ಅಥವಾ

ಒಟ್ಟು 202 ಕಡೆಗಳಲ್ಲಿ , 35 ವಚನಕಾರರು , 130 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ ! ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು. ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ ಉರಿಯ ಬಾಣದಲೆಚ್ಚು ತೆಗೆದೆ ನೋಡಾ ! ಒಂದೆ ಬಾಣದಲ್ಲಿ ಸತ್ತ ಮೃಗವು, ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ ! ಅಂಗೈಯೊಳಗೊಂದು ಕಂಗಳು ಮೂಡಿ, ಸಂಗದ ಸುಖವು ದಿಟವಾಯಿತ್ತು ! ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಾಯ ನರಿಯ ಮಧ್ಯದಲ್ಲಿ ನಾರಿವಾಳದ ಸಸಿ ಹುಟ್ಟಿತ್ತು. ಐದು ಗೇಣು ಉದ್ದ ಎಂಟು ಗೇಣು ವಿಸ್ತೀರ್ಣ. ಅದರ ಬೇರು ಪಾತಾಳಕ್ಕೆ ಇಳಿಯಿತ್ತು; ಬೇರಿನ ಮೊನೆ ನೀರ ತಿಂದಿತ್ತು; ನೀರ ಸಾರ ತಾಗಿ ಮರನೊಡೆಯಿತ್ತು, ಮಟ್ಟೆ ಇಪ್ಪತ್ತೈದಾಗಿ ಹೊಂಬಾಳೆ ಬಿಟ್ಟಿತ್ತು; ಹದಿನಾರು ವಳಯದಲ್ಲಿ ಕಾಯಿ ಬಲಿದವು. ಮೂರು ದಿಸೆಯಲ್ಲಿ ಆ ಮರವ ಹತ್ತಿ ಕಾಯ ಕೆಡಹುವರಿಲ್ಲ. ವಾಯವಾಯಿತ್ತು ಮರಹುಟ್ಟಿ ಮರದ ಕೆಳಗಿದ್ದು ಹಣ್ಣಿನ ಹಂಬಲು ಹರಿವುದ ನೋಡುತ್ತಿದ್ದೇನೆ. ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು ! ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ. ಬಾಳೆ ಬೀಗಿ ಸರ್ಪನೆದ್ದೆಡೆ_ನಿರಾಳವು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ ಈ ಆರು ಕರ್ಮಾಂಗವು ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಪಾಯುಶ್ಚ ಗುಹ್ಯಪಾದಾಶ್ಚ ಹಸ್ತಂ ವಾಗಂತರಂ ತಥಾ | ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ಕಾರಣಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು. ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ. ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ. ಅದು ಕೂಗುವಾಗ ಜಾವವಳಿದು, ದಿನ ಸತ್ತು, ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ. ಕೂಗಿನ ದನಿಯ ಕೇಳಿ ಬೆಳಗಾಯಿತ್ತು, ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಸಾಸಿವೆಯ ಹಾಲು ಸಾಧಕಾಂಗರ ನಾಸಿಕದ ನೀರ ಬರಿಸಿತ್ತು. ಮೂಷಕನ ಮೀಸೆಯ ಬಿಂದು ಮೂರುಲೋಕವ ಮುಣುಗಿಸಿತ್ತು. ಕಾಸದ ನೀರು ಬಿಸಿಯಾಗಿ ಕುಡಿವರ ಮೀಸೆ ಸುಟ್ಟಿತ್ತು. ಸಾಸಿವೆಯ ಮೂಷಕನ ಮೀಸೆಯ ಬಿಸಿನೀರ ಕುಡಿವಾತನ, ಬಾಯೊತ್ತಿನ ಮೀಸೆಯಲ್ಲಿ ಹುಟ್ಟಿತ್ತು ಒಂದು ಹಾಸರೆಗಲ್ಲು. ಹಾಸರೆಗಲ್ಲಿನ ಮೇಲೆ ಕುಳಿತಿದಾತನ ಕೇಳಿಹರೆಂದು ಏತಕ್ಕಡಗಿದೆ, ಅಲೇಖಮಯ ಶೂನ್ಯ ಕಲ್ಲಿನ ಮನೆಯೊಳಗೆ.
