ಅಥವಾ

ಒಟ್ಟು 85 ಕಡೆಗಳಲ್ಲಿ , 33 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಾಕ್ಷರಿಯ ಮಣಿಮಾಲೆಯಲ್ಲಿ ಸಂಚಿತ ಪ್ರಾರಬ್ಧ ಕರ್ಮವೆಂಬ ದಾರ ನಡುವೆ ಸಿಕ್ಕಿ, ಮಣಿಯ ತಿರುಗಾಡಿಸುತ್ತದೆ. ದಾರವ ಹರಿದು ಮಣಿಯ ದ್ವಾರವ ಮುಚ್ಚಿ ಉಲುಹಡಗಿ ನಿಲಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಲಲನೆಯರ ನಟನೆಯೆಂಬ ಕುಟಿಲಕ್ಕೆ ಸಿಕ್ಕಿ, ಕೋಟಲೆಗೊಳದಿರ ಮರುಳು ಮಾನವ. ನಿಟಿಲತಟದಲ್ಲಿ ಮಠವ ಮಾಡಿಕೊಂಡು ನಿಶ್ಚಿಂತ ನಿರಾಳನಾಗಿರ. ಹುಸಿಯ ಮಾಯಾತಮಂಧಕೆ ದಿಟಪುಟದಿವಾಕರ ಎನ್ನೊಡೆಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಲೆಯಿಲ್ಲದ ಕಾಗೆ ನೆಲದಲ್ಲಿ ನಡೆಯಿತ್ತು. ಹುಲಿ ನಲಿದು ಗಿಲಿಗಿಸಿ ಗೆಜ್ಜೆಗಟ್ಟಿ ಒಲೆದಾಡಿತ್ತು. ಬಲುಹೆನಿಸಿದ ಕರಡಿ ಹಾಡಿ ಹರಸಿ ಬೆಳೆಯಿತ್ತು. ಕಾಳರಕ್ಕಸಿಯ ಮಗುವು ಚಂದ್ರಸೂರ್ಯರ ರಾಟಾಳದ ಹುರಿಯೊಳಗೆ ತಿರಿಗಿತ್ತು. ಕಳವಳಿಸುವ ಕಪಿಯ ಭೂತ ಹೊಡೆದು, ಚೋಳೂರೆ ಘಾಳಿಯೊಳು ಸಿಕ್ಕಿ, ಸೌರಾಷ್ಟ್ರ ಸೋಮೇಶ್ವರನ ಕಾಣದೆ ಕನ್ನಡಕದ ಕಣ್ಣಿನಂತೆ ಕಣ್ಣೆನಿಸಿ ಕಣ್ಣುಗೆಟ್ಟಿತ್ತು.
--------------
ಆದಯ್ಯ
ಅತೀಂದ್ರಿಯರೆಲ್ಲರೂ ಮದನನ ಮನೆಯ ಬೆಸಕುಡಿಕೆಯ ನೀರೆರೆವುದಕ್ಕೊಳಗಾದರು. ವ್ರತಿಗಳೆಲ್ಲರೂ ಹೊರಗೆ ಆಚಾರವನಿರಿಸಿ, ಒಳಗೆ ಭವಿಸಂಗದಲ್ಲಿ ಬಳಲುತ್ತೈದಾರೆ. ನಿರಾಶೆವಂತರು ಕೊಡುವರ ಬಾಗಿಲಲ್ಲಿ, ಇಕ್ಕುವರ ಮಂದಿರದಲ್ಲಿ ಸಿಕ್ಕಿ ಅಯಿದಾರೆ. ಇವಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ಅಂಗವರಿತು ನಿಂದವಂಗೆ ಜಗದ ಹಂಗಿನಲ್ಲಿ ಸಿಕ್ಕಿ ಜಂಗುಳಿಗಳ ಕೂಡದೆ ಲಿಂಗವೇ ಅಂಗವಾಗಿ ನಿಂದುದು ಕಪಿಲಸಿದ್ಧಮಲ್ಲಿಕಾರ್ಜುನಂಗವು ತಾನಾದುದ
