ಅಥವಾ

ಒಟ್ಟು 137 ಕಡೆಗಳಲ್ಲಿ , 40 ವಚನಕಾರರು , 125 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾರ್ಯಪ್ರಯೋಜನವೆಂದಡೆಯೂ ಆರಿಗಾರಿಗೆಯೂ ಹೋಗಬಾರದು. ಬಟ್ಟವಕ್ಕದ ಸಂಸಾರ ಹೋಗಿ ಬರಬಾರದು. ಜವನ ಗಾರುಪಟ್ಟಿಗೊಳಗಾಗದ ಮುನ್ನ, ಶರಣೆಂದಡೆ ಕಾವನಮ್ಮ, ಶ್ರೀಮಲ್ಲಿಕಾರ್ಜುನಯ್ಯನು.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು. ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು. ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು. ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ. ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.
--------------
ನೀಲಮ್ಮ
ಕುರುಡಿ ಕುಂಟರ ನಡುವೆ ನಾ ಹುಟ್ಟಿದೆನಯ್ಯಾ. ಎನಗೆ ಐವರು ಸ್ತ್ರೀಯರ ಮದುವೆಯ ಮಾಡಿದರು. ಅವರ ಸಂಗದಲ್ಲಿರಲೊಲ್ಲದೆ ಒಬ್ಬಳ ಬ್ರಹ್ಮಂಗೆ ಕೊಟ್ಟೆ, ಒಬ್ಬಳ ವಿಷ್ಣುವಿಂಗೆ ಕೊಟ್ಟೆ, ಒಬ್ಬಳ ರುದ್ರಂಗೆ ಕೊಟ್ಟೆ, ಒಬ್ಬಳ ಈಶ್ವರಂಗೆ ಕೊಟ್ಟೆ, ಮತ್ತೊಬ್ಬಳ ಸದಾಶಿವಂಗೆ ಕೊಟ್ಟು ತಾಯಿಯ ಒಡನಾಡಿ ಸಂಸಾರ ಮಾಡುತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು. ರಣರಂಗ ದ್ಥೀರನಾದಡೇನು ? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು. ಗೆಳೆಯನಾದಡೇನು ? ಅಗಲಿದಲ್ಲದೆ ಅರಿಯಬಾರದು. ಹೇಮವಾದಡೇನು ? ಒರೆಗಲ್ಲುಯಿಲ್ಲದೆ ಅರಿಯಬಾರದು. ನಿನ್ನನರಿದೆಹೆನೆಂದಡೆ : ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ತೋಟವ ಬಿತ್ತಿದ[Àರೆಮ್ಮ]sÀವರು, ಕಾಹ ಕೊಟ್ಟವರು ಜವನವರು. ನಿತ್ಯವಲ್ಲದ ಸಂಸಾರ ವೃಥಾ ಹೋಯಿತಲ್ಲಾ ! ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ, ಈ ಮೂರರ ಮೇಲಣ ಮೋಹವೆರಸಿದ ಮನವು ಸಂಸಾರ ನೋಡಾ ! ಆ ಮನವನು ಸಂಸಾರ ಮೋಹವನು ಬೇರ್ಪಡಿಸಿ, ತನ್ನ ಕೂಡಿ ನಡೆವ ಗತಿಮತಿಗಳನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು. ಸುಖವಿಲ್ಲದ ಸಂಸಾರ. ಎಳತಟೆಗೊಂಬ ಕಾಯದ ಸಂಗ. ಬಳಲಿಸುವ ಜೀವಭಾವ. ಇವರ ಕಳವಳವಳಿದಲ್ಲದೆ ಮಳುಬಾವಿಯ ಸೋಮನ ತಿಳಿಯಬಾರದು.
--------------
ಮಳುಬಾವಿಯ ಸೋಮಣ್ಣ
ಸಂಸಾರ ಸಂಸಾರ, ಕಾಳಗತ್ತಲೆ ಕಾಳಗತ್ತಲೆ. ಕರ ಹಿರಿದು ಕರ ಹಿರಿದು, ಎಚ್ಚತ್ತಿರು ಎಚ್ಚತ್ತಿರು ಜ್ಞಾನಧನಕ್ಕೆ. ಎಚ್ಚತ್ತಿರು ಎಚ್ಚತ್ತಿರು ಇಂದ್ರಿಯಗಳ್ಳರಿಗೆ. ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ. ಜನ್ಮ ದುಃಖಂ ಜರಾ ದುಃಖಂ ನಿತ್ಯಂ ದುಃಖಂ ಪುನಃ ಪುನಃ | ಸಂಸಾರಸಾಗರೋ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ || ಎಂದುದಾಗಿ, ಸಲೆ ಜೀವಿತಗೊಂಡ ಸೊಡ್ಡಳ ಆಳು ಭಲಾ ಭಲಾ ಎನ್ನುತ್ತಿರಾ.
