ಅಥವಾ

ಒಟ್ಟು 163 ಕಡೆಗಳಲ್ಲಿ , 53 ವಚನಕಾರರು , 143 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕದ್ದಡೆ ಕಳವ ಕೊಟ್ಟಿದ್ದವರಿದ್ದಂತೆ ಆಚೆಯಲ್ಲಿ ಇದ್ದವರಿಗೇನು? ಹುಸಿ ಕೊಲೆ ಕಳವು ಹಾದರ ಇಂತಿವನೆಸಗಿ ಮಾಡುವ ಪಾಪಿಯ ಎದುರಿಗೆ ಹೇಳಿ ಹೇಸದೆ ಬಿಡಲೇತಕ್ಕೆ? ಇಂತೀ ರಸಿಕವನರಿದವಂಗೆ ಎಸಕವಿಲ್ಲದ ಮಾತು, ಶಶಿಧರನ ಶರಣಂಗೆ ಹಸುಳೆಯ ತೆರನಂತೆ, ನಸುಮಾಸದ ಪಿಕದಂತೆ, ಶಬರನ ಸಂದಣಿಯಂತೆ, ಉಲುಹಡಗಾ ಕಲಹಪ್ರಿಯ ಕಂಜಳಧರ ರಾಮನಾಥಾ.
--------------
ಗುಪ್ತ ಮಂಚಣ್ಣ
ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ. ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ; ಇದ ನಾನೊಲ್ಲೆ. ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ. ಎನ್ನ ಬಡತನಕ್ಕ ಬೇಡುವಡೆ ಏನೂ ಇಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಓಂ ನಮಃ ಶಿವಾಯಯೆಂಬುದನರಿಯದೆ ಜಗವೆಲ್ಲವು ನಾಯಾ[ಯಿತ್ತು] ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ ಆ ನಾಯ ಸಾವು ತಪ್ಪದು. ಇನ್ನೆತ್ತಣ ಮುಕ್ತಿ ? ಅವರಿಗೆ ಭೋಧಿಸಿದ್ದಾನಗದುಫ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ತನ್ನ ತಾನರಿತು ಮಾಡುವಲ್ಲಿ ತಾ ಬೇಡದೆ ಅನ್ಯರಿಗೆ ಹೇಳಿ ಈಸಿಕೊಂಬ ಡಾಳಕತನವೇಕೆ? ಅದು ಗುರುಚರಕ್ಕೆ ಅರಿವಿನ ಮತವಲ್ಲ. ಇಂತಿವನರಿದು ಮರಳಿ ಕಾಡುವ ಶಬರವೇಷಿಗಳು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ ? ಸೂರ್ಯನು ಜ್ಞಾನವುಳ್ಳ್ಳವನಾದಡೆ ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ ಮುನಿಯ ಶಾಪದಿಂದ ಕುಷ್ಟದೊಳಗಿಹನೆ ? ಳ ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ ? ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ ಕೊಂಡೊಯ್ದು ಜಾತಜ್ವರದಲ್ಲಿ ಅಳಲುತಿಹನೆ ? ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ ವಿವಾಹವಾದ ಹೆಂಡತಿ ರೋಹಿಣೀದೇವಿಯ ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ ? ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ ? ಅದು ಕಾರಣ_ ತಮಗೆ ಮುಂಬಹ ಸುಖದುಃಖಂಗಳನರಿಯದವರು ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು. ಬೃಹಸ್ಪತಿಯ ಮತದಿಂದೆ ದಕ್ಷ, ಯಾಗವನಿಕ್ಕೆ ಕುರಿದಲೆಯಾಯಿತ್ತು. ಬೃಹಸ್ಪತಿಯ ಮತದಿಂದೆ ದ್ವಾರಾವತ ನೀರಲ್ಲಿ ನೆರೆದು ಕೃಷ್ಣನ ಹದಿನಾರುಸಾವಿರ ಸ್ತ್ರೀಯರ ಹೊಲೆಬೇಡರು ಸೆರೆಯನೊಯ್ದರು, ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು. ಇಂತೀ ತಮತಮಗೆ ಮುಂದೆ ಬಹ ಅಪಜಯಂಗಳನರಿಯದ ಕಾರಣ, ಆ ಬೃಹಸ್ಪತಿ ಜ್ಞಾನಿಯ ಮತದಿಂದೆ, ಅಭಾಷ ಜೋಯಿಸರ ಮಾತ ಕೇಳಿ ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು, ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ, ಅರಳಿಯ ಮರಕ್ಕೆ ನೀರ ಹೊಯ್ದು ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ, ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು. `ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವಾಸಿತೇ ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ ' ಇಂತೆಂದುದಾಗಿ ಬಹ ಕಂಟಕವ ಹೊನ್ನು ಹೆಣ್ಣು ಶುಭ ಲಗ್ನದಿಂದೆ ಪರಿಹರಿಸೇನೆಂದಡೆ ಹೋಗಲರಿಯದು. ಹಸಿವಿಲ್ಲದ ಮದ್ದು ಕೊಟ್ಟೇನು, ಅಶನವ ನೀಡೆಂಬಂತೆ, ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ, ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ, ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು. ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ. ಅದೆಂತೆಂದಡೆ: ನಾವು ಗುರುಗಳು, ನಾವು ಲಿಂಗಾಂಗಿಗಳು, ನಾವು ಜಂಗಮಲಿಂಗಿಗಳು, ನಾವು ಸದಾಚಾರಸದ್ಭಕ್ತರು ಎಂಬರಯ್ಯ. ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ: ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ, ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ, ಗುರು-ಹಿರಿಯರು ಜಂಗಮಲಿಂಗಿಗಳೆಂದು ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು, ಸದಮಲದ ಬೆಳಗ ತೋರೇವು ಎಂದು ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ, ಲಿಂಗಾಂಗಸಮರಸವ ತೋರಿ, ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ, ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ ಅಡಗಿಸಿಕೊಂಬುವರಲ್ಲದೆ ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ ಆಚರಣೆಯೆಂತಾಯಿತ್ತೆಂದೊಡೆ- ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ. ಅದೆಂತೆಂದೊಡೆ: ಜೀವನಬುದ್ಭಿಯುಳ್ಳ ಗುರುವೆಂದಾತ ಹಂದಿ, ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ. ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು ಕಾಣದೆ ಕಮ್ಮರಿಬಿದ್ದಂತಾಯಿತಯ್ಯ. ಅದೇನು ಕಾರಣವೆಂದಡೆ, ಗುರುವಿನಂತ ಶಿಷ್ಯನರಿಯ, ಶಿಷ್ಯನಂತ ಗುರುವರಿಯ, ಜಂಗಮನಂತ ಭಕ್ತನರಿಯ, ಭಕ್ತನಂತ ಜಂಗಮವರಿಯದ ಕಾರಣ. ಉಪಾದ್ಥಿಯುಳ್ಳವರು ಗುರುವಲ್ಲ ಶಿಷ್ಯರಲ್ಲ. ಉಪಾದ್ಥಿಯುಳ್ಳವರಲ್ಲಿ ಉಪದೇಶವ ಹಡಿಯಬೇಕೆಂಬವರ, ಉಪಾದ್ಥಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ, ಲಿಂಗವ ಕೊಟ್ಟು ಲಿಂಗದ್ರೋಹಿಯಾದ. ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ. ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ. ಇಂತೀ ಹೊನ್ನ ಹಂದಿಯ ಕೊಂದು, ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಹಿಂದೆ ಬಂದವರೆಲ್ಲರೂ ಯೋನಿಯ ಹಂಗು. ಸಕಲ ಶಾಸ್ತ್ರಜ್ಞರೆಲ್ಲಾ, ವೇದ ವೇದಾಂತರೆಲ್ಲಾ, ಹಿಂದೆ ಬಂದ ಯೋನಿಯ ಮರೆದು, ಮುಂದಕ್ಕೆ ಯೋನಿಗಾಗಿ ಲಂದಳಗಿತ್ತಿಯಂತೆ ಬಂದ ನಿಂದ ಭಕ್ತರಲ್ಲಿ ಹೊಸತನದಂದವ ಹೇಳಿ, ಎಡಗಾಲಸಂದಿಯ ಮಚ್ಚಿ, ಅನಂಗನ ಬಲೆಯೊಳಗಾದವರಿಗೆ ಘನಲಿಂಗನ ಸುದ್ಧಿಯೇಕೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಆತ್ಮ ತೇಜದಲ್ಲಿ ಪೂಜಿಸಿಕೊಂಬ ಹಿರಿಯರುಗಳೆಲ್ಲರೂ ಕೆಟ್ಟ ಕೇಡ ನೋಡಾ. ಅಂದಳ ಸತ್ತಿಗೆ ಕರಿ ತುರಗಂಗಳಿಂದ, ನಾನಾ ಭೂಷಣ ಸುಗಂಧ ಸುಖದಿಂದ ಮೆಚ್ಚಿ ಪೂಜಿಸಿಕೊಂಬ ಹಿರಿಯರೆಲ್ಲರೂ ಬೋಧನೆಯ ಹೇಳಿ ಬೋದ್ಥಿಸಿಕೊಂಡುಂಬ ಹಿರಿಯರುಗಳೆಲ್ಲರೂ ಹಿರಿಯರಲ್ಲದೆ ಕಿರಿಯರಾದವರಾರೂ ಇಲ್ಲ. ಇದುಕಾರಣ, ಅಂಧಕನ ಕೈಯ ಅಂಧಕ ಹಿಡಿದಂತೆ. ಹೆಣನ ಕಂಡಂಜುವಂಗೆ ರಣದ ಸುದ್ದಿಯೇಕೆ? ತನುಸುಖವ ಮೆಚ್ಚಿದ, ಗುರು ಮುಟ್ಟಿದ ಭಕ್ತಂಗೆ ನಿಶ್ಚಯ ಹೇಳಲಾಗಿ, ಅವನಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಕಳವಳದ ಮನ ತಲೆಕೆಳಗಾದುದವ್ವಾ ; ಸುಳಿದು ಬೀಸುವ ಗಾಳಿ ಉರಿಯಾದುದವ್ವಾ ; ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ. ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ ; ತಿಳುಹಾ, ಬುದ್ಧಿಯ ಹೇಳಿ ಕರೆತಾರೆಲಗವ್ವಾ ; ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವಾ.
--------------
ಅಕ್ಕಮಹಾದೇವಿ
ಹೇಳಿ [ಹೆ] ಹೇಳಿ [ಹೆ] ಕೇಳಿರಣ್ಣಾ ಮೂರರ ಹೊಲಿಗೆಯ ಬಿಚ್ಚಿ ಆರಮಾಡಬೇಕು. ಆರರ ತಿರುಳ ತೆಗೆದು ಒದೂರೊಳಗೆ ನಿಲಿಸಬೇಕು. ಐದರ ಮುಸುಕನುಗಿದು, ಐದರ ಕೆಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು, ನಾಲ್ಕರೊಳಗೆ ನಿಲ್ಲದೆ ಮೂರು ಮುಖವು ಒಂದೆ ಭಾವವಾಗಿರಬೇಕು. ಈ ಭೇದವನರಿಯದೆ ಸುಳಿವವರ ಕಂಡು ಬೆರಗಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->