--------------
ಸಿದ್ಧರಾಮೇಶ್ವರ
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಅಂಧಕಾರವೆಂಬ ಮನೆಯ ಬಾಗಿಲಲ್ಲಿ ಆರಂಗದ ಕರಡಿ ಕಟ್ಟಿ ಮೂರಂಗದ ಕೋಡಗ ಏಡಿಸಿ ಕಾಡುತ್ತಿದೆ. ಮೀರಿದೆನೆಂಬವರೆಲ್ಲರು ಕರಡಿಯ ಗಿಲಗಿನಲ್ಲಿ ಸತ್ತು, ಕೋಡಗದ ಚೇಷ್ಟೆಯಲ್ಲಿ ಸಿಕ್ಕಿ, ಬೇಡ ನಿಮಗೆ ಆರೂಢದ ಮಾತು. ಇಂತಿವ ಮೀರಿ ಅರಿದವಂಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
--------------
ಅರಿವಿನ ಮಾರಿತಂದೆ
ಭಕ್ತನಾದ ಮತ್ತೆ ಬಂಧಗಳ ಬಿಡಬೇಕು. ವಿರಕ್ತನಾದ ಮತ್ತೆ ಧರಿತ್ರಿಯಲ್ಲಿ ಸುಖಕ್ಕೆ ಸಿಕ್ಕಿ ಮತ್ತನಾಗದಿರಬೇಕು. ಇಕ್ಕುವರ ಬಾಗಿಲ ಕಾಯದೆ, ಸುಚಿತ್ತದಿಂದ ಬಂದ ಬ್ಥಿಕ್ಷವ ಕೊಂಡು, ಅನಿತ್ಯವ ಮರೆದು, ಸತ್ತುಚಿತ್ತಾನಂದ ಭಕ್ತ ಜಂಗಮಕ್ಕೆ ನಿತ್ಯ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅದ್ವೈತವ ಹೇಳುವ ಹಿರಿಯರೆಲ್ಲರೂ ದ್ವೈತಕ್ಕೊಳಗಾದರು. ನಿಸ್ಸಂಸಾರವ ಹೇಳುವ ಹಿರಿಯರೆಲ್ಲರೂ ಸಂಸಾರದ ಸಾರವ ಚಪ್ಪಿರಿದು ಕೆಟ್ಟರು. ಭಕ್ತರಿಗೆ ನಿತ್ಯವಲ್ಲೆಂದು ಹೇಳಿ, ತಾವು ಅನಿತ್ಯವ ಹಿಡಿದು, ಪಾಶಕ್ಕೆ ಸಿಕ್ಕಿ ಸತ್ತುದನರಿಯದೆ, ನಾವು ಮುಕ್ತರಾದೆವೆಂಬ ಭ್ರಷ್ಟರ ನೋಡಾ. ನನಗಿನ್ನೆತ್ತಣ ಮುಕ್ತಿ ಎಂದಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಒಡೆಯರು ಭಕ್ತರಿಗೆ ಸಲುವ ಸಹಪಙô್ತಯಲ್ಲಿ, ಗುರು ಅರಸೆಂದು, ತನ್ನ ಪರಿಸ್ಪಂದವೆಂದು ರಸದ್ರವ್ಯವ ಎಸಕದಿಂದ ಇಕ್ಕಿದಡೆ, ಅದು ತಾನರಿದು ಕೊಂಡಡೆ ಕಿಸುಕುಳದ ಪಾಕುಳ. ಅಲ್ಪ ಜಿಹ್ವೆಲಂಪಟಕ್ಕೆ ಸಿಕ್ಕಿ ಸಾವ ಮತ್ಸ್ಯದಂತೆಯಾಗದೆ- ಈ ಗುಣವ ನಿಶ್ಚಯಿಸಿದಲ್ಲಿ ಏಲೇಶ್ವರಲಿಂಗವನರಿಯಬಲ್ಲ.