--------------
ಸೊಡ್ಡಳ ಬಾಚರಸ
ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ. ಸಂಸಾರಸಂಗದಿಂದ ಓಸರಿಸಿ ಒಯ್ಯನೆ ಕಂದಿ ಕುಂದಿ, ಭವಗಿರಿಯ ಸುತ್ತುತ್ತಿದ್ದೆನಯ್ಯಾ. ಅಯ್ಯಾ, ಅಯ್ಯಾ ಎಂದು ಒಯ್ಯನೆ ಒದರಿದರೆ `ಓ' ಎನ್ನಲೊಲ್ಲೇಕೆಲೊ ಅಯ್ಯ ? ನೀ ಪಡೆದ ಸಂಸಾರ ಸುಖ ದುಃಖ, ನೀನೆ ಬೇಗೆಯನಿಕ್ಕಿ, ನೀನೊಲ್ಲೆನೆಂದರೆ ನಾ ಬಿಡೆ, ನಾ ಬಿಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ ಅನೇಕ ವ್ಯವಹಾರವಾದಂತೆ ಜೀವನೆ ಜಗ, ಜಗವೆ ಜೀವನಾದ. ಆದಿ ಅನಾದಿ ವಿಚಿತ್ರತರವಾದ ಮಾಯೆ. ಈ ಮಾಯೆಯಿಂದ ತನಗೆ ತಾನೇ ಪ್ರತಿಬಿಂಬ. ಆ ಮಾಯಾ ಪ್ರತಿಬಿಂಬವೆ ತನಗೆ ಸಂಸಾರ. ಆ ಸಂಸಾರವನು ಆ ಪರಮಾತ್ಮನು ಕೂಡಿಯೂ ಕೂಡದೆ ಆ ಘಟ ಜಲ ಚಂದ್ರಮನ ಹಾಂಗೆ ವರ್ತಿಸುತ್ತಿಹನು. ಅದೆಂತೆಂದಡೆ: ``ಏಕ ಏವ ಹಿ ಭೂತಾತ್ಮಾಭೂತೇ ಭೂತೇ ವ್ಯವಸ್ಥಿತಃ| ಏಕಧಾ ಬಹುಧಾಚೈವ ದೃಶ್ಯತೇ ಜಲಚಂದ್ರವತ್||' ಎಂದುದಾಗಿ, ಸಟೆಯ ಮಾಯೆಯ ಸಟೆಯೆಂದು ಕಳೆದುಳಿದ ದ್ಥೀರ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನಿಜವಕೊಟ್ಟು ಗಜಬಜೆಯನೆಸಗಲುಂಟೆ ? ಒಡಲಕಿಚ್ಚಿನ ತುಡುಗು ಬೆಡಗಿನೊಳಗಿಲ್ಲ ಉಪದೇಶ. ನಿನ್ನ ಸಂಸಾರ ನಿನ್ನುದ್ದ, ನಿಃಸಂಸಾರಿಗಳ ತಗುಲಿಕೊಳ್ಳದಿರು. ಕೊಟ್ಟವರಾರು ಕೊಂಡವರಾರು ? ಹಮ್ಮು ಬಿಮ್ಮು ಹವಣಿಸಿಕೊ ಗುರುನಿರಂಜನ ಚನ್ನಬಸವಲಿಂಗಸಹಿತ ಗುರುವೆನಿಸುವರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಂತಾನಂತಕಾಲ ನಿತ್ಯವೆಂಬಿರಿ ಸಂಸಾರ. ಸಂಸಾರವೆಂಬುದು ಹುಸಿ ಕಂಡಾ ಎಲವೋ! ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮ. ದಿನದಿನದ ಸುಖ ಹುಸಿ ಕಂಡಾ ಎಲ್ಲವೊ! ಘನಘನವೆಂಬ ರೂಪಿಂಗೆ ರತಿಯಿಲ್ಲಯ್ಯಾ. ಮಹಾಲಿಂಗ ಗಜೇಶ್ವರನಲ್ಲಿ ತಿಳಿದು ನೋಡಾ ಎಲ್ಲವೊ!
--------------
ಗಜೇಶ ಮಸಣಯ್ಯ
ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆ ಎನಗಾಯಿತ್ತಯ್ಯಾ, ಅಕಟಕಟಾ, ಸಂಸಾರ ವೃಥಾ ಹೋಯಿತ್ತಲ್ಲಾ. ಕರ್ತುವೆ ಕೂಡಲಸಂಗದೇವಾ ಇವ ತಪ್ಪಿಸಿ ಎನ್ನುವ ರಕ್ಷಿಸಯ್ಯಾ. 11
--------------
ಬಸವಣ್ಣ
ಎರವಿನ ಬದುಕು ಸ್ಥಿರವಲ್ಲ. ಅಭ್ರಛಾಯದಂತೆ ನಿಮುಷದಲ್ಲಿ ತೋರಿಯಡಗಲು, ಈ ಸಂಸಾರದಲ್ಲೇನು ಲೇಸು ಕಂಡು ನಚ್ಚುವೆ? ನಚ್ಚದಿರು. ನಚ್ಚಿದವರ ಕೆಟ್ಟ ಕೇಡಿಂಗೆ ಕಡೆಯಿಲ್ಲ. ಬರಿಯ ಬಯಲ ಭ್ರಮೆ ಸಟೆಯ ಸಂಸಾರ. ಇದರಲ್ಲೇನೂ ಲೇಸಿಲ್ಲವೆಂದರಿದು ದೃಢವಿಡಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶ್ರೀಚರಣವನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->