆ ಅಡ್ಡಡ್ಡ ಬಿದ್ದು ಎದೆ ದಡ್ಡಾಗಿ, ಹಣೆ ದಡ್ಡಾಗಿ, ಭವದ ಕುರಿಗಳಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಈರೇಳುಭುವನವ ಹದಿನಾಲ್ಕುಲೋಕವನೊಂದು ಇರುವೆ ನುಂಗಿತ್ತುನೋಡಾ. ಆ ಇರುವೆಯ ತಲೆಯ ಮೇಲೆ ಒಂದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೆ ಒಬ್ಬ ಭಾಮಿನಿಯು ತನ್ನ ಮನವ ತಾನೇ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಈಡಾ ಪಿಂಗಳ ಸುಷಮ್ನನಾಳದಿಂದತ್ತತ್ತ ಸಾವಿರೆಸಳಮಂಟಪವ ಕಂಡೆನಯ್ಯ, ಆ ಮಂಟಪದೊಳಗೊಬ್ಬ ಸತಿಯಳು ನಿಂದು ಚಿಲ್ಲಿಂಗಾರ್ಚನೆಯಂ ಮಾಡಿ, ಚಿದ್ಘನಸ್ವಯವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಈ ಧರೆಯ ಮೇಲೆ ಭಕ್ತರೆಂದು ಗುರು ಲಿಂಗ ಜಂಗಮಕ್ಕೆ ನಡೆವರಯ್ಯ. ಬಹಿರಂಗದ ಬಳಕೆಯನಳಿದು ಶಬ್ದಮುಗ್ಧನಾದರೆ, ಗುರುವೆಂಬೆನಯ್ಯ. ಭ್ರಾಂತಿಸೂತಕವನಳಿದು ನಿಭ್ರಾಂತನಾದರೆ, ಲಿಂಗವೆಂದೆಂಬೆನಯ್ಯ. ವಿಷಯವ್ಯಸನಗಳನಳಿದು ಶುದ್ಧ ಸಿದ್ಧ ಪ್ರಸಿದ್ಧವಾದರೆ, ಜಂಗಮವೆಂದೆಂಬೆನಯ್ಯ. ಇಂತೀ ಗುರು ಲಿಂಗ ಜಂಗಮವನರಿತು ಆ ಗುರು ಲಿಂಗ ಜಂಗಮಕ್ಕೆ ನಡೆಯಬಲ್ಲಾತನೆ ನಿರ್ಮಲಸ್ವರೂಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಈ ಲೋಕದೊಳಗೆ ಶೀಲವಂತರೆಂದು ಪಾದೋದಕ ಪ್ರಸಾದವ ಕೊಂಬರಯ್ಯ. ಬ್ರಹ್ಮನನಳಿದು ಭಕ್ತನಾಗಿ ಆಚಾರಲಿಂಗವ ನೆಲೆಯಂಗೊಂಡರೆ ಪಾದಪೂಜೆಯೆಂದೆಂಬೆನಯ್ಯ. ವಿಷ್ಣುವನಳಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡರೆ ಪಾದೋದಕವೆಂದೆಂಬೆನಯ್ಯ. ರುದ್ರನನಳಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡರೆ ಮಹಾಪ್ರಸಾದಿಯೆಂದೆಂಬೆನಯ್ಯ. ಇಂತೀ ಪಾದೋದಕ ಪ್ರಸಾದವನರಿತು, ಆ ಪಾದೋದಕ ಪ್ರಸಾದವ ಕೊಳ್ಳಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