--------------
ವಚನಭಂಡಾರಿ ಶಾಂತರಸ
ಬ್ರಹ್ಮವೆನಲು ಪರಬ್ರಹ್ಮವೆನಲು ಪರಮನೆನಲು ಪರಮೇಶ್ವರನೆನಲು ಪರಮಾತ್ಮನೆನಲು ಪರತತ್ವವೆನಲು ಪರಂಜ್ಯೋತಿಯೆನಲು ಪರವಸ್ತುವೆನಲು ಪರಾಪರವೆನಲು ಇಂತಿವೆಲ್ಲಾ ನಾಮದಲ್ಲಿಯೂ ಪ್ರಕಾಶಿಸುತ್ತಿಪ್ಪಾತನು ಪರಶಿವನು. ಪರಶಿವನೆಂದರೆ ಪರಮಾತ್ಮ. ಪರಮಾತ್ಮನೆಂದರೆ ಮಹಾಲಿಂಗ. ಆ ಮಹಾಲಿಂಗ ತಾನೆ ಪ್ರಸಾದಲಿಂಗವಾಗಿ ಉದ್ಭವಿಸಿತ್ತು. ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು. ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು. ಶಿವಲಿಂಗದಲ್ಲಿ ಗುರುಲಿಂಗ ಜನಿಸಿತ್ತು. ಗುರುಲಿಂಗ ಆಚಾರಲಿಂಗ ಉತ್ಪತ್ಯವಾಯಿತ್ತು. ಇಂತೀ ಷಡ್ವಿಧಲಿಂಗವೂ ಒಂದರಿಂದೊಂದಾದವು. ಒಂದನೊಂದ ಕೂಡಿಹವು. ಇಂತೀ ಷಟ್‍ಸ್ಥಲವೂ ಏಕವೆಂದರಿವುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ, ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು. ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು. ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗೋಳಕಾಕಾರ ಗೋರಕ್ಷನೆಂಬ ಪಟ್ಟಣದಲ್ಲಿ, ಗೋಮಯವೆಂಬ ಪರಶಕ್ತಿ ಅಪರ ಪ್ರಸೂತಕವಾಗಲಾಗಿ, ಅದರಂಡದಲ್ಲಿ ಆಡು ಹುಟ್ಟಿತ್ತು. ಆಡಿನ ಅಂಡದಲ್ಲಿ ಕೋಡಗ ಹುಟ್ಟಿತ್ತು. ಕೋಡಗದ ಕುಂಡಿಯಲ್ಲಿ ಸಿರಿಯಕ್ಕ ಹುಟ್ಟಿದಳು. ಸಿರಿಯಕ್ಕನ ಆತುರಿಯದಲ್ಲಿ ಮೂದೇವಿ ಉರಿಯಕ್ಕ ಹುಟ್ಟಿದಳು. ಉರಿಯಕ್ಕನ ಉರವಣೆಯಲ್ಲಿ ಜಗ ಹುಟ್ಟಿ, ಜಗದ ಸಿರಿಯಲ್ಲಿ ಹೋದರು ಹಿರಿಯರೆಲ್ಲರು, ಬಂಕೇಶ್ವರಲಿಂಗವನರಿಯದೆ.
--------------
ಸುಂಕದ ಬಂಕಣ್ಣ
ಮೆಟ್ಟಿಲಿಲ್ಲದ ಭೂಮಿಯಲ್ಲಿ ಹುಟ್ಟಿಲಿಲ್ಲದ ಹೆಮ್ಮರ ಹುಟ್ಟಿತ್ತು ನೋಡಾ. ಮೆಟ್ಟಿ ಹತ್ತೆಹೆನೆಂದರೆ ಕೊಂಬಿಲ್ಲ; ಮುಟ್ಟಿ ಹಿಡಿದಿಹೆನೆಂದರೆ ಮೂರ್ತಿಯಲ್ಲ. ಅದರಲ್ಲಿ ಕಟ್ಟಣೆಗೆಯ್ದದ ಹಣ್ಣು ರಸತುಂಬಿ, ತೊಟ್ಟು ಬಿಡದು ನೋಡಾ. ತೊಟ್ಟ ಮುಟ್ಟದೆ ಕಟ್ಟಣೆಗೆಯ್ದದ ಹಣ್ಣು ಮುಟ್ಟಿ ಸವಿಯಬಲ್ಲಾತನ ಹುಟ್ಟರತಾತನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಜ್ಞಾನದಿಂದ ಹುಟ್ಟಿತ್ತು ಅಹಂ ಮಮತೆ, ಅಜ್ಞಾನದಿಂದ ಹುಟ್ಟಿತ್ತು ಮನಸ್ಸಂಚಲ, ಅಜ್ಞಾನದಿಂದ ಹುಟ್ಟಿತ್ತು ಇಂದ್ರಿಯೋದ್ರೇಕ, ಅಜ್ಞಾನದಿಂದ ಹುಟ್ಟಿತ್ತು ದೇಹಮೋಹ, ಅಜ್ಞಾನದಿಂದ ಹುಟ್ಟಿತ್ತು ಅತಿಕಾಂಕ್ಷೆ, ಅಜ್ಞಾನದಿಂದ ಹುಟ್ಟಿತ್ತು ತ್ರಿವಿಧಮಲ, ಅಜ್ಞಾನದಿಂದ ಹುಟ್ಟಿತ್ತು ಸಂಸಾರ, ಅಜ್ಞಾನದಿಂದ ಹುಟ್ಟಿತ್ತು ರಾಗದ್ವೇಷ, ಅಜ್ಞಾನದಿಂದ ಹುಟ್ಟಿತ್ತು ಸರ್ವಪ್ರಪಂಚು, ಅಜ್ಞಾನದಿಂದ ಹುಟ್ಟಿತ್ತು ಸರ್ವದುಃಖ, ಕೂಡಲಸಂಗಮದೇವಾ, ಈ ಅಜ್ಞಾನಭ್ರಮೆಯ ಕೆಡಿಸಿದಲ್ಲದೆ ನಿಮ್ಮನೊಡಗೂಡಬಾರದಯ್ಯಾ.
--------------
ಬಸವಣ್ಣ
ಆದಿಯಲೊಬ್ಬ ಮೂರ್ತಿಯಾದ, ಆ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ, ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೆಯೂ ಇಚ್ಛಾಶಕ್ತಿಯಿಬ್ಬರಿಗೆಯೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ. ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು. ಆ ವಿಷ್ಣವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯಾದಳು. ಆ ಬ್ರಹ್ಮಂಗೆಯೂ ಸರಸ್ವತಿಯರಿಬ್ಬರಿಗೆಯೂ ನರರು ಸುರರು ದೇವಕಳು ಹೆಣ್ಣು ಗಂಡು ಸಚರಾಚರಂಗ?ು ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು, ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಇನ್ನಷ್ಟು ... -->