--------------
ಏಲೇಶ್ವರ ಕೇತಯ್ಯ
ಭಕ್ತರಾಗಿದ್ದವರು ಭಕ್ತರ ವಿರಕ್ತರ ಮಿಥ್ಯದಿಂದ ನುಡಿವುದು ಸತ್ಯವಲ್ಲ. ಮಿಥ್ಯವನಳಿದು ಸತ್ಯವ ಕುರಿತು ಭಕ್ತ ಜಂಗಮಕ್ಕೆ ತತ್ತ್ವದ ಬಟ್ಟೆಯ ಹೇಳಿದಲ್ಲಿ ನಿತ್ಯ ಅನಿತ್ಯವ ತಿಳಿಯಬೇಕು. ಇದು ಸುಚಿತ್ತದ ಭಾವ. ತನ್ನ ವಂಶ ಕೆಟ್ಟಡೆ ತನಗಲ್ಲದೆ ಅನ್ಯರಿಗಿಲ್ಲ. ಇದು ಕಾರಣದಲ್ಲಿ ತನ್ನಂಗದ ಗಾಯದ ನೋವು ತನಗೆ ಅನ್ಯ ಬ್ಥಿನ್ನವಿಲ್ಲದೆ ತೋರುವವೊಲು ಇದು ನನ್ನಿಯ ನುಡಿದೆ ನೈಸಲ್ಲದೆ ಸಮರಸದ ಸನ್ನರ್ಧನಲ್ಲ. ನೀವಾಡಿಸುವ ಯಂತ್ರದ ತಂತ್ರವಲ್ಲದೆ ಸ್ವತಂತ್ರಿಯಲ್ಲ. ಎನಗೆ ಇದಿರನಾಡೆ ನಾ ಮಾಡುವ ಭಕ್ತಿ ಸತ್ಯ ಸುಚಿತ್ತದ ನಿತ್ಯವಲ್ಲ. ಮೊತ್ತದ ಕರಣಂಗಳ ನಡುವೆ ಸಿಕ್ಕಿ ಮತ್ತನಾಗಿ ಬಿದ್ದವಂಗೆ ವಸ್ತುವಿನ ಬಟ್ಟೆಯ ತೋರಿ ಮುಕ್ತಿಪಥದಲ್ಲಿ ನಿಲುವ ನಿಚ್ಚಣಿಕೆಯನಿಕ್ಕಿ ತೋರಿದ ಭಕ್ತ ದೇಹಿಕ ನಿಜಪದ ತತ್ವ ಸ್ವರೂಪ. ಸಕಲ ಜೀವದ ಆಧಾರ, ಸಕಲಮಯ ಅಖಿಳ ಬ್ರಹ್ಮಾಂಡ ಕರಂಡ ತಮರಿಪು ಕೋದಂಡ, ಶಕ್ತಿಮಯ ಚಂಡಿಕಾ ಕಿರಣದಶ ಉದಕಭರಿತ, ಭಕ್ತಿಭಂಡಾರಿ ಬಸವೇಶ್ವರನ ನಿಜತತ್ವದ್ವಯ ಪಾದಂಗಳಿಗೆ ಮಂಡಿತಮಯನಾಗೆರಗಿದೆ ಸಂದೇಹವೆಂಬ ಕರಂಡವ ಬಂದ ಪ್ರಮಥರ ಸತಿ ಸಂದ ಪ್ರಮಥರ ಡಿಂಗರಿಗ ಗುಪ್ತಮಂಚನ ನಿತ್ಯನೇಮ ಸಂದಿತ್ತು. ವೀರದಾಸನ ದಾಸೋಹ ಸೋಹಂ ಎನುತಿದ್ದಿತ್ತು. ನಾರಾಯಣ ನಯನ ಪೂಜಿತಪದಾಂಬುಜ ವಿಮಲ ಕಮಲ ಸುಲಲಿತ ರಾಮೇಶ್ವರಲಿಂಗ ಎನ್ನೊಳಗಾದಾ.
