ಅಥವಾ

ಒಟ್ಟು 393 ಕಡೆಗಳಲ್ಲಿ , 61 ವಚನಕಾರರು , 329 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು, ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು. ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ, ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು.
--------------
ಅರಿವಿನ ಮಾರಿತಂದೆ
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ನಿಂದಕರು ನಿಂದಿಸಿದರೆ ಸ್ವಯಜ್ಞಾನಿ ಅಂಜುವನೇನಯ್ಯ ? ಆ ನಿಂದಕನ ಅಂತರಂಗದಲ್ಲಿ ಅಹಂಕಾರನೆಂಬ ಕೋಣ ಹುಟ್ಟಿ, ಜ್ಞಾನಿಗಳೆಂದರಿಯದೆ, ಬಾಯಿಗೆ ಬಂದಂತೆ ನುಡಿವ ತರಕಿಮೂಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಪ್ಪಿನಲಾದ ಘಟವು ಅರ್ಪಿ[ತದ]ಲೆ ಲೀಯ, ಇಪ್ಪತ್ತೈದೆಂದು ಕುರುಹಿಡುವೆ ಏಕೆಲೆ ಮನುಜಾ. ತಾ ಹುಟ್ಟಿ ತಮ್ಮವ್ವೆ ಬಂಜೆಯೆಂಬ ನ್ಯಾಯದಲ್ಲಿ ಬೇರೆ ವಿವರಿಸಿ ತೋರಬಲ್ಲಡದು ಯೋಗ. ಅಭ್ಯಾಸಸಮಾದ್ಥಿಯಿಂ ಅನುಭವಿಗಳೆಲ್ಲರಿಗೆ ಬಯಲ ಸಮಾದ್ಥಿಯಾಗದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಟ ಮದುವೆಯ ಮನೆ. ದಾನಧರ್ಮ ಸಂತೆಯ ಪಸಾರ, ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ. ಭಕ್ತಿಯೆಂಬುದು ಬಾಜಿಗಾರರಾಟ. ಬಸವಣ್ಣಗೆ ತರ ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ. ಹುಸಿ ವಿಷಯದೊಳಡಗಿತ್ತು, ವಿಷಯ ಮಸಿಮಣ್ಣಾಯಿತ್ತು. ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ,
--------------
ಅಕ್ಕಮಹಾದೇವಿ
ಹುಟ್ಟು ಹೊಂದುಗಳರಿಯದೆ ನೆಟ್ಟನೆ ಹುಟ್ಟಿ ಬಂದವನೆಂದು ಕಾರ್ಯದಲ್ಲಿ ಕರಿದು ಬಿಳಿದು ಕೂಡಿ ಮಾಡಿಕೊಂಡೆನೆಂದರೆ ನಿಜವಾಗಲರಿಯದು. ಭೂಪ ಧನಿಕರು ಕೊಲ್ಲಿಸಿ ಹಾಕುವರು ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ, ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು. ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು ! ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು. ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜಾನು ಜಂಗೆಯಲ್ಲಿ ಹುಟ್ಟಿ ಜಂಗಮವೆನಿಸಿಕೊಳಬಹುದೆ ? ಆಠಾವು ಹಿಂಗಿದಡೆ ಭಂಗಿತನು ಕಂಡಾ. ಅಂತರಂಗದಲೊದಗೂದನರಿಯರು ಗುಹೇಶ್ವರನೆಂಬುದು ಮೀರಿದ ಘನವು
--------------
ಅಲ್ಲಮಪ್ರಭುದೇವರು
ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ ವ್ಯರ್ಥ ಕಾಯರಸವಿಷಯಕ್ಕಾಸೆಗೈದು ಸತ್ತು ಸತ್ತು ಹುಟ್ಟಿ ಭವಕ್ಕೆ ಗುರಿಯಾಗಿ, ಮಾಯಾಬಲೆಯ ಸಂಸಾರಬಂಧನದೊಳು ಬಂದು ಸಿಲ್ಕಿದೆನಯ್ಯಾ. ಮಾಯೆಯ ಹರಿದು, ಸಂಸಾರಬಂಧನವ ಕೆಡಿಸಿ, ಭವರೋಗಕ್ಕೆ ವೈದ್ಯನ ಮಾಡೋ ಶಿವ ವಿಶ್ವಕುಟುಂಬಿ ಮಹಾದೇವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜನಿತವಿಲ್ಲದೆ ಜನಿಸಿ ಸ್ವಯವಾದ ಹರನೇ ನೀನು ನಿರೂಪನೇರಿ ಜನಿಸಿ ಜನಿತವ ಬಗೆಯರಾಗಿ ಎಮ್ಮ ಪುರಾತನರೇ ನಿರೂಪರು, ಕುಲದಲ್ಲಿ ಹುಟ್ಟಿ ಕುಲವ ಬೆರೆಸರಾಗಿ ಎಮ್ಮ ಪುರಾತನರೇ ಕುಲಜರು. ಆದಿಲಿಂಗ ಅನಾದಿಶರಣ. ಹೆಸರಿಲ್ಲದ ದೆಶೆಗೇಡಿ ಲಿಂಗವ ವಶಕ್ಕೆ ತಂದು ಹೆಸರಿಟ್ಟು ಕರೆದರೆ ನೀನು ಸುಲಭನೇ? ಅಲ್ಲ. ನೀನು ಕುಲಗೇಡಿ, ನಿನ್ನನಾರು ಬಲ್ಲರು? ನೀನಗೋಚರ. ಹರನೇ, ನೀ ಬೇಡಿತ್ತ ಕೊಟ್ಟು ನೀ ಬಂದರೆ ನಿನ್ನನಾಗುಮಾಡಿದರಲ್ಲದೆ ಎಮ್ಮ ಪುರಾತನರು ನಿಮ್ಮಲ್ಲಿಗೆ ಬಂದು ದೈನ್ಯಬಟ್ಟು ಬೇಡಿದರಲ್ಲೈ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಪ್ರಶಿಖಾಮಂಡಲದಲ್ಲಿ ಅಮೃತತೃಪ್ತಿಯೆಂಬ ಅಂಗನೆಯ ಉದರದಲ್ಲಿ ಚಿತ್‍ಶಿಖಿಯೆಂಬ ಕಿಚ್ಚು ಹುಟ್ಟಿ ಮೃತ್ಯುಗಳ ಮೊತ್ತವ ಸಂಹರಿಸಿ ತತ್ ತ್ವಂ ಅಸಿಯೆಂಬ ಪದವ ನುಂಗಿ ಪರಾಪರವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
ಇನ್ನಷ್ಟು ... -->