ಅಥವಾ

ಒಟ್ಟು 294 ಕಡೆಗಳಲ್ಲಿ , 49 ವಚನಕಾರರು , 247 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ ದ್ವಾದಶಮಂತ್ರವ ಕಲಿಸಿದ. ಒಂದು ಮಂತ್ರದಿಂದ ಮತ್ರ್ಯಲೋಕವ ಸುಟ್ಟೆ. ಒಂದು ಮಂತ್ರದಿಂದ ಪಾತಾಳಲೋಕವ ಸುಟ್ಟೆ. ಒಂದು ಮಂತ್ರದಿಂದ ಸ್ವರ್ಗಲೋಕವ ಸುಟ್ಟೆ. ಮೂರು ಮಂತ್ರದಿಂದ ಮುಪ್ಪುರದರಸುಗಳ ಕೊಂದೆ. ಆರು ಮಂತ್ರದಿಂದ ಆರು ವರ್ಣವ ಸುಟ್ಟೆ. ಇಂತೀ ಮಂತ್ರವ ಮಂತ್ರಿಸುವ ವೇಳೆಯಲ್ಲಿ ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕÀರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ ! ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ ! ತಾ ಸತ್ತು, ಹಾಲ ಕುಡಿಯ ಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ !
--------------
ಅಲ್ಲಮಪ್ರಭುದೇವರು
ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ನಾ ತೋಡಿದ ಬಾವಿಯಲ್ಲಿ ಡುಂಡುಕ ಭೇಕವೊಂದಾಗಿ ಇದ್ದವು. ಡುಂಡುಕ ಹಸಿದು ಭೇಕನ ನುಂಗಿತ್ತು. ಭೇಕ ಸಾಯದೆ ಡುಂಡುಕನ ಕರುಳ ತಿಂದು, ಡುಂಡುಕ ಸತ್ತು ಒಣಗಲಾಗಿ, ಅಂಗ ಬಿಗಿದು ಭೇಕನಲ್ಲಿಯೆ ಸತ್ತಿತ್ತು. ಎನ್ನ ಬಾವಿ ಕೆಟ್ಟಿತ್ತು, ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು.
--------------
ಅರಿವಿನ ಮಾರಿತಂದೆ
ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ, ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ. ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ, ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ ಊರುಂಬಳಿಯನುಂಬುದ ಕಂಡೆ. ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು ಚೋದ್ಯದ ದುಃಖ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಕ್ಕಳು ಮರಿಗಳು ಸತ್ತು ನಷ್ಟವಾಗಿ, ಕಷ್ಟ ದುಃಖ ನೆಲೆಗೊಂಡಿತ್ತೆಂದು ತನ್ನಿಷ್ಟಲಿಂಗಪೂಜೆಯನಗಲಿಸಿ, ಬಿಟ್ಟಿಯ ಮಾಡಬಹುದೇನಯ್ಯಾ? ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ? ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು. ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು, ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಜಂಗಮಫಲವೆಲ್ಲವೂ ದೇವತೆಗಳಾಹಾರವು; ಸ್ಥಾವರಫಲವೆಲ್ಲವೂ ಮನುಷ್ಯರಾಹಾರವು. ಅದೆಂತೆಂದೊಡೆ : ದೇವತಾಬಿಂದುವಿನಲ್ಲಿ ಮನುಷ್ಯಕೃತ್ಯದಿಂದುದ್ಭವಿಸುವುದೆಲ್ಲ ಸ್ಥಾವರವು; ಮನುಷ್ಯ ಬಿಂದುವಿನಲ್ಲಿ ದೇವತಾ ಕೃತ್ಯದಿಂದುದ್ಭವಿಸುವುದೆಲ್ಲ ಜಂಗಮವು. ಮನುಷ್ಯರು ಶೂದ್ರಮುಖದಿಂ ಕೊಂಬುತಿರ್ಪರು. ದೇವತೆಗಳು ಬ್ರಾಹ್ಮಣಮುಖದಿಂ ಕೊಂಬುತಿರ್ಪರು. ಪೃಥ್ವಿಯಲ್ಲಿ ಎಂಬತ್ತುನಾಲ್ಕುಲಕ್ಷವಿಧ ಜಂಗಮಗಳು ಹೇಗೋ ದೇವತೆಗಳಲ್ಲಿಯೂ ಹಾಗೆ. ದೇವತೆಗಳು ತಮ್ಮ ಕರ್ಮಫಲವು ತೀರಿದೊಡೆ, ತದ್ಧೋಷ ಕರ್ಮಾನುಸಾರಮಾಗಿ ಪಂಚಾಶಲ್ಲಕ್ಷ ದೇಹಗಳೊಂದಂ ಹೊಂದಿ ಆಯಾ ಆಹಾರಂಗಳಂ ಭುಂಜಿಸುತ್ತಾ. ತದಾನುಗುಣ್ಯಮಾಗಿ ಕ್ರೀಡಿಸುತ್ತರ್ಪಂದದಿ, ಮನುಷ್ಯನು ಇಹಲೋಕಕರ್ಮವು ತೀರಿದಲ್ಲಿ ಆ ಕರ್ಮಫಲಕ್ಕೆ ತಕ್ಕ ಮರಣವಂ ಹೊಂದಿ, ದೇವತಾ ಪಿಶಾಚಾಂತಮಾದ ದೇಹಗಳೊಳೊಂದು ದೇಹವನ್ನೆತ್ತಿ, ಸುಖದುಃಖಗಳನನುಭವಿಸುತ್ತಾ ತನ್ನ ಅದ್ಥಿಕಾರಕ್ಕೆ ದೇವತೆಯನ್ನು ಗ್ರಹಿಸಿ, ಆ ದೇವತಾಮುಖದಿಂ ಆಹಾರಂಗಳಂ ಗ್ರಹಿಸುವಂತೆ, ಆ ದೇವತೆಗಳು ತಮ್ಮ ಅದ್ಥಿಕಾರಕ್ಕನುಗುಣವಾಗಿ ಮನುಷ್ಯರಂ ಗ್ರಹಿಸಿ, ಆ ಮನುಷ್ಯಮುಖದಿಂ ಆಹಾರಂಗಳಂ ಕೊಂಬುತಿರ್ಪರು. ದೇವೆತಗಳಿಗೆ ಮಂತ್ರದಿಂದಾವಾಹನೋಚ್ಚಾಟನೆಗಳು, ಮನುಷ್ಯರಿಗೆ ತಂತ್ರದಿಂದಾವಾಹನೋಚ್ಚಾಟನೆಗಳು. ಮನುಷ್ಯರಿಗೆ ತಂತ್ರದಿಂ ಕೂಡಿದ ಮಂತ್ರವು, ದೇವತೆಗಳಿಗೆ ಮಂತ್ರದಿಂ ಕೂಡಿದ ತಂತ್ರವು, ಇಂತು ಮನುಷ್ಯರೂಪದಿಂದ ಸತ್ತು. ದೇವತಾರೂಪದಿಂ ಹುಟ್ಟುತ್ತಿರ್ಪ ದಂದುಗವಂ ಬಿಡಿಸಿ, ನಿನ್ನಲ್ಲಿ ಸತ್ತು ಹುಟ್ಟುತ್ತಿರ್ಪ ನಿಜಸುಖವಂ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕಾಳಕೂಟದ ತತ್ತಿಯಲ್ಲಿ ಒಂದು ಕೋಳಿ ಹುಟ್ಟಿತ್ತು. ಹಾರುವುದಕ್ಕೆ ಗರಿಯಿಲ್ಲ, ಓಡುವುದಕ್ಕೆ ಕಾಲಿಲ್ಲ. ನೋಡುವುದಕ್ಕೆ ಕಣ್ಣಿಲ್ಲ, ಕೂಗುವ ಬಾಯಿ ಒಂದೆ ಅದೆ. ಅದು ಕೂಗುವಾಗ ಜಾವವಳಿದು, ದಿನ ಸತ್ತು, ಮಾಸ ತುಂಬುವದನರಿತಲ್ಲದೆ ದಿನ ನಾಶವೆಂದು ಕೂಗುತ್ತದೆ. ಕೂಗಿನ ದನಿಯ ಕೇಳಿ ಬೆಳಗಾಯಿತ್ತು, ಜಗದ ಸುಂಕದೊಡೆಯ ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ ವ್ಯರ್ಥ ಕಾಯರಸವಿಷಯಕ್ಕಾಸೆಗೈದು ಸತ್ತು ಸತ್ತು ಹುಟ್ಟಿ ಭವಕ್ಕೆ ಗುರಿಯಾಗಿ, ಮಾಯಾಬಲೆಯ ಸಂಸಾರಬಂಧನದೊಳು ಬಂದು ಸಿಲ್ಕಿದೆನಯ್ಯಾ. ಮಾಯೆಯ ಹರಿದು, ಸಂಸಾರಬಂಧನವ ಕೆಡಿಸಿ, ಭವರೋಗಕ್ಕೆ ವೈದ್ಯನ ಮಾಡೋ ಶಿವ ವಿಶ್ವಕುಟುಂಬಿ ಮಹಾದೇವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಧಾರದೊಳಗಣ ಜ್ಯೋತಿ ಮೂಜಗವ ನುಂಗಿದುದ ಕಂಡೆನಯ್ಯ. ಮೂಜಗ ಸತ್ತು ಮೂಜಗದೊಡೆಯನುಳಿದುದು ಸೋಜಿಗವೆಂದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->