--------------
ಗುಪ್ತ ಮಂಚಣ್ಣ
ಉರಿ ಸಿರಿ ಭೂತ ಭವಿಷ್ಯತ್ ವರ್ತಮಾನಂಗಳಲ್ಲಿ ನೋಡುವ ಆಲಿ ಮೇಲಕ್ಕೆ ಸಿಕ್ಕಿ, ಭಾವ ಅಂಗವ ಮರೆದು, ಧ್ಯಾನವೆ ಮೂರ್ತಿ ಜಪ. ಪಂಚಾಕ್ಷರಿಯ ಪ್ರಣವ ಏಕೀಕರಿಸಿದಲ್ಲಿ, ಸಂದಿತ್ತು ಜಪ ಅರ್ಕೇಶ್ವರಲಿಂಗಕ್ಕೆ.
--------------
ಮಧುವಯ್ಯ
ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ, ಅಳಲುತ್ತ ಬಳಲುತ್ತಲೈದಾರೆ. ಆ ಕಂಬಳಿಯಲ್ಲಿ ಮಹಾರುದ್ರನುದ್ಧರಿಸಿದ. ಮಹಾರುದ್ರನ ಕಪಾಲದಲ್ಲಿ ಇಷ್ಟಾರ್ಥವೆಂಬ ಶಕ್ತಿ ಹುಟ್ಟಿದಳು. ಆ ಶಕ್ತಿಯ ಯೋನಿಕಮಲದಲ್ಲಿ ವಿಷ್ಣು ಹುಟ್ಟಿದ. ವಿಷ್ಣುವಿನ ನಾಬ್ಥಿಕಮಲ ಮಧ್ಯದಲ್ಲಿ ಬ್ರಹ್ಮ ಹುಟ್ಟಿದ. ಬ್ರಹ್ಮನ ಸೃಷ್ಟಿಯಾಂತ ಕೈಯಲ್ಲಿ ಸಕಲಬಹುರೂಪಂಗಳು ಹುಟ್ಟಿದವು. ಆಡುತಿರ್ದರಯ್ಯಾ ಕಂಬಳಿಯ ಹರಿಕಿನ ಮಧ್ಯದಲ್ಲಿ. ಕುರಿ ಸಾಯದು, ಕಂಬಳಿ ಹರಿಯದು. ಇದಕ್ಕಂಜುತಿದ್ದೇನೆ ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಮಹಾಜ್ಯೋತಿಯನೊಡಗೂಡಿಪ್ಪ ಉರುತರ ಪರಮಜ್ಞಾನಿ ಘನತರದ ಸಂಯೋಗಿ ಬ್ರಹ್ಮಾಂಡಂಗಳು ನಿನ್ನ ಮರೆಸಲರಿಯವು. ಸಕಲ ಬ್ರಹ್ಮಾಂಡಂಗಳನೊಳಗು ಮಾಡಿ ಮೇಲೆ ತೊಳಗಿ ಬೆಳಗುತಿಪ್ಪೆ ಎಮ್ಮ ಶರಣರ ಕರಸ್ಥಲದಲ್ಲಿ ಸಿಕ್ಕಿ. ಮಹಾದೀಪ್ತಿಯನಿಂಬುಗೊಂಡಿತ್ತಾ ಕರಸ್ಥಲವು. ಆ ಕರಸ್ಥಲಕ್ಕೆ ಆವ ಬ್ರಹ್ಮಾಂಡಂಗಳ ಸರಿಯೆಂಬೆ? ನಿಮ್ಮ ಶರಣರ ಕರಸ್ಥಲವೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->